ಪ್ರಧಾನ ಮಂತ್ರಿಯವರ ಕಛೇರಿ
ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025 ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
ಬಾಹ್ಯಾಕಾಶವು ಕೇವಲ ಗಮ್ಯಸ್ಥಾನವಲ್ಲ, ಅದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ: ಪ್ರಧಾನಮಂತ್ರಿ
ಭಾರತೀಯ ರಾಕೆಟ್ ಗಳು ಪೇಲೋಡ್ ಗಳಿಗಿಂತ ಹೆಚ್ಚಿನದನ್ನು ಸಾಗಿಸುತ್ತವೆ- ಅವು 1.4 ಶತಕೋಟಿ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ: ಪ್ರಧಾನಮಂತ್ರಿ
ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಮಿಷನ್ - ಗಗನಯಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ರಾಷ್ಟ್ರದ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ಭಾರತದ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಮಹಿಳಾ ವಿಜ್ಞಾನಿಗಳು ಮುನ್ನಡೆಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತದ ಬಾಹ್ಯಾಕಾಶ ದೃಷ್ಟಿಕೋನವು 'ವಸುದೈವ ಕುಟುಂಬಕಂ' ಎಂಬ ಪ್ರಾಚೀನ ತತ್ವಶಾಸ್ತ್ರದಲ್ಲಿ ಬೇರೂರಿದೆ: ಪ್ರಧಾನಮಂತ್ರಿ
Posted On:
07 MAY 2025 12:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಹ್ಯಾಕಾಶ ಅನ್ವೇಷಣೆ ಕುರಿತ ಜಾಗತಿಕ ಸಮ್ಮೇಳನ (ಜಿಎಲ್ಇಎಕ್ಸ್) 2025ನ್ನು ಉದ್ದೇಶಿಸಿ ಭಾಷಣ ಮಾಡಿದರು. ವಿಶ್ವದಾದ್ಯಂತದ ಗೌರವಾನ್ವಿತ ಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಗಗನಯಾತ್ರಿಗಳನ್ನು ಸ್ವಾಗತಿಸಿದ ಅವರು, ಜಿಎಲ್ಇಎಕ್ಸ್ 2025ರಲ್ಲಿ ಭಾರತದ ಗಮನಾರ್ಹ ಬಾಹ್ಯಾಕಾಶ ಪ್ರಯಾಣವನ್ನು ಪ್ರಸ್ತಾಪಿಸಿದ ಅವರು "ಬಾಹ್ಯಾಕಾಶವು ಕೇವಲ ಒಂದು ಗಮ್ಯಸ್ಥಾನವಲ್ಲ ಜೊತೆಗೆ ಅದು ಕುತೂಹಲ, ಧೈರ್ಯ ಮತ್ತು ಸಾಮೂಹಿಕ ಪ್ರಗತಿಯ ಘೋಷಣೆಯಾಗಿದೆ" ಎಂದು ಹೇಳಿದರು. 1963ರಲ್ಲಿ ಸಣ್ಣ ರಾಕೆಟ್ ಉಡಾವಣೆಯಿಂದ ಹಿಡಿದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ರಾಷ್ಟ್ರವಾಗುವವರೆಗೆ ಭಾರತದ ಬಾಹ್ಯಾಕಾಶ ಸಾಧನೆಗಳು ಈ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಒತ್ತಿ ಹೇಳಿದರು. "ಭಾರತೀಯ ರಾಕೆಟ್ ಗಳು ಪೇಲೋಡ್ ಗಳಿಗಿಂತ (ಸಾಮರ್ಥ್ಯಕ್ಕಿಂತ) ಹೆಚ್ಚಿನದನ್ನು ಸಾಗಿಸುತ್ತವೆ - ಅವು 1.4 ಬಿಲಿಯನ್ ಭಾರತೀಯರ ಕನಸುಗಳನ್ನು ಹೊತ್ತೊಯ್ಯುತ್ತವೆ" ಎಂದು ಅವರು ಹೇಳಿದರು, ಭಾರತದ ಬಾಹ್ಯಾಕಾಶ ಪ್ರಗತಿಗಳು ಗಮನಾರ್ಹ ವೈಜ್ಞಾನಿಕ ಮೈಲಿಗಲ್ಲುಗಳಾಗಿವೆ ಮತ್ತು ಮಾನವ ಚೈತನ್ಯವು ಗುರುತ್ವಾಕರ್ಷಣೆಯನ್ನು ಮೀರಬಲ್ಲದು ಎಂಬುದಕ್ಕೆ ಪುರಾವೆಯಾಗಿದೆ ಎಂದು ಹೇಳಿದರು. 