ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ವಲಸೆ ಮತ್ತು ವಿದೇಶಿಯರ ವಿಧೇಯಕ-2025ರ ಚರ್ಚೆಗೆ ಲೋಕಸಭೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉತ್ತರ; ಚರ್ಚೆಯ ನಂತರ  ಮಸೂದೆ ಅಂಗೀಕಾರ


ದೇಶಕ್ಕೆ ಯಾರು, ಯಾವಾಗ, ಎಷ್ಟು ಕಾಲ ಮತ್ತು ಯಾವ ಉದ್ದೇಶಕ್ಕಾಗಿ ಪ್ರವೇಶಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯ

ಯಾರಾದರೂ, ಯಾವುದೇ ಕಾರಣಕ್ಕಾಗಿ ಬಂದು ನೆಲೆಸಬಹುದು ಎಂಬುದಕ್ಕೆ ಭಾರತ ಧರ್ಮಶಾಲೆಯಲ್ಲ; ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡುವವರನ್ನು ತಡೆಯುವ ಅಧಿಕಾರ ಸಂಸತ್ತಿಗೆ ಇದೆ

ಭಾರತದ ಆರ್ಥಿಕತೆಗೆ ಕೊಡುಗೆ ನೀಡಲು ಬರುವವರಿಗೆ ಸ್ವಾಗತ, ಆದರೆ ಅಶಾಂತಿ ಹರಡಲು ಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ

ಈಗ ಭಾರತಕ್ಕೆ ಬರುವ ಪ್ರತಿಯೊಬ್ಬ ವಿದೇಶಿ ಪ್ರಜೆಯ ಸಂಪೂರ್ಣ, ವ್ಯವಸ್ಥಿತ, ಸಂಯೋಜಿತ ಮತ್ತು ನವೀಕೃತ ದಾಖಲೆ ಇರುತ್ತದೆ

ಹೊಸ ವಲಸೆ ಕಾನೂನು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ಸಕಾಲಿಕ ಮತ್ತು ವಿಶ್ವಾಸಾರ್ಹ

ಸ್ವಾತಂತ್ರ್ಯದ ನಂತರ ಭಾರತದ ಮೃದು ಶಕ್ತಿ ವಿಶ್ವಾದ್ಯಂತ ಛಾಪು ಮೂಡಿಸಿದೆ; ಈ ಮಸೂದೆಯು ಅದಕ್ಕೆ ಹೊಸ ಆವೇಗ ಮತ್ತು ಶಕ್ತಿ ನೀಡುತ್ತದೆ

ಮೋದಿ ಸರ್ಕಾರವು ಸಹಾನುಭೂತಿ, ಸೂಕ್ಷ್ಮತೆ ಮತ್ತು ರಾಷ್ಟ್ರಕ್ಕೆ ಎದುರಾಗುವ ಬೆದರಿಕೆಗಳ ಅರಿವಿನೊಂದಿಗೆ ವಲಸೆ ನೀತಿ ರೂಪಿಸಿದೆ

ಡಿಎಂಕೆ ಸಂಸದರು ತಮಿಳು ನಿರಾಶ್ರಿತರ ವಿಷಯವನ್ನು ಎಂದಿಗೂ ಪ್ರಸ್ತಾಪಿಸಿಲ್ಲ

ಅಕ್ರಮ ವಲಸಿಗರು ಮತ್ತು ಅನುಮತಿ ನೀಡಲಾದ ಅವಧಿ ಮೀರಿ ವಾಸಿಸುವವರ ಮೇಲ್ವಿಚಾರಣೆ ಮಾಡಲು "ವಲಸೆ, ವೀಸಾ ಮತ್ತು ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್" (ಐವಿಎಫ್ಆರ್ ಟಿ) ವ್ಯವಸ್ಥೆಗೆ ಕಾನೂನು ಚೌಕಟ್ಟು ನೀಡಲಾಗಿದೆ

3 ವರ್ಷಗಳ ತೀವ್ರ ಚರ್ಚೆಯ ನಂತರ, ಈ ಮಸೂದೆಯು ವಲಸೆ ವ್ಯವಸ್ಥೆಯನ್ನು ಸರಳೀಕೃತ, ಸುವ್ಯವಸ್ಥಿತ, ಸುರಕ್ಷಿತ ಮತ್ತು ವ್ಯವಸ್ಥಿತಗೊಳಿಸಿದೆ

ವಿದೇಶಿಯರ ಗುರುತಿನ ಪೋರ್ಟಲ್ ಎಂದು ಕರೆಯಲ್ಪಡುವ ಜಿಲ್ಲಾ ಪೊಲೀಸ್ ಮಾಡ್ಯೂಲ್(ಡಿಪಿಎಂ) ಅನ್ನು ದೇಶದ 700ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ

ಹಿಂದೆ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವ್ಯಕ್ತಿಯ ಸರಾಸರಿ 4-5 ನಿಮಿಷ ವಲಸೆ ತಪಾಸಣೆ ಮಾಡಲಾಗುತ್ತಿತ್ತು; ಅದೀಗ ಕೇವಲ 1-2 ನಿಮಿಷ ತೆಗೆದುಕೊಳ್ಳುತ್ತದೆ

ಭಾರತಕ್ಕೆ ಪ್ರವೇಶಿಸಲು ಅನುಮತಿಸುವ ಮೊದಲು ನಾವು 24 ನಿಯತಾಂಕ(ಮಾನದಂಡ)ಗಳಲ್ಲಿ ಪ್ರತಿ ವಿದೇಶಿಯರ ಪರಿಪೂರ್ಣ(360-ಡಿಗ್ರಿ) ತಪಾಸಣೆ ಪ್ರಾರಂಭಿಸಿದ್ದೇವೆ

Posted On: 27 MAR 2025 9:24PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿಂದು ವಲಸೆ ಮತ್ತು ವಿದೇಶಿಯರ ಮಸೂದೆ(ವಿಧೇಯಕ)-2025ರ ವ್ಯಾಪಕ ಚರ್ಚೆಗೆ ಉತ್ತರ ನೀಡಿದರು. ಚರ್ಚೆಯ ನಂತರ, ಸದನವು ಮಸೂದೆಯನ್ನು ಅಂಗೀಕರಿಸಿತು.

