ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಗೃಹ ಸಚಿವಾಲಯದ ಕಾರ್ಯನಿರ್ವಹಣೆಯ ಮೇಲಿನ ಚರ್ಚೆಗೆ ಉತ್ತರಿಸಿದರು


ಮೋದಿ ಸರಕಾರದ ಅಡಿಯಲ್ಲಿ ಭಯೋತ್ಪಾದನೆ, ನಕ್ಸಲಿಸಂ ಮತ್ತು ಉಗ್ರವಾದ ಕೊನೆಗೊಳ್ಳುವ ಹಂತದಲ್ಲಿದೆ

31 ಮಾರ್ಚ್ 2026 ರ ವೇಳೆಗೆ ದೇಶವು ನಕ್ಸಲಿಸಂನಿಂದ ಮುಕ್ತವಾಗಲಿದೆ

ಮೋದಿ ಸರಕಾರವು ಭಯೋತ್ಪಾದನೆ ಅಥವಾ ಭಯೋತ್ಪಾದಕರನ್ನು ಸಹಿಸುವುದಿಲ್ಲ

ಕೆಲವರು ತಮ್ಮ ಹಗರಣ, ಭ್ರಷ್ಟಾಚಾರವನ್ನು ಮರೆಮಾಚಲು ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ

ಮೋದಿ ಸರಕಾರದಲ್ಲಿ ದೇಶದಲ್ಲಿ ಬಾಂಬ್‌ ಸ್ಫೋಟಿಸುವ ಧೈರ್ಯ ಯಾರಿಗೂ ಇಲ್ಲ

ಮುಂದಿನ 3 ವರ್ಷಗಳಲ್ಲಿ, ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು.

ಮುಂದಿನ 6 ತಿಂಗಳೊಳಗೆ ಸಂಪೂರ್ಣ ಸ್ವದೇಶಿ ಡ್ರೋನ್ –ನಿಗ್ರಹ ಮಾಡ್ಯೂಲ್ ಅನ್ನು ದೇಶಕ್ಕೆ ಪ್ರಸ್ತುತಪಡಿಸಲಾಗುತ್ತದೆ.

ಎನ್‌ ಐ ಎ ಶೇ. 95ರಷ್ಟು ಶಿಕ್ಷೆಯ ಪ್ರಮಾಣವನ್ನು ಸಾಧಿಸಿದೆ, ಇದು ವಿಶ್ವಾದ್ಯಂತ ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಲ್ಲಿ ಅತ್ಯಧಿಕವಾಗಿದೆ

ಮೋದಿ ಸರ್ಕಾರವು ಪಿ ಎಫ್‌ ಐ ಅನ್ನು ನಿಷೇಧಿಸಿತು ಮತ್ತು ಅದರ ಸದಸ್ಯರನ್ನು ಬಂಧಿಸಿತು, ದೇಶಕ್ಕೆ ದೊಡ್ಡ ಅಪಾಯವನ್ನು ನಿರ್ಮೂಲನೆ ಮಾಡಿತು

ಡ್ರಗ್ಸ್ ದಂಧೆಯಿಂದ ಹಣ ಗಳಿಸಿ ಆ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವವರನ್ನು ಮೋದಿ ಸರ್ಕಾರ ಎಂದಿಗೂ ಬಿಡುವುದಿಲ್ಲ

ಕೆಲವು ಜನರು ಪಂಜಾಬಿನಲ್ಲಿ ಭಿಂದ್ರನ್‌ವಾಲಾ ಆಗಲು ಬಯಸಿದ್ದರು, ನಾವು ಅವರನ್ನು ಅಸ್ಸಾಂನಲ್ಲಿ ಜೈಲಿಗೆ ಹಾಕುವ ಕ್ರಮ ಕೈಗೊಂಡಿದ್ದೇವೆ

Posted On: 21 MAR 2025 9:09PM by PIB Bengaluru

ಇಂದು ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಕಾರ್ಯನಿರ್ವಹಣೆ ಮೇಲಿನ ಚರ್ಚೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಉತ್ತರಿಸಿದರು. ಎರಡು ದಿನಗಳ ಕಾಲನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಬಲವಾದ ಶಾಸಕಾಂಗ ಚೌಕಟ್ಟನ್ನು ಸ್ಥಾಪಿಸುವ ಮೂಲಕ ನಮ್ಮ ಭದ್ರತಾ ಸಿಬ್ಬಂದಿಯ ನೈತಿಕತೆಯನ್ನು ಬಲಪಡಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಈಶಾನ್ಯದಲ್ಲಿ ಬಂಡಾಯವೆಂಬ ಮೂರು ಪ್ರಮುಖ ಸಮಸ್ಯೆಗಳು ಈ ದೇಶದ ಭದ್ರತೆ, ಅಭಿವೃದ್ಧಿ ಮತ್ತು ಸಾರ್ವಭೌಮತ್ವಕ್ಕೆ ಯಾವಾಗಲೂ ಸವಾಲಾಗಿವೆ ಎಂದು ಗೃಹ ಸಚಿವರು ಹೇಳಿದರು. ಆಳವಾಗಿ ಬೇರೂರಿರುವ ಈ ಮೂರು ಸಮಸ್ಯೆಗಳು ಸುಮಾರು ನಾಲ್ಕು ದಶಕಗಳಿಂದ ದೇಶದ ಶಾಂತಿಗೆ ಭಂಗ  ತಂದಿವೆ, ದೇಶದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ವೇಗವನ್ನು ಕುಂಠಿತಗೊಳಿಸಿವೆ ಎಂದು ಅವರು ಹೇಳಿದರು. ಈ ಮೂರು ಸಮಸ್ಯೆಗಳಿಂದಾಗಿ ನಾಲ್ಕು ದಶಕಗಳಲ್ಲಿ ದೇಶದ ಸುಮಾರು 92,000 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಾ ಹೇಳಿದರು. 2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವ ಮೊದಲು, ಈ ಆಳವಾಗಿ ಬೇರೂರಿರುವ ಸಮಸ್ಯೆಗಳ ಸಂಪೂರ್ಣ ನಿರ್ಮೂಲನೆಗೆ ಯಾವುದೇ ಸಂಘಟಿತ ಪ್ರಯತ್ನಗಳನ್ನು ಮಾಡಲಾಗಿಲ್ಲ ಎಂದು ಅವರು ಹೇಳಿದರು. ಮೋದಿ ಸರಕಾರದಲ್ಲಿ ಭಯೋತ್ಪಾದನೆ, ನಕ್ಸಲಿಸಂ ಮತ್ತು ಉಗ್ರವಾದ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅವರು ಹೇಳಿದರು.

ಈ ಹಿಂದೆ ನೆರೆಯ ದೇಶದ ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳುತ್ತಿದ್ದರು, ಬಾಂಬ್ ಸ್ಫೋಟ ಮತ್ತು ಕೊಲೆಗಳನ್ನು ನಡೆಸುತ್ತಿದ್ದರು ಮತ್ತು ಈ ಘಟನೆಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರಗಳ ಧೋರಣೆ ಮೃದುವಾಗಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅವರು ಮಾತನಾಡಲು ಹೆದರಿ ಮೌನವಾಗಿದ್ದರು ಮತ್ತು ತಮ್ಮ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯದಲ್ಲಿದ್ದರು. ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು. ಮೋದಿ ಸರ್ಕಾರದಲ್ಲಿ ದೇಶದಲ್ಲಿ ಬಾಂಬ್ ಸ್ಫೋಟ ನಡೆಸುವ ಧೈರ್ಯ ಯಾರಿಗೂ ಇಲ್ಲ ಎಂದು ಅವರು ಹೇಳಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಉರಿ ಮತ್ತು ಪುಲ್ವಾಮಾದಲ್ಲಿ ದಾಳಿಗಳು ನಡೆದವು, ಆದರೆ ಕೇವಲ 10 ದಿನಗಳಲ್ಲಿ ನಾವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದೇವೆ. ಈ ಹಿಂದೆ ಇಸ್ರೇಲ್ ಮತ್ತು ಅಮೆರಿಕ ಎರಡು ದೇಶಗಳು ಮಾತ್ರ ತಮ್ಮ ಗಡಿ ಮತ್ತು ಸೇನಾ ಪಡೆಗಳನ್ನು ರಕ್ಷಿಸಲು ಸದಾ ಸಿದ್ಧವಾಗಿದ್ದವು ಮತ್ತು ಆ ಪಟ್ಟಿಗೆ ನಮ್ಮ ಭವ್ಯ ಭಾರತದ ಹೆಸರನ್ನು ಸೇರಿಸಿದ್ದು ಪ್ರಧಾನಿ ಮೋದಿಯವರು ಎಂದು ಅವರು ಹೇಳಿದರು. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿನ್ನು ಅಲ್ಲಿಂದ ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ಮೂಲ ಕಾರಣ 370 ನೇ ವಿಧಿ ಆಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಜಕೀಯ ಒತ್ತಡ ಮತ್ತು ವೋಟ್ ಬ್ಯಾಂಕ್ ರಾಜಕೀಯದಿಂದಾಗಿ 370 ನೇ ವಿಧಿಯು ಹಲವು ವರ್ಷಗಳ ಕಾಲ ಮುಂದುವರೆಯಿತು ಎಂದು ಅವರು ಹೇಳಿದರು. ಆಗಸ್ಟ್ 5, 2019 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಸಂಸತ್ತಿನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದರು ಎಂದು ಗೃಹ ಸಚಿವರು ಹೇಳಿದರು. ನಮ್ಮ ಸಂವಿಧಾನ ರಚನೆಕಾರರು ಒಂದು ದೇಶ, ಒಂದು ಚಿಹ್ನೆ ಮತ್ತು ಒಂದೇ ಸಂವಿಧಾನ ಎಂಬ ಕನಸನ್ನು ಹೊಂದಿದ್ದರು ಮತ್ತು ಪ್ರಧಾನಿ ಮೋದಿಯವರು ಈ ಕನಸನ್ನು ನನಸಾಗಿಸಿದರು ಎಂದು ಅವರು ಹೇಳಿದರು. ಆಗಸ್ಟ್ 5-6, 2019 ರಂದು, ಒಂದು ಕಾನೂನು, ಒಂದು ಚಿಹ್ನೆ ಮತ್ತು ಒಬ್ಬ ನಾಯಕನ ಹೊಸ ಯುಗವು ಪ್ರಾರಂಭವಾಯಿತು ಮತ್ತು ಆ ಕ್ಷಣದಿಂದಲೇ ಕಾಶ್ಮೀರವನ್ನು ಭಾರತಕ್ಕೆ ಶಾಶ್ವತವಾಗಿ ಸಂಯೋಜಿಸುವ ಪ್ರಕ್ರಿಯೆಯು ಪ್ರಾರಂಭವಾಯಿತು ಎಂದು ಶ್ರೀ ಶಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಡೋಗ್ರಿ, ಹಿಂದಿ ಮತ್ತು ಉರ್ದು ಭಾಷೆಗಳಿಗೆ ರಾಜ್ಯದ ಅಧಿಕೃತ ಭಾಷೆಗಳ ಸ್ಥಾನಮಾನ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭ್ರಷ್ಟಾಚಾರವನ್ನು ನಿಗ್ರಹಿಸಲು, ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಯಿತು ಮತ್ತು ಈ ಪ್ರದೇಶದಲ್ಲಿ ಎಲ್ಲಾ ರಾಷ್ಟ್ರೀಯ ಕಾನೂನುಗಳನ್ನು ಸಹ ಅಳವಡಿಸಿಕೊಳ್ಳಲಾಯಿತು. ಪ್ರಧಾನಿ ಮೋದಿ ಅವರು ಪಠಾಣ್‌ಕೋಟ್ ಚೆಕ್‌ ಪೋಸ್ಟ್‌ ನಲ್ಲಿ ಪರವಾನಗಿ ವ್ಯವಸ್ಥೆಯನ್ನು ರದ್ದುಗೊಳಿಸಿದರು, ಇದು ಪ್ರಜಾಪ್ರಭುತ್ವ, ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಿತು. 33 ವರ್ಷಗಳ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಸಹ ಅವಕಾಶ ನೀಡಿರಲಿಲ್ಲ, ಆದರೆ ಮೋದಿ ಸರ್ಕಾರದಲ್ಲಿ ಅವುಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. 34 ವರ್ಷಗಳಿಂದ ಮೊಹರಂ ಸಮಯದಲ್ಲಿ ತಾಜಿಯಾ ಮೆರವಣಿಗೆಗೆ ಅವಕಾಶವಿರಲಿಲ್ಲ, ಆದರೆ ನಮ್ಮ ಕಾಲದಲ್ಲಿ ಇದನ್ನು ಅನುಮತಿಸಲಾಗಿದೆ. ಮೊದಲು ಲಾಲ್ ಚೌಕದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ತುಂಬಾ ಕಷ್ಟಕರವಾಗಿತ್ತು, ಆದರೆ ಈಗ "ಹರ್ ಘರ್ ತಿರಂಗ" ಅಭಿಯಾನದ ಸಮಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸದ ಒಂದೇ ಒಂದು ಮನೆಯೂ ಇರಲಿಲ್ಲ. ಶ್ರೀನಗರದಲ್ಲಿ ಫಾರ್ಮುಲಾ 4 ಕಾರ್ ರೇಸಿಂಗ್ ನಡೆದಿದ್ದು, ಲಾಲ್ ಚೌಕದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು ಎಂದು ಅವರು ಹೇಳಿದರು.

