ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ)ದಿಂದ ಬೆಂಗಳೂರಿನಲ್ಲಿ 2025ರ ಮಾರ್ಚ್ 27 ರಂದು ‘ನ್ಯಾನೋ​​​​​​​ ಎಲೆಕ್ಟ್ರಾನಿಕ್ಸ್‌ ರೋಡ್‌ ಶೋ ಮತ್ತು ಭಾರತದಲ್ಲಿ ಸೆಮಿಕಂಡಕ್ಟರ್‌ ಪೂರಕ ವ್ಯವಸ್ಥೆ ಕುರಿತ ಸಮಾವೇಶ’’ ಆಯೋಜನೆ


ಕ್ವಾಂಟಮ್ ತಂತ್ರಜ್ಞಾನ, ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್, ಎಐ, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸ್ಥಳೀಯ ನ್ಯಾನೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿನ ಪ್ರಗತಿಗಳು ಭವ್ಯ ರೋಡ್ ಶೋ ನಲ್ಲಿ ಪ್ರದರ್ಶನ

ಈ ರೋಡ್‌ ಶೋ ಉದ್ದೇಶ ಆತ್ಮನಿರ್ಭರ ಭಾರತಕ್ಕಾಗಿ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವುದು, ನಾವೀನ್ಯತೆಯನ್ನು ಪ್ರದರ್ಶಿಸುವುದು ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದಾಗಿದೆ

Posted On: 24 MAR 2025 2:56PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನ್ಯಾನೋ ತಂತ್ರಜ್ಞಾನ ಉಪಕ್ರಮಗಳ ವಿಭಾಗವು ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಖರಗ್‌ಪುರ ಮತ್ತು ಐಐಟಿ ಗುವಾಹಟಿಯ ಸಹಭಾಗಿತ್ವದಲ್ಲಿ “ನ್ಯಾನೊ ಎಲೆಕ್ಟ್ರಾನಿಕ್ಸ್ ರೋಡ್ ಶೋ ಮತ್ತು ಭಾರತದಲ್ಲಿ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯ ಸಮಾವೇಶ’’ವನ್ನು ಆಯೋಜಿಸಲಿದೆ. ಈ ಕಾರ್ಯಕ್ರಮವು 2025ರ ಮಾರ್ಚ್ 27 ರಂದು ಬೆಳಿಗ್ಗೆ 9:00 ರಿಂದ ಬೆಂಗಳೂರಿನ ಐಐಎಸ್ಸಿಯ ರಾಷ್ಟ್ರೀಯ ವಿಜ್ಞಾನ ಸೆಮಿನಾರ್ ಸಂಕೀರ್ಣದಲ್ಲಿ ಆರಂಭವಾಗಲಿದೆ.

ಈ ಉಪಕ್ರಮವು ಸರ್ಕಾರ, ಕೈಗಾರಿಕೆ, ಶೈಕ್ಷಣಿಕ, ಕಾರ್ಯತಂತ್ರದ ವಲಯಗಳು, ನವೋದ್ಯಮಗಳು ಮತ್ತು ವಿಸಿ ಪೂರಕ ವ್ಯವಸ್ಥೆಯ ಪ್ರಮುಖ ಪಾಲುದಾರರನ್ನು ಒಗೂಡಿಸಿ ಈ ವಲಯದಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂಇಐಟಿವೈ (MeitY) ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಭಾಗವಹಿಸಲಿದ್ದಾರೆ, ಎಂಇಐಟಿವೈಹೆಚ್ಚುವರಿ ಕಾರ್ಯದರ್ಶಿ ಅಭಿಷೇಕ್ ಸಿಂಗ್; ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸಿಇಒ ಡಾ. ಶಿವಕುಮಾರ್ ಕಲ್ಯಾಣ ರಾಮನ್; ಟಾಟಾ ಎಲೆಕ್ಟ್ರಾನಿಕ್ಸ್‌ನ ಕಾರ್ಯತಂತ್ರ ಮತ್ತು ವ್ಯವಹಾರ ಅಭಿವೃದ್ಧಿಯ ಹಿರಿಯ ಉಪಾಧ್ಯಕ್ಷ ಉತ್ಪಲ್ ಶಾ; ಮೈಕ್ರಾನ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ್ ರಾಮಮೂರ್ತಿ; ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಗೌರವ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.

ತಾಂತ್ರಿಕ ನಾವೀನ್ಯತೆಗಳ ಕುರಿತ ರೋಡ್ಶೋ

ಈ ರೋಡ್ ಶೋ ಕ್ವಾಂಟಂ ತಂತ್ರಜ್ಞಾನ, ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್, ಎಐ, ಐಟಿ, ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿನ ಅವಕಾಶಗಳು ಮತ್ತು ನ್ಯಾನೊಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದಲ್ಲಿನ ಸ್ಥಳೀಯ ಪ್ರಗತಿಯ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ.