ಚರ್ಚೆಗೆ ಉತ್ತರ ನೀಡಿದ ಸಚಿವ ಶ್ರೀ ಅಮಿತ್ ಶಾ ಅವರು ಮೊದಲಿಗೆ ಮಸೂದೆಯ ಮಹತ್ವ ಕುರಿತು ಮಾತನಾಡಿದರು. ಇದು ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ, ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ವಿಶ್ವವಿದ್ಯಾಲಯಗಳನ್ನು ಜಾಗತಿಕಗೊಳಿಸಲು ದಾರಿ ಮಾಡಿಕೊಡುತ್ತದೆ, ದೇಶದಲ್ಲಿ ಸಂಶೋಧನೆ ಮತ್ತು ತನಿಖೆಗೆ ಭದ್ರ ಬುನಾದಿ ಹಾಕುತ್ತದೆ, 2047ರ ವೇಳೆಗೆ ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವದಲ್ಲೇ ಅಗ್ರ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ವಲಸೆ ಒಂದು ಪ್ರತ್ಯೇಕ ಸಮಸ್ಯೆಯಲ್ಲ, ಆದರೆ ದೇಶದ ಹಲವು ಸಮಸ್ಯೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಅದರೊಂದಿಗೆ ಸಂಬಂಧ ಹೊಂದಿವೆ. ಯಾರು ನಮ್ಮ ಗಡಿಗಳನ್ನು ಪ್ರವೇಶಿಸುತ್ತಿದ್ದಾರೆ, ಅವರು ಯಾವಾಗ ಪ್ರವೇಶಿಸುತ್ತಿದ್ದಾರೆ, ಅವರು ಎಷ್ಟು ಕಾಲ ಇಲ್ಲಿಯೇ ಇರುತ್ತಾರೆ ಮತ್ತು ಅವರು ಇಲ್ಲಿ ಯಾವ ಉದ್ದೇಶಕ್ಕಾಗಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ದೇಶದ ಭದ್ರತೆಗೆ ಬಹಳ ಮುಖ್ಯ. ಈ ಮಸೂದೆ ಅಂಗೀಕಾರದ ನಂತರ, ಭಾರತಕ್ಕೆ ಬರುವ ಪ್ರತಿಯೊಬ್ಬ ವಿದೇಶಿ ನಾಗರಿಕರ ಸಂಪೂರ್ಣ, ವ್ಯವಸ್ಥಿತ, ಸಂಯೋಜಿತ ಮತ್ತು ನವೀಕೃತ ಖಾತೆ ನಿರ್ವಹಿಸಲಾಗುವುದು, ಇದರ ಮೂಲಕ ನಾವು ದೇಶದ ಅಭಿವೃದ್ಧಿ ಖಚಿತಪಡಿಸಲು ಸಾಧ್ಯವಾಗುತ್ತದೆ. ದೇಶದ ಭದ್ರತೆಗೆ ಅಪಾಯ ಉಂಟು ಮಾಡುವವರನ್ನು ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಇಡಲಾಗುವುದು, ಅವರನ್ನೂ ಸಹ ಮೇಲ್ವಿಚಾರಣೆ ಮಾಡಬಹುದು. ಈ ಮಸೂದೆಯು ನಮ್ಮ ಎಲ್ಲಾ ಉದ್ದೇಶಗಳನ್ನು ಪೂರೈಸುತ್ತಿದೆ ಎಂದು ಅಮಿತ್ ಶಾ ಹೇಳಿದರು.

ವಲಸಿಗರ ಬಗ್ಗೆ ಭಾರತದ ದಾಖಲೆಯು ಸಾವಿರಾರು ವರ್ಷಗಳಿಂದ "ಕಳಂಕರಹಿತ"ವಾಗಿದೆ, ಆದ್ದರಿಂದ ಪ್ರತ್ಯೇಕ ನಿರಾಶ್ರಿತರ ನೀತಿಯ ಅಗತ್ಯವಿಲ್ಲ. ಭೌಗೋಳಿಕ ಗಡಿಗಳಿಂದ ರೂಪುಗೊಂಡ ದೇಶಗಳಿಗೆ ಅಂತಹ ನೀತಿಯ ಅಗತ್ಯವಿದೆ, ಆದರೆ ಭಾರತವು ಭೌಗೋಳಿಕ-ಸಾಂಸ್ಕೃತಿಕ ದೇಶವಾಗಿದೆ, ನಮ್ಮ ಗಡಿಗಳನ್ನು ನಮ್ಮ ಸಂಸ್ಕೃತಿಯಿಂದ ರಚಿಸಲಾಗಿದೆ, ಭಾರತವು ನಿರಾಶ್ರಿತರ ಬಗ್ಗೆ ಒಂದು ಇತಿಹಾಸವನ್ನೇ ಹೊಂದಿದೆ. ವಿಶ್ವದ ಅತಿದೊಡ್ಡ ಸೂಕ್ಷ್ಮ ಅಲ್ಪಸಂಖ್ಯಾತರು ಅತ್ಯಂತ ಗೌರವದಿಂದ ಬದುಕುವ ಸ್ಥಳ ಭಾರತವಾಗಿದೆ. ಇತ್ತೀಚೆಗೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ 6 ಸಮುದಾಯಗಳ ನಾಗರಿಕರಿಗೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಡಿ, ಆಶ್ರಯ ನೀಡಲಾಗಿದೆ. ಭಾರತವು ಯಾವಾಗಲೂ ಮಾನವತೆಯ ಕಡೆಗೆ ತನ್ನ ಕರ್ತವ್ಯಗಳನ್ನು ನಿರ್ವಹಿಸಿದೆ, ನಮ್ಮ ಕರ್ತವ್ಯ ನಿರ್ವಹಿಸಲು ಕಾನೂನಿನ ಅಗತ್ಯವನ್ನು ಎಂದಿಗೂ ಅನುಭವಿಸಲಿಲ್ಲ. ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯು ನಮಗೆ 'ವಸುಧೈವ ಕುಟುಂಬಕಂ' ಎಂಬ ಮಂತ್ರ ಕಲಿಸಿದೆ, ಅದರ ಮೌಲ್ಯಗಳನ್ನು ನಮಗೆ ನೀಡಿದೆ ಎಂದು ಸಚಿವರು ಹೇಳಿದರು.

