ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಶೃಂಗಸಭೆಯು ಜಾಗತಿಕ ಮತ್ತು ಭಾರತೀಯ ಕಥೆಗಾರರ ನಡುವಿನ ಸೃಜನಶೀಲ ಸಮನ್ವಯವನ್ನು ಹೆಚ್ಚಿಸುವ ವೇದಿಕೆಯಾಗಿದೆ: ಟೆಡ್ ಸರಾಂಡೋಸ್, ನೆಟ್‌ಫ್ಲಿಕ್ಸ್ ನ ಸಹ-ಸಿಇಒ
Posted On:
03 MAY 2025 3:56PM
|
Location:
PIB Bengaluru
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಮೂರನೇ ದಿನವಾದ ಇಂದು ನಟ ಸೈಫ್ ಅಲಿ ಖಾನ್ ಅವರೊಂದಿಗೆ ಆಕರ್ಷಕ ಸಂವಾದದಲ್ಲಿ ನೆಟ್ಫ್ಲಿಕ್ಸ್ ನ ಸಹ-ಸಿಇಒ ಟೆಡ್ ಸರಾಂಡೋಸ್ ಮಾತನಾಡುತ್ತಾ, ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳು ಭಾರತದಲ್ಲಿ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಪ್ರಜಾಸತಾತ್ಮಕಗೊಳಿಸಿವೆ ಎಂದು ಹೇಳಿದರು.

"ಸ್ಟ್ರೀಮಿಂಗ್ ದಿ ನ್ಯೂ ಇಂಡಿಯಾ: ಕಲ್ಚರ್, ಕನೆಕ್ಟಿವಿಟಿ ಅಂಡ್ ಕ್ರಿಯೇಟಿವ್ ಕ್ಯಾಪಿಟಲ್" ಎಂಬ ವಿಷಯ ಕುರಿತು ನಡೆದ ಸಂವಾದವು ಡಿಜಿಟಲ್ ಯುಗದಲ್ಲಿ ಕಥೆ ಹೇಳುವಿಕೆಯ ವಿಕಸನಗೊಳ್ಳುತ್ತಿರುವ ಭೂದೃಶ್ಯ, ಸೃಜನಶೀಲ ಸ್ವಾತಂತ್ರ್ಯದ ಮೇಲೆ ಸ್ಟ್ರೀಮಿಂಗ್ ನ ಪ್ರಭಾವ ಮತ್ತು ಜಾಗತಿಕ ಮನರಂಜನಾ ಕ್ಷೇತ್ರದಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಚರ್ಚಿಸಿತು.
ಕಥೆ ಹೇಳುವಿಕೆಯ ಭವಿಷ್ಯದ ಬಗ್ಗೆ ಸರಂಡೋಸ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಇಂದು ಕಥೆ ಹೇಳುವಿಕೆಯು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನಿಖರವಾಗಿ ಊಹಿಸುವುದು ತುಂಬಾ ಕಷ್ಟ, ಹಾಗಿದ್ದರೂ, ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ಗುರಿ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು. ಕೋವಿಡ್ ನಂತರದ ಅವಧಿಯಲ್ಲಿ ಭಾರತದಲ್ಲಿ ನೆಟ್ಫ್ಲಿಕ್ಸ್ ಹೂಡಿಕೆ ಮಾಡಿರುವುದರಿಂದ ಸ್ಥಳೀಯ ಆರ್ಥಿಕತೆಯಲ್ಲಿ 2 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ನಡೆದಿದೆ ಎಂದು ಅವರು ಹೇಳಿದರು. ಇದು ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡಿದೆ ಎಂದು ಅವರು ಹೇಳಿದರು. ನೆಟ್ಫ್ಲಿಕ್ಸ್ ಭಾರತದ 23 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಚಿತ್ರೀಕರಣ ನಡೆಸಿದ್ದು, 25,000 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಮತ್ತು ಇತರ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಎಂದು ಟೆಡ್ ಸರಾಂಡೋಸ್ ಹೇಳಿದರು.