ಮೋದಿ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ಭಯೋತ್ಪಾದಕರನ್ನು ಸೇರುವ ಭಾರತೀಯ ಮಕ್ಕಳ ಸಂಖ್ಯೆಯನ್ನು ಬಹುತೇಕ ನಿರ್ಮೂಲಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹತ್ತು ವರ್ಷಗಳ ಹಿಂದೆ ಭಯೋತ್ಪಾದಕರನ್ನು ವೈಭವೀಕರಿಸಿ ಅದ್ಧೂರಿ ಮೆರವಣಿಗೆ ನಡೆಸಲಾಗುತ್ತಿತ್ತು, ಆದರೆ ಮೋದಿ ಸರಕಾರದಲ್ಲಿ ಒಂದೇ ಒಂದು ಮೆರವಣಿಗೆಯೂ ನಡೆದಿಲ್ಲ; ಕೊಲ್ಲಲ್ಪಟ್ಟವರನ್ನು ಅವರು ಬಿದ್ದ ಸ್ಥಳದಲ್ಲಿಯೇ ಸಮಾಧಿ ಮಾಡಲಾಯಿತು. ಭಯೋತ್ಪಾದಕರ ಅನೇಕ ಸಂಬಂಧಿಕರನ್ನು ಸರ್ಕಾರಿ ಕೆಲಸದಿಂದ ನಿರ್ದಯವಾಗಿ ತೆಗೆದುಹಾಕಲಾಯಿತು ಎಂದು ಅವರು ಹೇಳಿದರು. ಭಯೋತ್ಪಾದನೆ ಮತ್ತು ಭಯೋತ್ಪಾದಕರ ಬೆಂಬಲಿಗರಿಗೆ ಸರ್ಕಾರಿ ಉದ್ಯೋಗಗಳು, ಪಾಸ್‌ಪೋರ್ಟ್‌ ಮತ್ತು ಗುತ್ತಿಗೆಗಳನ್ನು ನೀಡುವುದರ ಮೇಲೂ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ ಎಂದು ಅವರು ಹೇಳಿದರು.

2004 ಮತ್ತು 2014 ರ ನಡುವೆ 7,217 ಭಯೋತ್ಪಾದಕ ಘಟನೆಗಳು ನಡೆದಿದ್ದವು, ಆದರೆ 2014 ರಿಂದ 2024 ರವರೆಗೆ ಈ ಸಂಖ್ಯೆ 2,242 ಕ್ಕೆ ಇಳಿದಿದೆ ಎಂದು ಗೃಹ ಸಚಿವರು ಹೇಳಿದರು. ಈ ಅವಧಿಯಲ್ಲಿ, ಒಟ್ಟು ಸಾವಿನ ಸಂಖ್ಯೆ ಶೇ.70 ರಷ್ಟು ಕಡಿಮೆಯಾಗಿದೆ, ನಾಗರಿಕರ ಸಾವಿನ ಸಂಖ್ಯೆ ಶೇ.81 ರಷ್ಟು ಕಡಿಮೆಯಾಗಿದೆ ಮತ್ತು ಭದ್ರತಾ ಸಿಬ್ಬಂದಿಯ ಸಾವುಗಳು ಶೇ.50 ರಷ್ಟು ಕಡಿಮೆಯಾಗಿದೆ. 2010 ರಿಂದ 2014 ರವರೆಗೆ ಪ್ರತಿ ವರ್ಷ ಸರಾಸರಿ 2,654 ಸಂಘಟಿತ ಕಲ್ಲು ತೂರಾಟದ ಘಟನೆಗಳು ಸಂಭವಿಸಿದ್ದವು, ಆದರೆ 2024 ರಲ್ಲಿ ಅಂತಹ ಒಂದೇ ಒಂದು ಘಟನೆ ನಡೆದಿಲ್ಲ. 132 ಸಂಘಟಿತ ದಾಳಿಗಳು ನಡೆದಿದ್ದವು, ಆದರೆ ಈಗ ಒಂದೂ ದಾಳಿ ನಡೆದಿಲ್ಲ. ಕಲ್ಲು ತೂರಾಟದಲ್ಲಿ 112 ನಾಗರಿಕರು ಸಾವನ್ನಪ್ಪಿದ್ದರು ಮತ್ತು 6,000 ಜನರು ಗಾಯಗೊಂಡಿದ್ದರು, ಆದರೆ ಈಗ ಕಲ್ಲು ತೂರಾಟ ನಿಂತು ಹೋಗಿದೆ. 2004ರಲ್ಲಿ 1,587 ಭಯೋತ್ಪಾದಕ ಘಟನೆಗಳು ನಡೆದಿದ್ದರೆ, 2024ರಲ್ಲಿ ಈ ಸಂಖ್ಯೆ ಕೇವಲ 85ಕ್ಕೆ ಇಳಿದಿದೆ. ನಾಗರಿಕರ ಸಾವಿನ ಸಂಖ್ಯೆ 2004 ರಲ್ಲಿ 733 ಆಗಿತ್ತು, ಆದರೆ 2024 ರಲ್ಲಿ 26 ಕ್ಕೆ ಇಳಿದಿದೆ ಮತ್ತು ಭದ್ರತಾ ಪಡೆಗಳ ಸಾವಿನ ಸಂಖ್ಯೆ 2004 ರಲ್ಲಿದ್ದ 331 ರಿಂದ 2024 ರಲ್ಲಿ 31 ಕ್ಕೆ ಇಳಿದಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಕಾಶ್ಮೀರದ ಅಭಿವೃದ್ಧಿಗಾಗಿ 80,000 ಕೋಟಿ ರೂಪಾಯಿಗಳ 63 ಯೋಜನೆಗಳಿಗೆ ಅನುಮೋದನೆ ನೀಡಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರಲ್ಲಿ 51,000 ಕೋಟಿ ವೆಚ್ಚ ಮಾಡಲಾಗಿದ್ದು, 53 ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. 2019 ರಿಂದ 2024 ರ ನಡುವೆ 40,000 ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ, ವಿಶ್ವಕರ್ಮ ಯೋಜನೆ ಮೂಲಕ 1.51 ಲಕ್ಷ ಒಬಿಸಿ ಮಕ್ಕಳಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ನೀಡಲಾಗಿದೆ, 5,184 ಯುವ ಕ್ಲಬ್‌ ಗಳು ಕೌಶಲ್ಯ ಅಭಿವೃದ್ಧಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು 18,000 ಯುವಕರಿಗೆ ಸ್ವಂತ ಟ್ಯಾಕ್ಸಿಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಆಕರ್ಷಕ ಕೈಗಾರಿಕಾ ನೀತಿಯನ್ನು ಜಾರಿಗೆ ತರುವ ಮೂಲಕ, ಕಾಶ್ಮೀರದಲ್ಲಿ ತಳಮಟ್ಟದಲ್ಲಿ 12,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಸಾಕಾರಗೊಳಿಸಲಾಗಿದೆ ಮತ್ತು ಪ್ರಸ್ತುತ 1,10,000 ಕೋಟಿ ರೂಪಾಯಿ ಮೌಲ್ಯದ ಎಂಒಯುಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. 70 ವರ್ಷಗಳ ಹಿಂದೆ ಈ ವಲಯದಲ್ಲಿ ಕೇವಲ 14,000 ಕೋಟಿ ಹೂಡಿಕೆ ಬಂದಿತ್ತು, ಆದರೆ ಮೋದಿಯವರ ನಾಯಕತ್ವದ 10 ವರ್ಷಗಳಲ್ಲಿ 12,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಉತ್ಪಾದನೆ ಪ್ರಾರಂಭವಾಗಿದೆ ಎಂದು ಶ್ರೀ ಶಾ ಎತ್ತಿ ತೋರಿಸಿದರು. ಕಾಶ್ಮೀರದಲ್ಲಿ ಮತ್ತೆ ಪ್ರವಾಸೋದ್ಯಮವೂ ಆರಂಭವಾಗಿದೆ, 2023ರಲ್ಲಿ ಇಲ್ಲಿಗೆ ದಾಖಲೆಯ 2.11 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವಾಸೋದ್ಯಮದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಬುನಾದಿ ಹಾಕಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹಿಂದಿನ ಸರ್ಕಾರದ ಆಡಳಿತದಲ್ಲಿ ಜಮ್ಮು ಮತ್ತು ಕಾಶ್ಮೀರವು 90 ಶಾಸಕರು ಮತ್ತು 6 ಸಂಸದರನ್ನು ಹೊಂದಿತ್ತು, ಆದರೆ ಈಗ ಈ ಪ್ರದೇಶವು 34,262 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ ಎಂದು ಅವರು ಹೇಳಿದರು. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ಗುಂಡು ಹಾರಿಸಲಾಗಿಲ್ಲ ಮತ್ತು ಶೇ.98 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದರು ಎಂದು ಅವರು ಹೇಳಿದರು.

