ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025ರಲ್ಲಿ ಡಿಜಿಟಲ್ ಅಭಿವ್ಯಕ್ತಿಯ ಭವಿಷ್ಯದಲ್ಲಿ ಭಾರತದ ಪಾತ್ರವನ್ನು ವಿವರಿಸಿದ ಉದ್ಯಮದ ನಾಯಕರು: ಕೃತಕ ಬುದ್ಧಿಮತ್ತೆ ಸೃಜನಶೀಲತೆಯನ್ನು ಸಂಧಿಸುತ್ತದೆ: ಕೃತಕ ಬುದ್ಧಿಮತ್ತೆ ಸೃಜನಶೀಲತೆಯೊಂದಿಗೆ ಕೈಜೋಡಿಸಿದೆ
"ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಿತ್ತುಕೊಳ್ಳಲು ಬಂದಿಲ್ಲ - ಅದು ಒಂದು ಉದ್ದೇಶವನ್ನು ಸಾಧಿಸುವ ಮಾರ್ಗವಷ್ಟೇ." - ರಿಚರ್ಡ್ ಕೆರಿಸ್, ಎನ್ವಿಡಿಯಾ
"ಸೃಜನಶೀಲತೆಯು ಪ್ರತಿಯೊಂದು ಉದ್ಯಮವನ್ನೂ ಬದಲಾಯಿಸಿದೆ." - ಶಂತನು ನಾರಾಯಣ್, ಅಡೋಬ್
Posted On:
01 MAY 2025 8:52PM
|
Location:
PIB Bengaluru
ವೇವ್ಸ್ 2025ರ ಉದ್ಘಾಟನಾ ದಿನವಾದ ಇಂದು ಮುಂಬೈನಲ್ಲಿ ನಡೆದ ಮೂರು ಗೋಷ್ಠಿಗಳಲ್ಲಿ ಕೃತಕ ಬುದ್ಧಿಮತ್ತೆ (AI) ಚರ್ಚೆಯ ಮುಖ್ಯ ವಿಷಯವಾಗಿತ್ತು. ಜಾಗತಿಕ ಉದ್ಯಮದ ಪ್ರಮುಖ ವ್ಯಕ್ತಿಗಳು ನಡೆಸಿಕೊಟ್ಟ ಈ ಗೋಷ್ಠಿಗಳು ನಾವೀನ್ಯತೆ, ಸೃಜನಶೀಲತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಸಮ್ಮಿಲನಕ್ಕೆ ಸಾಕ್ಷಿಯಾದವು. AI ಮಾಧ್ಯಮ, ಕಥೆ ಹೇಳುವಿಕೆ ಮತ್ತು ಡಿಜಿಟಲ್ ಪ್ರೊಡಕ್ಷನ್ ನೊಂದಿಗೆ ಹೇಗೆ ಬೆರೆಯುತ್ತಿದೆ ಎಂಬುದನ್ನು ಈ ಗೋಷ್ಠಿಗಳು ವಿವರಿಸಿದವು. ಈ ಸೃಜನಾತ್ಮಕ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಭಾರತವು ಬೆಳೆಯುತ್ತಿರುವ ಸ್ಥಾನವನ್ನು ಇದು ಮತ್ತೊಮ್ಮೆ ಖಚಿತಪಡಿಸಿತು.