2014 ರಲ್ಲಿ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ಭಾರತದ ಐತಿಹಾಸಿಕ ಸಾಧನೆಯನ್ನು ಅವರು ಸ್ಮರಿಸಿದರು. ಚಂದ್ರಯಾನ -1 ಚಂದ್ರನ ಮೇಲ್ಮೈಯಲ್ಲಿ ನೀರನ್ನು ಕಂಡುಹಿಡಿಯಲು ಸಹಾಯ ಮಾಡಿತು, ಚಂದ್ರಯಾನ -2 ಚಂದ್ರನ ಮೇಲ್ಮೈಯ ಅತಿ ಹೆಚ್ಚು ರೆಸಲ್ಯೂಶನ್ (ಸ್ಪಷ್ಟ) ಚಿತ್ರಗಳನ್ನು ಒದಗಿಸಿತು ಮತ್ತು ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದ ತಿಳುವಳಿಕೆಯನ್ನು ಹೆಚ್ಚಿಸಿತು ಎಂದು ಅವರು ಒತ್ತಿ ಹೇಳಿದರು. "ಭಾರತವು ದಾಖಲೆಯ ಸಮಯದಲ್ಲಿ ಕ್ರಯೋಜೆನಿಕ್ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದೆ, ಒಂದೇ ಕಾರ್ಯಾಚರಣೆಯಲ್ಲಿ 100 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಮತ್ತು ಭಾರತೀಯ ಉಡಾವಣಾ ವಾಹನಗಳನ್ನು ಬಳಸಿಕೊಂಡು 34 ದೇಶಗಳಿಗೆ 400 ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ನಿಯೋಜಿಸಿದೆ" ಎಂಬುದರತ್ತ ಅವರು ಗಮನಸೆಳೆದರು. ಭಾರತದ ಇತ್ತೀಚಿನ ಸಾಧನೆಗಳತ್ತ ಬೆಟ್ಟು ಮಾಡಿದ ಅವರು ಈ ವರ್ಷ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿರುವುದು ಬಾಹ್ಯಾಕಾಶ ಅನ್ವೇಷನೆಯತ್ತ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಭಾರತದ ಬಾಹ್ಯಾಕಾಶ ಪ್ರಯಾಣವು ಇತರರೊಂದಿಗೆ ಸ್ಪರ್ಧಿಸುವ ಇರಾದೆಯದ್ದಲ್ಲ, ಬದಲಿಗೆ ಒಟ್ಟಿಗೆ ಹೆಚ್ಚಿನ ಎತ್ತರವನ್ನು ತಲುಪುವ ಉದ್ದೇಶವಾಗಿದೆ ಎಂದು ಶ್ರೀ ಮೋದಿ ಪುನರುಚ್ಚರಿಸಿದರು. ಮಾನವ ಕುಲದ ಪ್ರಯೋಜನಕ್ಕಾಗಿ ಬಾಹ್ಯಾಕಾಶವನ್ನು ಅನ್ವೇಷಿಸುವ ಸಾಮೂಹಿಕ ಗುರಿಯನ್ನು ಅವರು ಒತ್ತಿ ಹೇಳಿದರು. ಪ್ರಾದೇಶಿಕ ಸಹಕಾರಕ್ಕೆ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಅವರು, ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಾಗಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದನ್ನು ಸ್ಮರಿಸಿದರು. ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಪರಿಚಯಿಸಲಾದ ಜಿ 20 ಉಪಗ್ರಹ ಮಿಷನ್ ಜಾಗತಿಕ ದಕ್ಷಿಣಕ್ಕೆ ಮಹತ್ವದ ಕೊಡುಗೆಯಾಗಲಿದೆ ಎಂದು ಅವರು ಘೋಷಿಸಿದರು. ವೈಜ್ಞಾನಿಕ ಅನ್ವೇಷಣೆಯ ಗಡಿಗಳನ್ನು ನಿರಂತರವಾಗಿ ತಳ್ಳುತ್ತಾ ಭಾರತವು ಹೊಸ ವಿಶ್ವಾಸದೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. "ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಮಿಷನ್ 'ಗಗನಯಾನ' ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ರಾಷ್ಟ್ರದ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ" ಎಂಬುದರತ್ತ ಅವರು ಗಮನಸೆಳೆದರು. ಮುಂಬರುವ ವಾರಗಳಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಸ್ರೋ-ನಾಸಾ ಜಂಟಿ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ರೀ ಮೋದಿ ಬಹಿರಂಗಪಡಿಸಿದರು. 2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ ಅದ್ಭುತ ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗಕ್ಕೆ ಅನುಕೂಲವಾಗಲಿದೆ ಎಂದು ಅವರು ಭಾರತದ ದೀರ್ಘಕಾಲೀನ ದೃಷ್ಟಿಕೋನವನ್ನು ವಿವರಿಸಿದರು. 2040ರ ವೇಳೆಗೆ, ಭಾರತೀಯ ಗಗನಯಾತ್ರಿ ಚಂದ್ರನ ಮೇಲೆ ಹೆಜ್ಜೆಗುರುತುಗಳನ್ನು ಮೂಡಿಸುತ್ತಾರೆ ಎಂದು ಘೋಷಿಸಿದ ಅವರು, ಮಂಗಳ ಮತ್ತು ಶುಕ್ರ, ಭಾರತದ ಭವಿಷ್ಯದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಲ್ಲಿ ಪ್ರಮುಖ ಗುರಿಗಳಾಗಿವೆ ಎಂದು ಹೇಳಿದರು.