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಏಮ್ಸ್‌, ಐಐಟಿ ಮತ್ತು ಐಐಎಂಗಳಿವೆ ಎಂದು ಶ್ರೀ ಶಾ ಹೇಳಿದರು. ಮೊದಲು ಕೇವಲ 4 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಈಗ 15 ವೈದ್ಯಕೀಯ ಕಾಲೇಜುಗಳಿವೆ, 15 ಹೊಸ ನರ್ಸಿಂಗ್ ಕಾಲೇಜುಗಳಿವೆ. ಈ ಹಿಂದೆ 500 ಎಂಬಿಬಿಎಸ್ ಸೀಟುಗಳಿದ್ದವು, ಆದರೆ ನಾವು 800 ಸೀಟುಗಳನ್ನು ಹೆಚ್ಚಿಸಿದ್ದೇವೆ ಮತ್ತು 767 ಪಿಜಿ ಸೀಟುಗಳಲ್ಲಿ 297 ಹೊಸ ಸೀಟುಗಳನ್ನು ಸೇರಿಸಲಾಗಿದೆ ಎಂದು ಹೇಳಿದರು. ಕಣ್ಣು ಮುಚ್ಚಿ ಕಪ್ಪು ಕನ್ನಡಕ ಧರಿಸಿ ಕುಳಿತವರಿಗೆ ಅಭಿವೃದ್ಧಿ ಎಂದಿಗೂ ಕಾಣಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಭಯೋತ್ಪಾದಕರು ಕಂಡುಬಂದ ತಕ್ಷಣ ಅವರ ಕಣ್ಣುಗಳ ನಡುವೆ ನೇರವಾಗಿ ಗುರಿಯಾಗಿಸಿಕೊಂಡು ಅವರನ್ನು ಎದುರಿಸುತ್ತೇವೆ ಎಂದು ಗೃಹ ಸಚಿವರು ಒತ್ತಿ ಹೇಳಿದರು. ನಾಗರಿಕರ ರಕ್ತದ ಜೊತೆ ಆಟವಾಡುವವರಿಗೆ ದೇಶದಲ್ಲಿ ಸ್ಥಾನವಿಲ್ಲವಾದ್ದರಿಂದ, ಭಯೋತ್ಪಾದನೆ ಅಥವಾ ಭಯೋತ್ಪಾದಕರನ್ನು ತಮ್ಮ ಸರ್ಕಾರ ಸಹಿಸಲು ಸಾಧ್ಯವಿಲ್ಲ ಎಂದು ಅವರು ದೃಢಪಡಿಸಿದರು.

ಎಡಪಂಥೀಯ ಉಗ್ರವಾದ ಕೂಡ ಗಂಭೀರ ವಿಷಯ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೆಲವರು ಇದನ್ನು ರಾಜಕೀಯ ಸಮಸ್ಯೆ ಎಂದು ಕರೆಯುತ್ತಾರೆ, ಆದರೆ ಅಂತಹವರ ಈ ದೃಷ್ಟಿಕೋನ ಬಗ್ಗೆ ಗೃಹ ಸಚಿವರು ಸಹಾನುಭೂತಿ ವ್ಯಕ್ತಪಡಿಸಿದರು. ಅಭಿವೃದ್ಧಿಯ ದೃಷ್ಟಿಯಿಂದ, ಅನೇಕ ಜಿಲ್ಲೆಗಳು ಮತ್ತು ತಹಸಿಲ್‌ಗಳು ಹಿಂದುಳಿದಿವೆ. ಈ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹಿಂದಿನ ಸರ್ಕಾರಗಳು ಸಹ ಶ್ರಮಿಸಿದವು ಮತ್ತು ನಮ್ಮ ಸರ್ಕಾರವೂ ಅದೇ ಪ್ರಯತ್ನಗಳನ್ನು ಮುಂದುವರೆಸುತ್ತಿದೆ. ಕೆಲವು ಪ್ರದೇಶಗಳು ಇನ್ನೂ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿಲ್ಲದಿರಬಹುದು, ಇದರರ್ಥ ನಾವು ದೇಶದ ವ್ಯವಸ್ಥೆ ಮತ್ತು ಸಂವಿಧಾನವನ್ನು ಕಡೆಗಣಿಸಬೇಕು ಮತ್ತು ಸರ್ಕಾರವು ಅಸಹಾಯಕತೆಯಿಂದ ನೋಡಬೇಕು ಎಂದು ಅಲ್ಲ ಎಂದು ಶ್ರೀ ಶಾ ಹೇಳಿದರು.

ಇದುವರೆಗೆ ಸಾವಿರಾರು ಮಂದಿ ಎಡಪಂಥೀಯ ಉಗ್ರವಾದಕ್ಕೆ ಬಲಿಯಾಗಿದ್ದಾರೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಪಶುಪತಿನಾಥದಿಂದ ತಿರುಪತಿವರೆಗಿನ ರೆಡ್ ಕಾರಿಡಾರ್‌ ನಲ್ಲಿರುವ ಹಲವು ಜಿಲ್ಲೆಗಳು, ತಾಲ್ಲೂಕುಗಳು ಮತ್ತು ಪೊಲೀಸ್ ಠಾಣೆಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಕಿತ್ತುಹಾಕಲಾಯಿತು. ಸಮಾನಾಂತರ ಕರೆನ್ಸಿ ಮತ್ತು ಸ್ಟಾಂಪ್ ಪೇಪರ್ ಚಲಾವಣೆಗೆ ಬಂದಿತು ಮತ್ತು ಸರ್ಕಾರಗಳು ರಚನೆಯಾದವು, ಆದರೆ ಯಾರೂ ಮಾತನಾಡಲಿಲ್ಲ ಎಂದು ಅವರು ಹೇಳಿದರು.

ಮಾರ್ಚ್ 31, 2026 ರ ವೇಳೆಗೆ ದೇಶದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲಾಗುತ್ತದೆ ಎಂದು ಸದನಕ್ಕೆ ಜವಾಬ್ದಾರಿಯುತವಾಗಿ ತಿಳಿಸಲು ಬಯಸುತ್ತೇನೆ ಎಂದು ಅವರು ಹೇಳಿದರು. ಈ ಭರವಸೆಯ ಹಿಂದೆ ಮೋದಿ ಸರ್ಕಾರದ 10 ವರ್ಷಗಳ ಕಠಿಣ ಪರಿಶ್ರಮ, ನಿಖರವಾದ ಯೋಜನೆ, ಅಭಿವೃದ್ಧಿಯ ಹಸಿವು ಮತ್ತು ಹಣಕಾಸು ಹಂಚಿಕೆ ಇದೆ ಎಂದು ಅವರು ವಿವರಿಸಿದರು. ಎಲ್ಲಿಯೂ ಯಾವುದೇ ಅಂತರಗಳು ಉಳಿಯದ ರೀತಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದರು.

ಸಂವಾದ, ಭದ್ರತೆ ಮತ್ತು ಸಮನ್ವಯ ತತ್ವಗಳನ್ನು ಅಳವಡಿಸಿಕೊಂಡು ನಕ್ಸಲಿಸಂ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದೇವೆ ಎಂದು ಗೃಹ ಸಚಿವರು ಹೇಳಿದರು. ಸೂರ್ಯನ ಕಿರಣಗಳೂ ತಲುಪದ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಹಸಿವು ಮತ್ತು ಬಾಯಾರಿಕೆಯಲ್ಲಿ ಇದ್ದು ಈ ಸಮಸ್ಯೆಯನ್ನು ಪರಿಹರಿಸಲು ತ್ಯಾಗ ಮಾಡಿದ ಡಿ ಆರ್‌ ಜಿ, ಎಸ್‌ ಟಿ ಎಫ್, ಪೊಲೀಸ್, ಸಿ ಆರ್‌ ಪಿ ಎಫ್, ಐಟಿಬಿಪಿ, ಬಿ ಎಸ್‌ ಎಫ್ ಯೋಧರನ್ನು ಅವರು ಶ್ಲಾಘಿಸಿದರು.

ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ನಕ್ಸಲಿಸಂ ವಿರುದ್ಧ ಹೋರಾಡಲು ಪ್ರಾರಂಭಿಸಲಾಯಿತು ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಸ್ಥಳ ಪತ್ತೆಹಚ್ಚುವಿಕೆ, ಮೊಬೈಲ್ ಫೋನ್ ಚಟುವಟಿಕೆಗಳು, ವೈಜ್ಞಾನಿಕ ಕರೆ ದಾಖಲೆಗಳ ವಿಶ್ಲೇಷಣೆ, ಸಾಮಾಜಿಕ ಮಾಧ್ಯಮ ವಿಶ್ಲೇಷಣೆ, ಕೊರಿಯರ್ ಸೇವೆಗಳನ್ನು ಮ್ಯಾಪಿಂಗ್ ಮಾಡುವುದು ಮತ್ತು ಅವರ ಕುಟುಂಬಗಳ ಚಲನವಲನಗಳನ್ನು ಪತ್ತೆಹಚ್ಚುವಂತಹ ಮಾಹಿತಿಯನ್ನು ಸಂಗ್ರಹಿಸುವ ಮೂಲಕ, ಭದ್ರತಾ ಪಡೆಗಳನ್ನು ಅಮೂಲ್ಯವಾದ ಗುಪ್ತಚರದೊಂದಿಗೆ ಸಜ್ಜುಗೊಳಿಸಲಾಯಿತು. ಡ್ರೋನ್ ಕಣ್ಗಾವಲು ಮತ್ತು ಉಪಗ್ರಹ ಚಿತ್ರಣವನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಫಲಿತಾಂಶಗಳನ್ನು ಹೊರತೆಗೆಯಲು ಬಳಸಲಾಗಿದೆ ಎಂದು ಅವರು ಹೇಳಿದರು. ಈ ಡೇಟಾ ವಿಶ್ಲೇಷಣೆಯ ಆಧಾರದ ಮೇಲೆ, ಭದ್ರತಾ ಪಡೆಗಳನ್ನು ಸರಿಯಾದ ಸ್ಥಳಗಳಿಗೆ ನಿಖರವಾಗಿ ನಿಯೋಜಿಸಲು ಸಾಧ್ಯವಾಯಿತು ಮತ್ತು ಈ ವಿಧಾನವು ಅವರ ಕಾರ್ಯಾಚರಣೆಗಳಿಗೆ ಆಧಾರವಾಯಿತು ಎಂದು ಅವರು ಹೇಳಿದರು.

2004 ರಿಂದ 2014 ರ ನಡುವೆ 16,463 ಹಿಂಸಾತ್ಮಕ ಘಟನೆಗಳು ನಡೆದಿದ್ದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಸಂಖ್ಯೆ ಶೇ.53 ರಷ್ಟು ಕಡಿಮೆಯಾಗಿದೆ. 2004 ರಿಂದ 2014 ರವರೆಗೆ 1,851 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು, ಆದರೆ ಕಳೆದ ಹತ್ತು ವರ್ಷಗಳಲ್ಲಿ, ಹುತಾತ್ಮರಾದ ಭದ್ರತಾ ಸಿಬ್ಬಂದಿಯ ಸಂಖ್ಯೆ 509 ಕ್ಕೆ ಇಳಿದಿದೆ, ಇದು ಶೇ.73 ರಷ್ಟು ಇಳಿಕೆಯಾಗಿದೆ. ನಾಗರಿಕರ ಸಾವಿನ ಸಂಖ್ಯೆ 4,766 ರಿಂದ 1,495 ಕ್ಕೆ ಇಳಿದಿದೆ, ಇದು ಶೇ.70 ರಷ್ಟು ಇಳಿಕೆಯಾಗಿದೆ ಎಂದು ಅವರು ಹೇಳಿದರು.

ಛತ್ತೀಸಗಢದಲ್ಲಿ ಸರ್ಕಾರ ಬದಲಾವಣೆಯಾದ ನಂತರ, ಡಿಸೆಂಬರ್ 2023 ರಲ್ಲಿ, ಒಂದೇ ವರ್ಷದೊಳಗೆ 380 ನಕ್ಸಲರು ಕೊಲ್ಲಲ್ಪಟ್ಟರು, 1,194 ಜನರನ್ನು ಬಂಧಿಸಲಾಯಿತು ಮತ್ತು 1,045 ಜನರು ಶರಣಾದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ಕೇವಲ 26 ಭದ್ರತಾ ಸಿಬ್ಬಂದಿ ಮಾತ್ರ ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದರು. 2,619 ನಕ್ಸಲೀಯರು ಶರಣಾಗಿದ್ದಾರೆ, ಬಂಧಿಸಲಾಗಿದೆ ಅಥವಾ ಕೊಲ್ಲಲ್ಪಟ್ಟಿದ್ದಾರೆ ಎಂಬ ಅಂಶದಿಂದಲೇ ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಸರ್ಕಾರದ ವಿಧಾನದಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು.

