ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರವು 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗಾಗಿ ಕರ್ನಾಟಕ ಮತ್ತು ತ್ರಿಪುರಾಕ್ಕೆ 436 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ

Posted On: 27 MAR 2025 1:02PM by PIB Bengaluru

ಕೇಂದ್ರ ಸರ್ಕಾರವು   2024-25ರ ಆರ್ಥಿಕ ವರ್ಷದಲ್ಲಿ ತ್ರಿಪುರಾ ಮತ್ತು ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ (XV FC) ಅನುದಾನದ ಎರಡನೇ ಕಂತನ್ನು ಬಿಡುಗಡೆ ಮಾಡಿದೆ. ತ್ರಿಪುರಾಕ್ಕೆ, ಸಂಯೋಜಿತ ಅನುದಾನದ ಅಡಿ(2ನೇ ಕಂತು) 31.1259 ಕೋಟಿ ರೂ.ಗಳನ್ನು ಸರ್ಕಾರವು ಹಂಚಿಕೆ ಮಾಡಿದೆ, ಇದು ರಾಜ್ಯದ ಎಲ್ಲಾ ಬ್ಲಾಕ್ ಪಂಚಾಯತ್ಗಳುಜಿಲ್ಲಾ ಪಂಚಾಯತ್ಗಳು ಮತ್ತು ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳ ಜೊತೆಗೆ 589 ಅರ್ಹ ಗ್ರಾಮ ಪಂಚಾಯಿತಿಗಳಿಗೆ ಪ್ರಯೋಜನವನ್ನು ಒದಗಿಸಿದೆ. ಕರ್ನಾಟಕದಲ್ಲಿ, ರಾಜ್ಯದಾದ್ಯಂತ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಬೆಂಬಲಿಸುವ 5375 ಅರ್ಹ ಗ್ರಾಮ ಪಂಚಾಯಿತಿಗಳಿಗೆ 404.9678 ಕೋಟಿ ರೂ.ಗಳನ್ನು ಸಂಯೋಜಿತ ಅನುದಾನದ ಅಡಿ(2ನೇ ಕಂತು) ಬಿಡುಗಡೆ ಮಾಡಲಾಗಿದೆ.

 

ಅನುದಾನಗಳು ಪಂಚಾಯತ್ ರಾಜ್ ಸಂಸ್ಥೆಗಳನ್ನು (ಪಿಆರ್) ಸಶಕ್ತಗೊಳಿಸುತ್ತವೆ, ಇದು ಸಂವಿಧಾನದ ಹನ್ನೊಂದನೇ ಅನುಸೂಚಿಯಲ್ಲಿ ವಿವರಿಸಲಾದ 29 ವಿಷಯಗಳ ಅಡಿಯಲ್ಲಿ ಸ್ಥಳ-ನಿರ್ದಿಷ್ಟ ಅಗತ್ಯಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಈ ಹಣವನ್ನು ಸಂಬಳ ಮತ್ತು ಸ್ಥಾಪನೆಯ ವೆಚ್ಚಗಳನ್ನು ಹೊರತುಪಡಿಸಿ ಅಭಿವೃದ್ಧಿ ಉಪಕ್ರಮಗಳಿಗೆ ಬಳಸಲಾಗುತ್ತದೆ. ಅನುದಾನಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ:

  • ಸಂಯೋಜಿತ ಅನುದಾನಗಳು: ಇವುಗಳನ್ನು ವೈವಿಧ್ಯಮಯ ಸಮುದಾಯ-ನಿರ್ದಿಷ್ಟ ಅಗತ್ಯಗಳಿಗಾಗಿ ಬಳಸಬಹುದು. ಸ್ಥಳೀಯ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ವೃದ್ಧಿಸುವ ಗುರಿಯನ್ನು ಇವು ಹೊಂದಿವೆ.
  • ನಿರ್ದಿಷ್ಟ ಉದ್ದೇಶದ ಅನುದಾನಗಳು: ನೈರ್ಮಲ್ಯಕ್ಕೆ ಸಂಬಂಧಿಸಿದ ನಿರ್ಣಾಯಕ ಅಂಶಗಳಿಗೆ (ಬಯಲು ಮಲವಿಸರ್ಜನೆ ಮುಕ್ತ ಸ್ಥಿತಿಯ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಮಲ ಕೆಸರು ನಿರ್ವಹಣೆ ಸೇರಿದಂತೆ) ಹಾಗೂ ಕುಡಿಯುವ ನೀರು (ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಸೇರಿದಂತೆ) ಉದ್ದೇಶಕ್ಕೆ ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದೆ.

ನಿಧಿಗಳ ಬಿಡುಗಡೆಯು ಸಂಪನ್ಮೂಲಗಳ ವಿಕೇಂದ್ರೀಕರಣ ಮತ್ತು ಸ್ಥಳೀಯ ಸರ್ಕಾರಗಳನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಪಂಚಾಯತ್ ರಾಜ್ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದಿಂದ ನಿರ್ವಹಿಸಲ್ಪಡುವ ಹದಿನೈದನೇ ಹಣಕಾಸು ಆಯೋಗದ ಅನುದಾನವನ್ನು ತಳಮಟ್ಟದ ಅಭಿವೃದ್ಧಿಯನ್ನು ಹೆಚ್ಚಿಸಲು, ಸ್ಥಳೀಯ ಆಡಳಿತವನ್ನು ಸುಧಾರಿಸಲು ಹಾಗೂ ಗ್ರಾಮೀಣ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಉಪಕ್ರಮಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.

 

*****


(Release ID: 2115664) Visitor Counter : 56