ಭಾರತಕ್ಕೆ ಬಾಹ್ಯಾಕಾಶವು ಕೇವಲ ಅನ್ವೇಷಣೆ ಮಾತ್ರವಲ್ಲ, ಸಬಲೀಕರಣವೂ ಆಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಬಾಹ್ಯಾಕಾಶ ತಂತ್ರಜ್ಞಾನವು ಆಡಳಿತವನ್ನು ಹೇಗೆ ಹೆಚ್ಚಿಸುತ್ತದೆ, ಜೀವನೋಪಾಯವನ್ನು ಸುಧಾರಿಸುತ್ತದೆ ಮತ್ತು ಪೀಳಿಗೆಗಳಿಗೆ ಹೇಗೆ ಸ್ಫೂರ್ತಿ ನೀಡುತ್ತದೆ ಎಂಬುದನ್ನು ಎತ್ತಿ ತೋರಿಸಿದರು. ಮೀನುಗಾರರಿಗೆ ಮುನ್ನೆಎಚ್ಚರಿಕೆ, ಗತಿಶಕ್ತಿ ವೇದಿಕೆ, ರೈಲ್ವೆ ಸುರಕ್ಷತೆ ಮತ್ತು ಹವಾಮಾನ ಮುನ್ಸೂಚನೆಗೆ ಉಪಗ್ರಹಗಳ ಕೊಡುಗೆಗಳನ್ನು ಉಲ್ಲೇಖಿಸಿ, ಪ್ರತಿಯೊಬ್ಬ ಭಾರತೀಯನ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವಲ್ಲಿ ಉಪಗ್ರಹಗಳ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು. ನವೋದ್ಯಮಗಳು, ಉದ್ಯಮಿಗಳು ಮತ್ತು ಯುವ ಮನಸ್ಸುಗಳಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ಭಾರತವು ಈಗ 250 ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳನ್ನು ಹೊಂದಿದ್ದು, ಉಪಗ್ರಹ ತಂತ್ರಜ್ಞಾನ, ಪ್ರೊಪಲ್ಷನ್ ವ್ಯವಸ್ಥೆಗಳು, ಇಮೇಜಿಂಗ್ ಮತ್ತು ಇತರ ಪ್ರವರ್ತಕ ಕ್ಷೇತ್ರಗಳಲ್ಲಿ ಪ್ರಗತಿಗೆ ಕೊಡುಗೆ ನೀಡುತ್ತಿದೆ ಎಂಬುದರತ್ತ ಅವರು ಗಮನಸೆಳೆದರು. "ಭಾರತದ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಮಹಿಳಾ ವಿಜ್ಞಾನಿಗಳು ಮುನ್ನಡೆಸುತ್ತಿದ್ದಾರೆ" ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.
"ಭಾರತದ ಬಾಹ್ಯಾಕಾಶ ದೃಷ್ಟಿಕೋನವು 'ವಸುದೈವ ಕುಟುಂಬಕಂ' ಎಂಬ ಪ್ರಾಚೀನ ತತ್ವಶಾಸ್ತ್ರದಲ್ಲಿ ಬೇರೂರಿದೆ" ಎಂದು ಪುನರುಚ್ಚರಿಸಿದ ಶ್ರೀ ಮೋದಿ, ಭಾರತದ ಬಾಹ್ಯಾಕಾಶ ಪ್ರಯಾಣವು ಕೇವಲ ಅದರ ಸ್ವಂತ ಬೆಳವಣಿಗೆಯ ಬಗ್ಗೆ ಮಾತ್ರವಲ್ಲ, ಜಾಗತಿಕ ಜ್ಞಾನವನ್ನು ಶ್ರೀಮಂತಗೊಳಿಸುವುದು, ಹಂಚಿಕೆಯ ಸವಾಲುಗಳನ್ನು ಎದುರಿಸುವುದು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವುದು ಎಂದು ಒತ್ತಿ ಹೇಳಿದರು. ಸಹಯೋಗಕ್ಕೆ ಭಾರತದ ಬದ್ಧತೆಯನ್ನು ಒತ್ತಿ ಹೇಳಿದ ಅವರು, ರಾಷ್ಟ್ರವು ಒಟ್ಟಾಗಿ ಕನಸು ಕಾಣಲು, ಜೊತೆಯಾಗಿ ನಿರ್ಮಿಸಲು ಮತ್ತು ಒಟ್ಟಿಗೆ ನಕ್ಷತ್ರಗಳನ್ನು ತಲುಪಲು ಬದ್ಧವಾಗಿದೆ ಎಂದು ಹೇಳಿದರು. ವಿಜ್ಞಾನ ಮತ್ತು ಉತ್ತಮ ಭವಿಷ್ಯಕ್ಕಾಗಿ ಸಾಮೂಹಿಕ ಆಕಾಂಕ್ಷೆಯಿಂದ ಮಾರ್ಗದರ್ಶನ ಪಡೆದ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ ಆರಂಭವಾಗಲಿ ಎನ್ನುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
*****
(Release ID: 2127517)
Visitor Counter : 17
Read this release in:
Odia
,
Malayalam
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu