WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತೀಯ ಸಿನಿಮಾದ ಅಂತಾರಾಷ್ಟ್ರೀಯ ವಿಸ್ತರಣೆಯ ಕುರಿತು ಚರ್ಚಿಸಲು ವೇವ್ಸ್ 2025 ಮನರಂಜನಾ ಉದ್ಯಮದ ದಿಗ್ಗಜರನ್ನು ಒಂದೆಡೆ ಸೇರಿಸಿತು


ಸರ್ಕಾರ ಈ ಉದ್ಯಮದ ಬಗ್ಗೆ ಇಷ್ಟೊಂದು ಆಸಕ್ತಿ ವಹಿಸುತ್ತಿರುವುದು ಇದೇ ಮೊದಲು: ನಟ ಅಮೀರ್ ಖಾನ್

ವೇವ್ಸ್‌ ಕೇವಲ ಸಂವಾದವಲ್ಲ - ಅದು ನೀತಿಗಳಿಗೆ ಸೇತುವೆ. ಇದು ಭರವಸೆಯ ಆರಂಭ: ನಟ ಅಮೀರ್ ಖಾನ್

 Posted On: 02 MAY 2025 8:42PM |   Location: PIB Bengaluru

ಭಾರತೀಯ ಚಲನಚಿತ್ರಗಳ ಪ್ರೇಕ್ಷಕರನ್ನು ಸುಲಭವಾಗಿ ವಿಸ್ತರಿಸಲು ಭಾರತೀಯ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾತೃಗಳು ವಿವಿಧ ದೇಶಗಳಲ್ಲಿ ವಿತರಣಾ ಮಾರ್ಗಗಳನ್ನು ಸ್ಥಾಪಿಸುವತ್ತ ಗಮನಹರಿಸಬೇಕಾಗಿದೆ ಎಂದು ಹಿರಿಯ ನಟ ಅಮೀರ್ ಖಾನ್ ಹೇಳಿದ್ದಾರೆ. ವೇವ್ಸ್ 2025ರಲ್ಲಿ "ಭವಿಷ್ಯದ ಸ್ಟುಡಿಯೋಗಳು: ಜಾಗತಿಕ ಸ್ಟುಡಿಯೋ ನಕ್ಷೆಯಲ್ಲಿ ಭಾರತವನ್ನು ಸ್ಥಾನೀಕರಿಸುವುದು" ಎಂಬ ಶೀರ್ಷಿಕೆಯ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರ ಎರಡನೇ ದಿನದಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ ನಲ್ಲಿ ಈ ಚರ್ಚೆ ನಡೆಯಿತು.

ಚಲನಚಿತ್ರ ವಿಮರ್ಶಕ ಮಯಾಂಕ್ ಶೇಖರ್ ನಿರ್ವಹಿಸಿದ ಈ ಗೋಷ್ಠಿಯಲ್ಲಿ ನಿರ್ಮಾಪಕ ರಿತೇಶ್ ಸಿಧ್ವಾನಿ, ಪ್ರೈಮ್ ಫೋಕಸ್ ಲಿಮಿಟೆಡ್‌ ನ ನಮಿತ್ ಮಲ್ಹೋತ್ರಾ, ಚಲನಚಿತ್ರ ನಿರ್ಮಾಪಕ ದಿನೇಶ್ ವಿಜನ್, ಪಿವಿಆರ್ ಸಿನಿಮಾಸ್‌ ನ ಅಜಯ್ ಬಿಜ್ಲಿ ಮತ್ತು ಖ್ಯಾತ ಅಮೇರಿಕನ್ ನಿರ್ಮಾಪಕ ಚಾರ್ಲ್ಸ್ ರೋವೆನ್ ಸೇರಿದಂತೆ ಚಲನಚಿತ್ರೋದ್ಯಮದ ದಿಗ್ಗಜರ ಅದ್ಭುತ ತಂಡ ಭಾಗವಹಿಸಿತು.