2014 ರವರೆಗೆ 66 ದಾಳಿ ನಿರೋಧಕ ಪೊಲೀಸ್ ಠಾಣೆಗಳಿದ್ದವು, ಅವುಗಳಲ್ಲಿ 32 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅಡಿಯಲ್ಲಿ ಆರಂಭವಾದವು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದರೆ, ಮೋದಿ ಸರ್ಕಾರದ ಅಡಿಯಲ್ಲಿ, ಕಳೆದ 10 ವರ್ಷಗಳಲ್ಲಿ 612 ದಾಳಿ ನಿರೋಧಕ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. 2014 ರಲ್ಲಿ, ನಕ್ಸಲಿಸಂನಿಂದ ಹೆಚ್ಚು ಪ್ರಭಾವಿತವಾಗಿರುವ ಜಿಲ್ಲೆಗಳ ಸಂಖ್ಯೆ 126 ಆಗಿತ್ತು, ಅದು ಈಗ ಕೇವಲ 12 ಕ್ಕೆ ಇಳಿದಿದೆ ಮತ್ತು ಮಾರ್ಚ್ 2026 ರ ವೇಳೆಗೆ ಈ ಸಂಖ್ಯೆ ಶೂನ್ಯವಾಗಿರುತ್ತದೆ ಎಂದು ಅವರು ಹೇಳಿದರು. 2014 ರಲ್ಲಿ, 330 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಕ್ಸಲ್ ಘಟನೆಗಳು ನಡೆದಿದ್ದವು, ಆದರೆ ಈಗ ಈ ಸಂಖ್ಯೆ 104 ಕ್ಕೆ ಇಳಿದಿದೆ. 18,000 ಚದರ ಕಿಲೋಮೀಟರ್‌ ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿದ್ದ ನಕ್ಸಲ್ ಪೀಡಿತ ಪ್ರದೇಶಗಳು ಈಗ ಕೇವಲ 4,200 ಚದರ ಕಿಲೋಮೀಟರ್‌ ಗಳಿಗೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ರಾತ್ರಿ ವೇಳೆಯಲ್ಲಿ ಬಳಸುವ ಹೆಲಿಪ್ಯಾಡ್‌ ಗಳು ಇರಲಿಲ್ಲ, ಆದರೆ ತಮ್ಮ ಸರ್ಕಾರದ ಅಡಿಯಲ್ಲಿ ಅಂತಹ 68 ಹೆಲಿಪ್ಯಾಡ್‌ ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಭದ್ರತಾ ಶಿಬಿರಗಳ ಸಂಖ್ಯೆ ಶೋಚನೀಯವಾಗಿತ್ತು, ಆದರೆ ಕಳೆದ 5 ವರ್ಷಗಳಲ್ಲಿ, ಇಡೀ ಪ್ರದೇಶವನ್ನು ಸುರಕ್ಷಿತವಾಗಿಡಲು ಅವರು 302 ಹೊಸ ಭದ್ರತಾ ಶಿಬಿರಗಳನ್ನು ತೆರೆಯಲಾಗಿದೆ ಎಂದು ಶ್ರೀ ಶಾ ಹೇಳಿದರು.

ನಕ್ಸಲರನ್ನು ಆರ್ಥಿಕವಾಗಿ ಹತ್ತಿಕ್ಕಲು ಮತ್ತು ಅವರ ಆರ್ಥಿಕ ಬೆನ್ನೆಲುಬನ್ನು ಮುರಿಯಲು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐ ಎ) ಮತ್ತು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಅವರಿಂದ ಹಲವಾರು ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿ ಎಂ ಎಲ್‌ ಎ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ನಕ್ಸಲರಿಗೆ ಹಣಕಾಸು ಒದಗಿಸಿದವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಿರಂತರ ಸಭೆಗಳು ನಡೆದವು. ತಮ್ಮ ಮಟ್ಟದಲ್ಲಿ, ಎಲ್ಲಾ ಮುಖ್ಯಮಂತ್ರಿಗಳೊಂದಿಗೆ 11 ಸಭೆಗಳು ಮತ್ತು ಪೊಲೀಸ್ ಮುಖ್ಯಸ್ಥರೊಂದಿಗೆ 12 ಸಭೆಗಳನ್ನು ನಡೆಸಲಾಯಿತು ಎಂದು ಗೃಹ ಸಚಿವರು ಹೇಳಿದರು. ಕ್ರಿಯಾತ್ಮಕ ಕಾರ್ಯತಂತ್ರವನ್ನು ರೂಪಿಸಲಾಯಿತು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ತರಲು, ಈ ಪ್ರದೇಶಗಳಿಗೆ ಬಜೆಟ್ ಹಂಚಿಕೆಯನ್ನು ಶೇ.300 ರಷ್ಟು ಹೆಚ್ಚಿಸಲಾಗಿದೆ ಎಂದು ಶ್ರೀ ಶಾ ಹೇಳಿದರು.

2014 ರಿಂದ 2024 ರವರೆಗೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 11,503 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹೆಚ್ಚುವರಿಯಾಗಿ, 20,000 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 2,343 ಮೊಬೈಲ್ ಟವರ್‌ ಗಳನ್ನು ಸ್ಥಾಪಿಸಲಾಯಿತು ಮತ್ತು ಎರಡನೇ ಹಂತದಲ್ಲಿ 2,545 ಟವರ್‌ ಗಳನ್ನು ಸ್ಥಾಪಿಸಲಾಯಿತು. 4,000 ಮೊಬೈಲ್ ಟವರ್‌ ಗಳನ್ನು ಸ್ಥಾಪಿಸುವ ಕೆಲಸ ಇನ್ನೂ ಮುಂದುವರೆದಿದೆ. ಡಿಸೆಂಬರ್ 1 ರೊಳಗೆ ಇಡೀ ನಕ್ಸಲ್ ಪೀಡಿತ ಪ್ರದೇಶವು ಮೊಬೈಲ್ ಸಂಪರ್ಕದೊಂದಿಗೆ ಸಜ್ಜುಗೊಳ್ಳಲಿದೆ ಎಂದು ಶ್ರೀ ಶಾ ಹೇಳಿದರು.

ಕಳೆದ ಐದು ವರ್ಷಗಳಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 1,007 ಬ್ಯಾಂಕ್ ಶಾಖೆಗಳನ್ನು ತೆರೆಯಲಾಗಿದೆ ಮತ್ತು 937 ಎಟಿಎಂಗಳನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, ಬ್ಯಾಂಕಿಂಗ್ ಸೇವೆಗಳನ್ನು ಹೊಂದಿರುವ 5,731 ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಯೋಜನೆ ಎಲ್ಲಾ 48 ಜಿಲ್ಲೆಗಳನ್ನು ತಲುಪಿದೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ ಐ ಎ) ಯ ಪ್ರಬಲವಾದ ವ್ಯವಸ್ಥೆಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. 1,143 ಬುಡಕಟ್ಟು ಯುವಕರನ್ನು ಭದ್ರತಾ ಪಡೆಗಳಿಗೆ ನೇಮಿಸಿಕೊಳ್ಳಲಾಯಿತು. ಗಾಯಗೊಂಡ ಸೈನಿಕರನ್ನು ರಕ್ಷಣೆ ಮತ್ತು ಪುನರ್ವಸತಿಗಾಗಿ ಆಸ್ಪತ್ರೆಗಳಿಗೆ ತ್ವರಿತವಾಗಿ ಸ್ಥಳಾಂತರಿಸಲು ಸಹಾಯ ಮಾಡಲು ಆರು ಹೆಲಿಪ್ಯಾಡ್‌ ಗಳನ್ನು ನಿರ್ಮಿಸಲಾಯಿತು. ಪರಿಣಾಮವಾಗಿ, ನಕ್ಸಲಿಸಂ ಕ್ರಮೇಣ ಕುಗ್ಗುತ್ತಿದೆ ಎಂದು ಅವರು ಹೇಳಿದರು.

ಹತ್ಯೆಗೀಡಾದ ನಕ್ಸಲೀಯರಲ್ಲಿ ಅನೇಕ ಪ್ರಮುಖ ನಕ್ಸಲೀಯ ನಾಯಕರು ಸೇರಿದ್ದಾರೆ, ಇದರಿಂದಾಗಿ ಅವರ ಸಂಪೂರ್ಣ ಚಳುವಳಿ ಸಾಕಷ್ಟು ದುರ್ಬಲವಾಗಿದೆ ಎಂದು ಗೃಹ ಸಚಿವರು ಹೇಳಿದರು. ಕೋಟ್ಯಂತರ ರೂಪಾಯಿ ಬಹುಮಾನ ಹೊಂದಿದ್ದ ಹಲವು ನಕ್ಸಲೀಯರು ಶರಣಾಗಿದ್ದಾರೆ. ಕೊಲ್ಲಲ್ಪಟ್ಟ ನಾಯಕರ ಪಟ್ಟಿಯನ್ನು ಗೃಹ ಸಚಿವರು ನೀಡಿದರು, ಇದರಲ್ಲಿ ವಲಯ ಸಮಿತಿಯ ಒಬ್ಬ ಸದಸ್ಯರು, ಉಪ ವಲಯ ಸಮಿತಿಯ ಐದು ಸದಸ್ಯರು, ರಾಜ್ಯ ಮಟ್ಟದ ಸಮಿತಿಯ ಇಬ್ಬರು ಸದಸ್ಯರು, ವಿಭಾಗೀಯ ಸಮಿತಿಯ 31 ಸದಸ್ಯರು ಮತ್ತು ಪ್ರದೇಶ ಸಮಿತಿಯ 59 ಸದಸ್ಯರು ಸೇರಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರವು ನಮ್ಯತೆಯ ಶರಣಾಗತಿ ನೀತಿಯನ್ನು ಜಾರಿಗೆ ತಂದಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಘೋಷಣೆಗಳನ್ನು ಅಪಹಾಸ್ಯ ಮಾಡುವವರಿಗೆ, ಮೋದಿ ಸರ್ಕಾರದ ಅಡಿಯಲ್ಲಿ ದೇಶವು ನಕ್ಸಲ್ ಸಮಸ್ಯೆಯಿಂದ ಮುಕ್ತವಾಗುತ್ತದೆ ಎಂದು ವಿಶ್ವಾಸದಿಂದ ಭರವಸೆ ನೀಡಲು ಬಯಸುತ್ತೇನೆ ಎಂದು ಶ್ರೀ ಶಾ ಹೇಳಿದರು.