"ಸೃಜನಶೀಲತೆಯು ಪ್ರತಿಯೊಂದು ಉದ್ಯಮವನ್ನೂ ಪರಿವರ್ತಿಸಿದೆ." — ಶಂತನು ನಾರಾಯಣ್, ಅಡೋಬ್
AI ಯುಗದಲ್ಲಿ ವಿನ್ಯಾಸ, ಮಾಧ್ಯಮ ಮತ್ತು ಸೃಜನಶೀಲತೆ" ಎಂಬ ಮುಖ್ಯ ಭಾಷಣದಲ್ಲಿ, ಅಡೋಬಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂತನು ನಾರಾಯಣ್ ಅವರು ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಯ ಕುರಿತು ವಿಸ್ತಾರವಾದ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಂತರ್ಜಾಲದಿಂದ ಮೊಬೈಲ್ಗೆ ಮತ್ತು ಈಗ ಕೃತಕ ಬುದ್ಧಿಮತ್ತೆಯವರೆಗೆ ಡಿಜಿಟಲ್ ಪಯಣವನ್ನು ವಿವರಿಸಿದ ನಾರಾಯಣ್ ಅವರು, 50 ಕೋಟಿಗೂ ಹೆಚ್ಚು ಭಾರತೀಯರು ಆನ್ಲೈನ್ ವಿಷಯವನ್ನು ವೀಕ್ಷಿಸುತ್ತಿರುವುದು ಮತ್ತು ಪ್ರಾದೇಶಿಕ ಭಾಷೆಗಳ ಬಳಕೆಯತ್ತ ಗಮನಾರ್ಹ ಬದಲಾವಣೆ ಕಂಡುಬರುತ್ತಿರುವುದರೊಂದಿಗೆ, ವಿಷಯ ಸೃಷ್ಟಿಯಲ್ಲಿ ಭಾರತದ ಪ್ರಾಮುಖ್ಯತೆ ಹೆಚ್ಚುತ್ತಿರುವುದನ್ನು ತಿಳಿಸಿದರು.
ಕೃತಕ ಬುದ್ಧಿಮತ್ತೆಯು ಸೃಜನಶೀಲತೆಯನ್ನು ಕಸಿದುಕೊಳ್ಳುವುದಿಲ್ಲ, ಬದಲಿಗೆ ಅದನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಜನರೇಟಿವ್ AI ಭಾರತೀಯ ಕ್ರಿಯೇಟರ್ ಗಳಿಗೆ ಹಳೆಯ ಮಾಧ್ಯಮಗಳ ಕಟ್ಟುಪಾಡುಗಳನ್ನು ಮೀರಿ ಬೆಳೆಯಲು ನೆರವಾಗುತ್ತಿದೆ" ಎಂದವರು ನುಡಿದರು. ಚಿತ್ರಗಳು, ವಿಡಿಯೋಗಳು ಮತ್ತು ವಿನ್ಯಾಸಗಳಾದ್ಯಂತ ವೈವಿಧ್ಯಮಯ ಕಥೆಗಳನ್ನು ಕಟ್ಟಿಕೊಡಲು ಇದು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಅವರು ವಿವರಿಸಿದರು. ಚಲನಚಿತ್ರದಿಂದ ಹಿಡಿದು ತಕ್ಷಣದ ಮೊಬೈಲ್ ಕಥೆ ಹೇಳುವಿಕೆಯವರೆಗೆ, ಸೃಜನಶೀಲತೆಯ ಸಾಧ್ಯತೆಗಳು ವಿಸ್ತಾರವಾಗುತ್ತಿವೆ ಎಂದು ಅವರು ತಿಳಿಸಿದರು.
AI ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತಕ್ಕಿರುವ ವಿಶೇಷ ಸ್ಥಾನವನ್ನು – ಅಪ್ಲಿಕೇಶನ್ ಗಳಿಂದ ಹಿಡಿದು ದತ್ತಾಂಶ ಮೂಲಸೌಕರ್ಯದವರೆಗೆ - ಉಲ್ಲೇಖಿಸಿದ ನಾರಾಯಣ್ ಅವರು, ನಾಲ್ಕು ಅಂಶಗಳ ಕಾರ್ಯತಂತ್ರವನ್ನು ವಿವರಿಸಿದರು: ಸೃಜನಶೀಲತೆ ಮತ್ತು ಉತ್ಪಾದನೆಯನ್ನು ಗರಿಷ್ಠಗೊಳಿಸುವುದು, ವ್ಯವಹಾರ ಮಾದರಿಗಳನ್ನು ಹೊಸತನಗೊಳಿಸುವುದು, AI ಕೌಶಲ್ಯವುಳ್ಳ ಉದ್ಯೋಗಿಗಳನ್ನು ಮುನ್ನಡೆಸುವುದು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದು. ವೇವ್ಸ್ ನಂತಹ ದೂರದೃಷ್ಟಿಯ ವೇದಿಕೆಯನ್ನು ನಿರ್ಮಿಸಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಅವರು ತಮ್ಮ ಭಾಷಣವನ್ನು ಮುಗಿಸಿದರು.