ಸಮಾವೇಶದ ಕುರಿತು ಮಾತನಾಡಿದ ಎಂಇಐಟಿವೈ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ , “ಮುಂದಿನ ವರ್ಷಗಳಲ್ಲಿ ಸೆಮಿಕಂಡಕ್ಟರ್  ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಹಾದಿಯಲ್ಲಿ ನ್ಯಾನೋ ತಂತ್ರಜ್ಞಾನ ರೋಡ್ ಶೋ ಬಹಳ ನಿರ್ಣಾಯಕ ಭಾಗವಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ವಿಜ್ಞಾನಿಗಳು, ತಂತ್ರಜ್ಞರು ಮತ್ತು ವೃತ್ತಿಪರರ ನಿರ್ದಿಷ್ಟ ತಂಡವನ್ನು ನಾವು ಒಂದು ನಿರ್ದಿಷ್ಟ ಅವಧಿಯಲ್ಲಿ ರೂಪಿಸಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎಂಇಐಟಿವೈ ದೇಶಾದ್ಯಂತ 6 ಐಐಟಿ ಗಳಲ್ಲಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನ್ಯಾನೊ ವಿಜ್ಞಾನ ಕೇಂದ್ರಗಳನ್ನು ಉತ್ತೇಜಿಸಿದೆ. ಇಂದು ನಮಗೆ ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆದ ಅನೇಕ ಡೀಪ್ ಟೆಕ್ ಸ್ಟಾರ್ಟ್‌ಅಪ್‌ಗಳು, ಅನೇಕ ತಂತ್ರಜ್ಞಾನ ಪ್ರದರ್ಶನಗಳು, ಕೈಗಾರಿಕೆಗಳು ಒಂದೆಡೆ ಸೇರಲಿವೆ. ಸುಮಾರು 50 ತಂತ್ರಜ್ಞಾನ ಪ್ರದರ್ಶನಗಳು ನಡೆಯುತ್ತವೆ, ನ್ಯಾನೋ ಎಲೆಕ್ಟ್ರಾನಿಕ್  ವಲಯದಲ್ಲಿ ನಿರ್ದಿಷ್ಟವಾಗಿ ತೊಡಗಿಸಿಕೊಂಡಿರುವ 25 ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಭಾಗವಹಿಸುತ್ತಿವೆ ಹಾಗೂ 25 ವೆಂಚರ್ ಕ್ಯಾಪಿಟಲ್‌ಗಳ ಜೊತೆಗೆ 25 ಇತರ ಕೈಗಾರಿಕೆಗಳೂ ಸಹ ರೋಡ್‌ ಶೋ ನಲ್ಲಿ ಭಾಗವಹಿಸಲಿವೆ. ಭಾರತವು ಸೆಮಿಕಂಡಕ್ಟರ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮತ್ತು ಭಾರತ ಸೆಮಿಕಂಡಕ್ಟರ್ ಮಿಷನ್ (ಐಎಸ್ ಎಂ) ಅಡಿಯಲ್ಲಿ ಸ್ವಾವಲಂಬಿ, ಸಶಕ್ತ ಭಾರತ ಎಂಬ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಅದರಲ್ಲಿ ಇದು ಮೊದಲನೆಯದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಹೇಳಿದ್ದಾರೆ.

ಈ ರೋಡ್ ಶೋ ಭಾರತದ ವೈಬ್ರೆಂಟ್‌ ಎಲೆಕ್ಟ್ರಾನಿಕ್ಸ್ ಸ್ಟಾರ್ಟ್ಅಪ್ ಪೂರಕ ವ್ಯವಸ್ಥೆಯು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಲು ಮತ್ತು ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ಮತ್ತು ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವ ಗುರಿಯನ್ನು ಹೊಂದಿರುವ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳ ವಿಸ್ತೃತ ಜಾಲಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಆತ್ಮನಿರ್ಭರ ಭಾರತ ನಿರ್ಮಾಭಕ್ಕೆ ಭಾರತ ಹೆಚ್ಚು ಗಮನ ನೀಡುತ್ತಿದ್ದು, ಈ ಉಪಕ್ರಮವು ಎಲೆಕ್ಟ್ರಾನಿಕ್ಸ್ ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಸರ್ಕಾರದ ಬದ್ಧತೆಯನ್ನು ದೃಢವಾಗಿ ಪ್ರತಿಪಾದಿಸುತ್ತದೆ. ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವೆ ಸಹಭಾಗಿತ್ವವನ್ನು ಬೆಳೆಸುವ ಮೂಲಕ, ನ್ಯಾನೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಅಭಿವೃದ್ಧಿಶೀಲ ಪೂರಕ ವ್ಯವಸ್ಥೆಯನ್ನು ಬೆಳೆಸುವ ಗುರಿಯನ್ನು ಸಚಿವಾಲಯ ಹೊಂದಿದೆ.

 

*****


(Release ID: 2114472) Visitor Counter : 31