ಭಾರತವು 146 ದೇಶಗಳಲ್ಲಿ ಹರಡಿರುವ ವಿಶ್ವದಲ್ಲೇ ಅತಿದೊಡ್ಡ ವಲಸೆಗಾರರನ್ನು ಹೊಂದಿದೆ. ಭಾರತೀಯ ವಲಸೆಗಾರರು ಇಡೀ ಜಗತ್ತಿನ ಸಂಸ್ಕೃತಿ, ಶಿಕ್ಷಣ, ವಿಜ್ಞಾನ ಮತ್ತು ಆರ್ಥಿಕತೆಗೆ ಕೊಡುಗೆ ನೀಡಲು ಬಯಸುತ್ತಾರೆ. ಇಂದು ಭಾರತೀಯ ಅನಿವಾಸಿ ಭಾರತೀಯರ ಸಂಖ್ಯೆ ಸುಮಾರು 1 ಕೋಟಿ 72 ಲಕ್ಷವಾಗಿದ್ದು, ಈ ಎಲ್ಲ ಜನರ ಸುಗಮ ಸಂಚಾರ ಖಚಿತಪಡಿಸಲು ಮತ್ತು ಅವರ ಕಳವಳಗಳನ್ನು ಪರಿಹರಿಸಲು ಈ ಮಸೂದೆಯನ್ನು ತರಲಾಗಿದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಆರ್ಥಿಕತೆ ಕಳೆದ 10 ವರ್ಷಗಳಲ್ಲಿ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ, ಭಾರತವು ವಿಶ್ವದ ಆರ್ಥಿಕತೆಗಳಲ್ಲಿ ಪ್ರಕಾಶಮಾನ ತಾಣವಾಗಿ ಹೊರಹೊಮ್ಮಿದೆ. ಭಾರತವು ಉತ್ಪಾದನಾ ಕೇಂದ್ರವಾಗಲಿದೆ, ಇಂತಹ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನ ಜನರು ಇಲ್ಲಿಗೆ ಬರುವುದು ಬಹಳ ಸಹಜ, ಇದರಿಂದಾಗಿ ನಮ್ಮ ವಲಸೆಯ ಪ್ರಮಾಣ ಮತ್ತು ಗಾತ್ರವು ಬಹಳಷ್ಟು ಹೆಚ್ಚಾಗಿದೆ. ಇದರೊಂದಿಗೆ, ಆಶ್ರಯ ಪಡೆಯುವ ಮತ್ತು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ದೇಶವನ್ನು ಅಸುರಕ್ಷಿತವಾಗಿಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಕಾನೂನಿನ ಪ್ರಕಾರ ಭಾರತದ ಆರ್ಥಿಕತೆಗೆ ಸುಗಮ ರೀತಿಯಲ್ಲಿ ಕೊಡುಗೆ ನೀಡಲು ಇಲ್ಲಿಗೆ ಬರುವ ಎಲ್ಲರಿಗೂ ಸ್ವಾಗತ, ಆದರೆ ಯಾವುದೇ ಅಕ್ರಮ ವ್ಯಕ್ತಿ ಅಶಾಂತಿ ಸೃಷ್ಟಿಸಲು ಇಲ್ಲಿಗೆ ಬಂದರೆ, ಅವರನ್ನು ಕಟ್ಟುನಿಟ್ಟಾಗಿ ಎದುರಿಸಲಾಗುವುದು. ಈ ನೀತಿಯಲ್ಲಿ ಉದಾರತೆಯ ಜತೆಗೆ ಕಠಿಣತೆಯೂ ಇದೆ. ಹೃದಯದಲ್ಲಿ ಕರುಣೆ, ಸೂಕ್ಷ್ಮತೆ ಮತ್ತು ದೇಶಕ್ಕೆ ಆಗುವ ಅಪಾಯಗಳ ಬಗ್ಗೆ ಜಾಗರೂಕತೆ ಇಟ್ಟುಕೊಳ್ಳುವ ಮೂಲಕ ಈ ನೀತಿ ರೂಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

2027ರ ವೇಳೆಗೆ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲು, 2047ರ ವೇಳೆಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಲು ಪ್ರಧಾನ ಮಂತ್ರಿ ಮೋದಿ ಅವರು ದೇಶದ 130 ಕೋಟಿ ಜನರ ಮುಂದೆ 2 ನಿರ್ಣಯಗಳನ್ನು ಇಟ್ಟಿದ್ದಾರೆ. ಈ ಎರಡೂ ಗುರಿಗಳನ್ನು ಸಾಧಿಸಲು, ಸರಳ, ಬಲವಾದ ಮತ್ತು ಸಮಕಾಲೀನ ಕಾನೂನುಗಳ ವ್ಯವಸ್ಥೆ ಅತ್ಯಗತ್ಯ, ಅದಕ್ಕಾಗಿಯೇ ಮೋದಿ ಸರ್ಕಾರದ 10 ವರ್ಷಗಳಲ್ಲಿ ಅನೇಕ ಹೊಸ ಮತ್ತು ಐತಿಹಾಸಿಕ ಕಾನೂನುಗಳು ಈ ಸದನದಲ್ಲಿ ಬಂದಿವೆ. 3 ಹೊಸ ಕ್ರಿಮಿನಲ್ ಕಾನೂನುಗಳು - ಸಿಎಎ ಕೆಲಸ ಮಾಡುತ್ತಿವೆ,  ವ್ಯವಹಾರ ಸುಲಭಗೊಳಿಸಲು 39,000 ಅನುಸರಣೆಗಳ ರದ್ದತಿ, 2016ರಲ್ಲಿ ಐಬಿಸಿ ಕೋಡ್, ಬ್ಯಾಂಕ್ ವಿಲೀನ ಮತ್ತು ಅದರ ಮೂಲಕ ಎನ್‌ಪಿಎ ಅಂತ್ಯಗೊಳಿಸುವುದು ಮತ್ತು 2017ರಲ್ಲಿ 32 ಮಾರಾಟ ತೆರಿಗೆಗಳನ್ನು ಸಂಯೋಜಿಸುವ ಮೂಲಕ ಜಿಎಸ್‌ಟಿ ಜಾರಿಯನ್ನು 10 ವರ್ಷಗಳಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರ ಯುಎಪಿಎ ಕಾನೂನು ಮತ್ತು ಎನ್‌ಐಎ ಕಾಯ್ದೆ ತಿದ್ದುಪಡಿ ಮಾಡಿದೆ, ಜಮ್ಮ- ಕಾಶ್ಮೀರದಲ್ಲಿ ಸೆಕ್ಷನ್ 370  ರದ್ದುಗೊಳಿಸಿದೆ. ಈ 10 ವರ್ಷಗಳಲ್ಲಿ, ಮೋದಿ ಸರ್ಕಾರವು ಪ್ರತಿಯೊಂದು ವಲಯದಲ್ಲೂ ಪ್ರತಿಯೊಂದು ಕಾನೂನು ಬಲಪಡಿಸುವ ಕೆಲಸ ಮಾಡಿದೆ ಎಂದು ಶಾ ಹೇಳಿದರು.