"AI ಉದ್ಯೋಗಗಳನ್ನು ಕಸಿದುಕೊಳ್ಳಲು ಬಂದಿಲ್ಲ - ಇದು ಒಂದು ಗುರಿಯನ್ನು ಸಾಧಿಸುವ ಸಾಧನವಷ್ಟೆ." - ರಿಚರ್ಡ್ ಕೆರಿಸ್, NVIDIA
"ಕೆಲಸದಾಚೆಗಿನ ಕೃತಕ ಬುದ್ಧಿಮತ್ತೆ" ಎಂಬ ಆಲೋಚನೆಗೆ ಪ್ರೇರಣೆ ನೀಡುವ ಸಂವಾದದಲ್ಲಿ, NVIDIAದ ಉಪಾಧ್ಯಕ್ಷ ರಿಚರ್ಡ್ ಕೆರಿಸ್ ಮತ್ತು ಎನ್ವಿಡಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಧುಪಾರ್ ಅವರು, AI ವೈಯಕ್ತಿಕ ಗಣಕೀಕರಣ ಮತ್ತು ಸೃಜನಾತ್ಮಕ ಉತ್ಪಾದಕತೆಯನ್ನು ಹೇಗೆ ಮರು ವ್ಯಾಖ್ಯಾನಿಸುತ್ತಿದೆ ಎಂಬುದರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಪರ್ಸನಲ್ ಕಂಪ್ಯೂಟರ್ ಯುಗದ ಬೆಳವಣಿಗೆಯನ್ನು ನೆನಪಿಸಿಕೊಳ್ಳುತ್ತಾ ಧುಪಾರ್ ಅವರು, "ಕಚೇರಿ ಸಮಯದ ನಂತರ ಪರ್ಸನಲ್ ಕಂಪ್ಯೂಟರ್ ನಿದ್ರಿಸುತ್ತಿದ್ದವು. ಆದರೆ ಮನುಷ್ಯರಲ್ಲ" ಎಂದರು. NVIDIA ಯ ಆರಂಭಿಕ ದೃಷ್ಟಿಕೋನ - ಪರ್ಸನಲ್ ಕಂಪ್ಯೂಟರ್ ಗಳನ್ನು ಸೃಜನಶೀಲ ಸಹಾಯಕರೆಂದು ಕಲ್ಪಿಸುವುದು - ಈಗ AI ಚಾಲಿತ ಜಗತ್ತಿನಲ್ಲಿ ಹೇಗೆ ನಿಜವಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು.
ಹಿಂದೆ 3D ಅನಿಮೇಷನ್ ಕಲಿಯುವುದು ಎಷ್ಟೊಂದು ಕಷ್ಟಕರವಾಗಿತ್ತು ಎಂಬುದನ್ನು ಕೆರಿಸ್ ಅವರು ನೆನಪಿಸಿಕೊಂಡರು. "ಈಗ, ಜನರೇಟಿವ್ AI ಯಿಂದಾಗಿ, ನಾವು ಕೇವಲ ಕಲ್ಪನೆಯಿಂದ ಬಹಳ ಬೇಗನೆ ಒಂದು ಸೃಷ್ಟಿಯನ್ನು ನೀಡಬಹುದು" ಎಂದು ಅವರು ಹೇಳಿದರು. ಆದರೂ, ಮೂಲಭೂತ ಅಂಶಗಳನ್ನು ಮರೆಯದಂತೆ ಅವರು ಎಚ್ಚರಿಸಿದರು: "ನಮ್ಮೆಲ್ಲರ ಫೋನ್ನಲ್ಲಿ ಕ್ಯಾಮೆರಾ ಇದೆ ಎಂದುಕೊಂಡರೆ ನಾವೆಲ್ಲರೂ ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ."