ಈಶಾನ್ಯದಲ್ಲೂ ಸಮಸ್ಯೆಗೆ ಅಂತ್ಯ ಹಾಡಲು ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಪ್ರದೇಶದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಶೇ.70 ರಷ್ಟು ಕಡಿತ, ಭದ್ರತಾ ಸಿಬ್ಬಂದಿಯಲ್ಲಿ ಸಾವುನೋವುಗಳಲ್ಲಿ ಶೇ.72 ರಷ್ಟು ಇಳಿಕೆ ಮತ್ತು ನಾಗರಿಕ ಸಾವುನೋವುಗಳಲ್ಲಿ ಶೇ.85 ರಷ್ಟು ಇಳಿಕೆ ಕಂಡುಬಂದಿದೆ ಎಂದು ಅವರು ಹೇಳಿದರು. ಅಧಿಕಾರಕ್ಕೆ ಬಂದ ನಂತರ, ತಮ್ಮ ಸರ್ಕಾರವು ಎಲ್ಲಾ ಸಶಸ್ತ್ರ ಗುಂಪುಗಳೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿತು. 2019  ರಿಂದ, 12 ಮಹತ್ವದ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು. 2020 ರಲ್ಲಿ ಎನ್‌ ಎಲ್‌ ಎಫ್‌ ಟಿ (ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ) ಜೊತೆಗಿನ ಒಪ್ಪಂದ, 2021 ರಲ್ಲಿ ಬ್ರೂ-ರಿಯಾಂಗ್ ಸಮುದಾಯದೊಂದಿಗಿನ ಒಪ್ಪಂದ, 2022 ರಲ್ಲಿ ಕಾರ್ಬಿ ಒಪ್ಪಂದ ಮತ್ತು ಬುಡಕಟ್ಟು ಸಂಘಟನೆಗಳೊಂದಿಗಿನ ಒಪ್ಪಂದಗಳು ಮತ್ತು ಅಸ್ಸಾಂ ಮತ್ತು ಮೇಘಾಲಯ ನಡುವಿನ ಅಂತರ-ರಾಜ್ಯ ಗಡಿ ಒಪ್ಪಂದ, ಡಿ ಎನ್‌ ಎಲ್‌ ಎ, ಯು ಎನ್‌ ಎಲ್‌ ಎಫ್‌ ಮತ್ತು ಯು ಎಲ್‌ ಎಫ್‌ ಎ ಜೊತೆಗಿನ ಒಪ್ಪಂದಗಳು, 2023 ರಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತರ-ರಾಜ್ಯ ಗಡಿ ಒಪ್ಪಂದ, ತಿಪ್ರಾ ಮತ್ತು ಎನ್‌ ಎಲ್‌ ಎಫ್‌ ಟಿ ಜೊತೆಗಿನ ಒಪ್ಪಂದಗಳು ಹಾಗೂ 2024 ರಲ್ಲಿ ಎ ಟಿ ಟಿ ಎಫ್‌ ಎ ಒಪ್ಪಂದಗಳನ್ನು ಅವರು ಪಟ್ಟಿ ಮಾಡಿದರು. ಈ ಒಪ್ಪಂದಗಳ ಸರಣಿಯು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ಸರ್ಕಾರದ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಒಟ್ಟು 10,900 ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಬೋಡೋಲ್ಯಾಂಡ್‌ ನಲ್ಲಿ, ಸಾವಿರಾರು ಯುವಕರು ಅಭಿವೃದ್ಧಿಯ ಹಾದಿಯನ್ನು ಅಳವಡಿಸಿಕೊಂಡಿದ್ದಾರೆ, ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮತ್ತು ತಮ್ಮದೇ ಆದ ಧರ್ಮವನ್ನು ಪಾಲಿಸುತ್ತಿದ್ದಾರೆ. ಬೋಡೋಲ್ಯಾಂಡ್ ಒಪ್ಪಂದಕ್ಕೆ ಸಹಿ ಹಾಕಿದಾಗ, ಅನೇಕರು ಅದನ್ನು ನಿಷ್ಪರಿಣಾಮಕಾರಿ ಎಂದು ತಳ್ಳಿಹಾಕಿದ್ದರು, ಆದರೆ ಇಂದು, ಸನ್ನಿವೇಶವು ಗಮನಾರ್ಹವಾಗಿ ಬದಲಾಗಿದೆ ಎಂದು ಅವರು ನೆನಪಿಸಿದರು. ಒಂದು ಕಾಲದಲ್ಲಿ ಕೈಗಾರಿಕಾ ಬೆಳವಣಿಗೆ ದೂರದ ಕನಸಿನಂತೆ ಕಾಣುತ್ತಿದ್ದ ಅಸ್ಸಾಂನಲ್ಲಿ ಹೂಡಿಕೆಗಾಗಿ 5 ಲಕ್ಷ ಕೋಟಿ ರೂ.ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ಎತ್ತಿ ತೋರಿಸಿದರು. ಅಲ್ಲದೇ, ಶಾಂತಿ ಸ್ಥಾಪನೆಯೊಂದಿಗೆ, ಅಸ್ಸಾಂ ಈಗ ಗಮನಾರ್ಹ ಪ್ರಗತಿಯನ್ನು ಕಾಣುತ್ತಿದೆ. ಇದಲ್ಲದೆ, ಈಶಾನ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ (ಅಫ್ಸಾ) ಅಧಿಕಾರ ವ್ಯಾಪ್ತಿಯನ್ನು ಶೇಕಡಾ 70 ರಷ್ಟು ಕಡಿಮೆ ಮಾಡಲಾಗಿದೆ. ಮಿಜೋರಾಂನಿಂದ ಪಲಾಯನ ಮಾಡಿ ತ್ರಿಪುರಾದಲ್ಲಿ ಆಶ್ರಯ ಪಡೆದಿದ್ದ ಬ್ರೂ-ರಿಯಾಂಗ್ ಸಮುದಾಯಕ್ಕೆ ಶಾಶ್ವತ ಪರಿಹಾರವನ್ನು ಒದಗಿಸುವ ಬ್ರೂ ಪುನರ್ವಸತಿ ಒಪ್ಪಂದದ ಬಗ್ಗೆಯೂ ಶ್ರೀ ಶಾ ಮಾತನಾಡಿದರು. ಈ ಒಪ್ಪಂದದಡಿಯಲ್ಲಿ, ಎಲ್ಲಾ 37,000 ಬ್ರೂ-ರಿಯಾಂಗ್ ಕುಟುಂಬಗಳಿಗೆ 150 ಗಜಗಳ ಮನೆಗಳನ್ನು, ಸಮುದಾಯ ಕಟ್ಟಡಗಳು, ಶಾಲೆಗಳು ಮತ್ತು ಔಷಧ ಅಂಗಡಿಗಳಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದಲ್ಲದೆ, ಪ್ರತಿ ಕುಟುಂಬದಿಂದ ಇಬ್ಬರು ಯುವಕರಿಗೆ ಕೌಶಲ್ಯ ಅಭಿವೃದ್ಧಿಯಲ್ಲಿ ತರಬೇತಿ ನೀಡಲಾಗಿದ್ದು, ಇದರಿಂದಾಗಿ ಅವರು ಸ್ವಯಂ ಉದ್ಯೋಗದತ್ತ ಸಾಗಲು ಸಾಧ್ಯವಾಗಿದೆ ಎಂದುಇ ಅವರು ಹೇಳಿದರು. ತ್ರಿಪುರಾಗೆ ತಮ್ಮ ಇತ್ತೀಚೆಗೆ ನೀಡಿದ ಭೇಟಿಯನ್ನು ನೆನಪಿಸಿಕೊಂಡ ಕೇಂದ್ರ ಗೃಹ ಸಚಿವರು, ಐದು ವರ್ಷಗಳ ಹಿಂದೆ ತಾವು ಅದೇ ಪ್ರದೇಶಕ್ಕೆ ಭೇಟಿ ನೀಡಿದ್ದಾಗಿ ಮತ್ತು ಕಳೆದ ಎಂಟು ತಿಂಗಳುಗಳಲ್ಲಿ ಆಗಿರುವ ಪರಿವರ್ತನೆ ಗಮನಾರ್ಹವಾಗಿತ್ತು ಎಂದು ಹೇಳಿದರು. ಬ್ರೂ-ರಿಯಾಂಗ್ ಸಮುದಾಯವು ಈಗ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿದೆ, ತಮ್ಮ ಜೀವನದಲ್ಲಿನ ಸಕಾರಾತ್ಮಕ ಬದಲಾವಣೆಗಳಿಗೆ ಮೆಚ್ಚುಗೆಯ ಸಂಕೇತವಾಗಿ ಪ್ರಧಾನಿಯವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿಯವರ ಸರ್ಕಾರವು 6,935 ಕುಟುಂಬಗಳು ಮತ್ತು 37,584 ಜನರನ್ನು ಸಂಕಷ್ಟದ ಜೀವನದಿಂದ ರಕ್ಷಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಭಿವೃದ್ಧಿ ಬಜೆಟ್ ಅನ್ನು ಶೇ. 153 ರಷ್ಟು ಹೆಚ್ಚಿಸಲಾಗಿದೆ ಮತ್ತು ತೈಲ ಮಿಷನ್, ಬಿದಿರು ಮಿಷನ್, ಸಾವಯವ ಕೃಷಿ ಜೊತೆಗೆ ಮೊಟ್ಟೆ, ಮೀನು ಮತ್ತು ಹಾಲು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಎಂಟು ಈಶಾನ್ಯ ರಾಜ್ಯಗಳನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಮಗ್ರ ಯೋಜನೆಯನ್ನು ಜಾರಿಗೊಳಿಸಲಾಗಿದೆ, ಇದರಿಂದಾಗಿ ಅವರ ಏಳಿಗೆಗೆ ದಾರಿ ಮಾಡಿಕೊಡಲಾಗಿದೆ. 17 ವಿದ್ಯುತ್ ಯೋಜನೆಗಳು, 40 ನೀರು ಸರಬರಾಜು ಯೋಜನೆಗಳು, 44 ಶಿಕ್ಷಣ ಯೋಜನೆಗಳು, 43 ಆರೋಗ್ಯ ಯೋಜನೆಗಳು, 7 ಕ್ರೀಡಾ ಯೋಜನೆಗಳು ಮತ್ತು 4 ಹೊಸ ಪ್ರವಾಸೋದ್ಯಮ ಯೋಜನೆಗಳು ಭಾರತ ಸರ್ಕಾರದ 100 ಪ್ರತಿಶತ ಧನಸಹಾಯದೊಂದಿಗೆ ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.

ರೈಲ್ವೆ ವಲಯದಲ್ಲಿ 81,900 ಕೋಟಿ ರೂಪಾಯಿ, ಹೆದ್ದಾರಿಗಳಲ್ಲಿ 41,500 ಕೋಟಿ ರೂಪಾಯಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ 47,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಸರ್ಕಾರವು ಈಶಾನ್ಯದಲ್ಲಿ ಸಂಪರ್ಕವನ್ನು ಗಮನಾರ್ಹವಾಗಿ ಬಲಪಡಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, 64 ಹೊಸ ವಿಮಾನ ಮಾರ್ಗಗಳು ಮತ್ತು ಹೆಲಿಕಾಪ್ಟರ್ ಮಾರ್ಗಗಳನ್ನು ಪ್ರಾರಂಭಿಸಲಾಗಿದೆ. ಇದು ದೆಹಲಿ ಮತ್ತು ಈಶಾನ್ಯದ ನಡುವಿನ ಭೌತಿಕ ಅಂತರವನ್ನು ಕಡಿಮೆ ಮಾಡಿರುವುದು ಮಾತ್ರವಲ್ಲ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳು ಈ ಎರಡೂ ಪ್ರದೇಶಗಳ ನಡುವಿನ ಭಾವನಾತ್ಮಕ ಅಂತರವನ್ನು ಕಡಿಮೆ ಮಾಡಿವೆ ಎಂದು ಅವರು ಒತ್ತಿ ಹೇಳಿದರು. ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಅಡಿಯಲ್ಲಿ ಭಾರತ ಸರ್ಕಾರವು ಅರುಣಾಚಲ ಪ್ರದೇಶವೊಂದರಲ್ಲೇ 4,800 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ ಎಂದು ಶ್ರೀ ಶಾ ತಿಳಿಸಿದರು. ದೂರದ ಪರ್ವತ ಶಿಖರಗಳ ಮೇಲೆ ನೆಲೆಗೊಂಡಿರುವ ಹಳ್ಳಿಗಳು ತಮ್ಮನ್ನು ಭಾರತದ ಕೊನೆಯ ಹಳ್ಳಿಗಳೆಂದು ಪರಿಗಣಿಸಿದ್ದವು, ಆದರೆ ಸರಳ ಮತ್ತು ಆಳವಾದ ದೃಷ್ಟಿಯಲ್ಲಿ, ಪ್ರಧಾನಿ ಮೋದಿ ಅವರು ಈ "ಕೊನೆಯ ಹಳ್ಳಿಗಳನ್ನು" ಭಾರತದ "ಮೊದಲ ಹಳ್ಳಿಗಳು" ಆಗಿ ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು.

ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಬಲಪಡಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಲವಾದ ಕಾನೂನು ಅಡಿಪಾಯವನ್ನು ಒದಗಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆಗಸ್ಟ್ 2, 2019 ರಂದು, ಎನ್‌ ಐ ಎ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಹೊಸ ಅಪರಾಧಗಳನ್ನು ಸೇರಿಸಲು ಅದರ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಭಾರತದ ಹೊರಗಿನ ಪ್ರಕರಣಗಳನ್ನು ತನಿಖೆ ಮಾಡುವ ಅಧಿಕಾರವನ್ನು ಸಂಸ್ಥೆಗೆ ನೀಡಲಾಗಿದೆ. ಹೆಚ್ಚುವರಿಯಾಗಿ, ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ) ಯಲ್ಲಿನ ಮಾರ್ಪಾಡುಗಳು ಸರ್ಕಾರವು ಭಯೋತ್ಪಾದಕರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಹೆಸರಿಸಲು ಅನುವು ಮಾಡಿಕೊಟ್ಟಿವೆ. ಮೂಲಭೂತವಾದವನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳಿಗೆ ಕಾನೂನು ಬೆಂಬಲವನ್ನು ಸಹ ಒದಗಿಸಲಾಗಿದೆ ಎಂದು ಅವರು ಹೇಳಿದರು. ಮಲ್ಟಿ-ಏಜೆನ್ಸಿ ಸೆಂಟರ್ (ಎಂಎಸಿ) ಅನ್ನು ನವೀಕರಿಸಲಾಗಿದ್ದು, ಸೈಬರ್ ಭದ್ರತೆ, ಮಾದಕ ವಸ್ತು-ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಉದಯೋನ್ಮುಖ ಉಗ್ರಗಾಮಿ ತಾಣಗಳನ್ನು ವರದಿ ಮಾಡುವ ಚೌಕಟ್ಟಿನಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ, ರಾಷ್ಟ್ರೀಯ ಮೆಮೊರಿ ಬ್ಯಾಂಕ್ ಅನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

57 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ ಮತ್ತು 23 ಸಂಘಟನೆಗಳನ್ನು ಕಾನೂನುಬಾಹಿರ ಸಂಘಟನೆಗಳೆಂದು ಹೆಸರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. 2019 ಮತ್ತು 2024 ರ ನಡುವೆ, ಹುರಿಯತ್‌ ಗೆ ಸಂಬಂಧಿಸಿದ 14 ಗಂಭೀರ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಒಂದು ಕಾಲದಲ್ಲಿ ಪಾಕಿಸ್ತಾನದೊಂದಿಗಿನ ಮಾತುಕತೆಗೆ ಮಧ್ಯವರ್ತಿಯಾಗಿ ಬಳಸಲಾಗುತ್ತಿದ್ದ ಹುರಿಯತ್ ಅನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಅವರು ಹೇಳಿದರು. ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ ಎಫ್‌ ಐ) ಅನ್ನು ನಿಷೇಧಿಸಿದೆ ಮತ್ತು 24 ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಿದೆ, ಪ್ರತಿಯೊಬ್ಬ ಪಿ ಎಫ್‌ ಐ ಸದಸ್ಯರನ್ನು ಜೈಲಿಗೆ ಹಾಕಲಾಗಿದೆ ಎಂದು ಅವರು ಹೇಳಿದರು. ಕೆಲವರು ಪಂಜಾಬಿನಲ್ಲಿ ಭಿಂದ್ರನ್‌ವಾಲಾ ಆಗಲು ಬಯಸಿದ್ದರು, ನಾವು ಅವರನ್ನು ಅಸ್ಸಾಂನಲ್ಲಿ ಜೈಲಿಗೆ ಹಾಕುವ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

ಎಡಪಂಥೀಯ ಉಗ್ರವಾದ, ಕಾಶ್ಮೀರದಲ್ಲಿ ಭಯೋತ್ಪಾದನೆ, ನಕಲಿ ಭಾರತೀಯ ಕರೆನ್ಸಿ ನೋಟುಗಳು, ಮಾದಕ ವಸ್ತು-ಭಯೋತ್ಪಾದನಾ ಸಂಪರ್ಕಗಳು, ಖಲಿಸ್ತಾನಿ ಉಗ್ರವಾದ, ಮೂಲಭೂತವಾದ ಪ್ರಯತ್ನಗಳು, ಭಯೋತ್ಪಾದನೆಗೆ ಹಣಕಾಸು ಮತ್ತು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ 25 ವಿಭಿನ್ನ ಬೆದರಿಕೆಗಳ ವಿರುದ್ಧ ಎನ್‌ ಐ ಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಅಡಿಯಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಬಳಸಲಾಗುತ್ತಿರುವ ಮಾನವ ಕಳ್ಳಸಾಗಣೆ, ಸೈಬರ್ ಭಯೋತ್ಪಾದನೆ, ಸ್ಫೋಟಕ ಕಾಯ್ದೆಯ ದುರುಪಯೋಗ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಲ್ಲಿನ ತಿದ್ದುಪಡಿಗಳಂತಹ ಬೆದರಿಕೆಗಳನ್ನು ಪರಿಹರಿಸಲಾಗಿದೆ ಎಂದು ಅವರು ಗಮನಸೆಳೆದರು. ಈ ಎಲ್ಲಾ 25 ಆಯಾಮಗಳನ್ನು ಎನ್‌ ಐ ಎ ವ್ಯಾಪ್ತಿಗೆ ತರುವ ಮೂಲಕ, ಸರ್ಕಾರವು ಭದ್ರತಾ ಬೆದರಿಕೆಗಳನ್ನು ನಿಭಾಯಿಸಲು ಸಮಗ್ರ ಕಾನೂನು ಚೌಕಟ್ಟನ್ನು ಪರಿಣಾಮಕಾರಿಯಾಗಿ ರಚಿಸಿದೆ ಎಂದು ಅವರು ಹೇಳಿದರು.

ಎನ್‌ ಐ ಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಯಲ್ಲಿ 1,244 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ, 16 ಹೊಸ ಶಾಖಾ ಕಚೇರಿಗಳನ್ನು ತೆರೆಯಲಾಗಿದೆ ಮತ್ತು ಎರಡು ಹೊಸ ವಲಯ ಕಚೇರಿಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 652 ಪ್ರಕರಣಗಳಲ್ಲಿ, ಒಂದೇ ಒಂದು ಪ್ರಕರಣವನ್ನೂ ಸುಪ್ರೀಂ ಕೋರ್ಟ್ ನ್ಯಾಯಸಮ್ಮತವಲ್ಲ ಎಂದು ಘೋಷಿಸಿಲ್ಲ ಎಂದು ಅವರು ಒತ್ತಿ ಹೇಳಿದರು. ಈ ಪೈಕಿ 516 ಪ್ರಕರಣಗಳಲ್ಲಿ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ, 157 ಪ್ರಕರಣಗಳನ್ನು ಪರಿಹರಿಸಲಾಗಿದೆ ಮತ್ತು 150 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ಇದು ಶೇ.95 ರಷ್ಟು ಶಿಕ್ಷೆಯ ಪ್ರಮಾಣಕ್ಕೆ ಕಾರಣವಾಗಿದೆ, ಇದು ವಿಶ್ವಾದ್ಯಂತ ಭಯೋತ್ಪಾದನಾ ವಿರೋಧಿ ಸಂಸ್ಥೆಗಳಲ್ಲಿಯೇ ಅತ್ಯಧಿಕವಾಗಿದೆ ಎಂದು ಅವರು ಹೇಳಿದರು. ರಾಸಾಯನಿಕ, ಪರಮಾಣು ಮತ್ತು ಜೈವಿಕ ಭಯೋತ್ಪಾದನೆಗೆ ಸಂಬಂಧಿಸಿದ ಬೆದರಿಕೆಗಳಿಗೆ ಸಿದ್ಧತೆ ನಡೆಸಲು ಡಿ ಆರ್‌ ಡಿ ಒ ದೊಂದಿಗೆ ಎನ್‌ ಐ ಎ ಸಹಯೋಗ ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, ಎನ್‌ ಐ ಎ ಅಂತರರಾಷ್ಟ್ರೀಯ ಮಾನ್ಯತೆಯನ್ನು ಒಪ್ಪಂದಗಳ ಮೂಲಕ ವಿಸ್ತರಿಸಲಾಗಿದೆ ಮತ್ತು ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಿಗೆ ಮೀಸಲಾದ ಹೊಸ ವ್ಯವಸ್ಥೆಯನ್ನು ರಚಿಸಲು ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಸಿ ಎಫ್‌ ಎಸ್‌ ಎಲ್‌) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.

ಈ ಕ್ರಮಗಳ ಜೊತೆಗೆ, ಎಂಎಸಿ (ಮಲ್ಟಿ-ಏಜೆನ್ಸಿ ಸೆಂಟರ್) ಅನ್ನು ಸಹ ಬಲಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಎಂಎಸಿ ಒಳಗೆ ಮೀಸಲಾದ ಭಯೋತ್ಪಾದನಾ ನಿಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದು 72,000 ವರದಿಗಳನ್ನು ರಚಿಸಿದೆ. ಈ ಮಾಹಿತಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಕಳೆದ 10 ವರ್ಷಗಳಲ್ಲಿ ಸುರಕ್ಷಿತ ಸಂವಹನ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ, ಗುಪ್ತಚರ ಮಾಹಿತಿಯು ಜಿಲ್ಲೆಗಳು ಮತ್ತು ಪೊಲೀಸ್ ಠಾಣೆಗಳನ್ನು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸಲಾಗಿದೆ. NATGRID (ರಾಷ್ಟ್ರೀಯ ಗುಪ್ತಚರ ಗ್ರಿಡ್) ಮೂಲಕ, 35 ಕ್ಕೂ ಹೆಚ್ಚು ವಿಭಿನ್ನ ದತ್ತಾಂಶ ಮೂಲಗಳನ್ನು ಒಂದೇ ಸ್ಥಳದಲ್ಲಿ ಸಂಯೋಜಿಸಲಾಗಿದೆ, ಇದು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಹೆಚ್ಚು ಬಲಿಷ್ಠಗೊಳಿಸುತ್ತದೆ ಮತ್ತು ಬಹು ಶಂಕಿತರನ್ನು ಗುರುತಿಸಲು ಮತ್ತು ಸೆರೆಹಿಡಿಯಲು ಸಹಾಯ ಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಎತ್ತಿ ಹೇಳಿದರು.