ಹೊಸ ಶಿಕ್ಷಣ ನೀತಿಯಂತೆ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಮತ್ತು ನಮ್ಮ ವಿಶ್ವವಿದ್ಯಾಲಯಗಳನ್ನು ಜಾಗತಿಕಗೊಳಿಸುವ ನಮ್ಮ ಕನಸನ್ನು ಈ ಮಸೂದೆಯು ನನಸಾಗಿಸುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವವರಿಗೆ ಉದಾರ ಮನಸ್ಸಿನಿಂದ ಮತ್ತು ವಿಶ್ವಾಸಾರ್ಹತೆಯಿಂದ ಕೆಲಸ ಮಾಡಲು ಇದು ಉತ್ತಮ ವಾತಾವರಣ ಒದಗಿಸುತ್ತದೆ. ಇಡೀ ಜಗತ್ತಿನಲ್ಲೇ ದೇಶವನ್ನು ಕ್ರೀಡೆಯ  ಶ್ರೇಷ್ಠತಾ ಕೇಂದ್ರವನ್ನಾಗಿ ಮಾಡುವ ಕನಸು ನನಸಾಗುತ್ತದೆ, ಭಾರತವು ಸಂಧಾನ ಮತ್ತು ಮಧ್ಯಸ್ಥಿಕೆಯ ಅಂತಾರಾಷ್ಟ್ರೀಯ ಕೇಂದ್ರವಾಗುತ್ತದೆ. ಈ ಮಸೂದೆಯು ಈ ಎಲ್ಲದಕ್ಕೂ ಉತ್ತಮ ವಾತಾವರಣ ಸೃಷ್ಟಿಸುತ್ತದೆ. ಪ್ರಸ್ತುತ ಈ ಸಂಪೂರ್ಣ ವ್ಯವಸ್ಥೆಯು 4 ಕಾಯಿದೆಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ, ಆದರೆ ಅವುಗಳ ನಡುವೆ ಅನೇಕ ಅಂತರಗಳಿವೆ. ಈ ಒಂದೇ ಮಸೂದೆಯು ಈ 4 ಕಾಯಿದೆಗಳನ್ನು ರದ್ದುಗೊಳಿಸುತ್ತದೆ, ಎಲ್ಲಾ ಅಂತರಗಳನ್ನು ತುಂಬುವ ಕಾನೂನು ತರುತ್ತದೆ, ಪುನರಾವರ್ತನೆ ತೆಗೆದುಹಾಕುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಮ್ಮ ಗುರಿ ಸಾಧಿಸಲು ಸಹಾಯ ಮಾಡುತ್ತದೆ ಎಂದು ಅಮಿತ್ ಶಾ ಹೇಳಿದರು.

2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ನಮ್ಮ ಗುರಿಯಲ್ಲಿ ಬಲವಾದ ವಲಸೆ ನೀತಿಯು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಈ ಮಸೂದೆಯು ನಮ್ಮ ವ್ಯವಸ್ಥೆಯನ್ನು ಸರಳ, ಸುವ್ಯವಸ್ಥಿತ, ವ್ಯವಸ್ಥಿತ ಮತ್ತು ಸುರಕ್ಷಿತವಾಗಿಸುತ್ತದೆ. ಇದರೊಂದಿಗೆ, ಈ ಮಸೂದೆಯು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ಸಕಾಲಿಕ ಮತ್ತು ವಿಶ್ವಾಸಾರ್ಹವಾಗಿದೆ. 3 ವರ್ಷಗಳ ಕಾಲ ಎಲ್ಲಾ ಅಂಶಗಳ ಬಗ್ಗೆ ಆಳವಾದ ಪರಿಗಣನೆಯ ನಂತರ ಗೃಹ ಸಚಿವಾಲಯದಲ್ಲಿ ಈ ಮಸೂದೆಯನ್ನು ವಿನ್ಯಾಸಗೊಳಿಸಲಾಗಿದೆ. ರಾಜಕೀಯ ಕಾರಣಗಳಿಗಾಗಿ ಈ ಮಸೂದೆಯನ್ನು ವಿರೋಧಿಸಬಾರದು. ಈ ಮಸೂದೆಯ ಅಡಿ, ಭಾರತಕ್ಕೆ ಬರುವ ಪ್ರಯಾಣಿಕರ ಡೇಟಾಬೇಸ್ ರಚಿಸುವುದಲ್ಲದೆ, ಇಲ್ಲಿನ ಎಲ್ಲಾ ರೀತಿಯ ಸಾಮರ್ಥ್ಯ ಬಳಸಿಕೊಳ್ಳುವ ಮೂಲಕ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ, ಇದು ಭಾರತದ ಜಾಗತಿಕ ಬ್ರ್ಯಾಂಡಿಂಗ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಉದ್ಯೋಗ ಮತ್ತು ಜಿಡಿಪಿ ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ, ಇಂದು ಭಾರತದ ಮೃದು ಶಕ್ತಿಯು(ಸಾಫ್ಟ್ ಪವರ್) ಇಡೀ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ. ಮೃದು ಶಕ್ತಿ ಎಂದರೆ ನಮ್ಮ ಯೋಗ, ಆಯುರ್ವೇದ, ಉಪನಿಷತ್ತುಗಳು, ವೇದಗಳು ಮತ್ತು ನಮ್ಮ ಸಾವಯವ ಕೃಷಿ ವ್ಯವಸ್ಥೆಯಾಗಿದೆ. ಇಂದು ಇಡೀ ಜಗತ್ತು ಭಾರತವನ್ನು ಭರವಸೆಯಿಂದ ನೋಡುತ್ತಿದೆ ಎಂದು ಅವರು ಹೇಳಿದರು.