ಭಾರತೀಯ ಚಲನಚಿತ್ರಗಳ ಶ್ರೀಮಂತ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅಮೀರ್ ಖಾನ್, ಆರಂಭದಿಂದಲೇ ಜಾಗತಿಕವಾಗಿ ಯೋಚಿಸುವ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳಿದರು.‌

ಒಟಿಟಿ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಮೀರ್ರ್, ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಬಿಡುಗಡೆ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ ಗಳಲ್ಲಿ ಅವುಗಳ ಬಿಡುಗಡೆಯ ನಡುವಿನ ಬಹಳ ಕಡಿಮೆ ಸಮಯದಿಂದಾಗಿ ಚಿತ್ರಮಂದಿರಗಳಿಗೆ ಭೇಟಿ ನೀಡುವ ಚಲನಚಿತ್ರ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ  ಗಮನಸೆಳೆದರು.

ಜಾಗತಿಕವಾಗಿ ಮೆಚ್ಚುಗೆ ಪಡೆದ ಓಪನ್‌ಹೈಮರ್ ಚಲನಚಿತ್ರದ ನಿರ್ಮಾಪಕ ಚಾರ್ಲ್ಸ್ ರೋವನ್, ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ನಿರಂತರ ಶಕ್ತಿಯನ್ನು ಒತ್ತಿ ಹೇಳಿದರು. "ದೂರದರ್ಶನ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ  ಏರಿಕೆಯ ಹೊರತಾಗಿಯೂ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಪಡೆಯುವ ಚಲನಚಿತ್ರ ಅನುಭವವು ಯಾವಾಗಲೂ ಅಪ್ರತಿಮವಾಗಿರುತ್ತದೆ" ಎಂದು ಅವರು ಹೇಳಿದರು.

ಚಾರ್ಲ್ಸ್ ರೋವೆನ್ ಭಾರತೀಯ ಸ್ಟುಡಿಯೋಗಳು ದೇಶೀಯ ಯೋಜನೆಗಳ ಮೇಲೆ ಮಾತ್ರ ಗಮನಹರಿಸುವ ಬದಲು ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರುವ ಯೋಜನೆಗಳಿಗೆ ಬದಲಾಯಿಸುವಂತೆ ಸಲಹೆ ನೀಡಿದರು.

ದಿನೇಶ್ ವಿಜನ್ ಅವರು ಅಧಿಕೃತ ಕಥೆ ಹೇಳುವಿಕೆಯ ಪ್ರಾಮುಖ್ಯತೆ ಮತ್ತು ಅಂತರರಾಷ್ಟ್ರೀಯ ಸ್ಟುಡಿಯೋಗಳ ಸಹಯೋಗದ ಬಗ್ಗೆ ಮಾತನಾಡಿದರು. "ಇದು ಕೇವಲ ಬಜೆಟ್ ಬಗ್ಗೆ ಅಲ್ಲ" ಎಂದು ಅವರು ಹೇಳಿದರು. "ಸಣ್ಣ ನಗರಗಳು ಚಲನಚಿತ್ರ ಸ್ನೇಹಿಯಾಗಿವೆ. ಆದರೆ ಜಾಗತಿಕ ಮಟ್ಟಕ್ಕೆ ಹೋಗಲು, ನಾವು ಗುಣಮಟ್ಟದ ಕಂಟೆಂಟ್ ಮತ್ತು ಗಡಿಯಾಚೆಗಿನ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ."‌ ಎಂದು ಅವರು ಹೇಳಿದರು.

ನಮಿತ್ ಮಲ್ಹೋತ್ರಾ, ಕಥೆ ಹೇಳುವಿಕೆಯನ್ನು ಹೆಚ್ಚಿಸುವಲ್ಲಿ ಮತ್ತು ಭಾರತೀಯ ಪ್ರತಿಭೆಯನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸಲು ಸಹಾಯ ಮಾಡುವಲ್ಲಿ ತಂತ್ರಜ್ಞಾನದ ಪ್ರಮುಖ ಪಾತ್ರದ ಬಗ್ಗೆ, ವಿಶೇಷವಾಗಿ ಎಐ ಬಳಕೆಯ ಬಗ್ಗೆ ಮಾತನಾಡಿದರು.