ಮಾದಕ ವಸ್ತುಗಳು ಗಂಭೀರ ಸಮಸ್ಯೆಯಾಗಿದೆ, ಆದರೆ ಸರ್ಕಾರವು ಈ ಹೋರಾಟವನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಮಾದಕ ವಸ್ತು ಸೇವಿಸುವ ವ್ಯಕ್ತಿಯು ಈ ಸಮಸ್ಯೆಯ ಬಲಿಪಶು ಮತ್ತು ಮಾದಕ ವಸ್ತು ವ್ಯಾಪಾರ ಮಾಡುವ ವ್ಯಕ್ತಿಯು ಅಪರಾಧಿ ಎಂಬುದು ಸರ್ಕಾರದ ಸ್ಪಷ್ಟ ನೀತಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಮಾದಕ ವಸ್ತುಗಳ ಪಿಡುಗನ್ನು ನಿಭಾಯಿಸಲು ಸರ್ಕಾರ "ಇಡೀ ಸರ್ಕಾರ, ಇಡೀ ರಾಷ್ಟ್ರ" ಎಂಬ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಮಸ್ಯೆಯನ್ನು ನಿಭಾಯಿಸಲು ಗೃಹ, ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸಚಿವಾಲಯಗಳು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ತಂತ್ರಗಳನ್ನು ಸಂಯೋಜಿಸುವ ಹೊಸ ತನಿಖಾ ವಿಧಾನವನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. ಒಂದೇ ಒಂದು ಪ್ಯಾಕೆಟ್ ಡ್ರಗ್ಸ್ ಕಂಡುಬಂದರೂ, ಅಧಿಕಾರಿಗಳು ಅದನ್ನು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸುವ ಬದಲು ಅದರ ಸಂಪೂರ್ಣ ಪೂರೈಕೆ ಸರಪಳಿಯನ್ನು ಪತ್ತೆಹಚ್ಚುತ್ತಾರೆ. ಅಂತರರಾಷ್ಟ್ರೀಯ ಗಡಿಗಳಲ್ಲಿ ಡ್ರಗ್ಸ್ ವಶಪಡಿಸಿಕೊಂಡಾಗ, ಅದರ ಉದ್ದೇಶಿತ ಅಂತಿಮ ಗಮ್ಯಸ್ಥಾನವನ್ನು ಪತ್ತೆ ಮಾಡಲು ಸಂಪೂರ್ಣ ತನಿಖೆ ನಡೆಸಲಾಗುತ್ತದೆ, ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಮಾದಕ ವಸ್ತುಗಳು ನಾಲ್ಕು ಪ್ರಮುಖ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ - ವೈಯಕ್ತಿಕ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ, ಆರ್ಥಿಕತೆಯ ಮೇಲೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಎಂದು ಶ್ರೀ ಅಮಿತ್ ಶಾ ಮತ್ತಷ್ಟು ಒತ್ತಿ ಹೇಳಿದರು. ಮಾದಕ ವಸ್ತುಗಳ ಹಣವನ್ನು ನಕ್ಸಲಿಸಂ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಕ್ರಿಪ್ಟೋಕರೆನ್ಸಿ ಮೂಲಕ ಕಾನೂನುಬಾಹಿರ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ ಎಂದು ಅವರು ವಿವರಿಸಿದರು. ಮಾದಕ ವಸ್ತು ವ್ಯಾಪಾರಕ್ಕೆ ಸಂಬಂಧಿಸಿದ ಕ್ರಿಪ್ಟೋ ವಹಿವಾಟುಗಳಲ್ಲಿನ ಹೆಚ್ಚಳವು ಸರ್ಕಾರವು ಈ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ ಎಂದು ಅವರು ಹೇಳಿದರು.

2019 ರಲ್ಲಿ ಗೃಹ ಸಚಿವಾಲಯವು ನಾಲ್ಕು ಹಂತದ NCORD ವ್ಯವಸ್ಥೆಯನ್ನು ಸ್ಥಾಪಿಸಿತು ಮತ್ತು ಕಳೆದ ಐದು ವರ್ಷಗಳಲ್ಲಿ ಒಟ್ಟು 7 ಉನ್ನತ ಮಟ್ಟದ ಸಭೆಗಳು, 5 ಕಾರ್ಯಕಾರಿ ಮಟ್ಟದ ಸಭೆಗಳು, 191 ರಾಜ್ಯ ಮಟ್ಟದ ಸಭೆಗಳು ಮತ್ತು 6,150 ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾದಕ ವಸ್ತುಗಳನ್ನು ನಿಗ್ರಹಿಸುವ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ, ಭಾರತದ ನೆರೆಹೊರೆಯ ಎರಡು ಪ್ರದೇಶಗಳು ಮಾದಕ ವಸ್ತು ವ್ಯಾಪಾರದೊಂದಿಗಿನ ಸಂಬಂಧದಿಂದಾಗಿ ಅವುಗಳನ್ನು ಹಿಂದೆ ಗೋಲ್ಡನ್ ಟ್ರಯಾಂಗಲ್ ಮತ್ತು ಗೋಲ್ಡನ್ ಕ್ರೆಸೆಂಟ್ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದರು. ಆದರೆ, ಭಾರತದ ಪ್ರಯತ್ನಗಳಿಂದಾಗಿ, ಈ ಪ್ರದೇಶಗಳನ್ನು ಈಗ ಜಾಗತಿಕವಾಗಿ ಡೆತ್ ಟ್ರಯಾಂಗಲ್ ಮತ್ತು ಡೆತ್ ಕ್ರೆಸೆಂಟ್ ಎಂದು ಗುರುತಿಸಲಾಗುತ್ತಿದೆ. ಈ ಬದಲಾವಣೆಯು ಮನಸ್ಥಿತಿಯಲ್ಲಿನ ಬದಲಾವಣೆಯ ಪರಿಣಾಮವಾಗಿದೆ ಎಂದು ಗೃಹ ಸಚಿವರು ವಿವರಿಸಿದರು. ಮಾದಕ ವಸ್ತುಗಳು ಕೇವಲ ವ್ಯವಹಾರವಲ್ಲ; ಅವು ವಿಶ್ವದ ಯುವಜನರಿಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತವೆ ಮತ್ತು ಇಡೀ ಪೀಳಿಗೆಯನ್ನು ನಾಶಮಾಡುವ ಸಾಧನವಾಗಿವೆ ಎಂದು ಅವರು ಒತ್ತಿ ಹೇಳಿದರು.

2004 ಮತ್ತು 2014 ರ ನಡುವೆ 25 ಲಕ್ಷ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಶ್ರೀ ಅಮಿತ್ ಶಾ ಅವರು ಎತ್ತಿ ತೋರಿಸಿದರು, ಆದರೆ 2014 ರಿಂದ 2024 ರವರೆಗೆ ಈ ಪ್ರಮಾಣವು ಒಂದು ಕೋಟಿ ಕಿಲೋಗ್ರಾಂಗಳಿಗಿಂತ ಹೆಚ್ಚಾಗಿದೆ. ಮೌಲ್ಯದ ದೃಷ್ಟಿಯಿಂದ, 2004 ಮತ್ತು 2014 ರ ನಡುವೆ 40,000 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಆದರೆ 2014 ಮತ್ತು 2024 ರ ನಡುವೆ 1 ಲಕ್ಷ 50 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ 14 ಸಾವಿರ ಕೋಟಿ ರೂ. ಮೌಲ್ಯದ 23 ಸಾವಿರ ಕಿಲೋಗ್ರಾಂಗಳಷ್ಟು ಸಿಂಥೆಟಿಕ್‌ ಡ್ರಗ್ಸ್‌ ನಾಶಪಡಿಸಲಾಗಿದೆ ಎಂದು ಅವರು ಹೇಳಿದರು. 2004 ಮತ್ತು 2014 ರ ನಡುವೆ ಒಟ್ಟು 3 ಲಕ್ಷ 36 ಸಾವಿರ ಕಿಲೋಗ್ರಾಂಗಳಷ್ಟು ಮಾದಕ ವಸ್ತುಗಳನ್ನು ಸುಟ್ಟುಹಾಕಲಾಗಿತ್ತು. ಆದರೆ 2014 ರಿಂದ 2024 ರವರೆಗೆ ಈ ಸಂಖ್ಯೆ 31 ಲಕ್ಷ ಕಿಲೋಗ್ರಾಂಗಳಿಗೆ ಏರಿದೆ ಎಂದು ಶ್ರೀ ಶಾ ಗಮನಸೆಳೆದರು. ಹೆಚ್ಚುವರಿಯಾಗಿ, ದೇಶಾದ್ಯಂತ 72 ಸಿಂಥೆಟಿಕ್‌ ಡ್ರಗ್ಸ್‌ ಉತ್ಪಾದನಾ ಪ್ರಯೋಗಾಲಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಾಶಪಡಿಸಲಾಗಿದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರ 1 ಲಕ್ಷ 73 ಸಾವಿರ ಮಾದಕ ವಸ್ತು ಪ್ರಕರಣಗಳನ್ನು ದಾಖಲಿಸಿದ್ದರೆ, ಮೋದಿ ಸರ್ಕಾರ ಒಟ್ಟು 6 ಲಕ್ಷ 56 ಸಾವಿರ ಪ್ರಕರಣಗಳನ್ನು ದಾಖಲಿಸಿದೆ ಎಂದು ಅವರು ಹೇಳಿದರು.

ಒಂದು ಗ್ರಾಂ ಮಾದಕ ವಸ್ತುವನ್ನು ಎಲ್ಲಿಂದಲೂ ಭಾರತಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ನಮ್ಮ ದೇಶದ ಮೂಲಕ ಮಾದಕ ವಸ್ತುಗಳನ್ನು ಸಾಗಿಸಲು ಬಿಡುವುದಿಲ್ಲ ಎಂಬುದು ಸರ್ಕಾರದ ಸ್ಪಷ್ಟ ಗುರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾದಕ ವಸ್ತು ಸಮಸ್ಯೆಯನ್ನು ಕೇಂದ್ರ ಸರ್ಕಾರ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ ಮತ್ತು ಪ್ರತಿಯೊಬ್ಬ ನಾಗರಿಕನು ಈ ಹೋರಾಟದಲ್ಲಿ ಪಾತ್ರ ವಹಿಸಬೇಕು ಎಂದು ಅವರು ಒತ್ತಿ ಹೇಳಿದರು. ಮಾದಕ ವಸ್ತು ವ್ಯಾಪಾರದಿಂದ ಲಾಭ ಪಡೆಯುವ ಮತ್ತು ಆ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಬಳಸುವ ಯಾರನ್ನೂ ಬಿಡುವುದಿಲ್ಲ ಎಂದು ಶ್ರೀ ಶಾ ಸ್ಪಷ್ಟಪಡಿಸಿದರು. ಮೋದಿ ಸರ್ಕಾರವು ಸಮಗ್ರ ಡ್ರೋನ್ ನಿಗ್ರಹ ಪರಿಹಾರವನ್ನು ಸಾಧಿಸುವ ಅಂಚಿನಲ್ಲಿದೆ ಮತ್ತು ಮುಂದಿನ 6 ತಿಂಗಳಲ್ಲಿ, ಈ ನಿರ್ಣಾಯಕ ಪ್ರದೇಶದಲ್ಲಿ ಭಾರತದ ಸ್ವಾವಲಂಬನೆಯನ್ನು ಸಂಕೇತಿಸುವ ಸಂಪೂರ್ಣವಾಗಿ ದೇಶೀಯ ಡ್ರೋನ್ ನಿಗ್ರಹ ಮಾಡ್ಯೂಲ್ ಅನ್ನು ಅನಾವರಣಗೊಳಿಸಲಾಗುವುದು ಎಂದು ಅವರು ಹೇಳಿದರು.

ದೇಶದಲ್ಲಿರುವ ಪ್ರತಿಯೊಂದು ಭಾಷೆಯೂ ಭಾರತದ ಸಂಸ್ಕೃತಿಯ ರತ್ನವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಮತ್ತು ಭಾರತದ ಭಾಷೆಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಬದಲು, ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದರು.