ಭದ್ರತಾ ದೃಷ್ಟಿಕೋನದಿಂದ, ಈ ಮಸೂದೆಯು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿರುವ ಮಾದಕ ದ್ರವ್ಯ ದಂಧೆ, ಅಕ್ರಮ ವಲಸೆ ದಂಧೆ, ಶಸ್ತ್ರಾಸ್ತ್ರ ಮತ್ತು ವಿದೇಶಗಳಿಂದ ಹವಾಲಾ ವ್ಯಾಪಾರವನ್ನು ಕೊನೆಗೊಳಿಸುವ ಕಲ್ಪನೆ ಹೊಂದಿದೆ. ಕಾನೂನು ನಿಬಂಧನೆಗಳ ಜತೆಗೆ, ಉಲ್ಲಂಘನೆಗಳಿಗೆ ದಂಡನಾತ್ಮಕ ಕ್ರಮಗಳನ್ನು ಸೇರಿಸಲಾಗಿದೆ. ದೇಶವು ಸ್ವಾತಂತ್ರ್ಯ ಪಡೆಯುವ ಮೊದಲು 1920, 1939 ಮತ್ತು 1946ರಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ 3 ಹಳೆಯ ಮಸೂದೆಗಳನ್ನು ಮಾಡಲಾಗಿತ್ತು, ಇಂದು ನಮ್ಮ ಸಂಪೂರ್ಣ ವಲಸೆ ನೀತಿಯನ್ನು ಹೊಸ ಭಾರತದ ಸಂಸತ್ತಿನಲ್ಲಿ ಮಾಡಲಾಗಿದೆ, ಇದು ಐತಿಹಾಸಿಕ ವಿಷಯವಾಗಿದೆ. ದೇಶದ ಭದ್ರತೆ, ವ್ಯಾಪಾರ ಮತ್ತು ಅಭಿವೃದ್ಧಿ ಖಾತ್ರಿಪಡಿಸುವ ನಮ್ಮ ದೇಶದ ಅಂತಹ ಪ್ರಮುಖ ನೀತಿಯನ್ನು ವಿದೇಶಿ ಸಂಸತ್ತಿನಲ್ಲಿ ಮಾಡಲಾಗಿತ್ತು. ಮೊದಲ ಮತ್ತು 2ನೇ ಮಹಾಯುದ್ಧಗಳ ಗೊಂದಲದಲ್ಲಿ ಮತ್ತು ಬ್ರಿಟಿಷ್ ಸರ್ಕಾರವನ್ನು ರಕ್ಷಿಸಲು ಹಳೆಯ ಕಾನೂನುಗಳನ್ನು ಮಾಡಲಾಗಿತ್ತು. ಇದೀಗ ಅಮೃತಕಾಲದ ಮೊದಲ ಹಂತದಲ್ಲಿ 'ವಿಕಸಿತ ಭಾರತ'ದ ದೃಷ್ಟಿಕೋನದೊಂದಿಗೆ ಮತ್ತು ಭಾರತದ ಹಿತಾಸಕ್ತಿಗಾಗಿ ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಹಳೆಯ ಕಾನೂನುಗಳಲ್ಲಿ ಹಲವು ಅತಿಕ್ರಮಣಗಳಿದ್ದವು, ಅವುಗಳನ್ನು ನಾವು ತೆಗೆದುಹಾಕಿದ್ದೇವೆ. ಏಜೆನ್ಸಿಗಳ ನಡುವಿನ ಸಮನ್ವಯ ಕೊರತೆ ಮತ್ತು ದತ್ತಾಂಶ ನಿರ್ವಹಣೆ ಮತ್ತು ಪರಿಶೀಲನೆಯ ಸಂಕೀರ್ಣತೆಯನ್ನು ಸಹ ನಾವು ತೆಗೆದುಹಾಕಿದ್ದೇವೆ. ಹಳೆಯ ಕಾನೂನುಗಳ ವೈರುಧ್ಯದ ನಿಬಂಧನೆಗಳನ್ನು ತೆಗೆದುಹಾಕುವ ಮೂಲಕ ಈ ಮಸೂದೆಯಲ್ಲಿ ನ್ಯಾಯವ್ಯಾಪ್ತಿಯ ಸ್ಪಷ್ಟತೆ ತರಲಾಗಿದೆ. ಒಂದೇ ಮಸೂದೆಯು ಪ್ರಯಾಣಿಕರು ಮತ್ತು ಅಧಿಕಾರಿಗಳ ಕಾನೂನು ಗೊಂದಲವನ್ನು ನಿವಾರಿಸುತ್ತದೆ, ಈ ಸಮಗ್ರ ಕಾನೂನು ಅನುಸರಣೆಯ ಹೊರೆಯನ್ನು ಸಹ ಕಡಿಮೆ ಮಾಡುತ್ತದೆ. ಭಾರತಕ್ಕೆ ಪ್ರವೇಶ, ವಾಸ್ತವ್ಯ ಮತ್ತು ನಿರ್ಗಮನಕ್ಕಾಗಿ ಕಡ್ಡಾಯ ದಾಖಲೆಗಳ ಅಗತ್ಯವನ್ನು ನಾವು ಒದಗಿಸಿದ್ದೇವೆ. ಇವುಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಸಹ ನಾವು ನೀಡಿದ್ದೇವೆ. ಯಾವುದೇ ವಿದೇಶಿಯರನ್ನು ಭಾರತದಿಂದ ಗಡೀಪಾರು ಮಾಡುವ ಅಧಿಕಾರವನ್ನು ಸಹ ನೀಡಲಾಗಿದೆ. ಒಂದು ರೀತಿಯಲ್ಲಿ, ಇಂದಿನ ಕಾಲಕ್ಕೆ ಅನುಗುಣವಾಗಿ ನಿಬಂಧನೆಗಳನ್ನು ರೂಪಿಸಲು ಮುಕ್ತ ಮನಸ್ಸಿನಿಂದ ಕೆಲಸ ಮಾಡಲಾಗಿದೆ. ಹಳೆಯ ಕಾನೂನುಗಳಲ್ಲಿ ಒಟ್ಟು 45 ವಿಭಾಗಗಳಿದ್ದವು, ಆದರೆ ಈಗ ಹೊಸ ಕಾನೂನು 36 ವಿಭಾಗಗಳನ್ನು ಹೊಂದಿರುತ್ತದೆ, 26 ಹಳೆಯ ಮತ್ತು 10 ಹೊಸ ಕಾನೂನುಗಳಿವೆ. ಭಾರತಕ್ಕೆ ಯಾರಾದರೂ ಬರುವುದಕ್ಕೆ, ಯಾವುದೇ ಉದ್ದೇಶಕ್ಕಾಗಿ ಬಂದು ಉಳಿಯಲು ನಮ್ಮ ದೇಶವು 'ಧರ್ಮಶಾಲೆ' ಅಲ್ಲ. ನಮ್ಮ ದೇಶದಲ್ಲಿ ಸಮೃದ್ಧಿ ಹರಡಲು ಯಾರಾದರೂ ಕಾನೂನುಬದ್ಧವಾಗಿ ಬಂದರೆ, ಅವರನ್ನು ಸ್ವಾಗತಿಸಲಾಗುತ್ತದೆ, ಆದರೆ ನಮ್ಮ ಭದ್ರತೆಗೆ ಬೆದರಿಕೆ ಒಡ್ಡುವವರನ್ನು ತಡೆಯಲು ನಮ್ಮ ಸಂಸತ್ತು ನಿಬಂಧನೆ ಮಾಡುವ ಹಕ್ಕು ಹೊಂದಿದೆ. ನಮ್ಮ ಗಡಿಯಲ್ಲಿರುವ ಸೂಕ್ಷ್ಮ ಸ್ಥಳಗಳು ಮತ್ತು ಸೇನಾ ನಿಯೋಜನೆ(ಇನ್ ಸ್ಟಾಲೇಷನ್ಸ್)ಗಳನ್ನು ಎಲ್ಲರಿಗೂ ಮುಕ್ತವಾಗಿ ಬಿಡಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

2010ರಲ್ಲಿ 5 ದೇಶಗಳ ನಾಗರಿಕರಿಗೆ ಆನ್‌ಲೈನ್ ಪ್ರವಾಸಿ ವೀಸಾಗಳನ್ನು ಪರಿಚಯಿಸಲಾಗಿದೆ. ಹಿಂದಿನ ಸರ್ಕಾರದವರೆಗೆ, ಈ ಸೌಲಭ್ಯವು ಕೇವಲ 10 ದೇಶಗಳಿಗೆ ಸೀಮಿತವಾಗಿತ್ತು, ಆದರೆ ಈಗ ಅದನ್ನು 169 ದೇಶಗಳಿಗೆ ವಿಸ್ತರಿಸಲಾಗಿದೆ. ಪ್ರವಾಸೋದ್ಯಮ ಉತ್ತೇಜಿಸುವುದು ಸರ್ಕಾರದ ಗುರಿಯಾಗಿದೆ, ಆದರೆ ವಿದೇಶಿ ಪ್ರಜೆಗಳು ನಿಗದಿತ ಅವಧಿಗೆ ಮಾತ್ರ ಇಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಅವರು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ, ಅಥವಾ ಅವರು ದೇಶದ ನಾಗರಿಕರಾಗಲು ಸಾಧ್ಯವಿಲ್ಲ ಎಂದರು.

