ವಾರ್ತಾ ಮತ್ತು ಪ್ರಸಾರ ಸಚಿವಾಲಯ
"ಸೃಜನಾತ್ಮಕ ಕಂಟೆಂಟ್ ನಲ್ಲಿ ಜಗತ್ತನ್ನು ಮುನ್ನಡೆಸಲು ಭಾರತಕ್ಕೆ ವೇವ್ಸ್ ಒಂದು ಚಿಮ್ಮುಹಲಗೆ ಆಗಲಿದೆ ಎಂದು ನನಗೆ ವಿಶ್ವಾಸವಿದೆ:" ಅಲ್ಲು ಅರ್ಜುನ್
Posted On:
01 MAY 2025 9:48PM
|
Location:
PIB Bengaluru
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೇಂದ್ರ ಸ್ಥಾನ ಪಡೆದಿದ್ದರಿಂದ ಈ ಗುರುವಾರ ಕನಸುಗಳ ನಗರಿ ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಮಿನುಗಿತು. ಟಿವಿ9 ನೆಟ್ವರ್ಕ್ ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ನಿರ್ವಹಿಸಿದ 'ಟ್ಯಾಲೆಂಟ್ ಬಿಯಾಂಡ್ ಬಾರ್ಡರ್ಸ್' ಎಂಬ ಬಹು ನಿರೀಕ್ಷಿತ 'ಇನ್ ಕಾನ್ವರ್ಸೇಷನ್' ಅಧಿವೇಶನವು ತಾರಾಪಟ್ಟ, ಬದುಕುಳಿಯುವಿಕೆ ಮತ್ತು ಆತ್ಮದ ಬಗ್ಗೆ ಮನೋಜ್ಞವಾದ ಮಾಸ್ಟರ್ ಕ್ಲಾಸ್ ಆಗಿ ಮಾರ್ಪಟ್ಟಿತು.
ಕಥೆ ಹೇಳುವಲ್ಲಿ ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನಕ್ಕೆ ಈ ಶೃಂಗಸಭೆಯು ದಾರಿದೀಪವಾಗಿದೆ ಎಂದು ಅಲ್ಲು ಅರ್ಜುನ್ ಶ್ಲಾಘಿಸಿದರು. "ಭಾರತಕ್ಕೆ ಯಾವಾಗಲೂ ಆತ್ಮವಿದೆ. ಈಗ, ನಮಗೆ ವೇದಿಕೆ ಸಿಕ್ಕಿದೆ" ಎಂದು ಅವರು ಹೇಳಿದರು. "ಸೃಜನಶೀಲ ಕಂಟೆಂಟ್ ನಲ್ಲಿ ಜಗತ್ತನ್ನು ಮುನ್ನಡೆಸಲು ಭಾರತಕ್ಕೆ ವೇವ್ಸ್ ಒಂದು ಚಿಮ್ಮು ಹಲಗೆ ಆಗಲಿದೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಹೇಳಿದರು.
ಆರು ತಿಂಗಳ ಕಾಲ ವಿರಾಮ ತೆಗೆದುಕೊಳ್ಳುವಂತೆ ಮಾಡಿದ ಜೀವನವನ್ನು ಬದಲಾಯಿಸಿದ ಅಪಘಾತದ ಬಗ್ಗೆ ಪುಷ್ಪಾ ನಟ ಮಾತನಾಡಿದಾಗ ಸಂವಾದ ಆತ್ಮೀಯವಾಯಿತು. "ಆ ವಿರಾಮವು ಕೆಡುಕಿನಲ್ಲೂ ಒಂದು ಆಶೀರ್ವಾದವಾಗಿತ್ತು" ಎಂದು ಅವರು ಹೇಳಿದರು. "ಇದು ನನ್ನ ಗಮನವನ್ನು ಸ್ಟಂಟ್ ಗಳಿಂದ ವಸ್ತುವಿನ ಕಡೆಗೆ ಬದಲಾಯಿಸುವಂತೆ ಮಾಡಿತು. ಸ್ನಾಯುಗಳು ದುರ್ಬಲಗೊಂಡಂತೆ ಪರಿಣತಿ ಹೆಚ್ಚಾಗಬೇಕು ಎಂಬುದನ್ನು ನಾನು ಅರಿತುಕೊಂಡೆ. ನಟನೆ ನನ್ನ ಹೊಸ ಕ್ಷೇತ್ರವಾಯಿತು" ಎಂದು ಅವರು ಹೇಳಿದರು.