AI ಮಾನವನ ಸೃಜನಶೀಲತೆಯನ್ನು ಕಸಿದುಕೊಳ್ಳುವ ಬದಲು ಅದನ್ನು ಹೆಚ್ಚಿಸುತ್ತದೆ ಎಂದು ಇಬ್ಬರೂ ಭಾಷಣಕಾರರು ಒಪ್ಪಿಕೊಂಡರು. "AI ನಿಮ್ಮ ಕೈಗೆ ಉಪಕರಣಗಳನ್ನು ನೀಡುತ್ತದೆ - ಆದರೆ ಕಲೆ ಮತ್ತು ಮೂಲಭೂತ ಜ್ಞಾನ ಇನ್ನೂ ಅತ್ಯಗತ್ಯ" ಎಂದು ಕೆರಿಸ್ ಒತ್ತಿ ಹೇಳಿದರು. "ಸೃಜನಶೀಲ ಜನರು ತಮ್ಮ ಕೆಲಸದಲ್ಲಿ ಜೀವಿಸುತ್ತಾರೆ. AI ಅದನ್ನು ಬದಲಿಸುವುದಿಲ್ಲ - ಅದು ಅದನ್ನು ಸಾಧ್ಯವಾಗಿಸುತ್ತದೆ" ಎಂದು ಧುಪಾರ್ ತಮ್ಮ ಮಾತನ್ನು ಮುಗಿಸಿದರು.
ಜನರೇಟಿವ್ AI ಬಳಸಿ ಕಥೆಗಳಿಗೆ ಜೀವ ತುಂಬುವುದು" - ಅನೀಶ್ ಮುಖರ್ಜಿ, NVIDIA
NVIDIA ದ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಅನೀಶ್ ಮುಖರ್ಜಿ ಅವರ ಮೂರನೇ ಗೋಷ್ಠಿಯು ಒಂದು ವಿಶೇಷ ತರಗತಿಯಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಜನರೇಟಿವ್ AI ನ ವಾಸ್ತವಿಕ ಅನ್ವಯಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. "ಜನರೇಟಿವ್ AI ಬಳಸಿ ಕಥೆಗಳಿಗೆ ಜೀವ ತುಂಬುವುದು" ಎಂಬ ಶೀರ್ಷಿಕೆಯ ಈ ಗೋಷ್ಠಿಯಲ್ಲಿ, NVIDIA ಹಾರ್ಡ್ವೇರ್ನಿಂದಾಚೆಗೆ ಪರಿವರ್ತನೆಯ ಸಾಧನಗಳತ್ತ ಸಾಗುವ ತನ್ನ ವೇದಿಕೆಯ ವಿಧಾನವನ್ನು ಪ್ರಮುಖವಾಗಿ ತೋರಿಸಿತು.
ಮುಖರ್ಜಿ ಅವರು ಸ್ಥಿರ ಚಿತ್ರಗಳನ್ನು ಡಿಜಿಟಲ್ ಮಾನವರನ್ನಾಗಿ ಪರಿವರ್ತಿಸುವುದು, ಬಹುಭಾಷಾ ಧ್ವನಿ ನೀಡಿಕೆ ಮತ್ತು ಧ್ವನಿ ಆಧಾರಿತ ಪಾತ್ರಗಳ ಅನಿಮೇಷನ್ ಸೇರಿದಂತೆ AI ಚಾಲಿತ ಪರಿಹಾರಗಳನ್ನು ಪ್ರಾತ್ಯಕ್ಷಿಕೆ ನೀಡಿದರು. NVIDIA ಯ ಫುಗಾಟೊ ಮಾದರಿಯನ್ನು ಬಳಸಿ, ಅವರು AI ನಿಂದ ರಚಿತವಾದ ಸಂಗೀತ ಮತ್ತು ಡಬ್ಬಿಂಗ್ಗಾಗಿ ವಾಸ್ತವಿಕ ತುಟಿ ಚಲನೆಯ ಸಿಂಕ್ರೊನೈಸೇಶನ್ ಅನ್ನು ಪ್ರದರ್ಶಿಸಿದರು. ಓಮ್ನಿವರ್ಸ್ ಪ್ಲಾಟ್ಫಾರ್ಮ್ ಮೂಲಕ ವಿಡಿಯೊ ರಚನೆ ಮತ್ತು ಸಿಮ್ಯುಲೇಶನ್ ಆಧಾರಿತ ತರಬೇತಿಗಾಗಿ ಕಾಸ್ಮೊಸ್ ಎಂಬ ಮೂಲಭೂತ ಮಾದರಿಗಳ ಸಮೂಹವನ್ನು ಸಹ ಅವರು ಪರಿಚಯಿಸಿದರು.