ಜನಪ್ರಿಯ ಸರಣಿ ಸೇಕ್ರೆಡ್ ಗೇಮ್ಸ್ ನಲ್ಲಿ ನೆಟ್ಫ್ಲಿಕ್ಸ್ ನೊಂದಿಗಿನ ತಮ್ಮ ಸಹಯೋಗದ ಬಗ್ಗೆ ಮಾತನಾಡಿದ ಸೈಫ್ ಅಲಿ ಖಾನ್, ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳ ಪರಿವರ್ತಕ ಶಕ್ತಿಯನ್ನು ಒತ್ತಿ ಹೇಳಿದರು. "ಮೊದಲು, ನಾವು ಕಟ್ಟುನಿಟ್ಟಿನ ಸ್ವರೂಪಗಳಿಗೆ ಹೊಂದಿಕೊಳ್ಳಬೇಕಾಗಿತ್ತು. ಸ್ಟ್ರೀಮಿಂಗ್ ನಟರು ಮತ್ತು ಚಲನಚಿತ್ರ ನಿರ್ಮಾಪಕರನ್ನು ಆ ನಿರ್ಬಂಧಗಳಿಂದ ಮುಕ್ತಗೊಳಿಸಿದೆ. ಈಗ, ಪ್ರಪಂಚದಾದ್ಯಂತ ಜನರು ಸಾಂಪ್ರದಾಯಿಕ ಸಿನೆಮಾದಲ್ಲಿ ತಪ್ಪಿಸಿಕೊಂಡಿದ್ದ ಕಥೆಗಳನ್ನು ನಮ್ಮ ಕಥೆಗಳಲ್ಲಿ ವೀಕ್ಷಿಸಬಹುದು" ಎಂದು ಅವರು ಹೇಳಿದರು.
ಭಾರತದಲ್ಲಿ ಚಲನಚಿತ್ರ ನಿರ್ಮಾಣದ ಪ್ರಜಾಪ್ರಭುತ್ವೀಕರಣದ ಕುರಿತು ವಿವರಿಸುತ್ತಾ, "ಪ್ರೇಕ್ಷಕರು ಯಾವುದೇ ಸಮಯದಲ್ಲಿ ವೈವಿಧ್ಯಮಯ ಕಥೆಗಳನ್ನು ವೀಕ್ಷಿಸಬಹುದು ಮತ್ತು ಕಂಟೆಂಟ್ ಸೃಷ್ಟಿಕರ್ತರಿಗೆ ಅವುಗಳನ್ನು ಹೇಳಲು ಹೆಚ್ಚಿನ ಸ್ವಾತಂತ್ರ್ಯವಿದೆ. ಇದು ನೋಡುವ ಮತ್ತು ನಿರ್ಮಿಸುವ ನಿರಂತರ ಚಕ್ರವಾಗಿದೆ" ಎಂದು ಅವರು ಹೇಳಿದರು.
ಸಿನಿಮಾ ಮತ್ತು ಸ್ಟ್ರೀಮಿಂಗ್ ನ ಸಹ ಉಪಸ್ಥಿತಿಯನ್ನು ಉದ್ದೇಶಿಸಿ ಮಾತನಾಡಿದ ಸರಂಡೋಸ್, ಚಿತ್ರಮಂದಿರದ ಬಿಡುಗಡೆಗಳು ಇನ್ನೂ ಮೌಲ್ಯವನ್ನು ಹೊಂದಿವೆ ಎಂದು ಹೇಳಿದರು. "ಸಿನಿಮಾಗಳು ಹಳೆಯದಲ್ಲ. ಸ್ಟ್ರೀಮಿಂಗ್ ಮತ್ತು ಥಿಯೇಟರ್ ಗಳು ಸ್ಪರ್ಧಿಗಳಲ್ಲ. ನಮ್ಮ ಮುಂದಿರುವ ಮಾರುಕಟ್ಟೆ ದೊಡ್ಡದಾಗಿರುವುದರಿಂದ ಅವು ಪರಸ್ಪರ ಒಟ್ಟಾಗಿ ಮುಂದುವರಿಯಬಹುದು" ಎಂದು ಅವರು ಹೇಳಿದರು.