ಸರ್ಕಾರವು 31 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು 6 ಪ್ರಮುಖ ಬಂದರುಗಳಲ್ಲಿ 'ವೀಸಾ ಆನ್ ಅರೈವಲ್' ಸೌಲಭ್ಯವನ್ನು ಪರಿಚಯಿಸಿದೆ. 2023ರಲ್ಲಿ 'ಆಯುಷ್ ವೀಸಾ' ಎಂಬ ಹೊಸ ವೀಸಾವನ್ನು ಸಹ ಪ್ರಾರಂಭಿಸಲಾಯಿತು. ಈಗ ಇ-ಟೂರಿಸ್ಟ್ ವೀಸಾ, ಇ-ಬಿಸಿನೆಸ್ ವೀಸಾ, ಇ-ಮೆಡಿಕಲ್ ವೀಸಾ, ಮೆಡಿಕಲ್ ಅಟೆಂಡೆಂಟ್ ವೀಸಾ, ಇ-ಆಯುಷ್ ವೀಸಾ, ಇ-ಕಾನ್ಫರೆನ್ಸ್ ವೀಸಾ, ಇ-ವಿದ್ಯಾರ್ಥಿ ವೀಸಾ ಮತ್ತು ಇ-ವಿದ್ಯಾರ್ಥಿ ಅವಲಂಬಿತ ವೀಸಾ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ಇ-ವೀಸಾ ಪರಿಚಯಿಸಲಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ಇ-ವೀಸಾಗಳನ್ನು ಪರಿಚಯಿಸುವ ಮೂಲಕ, ಸರ್ಕಾರವು ವಿದೇಶಿಯರು ಭಾರತಕ್ಕೆ ಬರುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಅಮಿತ್ ಶಾ ಹೇಳಿದರು.

ಉದ್ದೇಶಗಳು ಸರಿಯಿಲ್ಲದ ವ್ಯಕ್ತಿಗಳನ್ನು ಮಾತ್ರ ತಡೆಯುವುದು ಇದರ ಉದ್ದೇಶವಾಗಿದೆ, ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಭಾರತ ಸರ್ಕಾರದ ಹಕ್ಕಾಗಿದೆ. ಆಯುಷ್ ವೀಸಾದ ಅಡಿ, ವರ್ಗಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ. ಅಕ್ರಮ ವಲಸಿಗರು ಮತ್ತು ನಿಗದಿತ ಸಮಯದ ಚೌಕಟ್ಟು ಮೀರಿ ವಾಸಿಸುವವರನ್ನು ಮೇಲ್ವಿಚಾರಣೆ ಮಾಡಲು, "ವಲಸೆ, ವೀಸಾ, ವಿದೇಶಿಯರ ನೋಂದಣಿ ಮತ್ತು ಟ್ರ್ಯಾಕಿಂಗ್"(ಐವಿಎಫ್ ಆರ್ ಟಿ) ವ್ಯವಸ್ಥೆಗೆ ಕಾನೂನು ಬಲ ನೀಡಲಾಗಿದೆ. ಎಲ್ಲಾ ವಲಸೆ ಹುದ್ದೆಗಳನ್ನು ಭಾರತೀಯ ಮಿಷನ್‌ಗಳು, ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗಳು(ಎಫ್ಆರ್ ಆರ್ ಒ) ಮತ್ತು ವಿದೇಶಿ ನೋಂದಣಿ ಕಚೇರಿಗಳೊಂದಿಗೆ (ಎಫ್ಆರ್ ಒ) ಸಮಗ್ರ ವ್ಯವಸ್ಥೆಯ ಮೂಲಕ ಸಂಯೋಜಿಸುವುದು ಪೂರ್ಣಗೊಂಡಿದೆ. ದೇಶಾದ್ಯಂತ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿದೇಶಿಯರ ಗುರುತಿನ ಪೋರ್ಟಲ್ ಎಂದು ಕರೆಯಲ್ಪಡುವ ಜಿಲ್ಲಾ ಪೊಲೀಸ್ ಮಾಡ್ಯೂಲ್(ಡಿಪಿಎಂ) ಪ್ರಾರಂಭಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

2014ರ ವರೆಗೆ 83 ವಲಸೆ ಹುದ್ದೆಗಳಿದ್ದು, ಅವು ಈಗ 114ಕ್ಕೆ ಏರಿವೆ, ಇದು ಶೇಕಡ 37ರಷ್ಟು ಬೆಳವಣಿಗೆ ಸೂಚಿಸುತ್ತದೆ. ವಲಸೆ ಹುದ್ದೆಗಳನ್ನು ಆಧುನೀಕರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ, ವಲಸೆ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಪರಿಶೀಲಿಸಲು ಸರಾಸರಿ ಸಮಯ 4-5 ನಿಮಿಷ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಅದು 1-2 ನಿಮಿಷವನ್ನೂ ತೆಗೆದುಕೊಳ್ಳುವುದಿಲ್ಲ. 8 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಫಾಸ್ಟ್ ಟ್ರ್ಯಾಕ್ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ(ಎಫ್ ಟಿಐ-ಟಿಟಿಪಿ) ಜಾರಿಗೆ ತರಲಾಗಿದೆ. ಅಲ್ಲಿ ಒಬ್ಬ ಪ್ರಯಾಣಿಕನು ಈಗಾಗಲೇ ಅಗತ್ಯವಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿದ್ದರೆ, ಸ್ಕ್ರೀನಿಂಗ್ ಪ್ರಕ್ರಿಯೆ ಕೇವಲ 30 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ.