ದೊಡ್ಡ ಭಾಷಾ ಮಾದರಿಗಳು AI ಅನಿಮೇಷನ್ ಮತ್ತು DLSS ನೊಂದಿಗೆ ಹೇಗೆ ಸಂಯೋಜನೆಗೊಳ್ಳುತ್ತವೆ ಎಂಬುದನ್ನು ವಿವರಿಸಿದ ಅವರು, ವಿಶೇಷವಾಗಿ ಆಟಗಳ ಅಭಿವೃದ್ಧಿಯಲ್ಲಿ ತಲ್ಲೀನಗೊಳಿಸುವ ಕಥೆ ಹೇಳುವ ಅನುಭವಗಳನ್ನು ರಚಿಸುವಲ್ಲಿ ಅವುಗಳ ಪಾತ್ರವನ್ನು ಉಲ್ಲೇಖಿಸಿದರು. "ಆಟಗಾರರಿಗೆ ಬುದ್ಧಿವಂತಿಕೆಯಿಂದ ಪ್ರತಿಕ್ರಿಯಿಸುವ AI ಚಾಲಿತ ಪಾತ್ರಗಳು ನಿರೂಪಣೆಯ ಆಕರ್ಷಣೆಯನ್ನು ಮರು ವ್ಯಾಖ್ಯಾನಿಸುತ್ತಿವೆ" ಎಂದು ಅವರು ಹೇಳಿದರು.
ವೇವ್ಸ್ 2025: AI ನೇತೃತ್ವದ ಸೃಜನಾತ್ಮಕ ಪರಿವರ್ತನೆಗೆ ವೇದಿಕೆ ಸಿದ್ಧಪಡಿಸುವುದು
ವಿವಿಧ ಗೋಷ್ಠಿಗಳಲ್ಲಿ ನಡೆದ ಚರ್ಚೆಗಳ ಒಟ್ಟಾರೆ ಸಾರಾಂಶವೇನೆಂದರೆ - ಕೃತಕ ಬುದ್ಧಿಮತ್ತೆ (AI) ಉದ್ಯೋಗಗಳನ್ನು ಕಸಿದುಕೊಳ್ಳುವ ಸಾಧನವಲ್ಲ, ಬದಲಿಗೆ ಅದು ಸಬಲೀಕರಣಗೊಳಿಸುವ ಒಂದು ಆಯುಧ. ವಿನ್ಯಾಸ, ಸಿನಿಮಾ, ಅನಿಮೇಷನ್ ಅಥವಾ ಕಥೆ ಹೇಳುವಿಕೆಯ ಯಾವುದೇ ಕ್ಷೇತ್ರವಿರಲಿ, ಭವಿಷ್ಯವು ಮೂಲಭೂತ ಜ್ಞಾನವನ್ನು ಹೊಂದಿರುವವರು, ಹೊಸ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸುವವರು ಮತ್ತು ನೈತಿಕತೆ, ಸೃಜನಶೀಲತೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಗಳನ್ನು ಕಟ್ಟುವವರಿಗೆ ಸೇರಿದೆ. ಹೀಗಾಗಿ ವೇವ್ಸ್ 2025 ಜಾಗತಿಕ ಸೃಜನಾತ್ಮಕ ಮತ್ತು ತಾಂತ್ರಿಕ ರಂಗದಲ್ಲಿ ಭಾರತದ ಮಹತ್ವದ ಪಾತ್ರಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ.
*****
Release ID:
(Release ID: 2126065)
| Visitor Counter:
15