ಒಟಿಟಿ ಪ್ಲಾಟ್‌ಫಾರ್ಮ್‌ ಗಳ ಮೂಲಕ ಬೆಳೆಯುತ್ತಿರುವ ಅವಕಾಶಗಳ ಬಗ್ಗೆ ರಿತೇಶ್ ಸಿಧ್ವಾನಿ ಗಮನಸೆಳೆದರು. "ಒಟಿಟಿ ಭಾರತೀಯ ಕಂಟೆಂಟ್‌ ಗೆ ಜಾಗತಿಕ ಗೋಚರತೆಯನ್ನು ನೀಡಿದೆ" ಎಂದು ಅವರು ಹೇಳಿದರು. "ಇದು ನಮಗೆ ಸ್ವರೂಪ ಮತ್ತು ನಿರೂಪಣೆಯೊಂದಿಗೆ ಪ್ರಯೋಗ ಮಾಡಲು ಅನುವು ಮಾಡಿಕೊಡುತ್ತದೆ." ಎಂದು ಅವರು ಹೇಳಿದರು.

ಕೋವಿಡ್ ನಂತರ ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಅಜಯ್ ಬಿಜ್ಲಿ ಕಳವಳ ವ್ಯಕ್ತಪಡಿಸಿದರು. ಚಿತ್ರಮಂದಿರ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಮೂಲಕ ಆದಾಯವನ್ನು ಖಚಿತಪಡಿಸಿಕೊಳ್ಳಲು ಬಿಡುಗಡೆಯ ಅವಧಿಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು.

ದಿನೇಶ್ ವಿಜನ್ ಅವರು ತಂತ್ರಜ್ಞಾನವು ಅಧಿಕೃತ ಲಿಪ್-ಸಿಂಕ್ ಅನುವಾದಗಳ ಮೂಲಕ ಭಾಷಾ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಸಾಂಸ್ಕೃತಿಕ ನಿರ್ದಿಷ್ಟತೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ವ್ಯಾಪಕ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಒತ್ತಿ ಹೇಳಿದರು.

ಸರ್ಕಾರವು ಈ ಸ್ಥಿತ್ಯಂತರವನ್ನು ಹೇಗೆ ಬೆಂಬಲಿಸಬಹುದು ಎಂಬುದನ್ನು ಚರ್ಚಿಸುವ ಮೂಲಕ ಗೋಷ್ಠಿಯು ಮುಕ್ತಾಯವಾಯಿತು. ವೇವ್ಸ್ ಶೃಂಗಸಭೆಯ ಕುರಿತು ಮಾತನಾಡಿದ ಅಮೀರ್ ಖಾನ್, "ಈ ಉದ್ಯಮದ‌ ಬಗ್ಗೆ ಸರ್ಕಾರವೊಂದು ಇಷ್ಟೊಂದು ಆಸಕ್ತಿ ವಹಿಸುತ್ತಿರುವುದನ್ನು ನಾನು ನೋಡಿದ್ದು ಇದೇ ಮೊದಲು. ವೇವ್ಸ್ ಕೇವಲ ಸಂವಾದವಲ್ಲ - ಇದು ನೀತಿಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಇದು ಭರವಸೆಯ ಆರಂಭವಾಗಿದೆ. ನಮ್ಮ ಚರ್ಚೆಗಳು ನೀತಿಗಳಾಗಿ ರೂಪಾಂತರಗೊಳ್ಳುತ್ತವೆ ಎಂದು ನನಗೆ ವಿಶ್ವಾಸವಿದೆ," ಎಂದು ಅವರು ಹೇಳಿದರು.

 

*****


Release ID: (Release ID: 2126933)   |   Visitor Counter: 15