WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್ 1: ಭಾರತದ ಸೃಜನಶೀಲ ಭವಿಷ್ಯಕ್ಕೆ ನಾಂದಿ


ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಅಡಿಯಲ್ಲಿನ 32 ಸೃಜನಾತ್ಮಕ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಿದ ವೇವ್ಸ್ 2025; ನಾವೀನ್ಯತೆ ಮತ್ತು ಪ್ರತಿಭೆಯನ್ನು ಆಚರಿಸಲು 60+ ದೇಶಗಳ 750ಕ್ಕೂ ಹೆಚ್ಚು ಅಂತಿಮ ಸ್ಪರ್ಧಿಗಳ ಸಮಾಗಮ

"ಈ ಪಯಣ ಕೇವಲ ಆರಂಭವಾಗಿದೆ, ಮತ್ತು ಭಾರತೀಯ ಸೃಜನಶೀಲ ಮನಸ್ಸುಗಳನ್ನು ಭಾರತೀಯ ಸೃಜನಾತ್ಮಕ ತಂತ್ರಜ್ಞಾನ ಸಂಸ್ಥೆಯಂತಹ ಯೋಜನೆಗಳ ಮೂಲಕ ಸಬಲೀಕರಣಗೊಳಿಸಲು ನಾವು ಬದ್ಧರಾಗಿದ್ದೇವೆ": ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್

"ಯುವ ಮನಸ್ಸುಗಳು ಸೃಜನಶೀಲತೆಯನ್ನು ತಂತ್ರಜ್ಞಾನದೊಂದಿಗೆ ಹೇಗೆ ಬೆರೆಸುತ್ತಿವೆ ಎಂಬುದಕ್ಕೆ ಈ ವೇದಿಕೆ ಒಂದು ಸುಂದರ ನಿದರ್ಶನ": ರಾಜ್ಯ ಸಚಿವರಾದ ಡಾ. ಎಲ್. ಮುರುಗನ್

 Posted On: 02 MAY 2025 8:08PM |   Location: PIB Bengaluru

ಜಗತ್ತಿನಾದ್ಯಂತದ ಕ್ರಿಯೇಟರ್ ಗಳ ಗಮನ ಸೆಳೆದಿದ್ದ ಬಹುನಿರೀಕ್ಷಿತ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್' (CIC) ಸೀಸನ್ 1, 'ವೇವ್ಸ್ 2025' ರಲ್ಲಿ ನಡೆದ ಭವ್ಯ ಸಮಾರಂಭದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ಇದು ಭಾರತದ ಸೃಜನಶೀಲ ರಂಗಕ್ಕೆ ಒಂದು ಮಹತ್ವದ ಘಟ್ಟವಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ, ಅನಿಮೇಷನ್, ಗೇಮಿಂಗ್, ಚಲನಚಿತ್ರ ನಿರ್ಮಾಣದಿಂದ ಹಿಡಿದು ಕೃತಕ ಬುದ್ಧಿಮತ್ತೆ (AI), ಸಂಗೀತ ಮತ್ತು ಡಿಜಿಟಲ್ ಕಲೆಯವರೆಗಿನ ಮಾಧ್ಯಮ ಮತ್ತು ಮನರಂಜನಾ ಉದ್ಯಮದ 32 ವಿಭಿನ್ನ ಸ್ಪರ್ಧೆಗಳ ವಿಜೇತರಿಗೆ ಗೌರವ ಸಲ್ಲಿಸಲಾಯಿತು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಯುವ ಕ್ರಿಯೇಟರ್‌ ಗಳು  ಮತ್ತು ದಾರ್ಶನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಇದು ಒಂದು ಐತಿಹಾಸಿಕ ಕ್ಷಣ ಎಂದು ಕರೆದರು. "ಮೊದಲ ಬಾರಿಗೆ, ಸಂಪೂರ್ಣವಾಗಿ ಸೃಜನಶೀಲತೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಯಾಣ ಇದೀಗಷ್ಟೇ ಪ್ರಾರಂಭವಾಗಿದೆ. ಈ ಉಪಕ್ರಮದೊಂದಿಗೆ, ನೀವು ಹೊಸ ಅವಕಾಶಗಳ ಜಗತ್ತಿಗೆ ಕಾಲಿಡುತ್ತಿದ್ದೀರಿ. ಸೃಜನಶೀಲತೆಯಲ್ಲಿ ತರಬೇತಿ ನೀಡಲು, ಇನೋವೇಶನ್ ಮತ್ತು ಅಭಿವ್ಯಕ್ತಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲು, ಐಐಟಿಯಂತೆ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಯನ್ನು ಸಹ ಪ್ರಾರಂಭಿಸುತ್ತಿದ್ದೇವೆ" ಎಂದು ಅವರು ಹೇಳಿದರು.  

ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಯುವಕರ ಕ್ರಿಯಾಶೀಲ ಉತ್ಸಾಹ ಮತ್ತು ತಾಂತ್ರಿಕ ಕೌಶಲ್ಯವನ್ನು ಅವರು ಕೊಂಡಾಡಿದರು. "ನಿಮ್ಮೆಲ್ಲರಿಗೂ ಶುಭವಾಗಲಿ. ಯುವ ಮನಸ್ಸುಗಳು ಸೃಜನಶೀಲತೆಯನ್ನು ತಂತ್ರಜ್ಞಾನದೊಂದಿಗೆ ಹೇಗೆ ಸಂಯೋಜಿಸುತ್ತವೆ ಎಂಬುದಕ್ಕೆ ಈ ವೇದಿಕೆ ಒಂದು ಉತ್ತಮ ನಿದರ್ಶನ. ಇದು ನಮ್ಮ ನಾರಿ ಶಕ್ತಿಯ ಸಾಮರ್ಥ್ಯ ಮತ್ತು ಭಾರತೀಯ ಕಂಟೆಂಟ್ ಸೃಷ್ಟಿಯ ಭವಿಷ್ಯವನ್ನು ತೋರಿಸುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಸಿಐಸಿ ಹೇಗೆ ಬೆಳೆದು ಬಂತು ಎಂಬುದನ್ನು ನೆನಪಿಸಿಕೊಂಡರು. "ನಾವು ಆಗಸ್ಟ್ನಲ್ಲಿ ಆರಂಭಿಸಿದಾಗ, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ 25 ಸ್ಪರ್ಧೆಗಳಿದ್ದವು. ಸೆಪ್ಟೆಂಬರ್ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಸಿಐಸಿ ಬಗ್ಗೆ ಮಾತನಾಡಿದ ನಂತರ, ಸ್ಪರ್ಧೆಯಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಯಿತು. ಸ್ಪರ್ಧೆಗಳ ಸಂಖ್ಯೆ 32ಕ್ಕೆ ಏರಿತು. ಸುಮಾರು ಒಂದು ಲಕ್ಷ ಜನರು ನೋಂದಾಯಿಸಿಕೊಂಡರು. ಇಂದು, 750 ಅಂತಿಮ ಸ್ಪರ್ಧಿಗಳು ಇಲ್ಲಿ ಉಪಸ್ಥಿತರಿದ್ದಾರೆ ಮತ್ತು ಅವರೆಲ್ಲರೂ ವಿಜೇತರೇ" ಎಂದು ಶ್ರೀ ಜಾಜು ಹೇಳಿದರು.

'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್' (ಸಿಐಸಿ) ಅನ್ನು ಉದಯೋನ್ಮುಖ ಪ್ರತಿಭೆಗಳಿಗೆ ಒಂದು ಜಾಗತಿಕ ವೇದಿಕೆಯನ್ನು ಕಲ್ಪಿಸಿಕೊಡಲು ಮತ್ತು ಯುವ ಮನಸ್ಸುಗಳ ಅದ್ಭುತ ಸೃಜನಶೀಲತೆಯನ್ನು ಜಗತ್ತಿಗೆ ತೋರಿಸಲು ಆರಂಭಿಸಲಾಯಿತು. ಈ ಸ್ಪರ್ಧೆಯು ಅನಿಮೇಷನ್ ನಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ, ಗೇಮಿಂಗ್ ನಿಂದ ಹಿಡಿದು ಸಿನಿಮಾ ನಿರ್ಮಾಣದವರೆಗೆ, ಹೀಗೆ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿತ್ತು. ಕ್ರಿಯೇಟರ್‌ ಗಳಿಗೆ ಬೇರೆ ಬೇರೆ ಮಾಧ್ಯಮ ಪ್ರಕಾರಗಳಲ್ಲಿ ತಮ್ಮ ಕಲ್ಪನೆಯ ಗಡಿಗಳನ್ನು ವಿಸ್ತರಿಸಲು ಇದು ಅವಕಾಶ ನೀಡಿತು. ಅನಿಮೆ ಸ್ಪರ್ಧೆ, ಕೃತಕ ಬುದ್ಧಿಮತ್ತೆ ಆಧಾರಿತ ಸಿನಿಮಾ ನಿರ್ಮಾಣ ಸ್ಪರ್ಧೆ, XR ಕ್ರಿಯೇಟರ್ ಹ್ಯಾಕಥಾನ್ ಹೀಗೆ ಪ್ರತಿಯೊಂದು ವಿಭಾಗವೂ ಹೊಸ ಆಲೋಚನೆಗಳನ್ನು ಪ್ರೋತ್ಸಾಹಿಸಿತು. ಇದರಿಂದಾಗಿ ವಿಶ್ವಾದ್ಯಂತದ ಕ್ರಿಯೇಟರ್‌ ಗಳು, ತಂತ್ರಜ್ಞಾನ ತಜ್ಞರು ಮತ್ತು ಕಥೆಗಾರರು ಒಂದೇ ವೇದಿಕೆಗೆ ಬಂದರು.