ಆರಂಭದಲ್ಲಿ, 743 ಇಂಟಿಗ್ರೇಟೆಡ್ ಚೆಕ್‌ಪೋಸ್ಟ್‌(ಐಸಿಪಿ) ಕೌಂಟರ್‌ಗಳಿದ್ದವು, ಆದರೆ ಈಗ ಅವು ಶೇ. 206ರಷ್ಟು ಹೆಚ್ಚಾಗಿ 2,278ಕ್ಕೆ ತಲುಪಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಆಗಮಿಸುವ ಜನರ ಸಂಖ್ಯೆ 2.49 ಕೋಟಿಯಷ್ಟಿತ್ತು, ಆದರೆ ಮೋದಿ ಸರ್ಕಾರದ ಅಡಿ, 2024ರ ವರೆಗೆ, 4 ಕೋಟಿ ಜನರು ಭಾರತಕ್ಕೆ ಆಗಮಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ, 2.59 ಕೋಟಿ ಜನರು ಭಾರತವನ್ನು ತೊರೆದರು, ಆದರೆ ನಮ್ಮ ಸರ್ಕಾರದ ಅಡಿ, ಈ ಸಂಖ್ಯೆ 4.11 ಕೋಟಿಗೆ ಏರಿದೆ. ಒಟ್ಟಾರೆಯಾಗಿ, ಭಾರತಕ್ಕೆ ಬರುವ ಮತ್ತು ಹೊರಹೋಗುವವರ ಸಂಖ್ಯೆ ಈ ಹಿಂದೆ 5.08 ಕೋಟಿ ಇತ್ತು, ಆದರೆ ಈಗ ಅದು 8.12 ಕೋಟಿಗೆ ಏರಿದೆ, ಇದು ಶೇಕಡ 69ರಷ್ಟು ಹೆಚ್ಚಳವಾಗಿದೆ. ಇದು ಒಂದು ದಶಕದಲ್ಲಿ ಆಗಿರುವ ಅತಿ ಹೆಚ್ಚಿನ ಬೆಳವಣಿಗೆಯಾಗಿದೆ. ಎಲ್ಲಾ ದಶಕಗಳನ್ನು ಪರಿಗಣಿಸಿದಾಗ, ಈ ಬೆಳವಣಿಗೆ ಕೇವಲ 1 ದಶಕದಲ್ಲಿ ಶೇಕಡ 50ಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳು ದೇಶವನ್ನು ಪ್ರವೇಶಿಸುವುದನ್ನು ಖಂಡಿತವಾಗಿಯೂ ತಡೆಯಲಾಗುತ್ತದೆ, ಏಕೆಂದರೆ ಇದು ರಾಷ್ಟ್ರೀಯ ಭದ್ರತೆಗೆ ನೇರವಾಗಿ ಸಂಬಂಧಿಸಿದೆ. ನಮ್ಮ ಕಾನೂನುಗಳು ಈಗಾಗಲೇ ವಿದೇಶಿ ಪ್ರಜೆಗಳಿಗೆ ಪ್ರವೇಶ ನಿರಾಕರಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ಒದಗಿಸಿವೆ. ವೀಸಾ ಹೊಂದಿರುವವರು ದೇಶದೊಳಗಿನ ಯಾವುದೇ ಗೊತ್ತುಪಡಿಸಿದ ಸ್ಥಳಕ್ಕೆ ಪ್ರಯಾಣಿಸಲು ಅನುಮತಿ ನೀಡುವ ಹಕ್ಕನ್ನು ಸಹ ಅಧಿಕಾರಿಗಳು ಹೊಂದಿದ್ದಾರೆ. ಆದಾಗ್ಯೂ, ಪ್ರವೇಶ ನಿರಾಕರಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ ಎಂದರೆ ಅವರು ನಿರಂಕುಶವಾಗಿ ವರ್ತಿಸುತ್ತಾರೆ ಎಂದರ್ಥವಲ್ಲ. ಯಾರನ್ನಾದರೂ ತಡೆಯುವ ನಿರ್ಧಾರವನ್ನು ಬಹು ಏಜೆನ್ಸಿಗಳ ಮಾಹಿತಿ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. 2014ರಿಂದ, ಯಾರನ್ನಾದರೂ ತಡೆಯುವ ಮೊದಲು, 24 ಅಂಶಗಳಲ್ಲಿ ಪರಿಪೂರ್ಣ(360-ಡಿಗ್ರಿ) ತನಿಖೆ ನಡೆಸುವ ಪ್ರಕ್ರಿಯೆ ಸ್ಥಾಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.