ನಿರ್ದೇಶಕ ಅಟ್ಲೀ ಅವರೊಂದಿಗಿನ ತಮ್ಮ ಮುಂಬರುವ ಯೋಜನೆಯನ್ನು ನಟ ದೃಢಪಡಿಸಿದರು, ಇದನ್ನು "ಭಾರತೀಯ ಭಾವನೆಗಳಲ್ಲಿ ಬೇರೂರಿರುವ ದೃಶ್ಯ ಪ್ರದರ್ಶನ" ಎಂದು ಬಣ್ಣಿಸಿದರು. "ನಾವು ಅಂತರರಾಷ್ಟ್ರೀಯ ತಂತ್ರಜ್ಞಾನವನ್ನು ದೇಸಿ ಆತ್ಮದೊಂದಿಗೆ ಸಂಯೋಜಿಸುತ್ತಿದ್ದೇವೆ - ಭಾರತಕ್ಕಾಗಿ ಮತ್ತು ಭಾರತದಿಂದ ಜಗತ್ತಿಗೆ ಒಂದು ಚಲನಚಿತ್ರ" ಎಂದು ಅವರು ಹೇಳಿದರು, ಅವರ ಕಣ್ಣುಗಳು ಉತ್ಸಾಹದಿಂದ ತುಂಬಿ ತುಳುಕುತ್ತಿದ್ದವು.
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯಮದಲ್ಲಿ ಬದುಕುಳಿಯುವ ಸವಾಲುಗಳನ್ನು ಸಹ ಈ ಸಂವಾದ ಚರ್ಚಿಸಿತು. "ಪ್ರತಿಯೊಂದು ಭಾಷೆಯಲ್ಲೂ ಅಸಾಧಾರಣ ಯುವ ನಟರು ಹೊರಹೊಮ್ಮುತ್ತಿದ್ದಾರೆ. ನೀವು ಪ್ರಾಮಾಣಿಕರಾಗಿರಬೇಕು, ಹಸಿವಿನಿಂದ ಇರಬೇಕು ಮತ್ತು ಬಹುಮುಖ ಪ್ರತಿಭೆಯಾಗಿರಬೇಕು" ಎಂದು ಅವರು ಸಲಹೆ ನೀಡಿದರು. "ಇದು ಕೇವಲ ಒಂದು ಉದ್ಯಮವಲ್ಲ, ಇದು ಸೃಜನಶೀಲತೆ, ದೃಢತೆ ಮತ್ತು ವಿಕಾಸದ ಸಮರಭೂಮಿಯಾಗಿದೆ" ಎಂದು ಅವರು ಹೇಳಿದರು.
ಆದರೆ ಅವರು ತಮ್ಮ ಬೇರುಗಳ ಬಗ್ಗೆ ಮಾತನಾಡಿದಾಗ, ಸಭಾಂಗಣದಲ್ಲಿ ನೆರೆದಿದ್ದ ಜನರು ಉಸಿರು ಬಿಗಿಹಿಡಿದು ಕುಳಿತರು. ಪ್ರತಿ ಮಾತಿನಲ್ಲೂ ಭಾವುಕರಾಗಿ, ಅರ್ಜುನ್ ತಮ್ಮ ಸುಪ್ರಸಿದ್ಧ ಕುಟುಂಬದ ಅಜ್ಜ ಅಲ್ಲು ರಾಮಲಿಂಗಯ್ಯ, ತಂದೆ ಮತ್ತು ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಚಿಕ್ಕಪ್ಪ ಮತ್ತು ಜೀವಮಾನದ ಸ್ಫೂರ್ತಿಯಾದ ಚಿರಂಜೀವಿ ಅವರಿಗೆ ಗೌರವ ಸಲ್ಲಿಸಿದರು. "ನಾನು ಸ್ವಯಂ ನಿರ್ಮಿತ ಮನುಷ್ಯನಲ್ಲ" ಎಂದು ಅವರು ಒಪ್ಪಿಕೊಂಡರು. "ನನ್ನ ಸುತ್ತಮುತ್ತಲಿನ ಜನರ ಮಾರ್ಗದರ್ಶನ, ಬೆಂಬಲ ಮತ್ತು ಶ್ರೇಷ್ಠತೆಯಿಂದ ನಾನು ಬೆಳೆದಿದ್ದೇನೆ. ನಾನು ಧನ್ಯ" ಎಂದು ಅವರು ಹೇಳಿದರು.
ಅವರ ಶಕ್ತಿಯ ಬಗ್ಗೆ ಕೇಳಿದಾಗ, ಇದೆಲ್ಲವೂ ಅಭಿಮಾನಿಗಳಿಗಾಗಿ ಎಂದು ಅವರು ಹೇಳಿದರು. "ದೀಪಗಳು ಮಂದವಾದಾಗ ಮತ್ತು ಚಪ್ಪಾಳೆಗಳು ಕಡಿಮೆಯಾದಾಗ, ನನ್ನನ್ನು ಮೇಲೆತ್ತುವವರು ನೀವೇ. ನಾನು ಇದನ್ನು ಏಕೆ ಮಾಡುತ್ತೇನೆ ಎಂದು ನನಗೆ ನೆನಪಿಸುವವರು ನೀವೇ. ನನ್ನ ಶಕ್ತಿ... ನೀವೇ." ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೇವ್ಸ್ 2025 ಅನ್ನು ಭಾರತದ ಸೃಜನಶೀಲ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ.
*****
Release ID:
(Release ID: 2126048)
| Visitor Counter:
21