ಸಿಐಸಿ ದೇಶದಲ್ಲೂ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಅಪಾರ ಗಮನ ಸೆಳೆದಿದೆ. 60ಕ್ಕೂ ಹೆಚ್ಚು ದೇಶಗಳಿಂದ, ಅದರಲ್ಲೂ 1,100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದು, ಸಿಐಸಿ ಜಾಗತಿಕವಾಗಿ ಯಶಸ್ವಿಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಸೃಜನಾತ್ಮಕ ತಂತ್ರಜ್ಞಾನಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಹೊಸ ಹಾಗೂ ಪ್ರಭಾವಶಾಲಿ ಮಾಧ್ಯಮ ಪ್ರಕಾರಗಳನ್ನು ಅಭಿವೃದ್ಧಿಪಡಿಸಲು ಇರುವ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಸ್ಪಂದನೆ ಎತ್ತಿ ತೋರಿಸುತ್ತದೆ.

ಅಮೀರ್ ಖಾನ್, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಅಕ್ಕಿನೇನಿ ನಾಗಾರ್ಜುನ, ವಿಕ್ರಾಂತ್ ಮಸ್ಸೆ, ಪ್ರಸೂನ್ ಜೋಶಿ ಮತ್ತು ಅರೂನ್ ಪುರಿ ಮುಂತಾದ ಖ್ಯಾತನಾಮರು ಹಾಗೂ ಇತರ ಗಣ್ಯರು ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಿದರು.

ಈ 32 ಸ್ಪರ್ಧೆಗಳನ್ನು ಪ್ರಮುಖ ಉದ್ಯಮ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಯಿತು. ಇದರಿಂದಾಗಿ ಸೃಜನಶೀಲತೆಯ ವಿವಿಧ ಕ್ಷೇತ್ರಗಳು, ತಂತ್ರಜ್ಞಾನ ಆಧಾರಿತ ಯೋಜನೆಗಳು ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಂಟೆಂಟ್ ಒಂದೇ ವೇದಿಕೆಗೆ ಬಂದು ಸಿಐಸಿಯ ಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸಾಧ್ಯವಾಯಿತು.

ಜಾಗತಿಕ ಮನರಂಜನೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಮರು ವ್ಯಾಖ್ಯಾನಿಸುತ್ತಿರುವ ಮುಂದಿನ ಪೀಳಿಗೆಯ ಸೃಷ್ಟಿಕರ್ತರಿಗೆ ಈ ಉಪಕ್ರಮವು ಒಂದು ಯಶಸ್ವಿ ಉಡಾವಣಾ ವೇದಿಕೆಯಾಗಿದೆ. ನಮ್ಮ ದೇಶದ ಪ್ರತಿಭೆಗಳನ್ನು ಬೆಳೆಸುವ ಮತ್ತು ವಿವಿಧ ಮಾಧ್ಯಮ ಸ್ವರೂಪಗಳಲ್ಲಿನ ನವೀನ ಕಂಟೆಂಟ್ ಸೃಷ್ಟಿಯನ್ನು ಆಚರಿಸುವ ಮಹತ್ವಕ್ಕೆ ಇದು ಸಾಕ್ಷಿಯಾಗಿದೆ.

 

*****


Release ID: (Release ID: 2126965)   |   Visitor Counter: 12