ವಿವಿಧ ಘಟನೆಗಳಿಂದಾಗಿ ಹಾನಿಗೊಳಗಾದ ಪಾಸ್‌ಪೋರ್ಟ್‌ನ ವ್ಯಾಖ್ಯಾನವು ಕಾಲಕಾಲಕ್ಕೆ ಬದಲಾಗುತ್ತದೆ. ಅಂತಹ ಘಟನೆಗಳ ಆಧಾರದ ಮೇಲೆ ನಿಯಮಗಳನ್ನು ಸರಿಹೊಂದಿಸಬಹುದಾದರೂ, ಕಾನೂನನ್ನು ಸ್ವತಃ ಬದಲಾಯಿಸಲಾಗುವುದಿಲ್ಲ. ಆದ್ದರಿಂದ, ಸರ್ಕಾರವು ಸೆಕ್ಷನ್ 30ರ ಅಡಿ, ನಿಯಮಗಳನ್ನು ರೂಪಿಸುವ ಅಧಿಕಾರ ನೀಡಿದೆ. ಸೆಕ್ಷನ್ 33 ಭಾರತದ ಭದ್ರತೆಗೆ ಅಪಾಯ ಉಂಟುಮಾಡುವ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುವ ವಿದೇಶಿ ಶಿಕ್ಷಕರ ಸಂಖ್ಯೆ ಮತ್ತು ಅಧ್ಯಯನ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಹಕ್ಕನ್ನು ಭಾರತ ಸರ್ಕಾರ ಹೊಂದಿದೆ, ಈ ಮಾಹಿತಿ ಒದಗಿಸಬೇಕು ಎಂಬ ನಿಬಂಧನೆ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಬಾಂಗ್ಲಾದೇಶದೊಂದಿಗಿನ ನಮ್ಮ ಗಡಿ 2,216 ಕಿಲೋಮೀಟರ್ ಉದ್ದವಿದ್ದು, ಅದರಲ್ಲಿ 653 ಕಿಲೋಮೀಟರ್‌ಗಳಿಗೆ ಬೇಲಿ ಹಾಕಲಾಗಿದೆ. ಬೇಲಿಯ ಬಳಿ ರಸ್ತೆಗಳನ್ನು ಸಹ ನಿರ್ಮಿಸಲಾಗಿದೆ, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಸೇಜ್ ಬೇಲಿಯ ಉದ್ದ 563 ಕಿಲೋಮೀಟರ್‌ಗಳು, ಆದರೆ ಇದರಲ್ಲಿ 112 ಕಿಲೋಮೀಟರ್‌ಗಳಲ್ಲಿ ಹೊಳೆಗಳು, ನದಿಗಳು ಮತ್ತು ಅಸಮ ಭೂಪ್ರದೇಶ ಇರುವುದರಿಂದ ಗಡಿ ಬೇಲಿ ಹಾಕಲು ಸಾಧ್ಯವಾಗದೆ ಅಲ್ಲಿ ಬೇಲಿ ಹಾಕಲಾಗಿಲ್ಲ. 450 ಕಿಲೋಮೀಟರ್‌ಗಳಲ್ಲಿ ಬೇಲಿ ಹಾಕುವ ಕೆಲಸ ಪೂರ್ಣಗೊಂಡಿದೆ, ಉಳಿದ 450 ಕಿಲೋಮೀಟರ್‌ಗಳಿಗೆ ಕೇಂದ್ರ ಸರ್ಕಾರವು ಡಿಒ ಪತ್ರಗಳನ್ನು ಬರೆದು 10 ಜ್ಞಾಪನೆಗಳನ್ನು ಮಾಡಿದೆ, ಆದರೆ ಪಶ್ಚಿಮ ಬಂಗಾಳ ಸರ್ಕಾರವು ಭೂಮಿ ಒದಗಿಸುತ್ತಿಲ್ಲ. ಕೇಂದ್ರ ಗೃಹ ಕಾರ್ಯದರ್ಶಿ ಬಂಗಾಳದ ಕಾರ್ಯದರ್ಶಿಯೊಂದಿಗೆ 7 ಸಭೆಗಳನ್ನು ನಡೆಸಿದ್ದಾರೆ, ಆದರೆ ಅವರು ಭೂಮಿ  ಒದಗಿಸಲು ಇಷ್ಟವಿಲ್ಲ ಎಂದು ಉಲ್ಲೇಖಿಸಿದ್ದಾರೆ. ಬೇಲಿ ಹಾಕುವ ಕೆಲಸ ಪ್ರಾರಂಭಿಸಬೇಕಾದ ಸ್ಥಳದಲ್ಲಿ ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸದಸ್ಯರು ಬಂದು ಗೊಂದಲ ಸೃಷ್ಟಿಸುತ್ತಿದ್ದಾರೆ, 453 ಕಿಲೋಮೀಟರ್ ಬೇಲಿ ಹಾಕುವುದನ್ನು ನಿಲ್ಲಿಸಲು ಮುಖ್ಯ ಕಾರಣವೆಂದರೆ ಪಶ್ಚಿಮ ಬಂಗಾಳ ಸರ್ಕಾರವು ಒಳನುಸುಳುಕೋರರ ಬಗ್ಗೆ ಸೌಮ್ಯವಾದ ಧೋರಣೆ ತಳೆದಿರುವುದು. 453 ಕಿಲೋಮೀಟರ್ ಬೇಲಿ ಹಾಕಿದ ನಂತರ, 112 ಕಿಲೋಮೀಟರ್ ಗಡಿ ತೆರೆದಿರುತ್ತದೆ. ಈ 112 ಕಿಲೋಮೀಟರ್ ನದಿಗಳು, ತೊರೆಗಳು ಮತ್ತು ಜನರು ಒಳನುಸುಳಲು ಕಷ್ಟಕರವಾದ ಭೌಗೋಳಿಕ ಪರಿಸ್ಥಿತಿಗಳನ್ನು ಒಳಗೊಂಡಿದೆ ಎಂದು ಸಚಿವರು ತಿಳಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ, ಅಕ್ರಮ ಒಳನುಸುಳುಕೋರರು ಅಸ್ಸಾಂ ಮೂಲಕ ಪ್ರವೇಶಿಸುತ್ತಿದ್ದರು, ಆದರೆ ಈಗ ಅವರು ಬಂಗಾಳದ ಮೂಲಕ ಪ್ರವೇಶಿಸುತ್ತಿದ್ದಾರೆ. ತಮ್ಮ ಪಕ್ಷ ಬಂಗಾಳದಲ್ಲಿ ಸರ್ಕಾರ ರಚಿಸಿದ ನಂತರ, ಅಲ್ಲಿಂದ ಒಳನುಸುಳುವಿಕೆಯನ್ನು ಸಹ ನಿಲ್ಲಿಸಲಾಗುವುದು ಎಂದು ಅಮಿತ್ ಶಾ ಹೇಳಿದರು. ಸ್ವಾತಂತ್ರ್ಯದ ಸಮಯದಲ್ಲಿ ಭಾರತಕ್ಕೆ ಬಂದ ನಿರಾಶ್ರಿತರನ್ನು ನುಸುಳುಕೋರರೆಂದು ಪರಿಗಣಿಸಲಾಗುವುದಿಲ್ಲ, ಅವರು ನಿಜವಾದ ನಿರಾಶ್ರಿತರು. ತಮ್ಮ ಧರ್ಮ ಮತ್ತು ಕುಟುಂಬವನ್ನು ರಕ್ಷಿಸಲು ಇಲ್ಲಿಗೆ ಬಂದವರು ನಿಜವಾದ ನಿರಾಶ್ರಿತರು. ಅದಕ್ಕಾಗಿಯೇ ನಾವು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ತಂದಿದ್ದೇವೆ, ಇದರಲ್ಲಿ ತಾರತಮ್ಯ ಮಾಡುವುದಿಲ್ಲ. ಹಿಂದೂಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು, ಕ್ರೈಸ್ತರು ಮತ್ತು ಜೈನರು - ಈ ಸಮುದಾಯಗಳಿಂದ ಭಾರತಕ್ಕೆ ಬರುವ ಯಾವುದೇ ವ್ಯಕ್ತಿಯನ್ನು ಸ್ವಾಗತಿಸಲಾಗುತ್ತದೆ. ಆದಾಗ್ಯೂ, ಒಳನುಸುಳಿ ಬರುವವರನ್ನು ಖಂಡಿತವಾಗಿಯೂ ತಡೆಯಲಾಗುತ್ತದೆ. ಕಿರುಕುಳ ಅನುಭವಿಸಿದವರಿಗೆ, ವಿಭಜನೆಯ ಭೀಕರತೆ ಸಹಿಸಿಕೊಂಡವರಿಗೆ ಮತ್ತು ದೌರ್ಜನ್ಯ ಎದುರಿಸಿದ ಅವರ ಕುಟುಂಬಗಳು ಮಾತ್ರ ಪೌರತ್ವ ನೀಡಲಾಗುತ್ತದೆ. ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ ಅವರು, ಡಿಎಂಕೆ ಸಂಸದರಲ್ಲಿ ಯಾರೂ ಸಹ ತಮಿಳು ನಿರಾಶ್ರಿತರ ವಿಷಯವನ್ನು ತಮ್ಮ ಮುಂದೆ ಎತ್ತಿಲ್ಲ ಎಂದು ಹೇಳಿದರು.

4 ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬದಲಾಯಿಸಲು ಈ ಹೊಸ ಮಸೂದೆ ಪರಿಚಯಿಸಲಾಗಿದೆ. ಈ ಕಾನೂನುಗಳಲ್ಲಿನ ಎಲ್ಲಾ ನ್ಯೂನತೆ ಪರಿಹರಿಸಲಾಗಿದೆ, ಅತಿಕ್ರಮಣಗಳನ್ನು ತೆಗೆದುಹಾಕಲಾಗಿದೆ. ಇಂದಿನ ಜಗತ್ತಿನಲ್ಲಿ, ಭಾರತದ ಆರ್ಥಿಕತೆ, ಶಿಕ್ಷಣ, ಆರೋಗ್ಯ ವ್ಯವಸ್ಥೆ, ಸಂಶೋಧನೆ ಮತ್ತು ಕಾನೂನು ಚೌಕಟ್ಟು ಬಲಪಡಿಸಲು ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ. ನಾವು ಜಾಗತಿಕ ಪ್ರಗತಿಗೆ ಕೊಡುಗೆ ನೀಡಬೇಕು, ಈ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆ ವಿನ್ಯಾಸಗೊಳಿಸಲಾಗಿದೆ. ಆದರೆ ಮುಖ್ಯವಾಗಿ, ದೇಶದ ಭದ್ರತೆಯನ್ನು ಪ್ರಮುಖ ಆದ್ಯತೆಯಾಗಿಟ್ಟುಕೊಂಡು ಇದನ್ನು ಪರಿಚಯಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ವಿವರಿಸಿದರು.

 

*****


(Release ID: 2116150) Visitor Counter : 21