ಸೈಫ್ ಕೂಡ ಇದೇ ಭಾವನೆಯನ್ನು ವ್ಯಕ್ತಪಡಿಸಿ, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳು ತಮಗೆ ಅತ್ಯಂತ ಅರ್ಥಪೂರ್ಣವಾಗಿವೆ ಎಂದು ಹೇಳಿದರು. "ವಿದೇಶದಲ್ಲಿ ನನ್ನ ಚಲನಚಿತ್ರಗಳ ಬಗ್ಗೆ ಯಾರಾದರೂ ನನ್ನನ್ನು ಕೇಳಿದರೆ, ನಾನು ಅವರಿಗೆ 'ಓಂಕಾರ' ಅಥವಾ 'ಪರಿಣೀತ'ದ ಬಗ್ಗೆ ಹೇಳುತ್ತೇನೆ - ಈ ಚಲನಚಿತ್ರಗಳು ನಮ್ಮ ಸಂಸ್ಕೃತಿಯೊಂದಿಗೆ ಆಳವಾಗಿ ಸಂಬಂಧ ಹೊಂದಿವೆ. ನಮ್ಮದೇ ಆದ ಕಥೆಗಳನ್ನು ಜಗತ್ತಿಗೆ ಹೇಳುವುದರಲ್ಲಿ ವಿಭಿನ್ನವಾದ ರೋಮಾಂಚನವಿದೆ" ಎಂದು ಅವರು ಹೇಳಿದರು.
ಜಾಗತಿಕ ಮತ್ತು ಭಾರತೀಯ ಕಥೆಗಾರರ ನಡುವಿನ ಸೃಜನಶೀಲ ಸಮನ್ವಯವನ್ನು ಹೆಚ್ಚಿಸುವ ವೇದಿಕೆಯಾಗಿ ವೇವ್ಸ್ ಅನ್ನು ಸರಂಡೋಸ್ ಮತ್ತು ಸೈಫ್ ಇಬ್ಬರೂ ಶ್ಲಾಘಿಸಿದರು. "ಇಲ್ಲಿ ಪ್ರಸ್ತುತಪಡಿಸಲಾದ ವಿಚಾರಗಳು ಕೆಲಸ ಮಾಡಿದರೆ, ಅವು ಕಲ್ಪನೆಗೂ ಮೀರಿ ಯಶಸ್ವಿಯಾಗುತ್ತವೆ. ಆ ಆವೇಗಕ್ಕೆ ವೇವ್ಸ್ ಒಂದು ಅದ್ಭುತ ವೇದಿಕೆಯಾಗಿದೆ" ಎಂದು ಸರಂಡೋಸ್ ಈ ಉಪಕ್ರಮವನ್ನು ಶ್ಲಾಘಿಸಿದರು.
ವೇವ್ಸ್ ಶೃಂಗಸಭೆಯು ಪ್ರಪಂಚದಾದ್ಯಂತದ ಚಿಂತಕರು ಮತ್ತು ಉದ್ಯಮ ತಜ್ಞರನ್ನು ಒಟ್ಟುಗೂಡಿಸಿ, ಸಂವಾದ, ನಾವೀನ್ಯತೆ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಮನರಂಜನಾ ಉದ್ಯಮದ ಭವಿಷ್ಯವನ್ನು ರೂಪಿಸುತ್ತಿದೆ.
*****
Release ID:
(Release ID: 2126753)
| Visitor Counter:
5