ನರೇಂದ್ರ ಮೋದಿಯವರ ಸರ್ಕಾರವು ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ ಭಾರತೀಯ ಭಾಷಾ ವಿಭಾಗವನ್ನು ಸ್ಥಾಪಿಸಿದೆ, ಇದು ಎಲ್ಲಾ ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಗೃಹ ಸಚಿವರು ಹೇಳಿದರು. ಹಿಂದಿ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ; ಬದಲಾಗಿ, ಹಿಂದಿ ಎಲ್ಲಾ ಭಾರತೀಯ ಭಾಷೆಗಳಿಗೆ ಸ್ನೇಹಿತ ಎಂದು ಅವರು ಹೇಳಿದರು. ಹಿಂದಿ ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸುತ್ತದೆ ಮತ್ತು ಎಲ್ಲಾ ಭಾರತೀಯ ಭಾಷೆಗಳು ಪ್ರತಿಯಾಗಿ ಹಿಂದಿಯನ್ನು ಬಲಪಡಿಸುತ್ತವೆ. ಕೆಲವರು ತಮ್ಮ ಹಗರಣಗಳು ಮತ್ತು ಭ್ರಷ್ಟಾಚಾರವನ್ನು ಮರೆಮಾಡಲು ಭಾಷೆಯನ್ನು ಮುಖವಾಡವಾಗಿ ಬಳಸುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ತಮಿಳುನಾಡಿನಲ್ಲಿ ಎನ್‌ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದಾಗ, ತಮಿಳು ಭಾಷೆಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬ್ರಿಟಿಷ್ ಸಂಸತ್ತು ತಮ್ಮ ಆಡಳಿತವನ್ನು ಗಟ್ಟಿಗೊಳಿಸಲು ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳು ಇನ್ನೂ ಜಾರಿಯಲ್ಲಿದ್ದವು ಎಂದು ಕೇಂದ್ರ ಗೃಹ ಸಚಿವರು ಗಮನಸೆಳೆದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ ಒಳಗೊಂಡಂತೆ ಪಂಚ ಪ್ರಾಣವನ್ನು ಕೆಂಪು ಕೋಟೆಯಿಂದ ಘೋಷಿಸಿದ್ದನ್ನು ಅವರು ನೆನಪಿಸಿಕೊಂಡರು. ಜುಲೈ 1, 2024 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು - ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 - ದೇಶಾದ್ಯಂತ ಜಾರಿಗೆ ಬರಲಿವೆ ಎಂದು ಶ್ರೀ ಶಾ ಘೋಷಿಸಿದರು. ಮುಂದಿನ ಮೂರು ವರ್ಷಗಳಲ್ಲಿ, ಈ ಕಾನೂನುಗಳು ಎಲ್ಲಾ ರಾಜ್ಯಗಳಾದ್ಯಂತ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ, ಸುಪ್ರೀಂ ಕೋರ್ಟ್‌ ನಲ್ಲಿ ಯಾವುದೇ ಪ್ರಕರಣದಲ್ಲಿ ಮೂರು ವರ್ಷಗಳಲ್ಲಿ ನ್ಯಾಯವನ್ನು ಪಡೆಯಬಹುದು ಎಂದು ಅವರು ಹೇಳಿದರು. ಈ ಹೊಸ ಕಾನೂನುಗಳನ್ನು 21 ನೇ ಶತಮಾನದ ಅತಿದೊಡ್ಡ ಸುಧಾರಣೆ ಎಂದು ಅವರು ಬಣ್ಣಿಸಿದರು, ಭಾರತದ ಕಾನೂನು ವ್ಯವಸ್ಥೆಯನ್ನು ಜಾಗತಿಕವಾಗಿ ಆಧುನೀಕರಿಸಲಾಗುವುದು, ವಿಶೇಷವಾಗಿ ತಂತ್ರಜ್ಞಾನದ ವಿಷಯದಲ್ಲಿ ಎಂದು ಅವರು ಒತ್ತಿ ಹೇಳಿದರು. ಈ ಕಾನೂನುಗಳು ಸಂಪೂರ್ಣವಾಗಿ ಜಾರಿಗೆ ಬಂದ ನಂತರ, ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳ ಶಿಕ್ಷೆಯ ದರಗಳಿಗೆ ಸರಿಸಮನಾಗುತ್ತದೆ ಮತ್ತು ಅವುಗಳನ್ನು ಮೀರಿಸುತ್ತದೆ ಎಂದು ಶ್ರೀ ಶಾ ಹೇಳಿದರು.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ವಿಧಿವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಒತ್ತಿ ಹೇಳಿದರು. 7 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸುವ ಯಾವುದೇ ಅಪರಾಧಕ್ಕೆ ಈಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ಕಡ್ಡಾಯವಾಗಲಿದೆ ಎಂದು ಅವರು ಘೋಷಿಸಿದರು. ಹೊಸ ಕಾನೂನುಗಳ ಅಡಿಯಲ್ಲಿ, ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗಕ್ಕೆ ಕಟ್ಟುನಿಟ್ಟಾದ ಸಮಯ ಮಿತಿಗಳನ್ನು ಸ್ಥಾಪಿಸಲಾಗಿದೆ. ಪದೇ ಪದೇ ಮುಂದೂಡಿಕೆಗಳಿಂದ ಉಂಟಾಗುವ ವಿಳಂಬವು ಈಗ ಇತಿಹಾಸದ ವಿಷಯವಾಗಿದೆ, ಏಕೆಂದರೆ ಪ್ರತಿವಾದಿ ಅಥವಾ ಪ್ರಾಸಿಕ್ಯೂಷನ್‌ ಗೆ ಎರಡು ಬಾರಿಗಿಂತ ಹೆಚ್ಚು ಮುಂದೂಡಲು ಅವಕಾಶವಿರುವುದಿಲ್ಲ ಎಂದು ಅವರು ವಿವರಿಸಿದರು. ಘೋಷಿತ ಅಪರಾಧಿಯ ಅನುಪಸ್ಥಿತಿಯಲ್ಲಿ ವಿಚಾರಣೆಯನ್ನು ಈಗ ಮುಂದುವರಿಸಬಹುದು ಎಂದು ಗೃಹ ಸಚಿವರು ಹೇಳಿದರು. ರೂ. 5,000 ಕ್ಕಿಂತ ಕಡಿಮೆ ಮೊತ್ತದ ಕಳ್ಳತನ ಪ್ರಕರಣಗಳಿಗೆ ಸಮುದಾಯ ಸೇವೆಯ ನಿಬಂಧನೆಯನ್ನು ಸಹ ಪರಿಚಯಿಸಲಾಗಿದೆ. ಇದಲ್ಲದೆ, ಭಾರತದ ಹೊರಗಿನ ಆಸ್ತಿಯನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಪ್ರಾಸಿಕ್ಯೂಷನ್ ನಿರ್ದೇಶಕರ ಪಾತ್ರವನ್ನು ಪೊಲೀಸರಿಂದ ಬೇರ್ಪಡಿಸಲಾಗಿದೆ, ಇದು ಕಾನೂನು ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಗುಂಪು ಹಲ್ಲೆಯ ಹೊಸ ಅಪರಾಧವನ್ನು ಪರಿಚಯಿಸಲಾಗಿದೆ ಮತ್ತು ಸಂಘಟಿತ ಅಪರಾಧವನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕಾನೂನುಗಳು ಸಂತ್ರಸ್ತ ಕೇಂದ್ರಿತವಾಗಿದ್ದು, ಸಂತ್ರಸ್ತರು ತಮ್ಮ ವಾದವನ್ನು ಮಂಡಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯವಿಧಾನಗಳ ಕಡ್ಡಾಯ ದಾಖಲಾತಿಯೊಂದಿಗೆ ಕಾನೂನುಗಳು ಪೊಲೀಸರ ಹೊಣೆಗಾರಿಕೆಯನ್ನು ಖಾತರಿಪಡಿಸುತ್ತವೆ. ಬ್ರಿಟಿಷರು ರಾಜದ್ರೋಹ ಕಾನೂನನ್ನು ಪರಿಚಯಿಸಿದ್ದರು, ಭಾರತವು ಅದನ್ನು ದೇಶದ್ರೋಹ ಕಾನೂನಾಗಿ ಪರಿವರ್ತಿಸಿದೆ, ಯಾರೂ ದೇಶದ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಇಲ್ಲಿಯವರೆಗೆ, ಭಯೋತ್ಪಾದನೆಯ ಅಧಿಕೃತ ವ್ಯಾಖ್ಯಾನವಿರಲಿಲ್ಲ, ಆದರೆ ಮೊದಲ ಬಾರಿಗೆ, ಈ ಹೊಸ ಕಾನೂನುಗಳಲ್ಲಿ ಭಯೋತ್ಪಾದನೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ ಎಂದು ಅವರು ಹೇಳಿದರು. ಎಲ್ಲಾ ರಾಜ್ಯಗಳು ಈ ಹೊಸ ಕ್ರಿಮಿನಲ್ ಕಾನೂನುಗಳನ್ನು ಒಪ್ಪಿಕೊಂಡಿವೆ ಮತ್ತು ಮುಂಬರುವ ದಿನಗಳಲ್ಲಿ, ಸರ್ಕಾರವು ವಿವಿಧ ಏಜೆನ್ಸಿಗಳಲ್ಲಿ ಪ್ರತ್ಯೇಕ ದತ್ತಾಂಶ ವ್ಯವಸ್ಥೆಗಳನ್ನು ಸಂಯೋಜಿಸಲು ಪ್ರಯತ್ನಗಳನ್ನು ಪ್ರಾರಂಭಿಸಿದೆ, ಇದರಿಂದಾಗಿ ಹೆಚ್ಚಿನ ದಕ್ಷತೆಗಾಗಿ ಸಾಫ್ಟ್‌ವೇರ್ ಮೂಲಕ ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಶಾ ಹೇಳಿದರು.

ಸೈಬರ್ ಅಪರಾಧವನ್ನು ನಿಭಾಯಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (I4C) ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಘೋಷಿಸಿದರು, ಪ್ರಧಾನಿ ಮೋದಿ ಅವರು I4C ಯನ್ನು ಬಲಪಡಿಸಲು ವಿವಿಧ ಉಪಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ, ಐಸಿಜೆಎಸ್ 1.0 (ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್) ಮತ್ತು ಐಸಿಜೆಎಸ್ 2.0 ಎರಡೂ ಏಳು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. 17,771 ಪೊಲೀಸ್ ಠಾಣೆಗಳು ಈಗ ಸಿ ಸಿ ಟಿ ಎನ್‌ ಎಸ್‌ (ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್) ಗೆ ಸಂಪರ್ಕಗೊಂಡಿವೆ ಮತ್ತು ಈ ವ್ಯವಸ್ಥೆಯಲ್ಲಿ 34 ಕೋಟಿ 1 ಲಕ್ಷ ಪೊಲೀಸ್ ದಾಖಲೆಗಳು ಲಭ್ಯವಿವೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, 22,000 ನ್ಯಾಯಾಲಯಗಳನ್ನು ಇ-ನ್ಯಾಯಾಲಯಗಳಿಗೆ ಸಂಪರ್ಕಿಸಲಾಗಿದೆ, ಅಲ್ಲದೆ, 2.2 ಕೋಟಿ ಕೈದಿಗಳ ದಾಖಲೆಗಳನ್ನು ಇ-ಜೈಲು ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗಿದೆ, 1,361 ಜೈಲುಗಳನ್ನು ಸಂಪರ್ಕಿಸಲಾಗಿದೆ. 1 ಕೋಟಿ 93 ಲಕ್ಷಕ್ಕೂ ಹೆಚ್ಚು ಪ್ರಾಸಿಕ್ಯೂಷನ್ ಪ್ರಕರಣಗಳು ಇ-ಪ್ರಾಸಿಕ್ಯೂಷನ್‌ ನಲ್ಲಿ ಲಭ್ಯವಿದೆ ಮತ್ತು ದೇಶಾದ್ಯಂತ 117 ವಿಧಿವಿಜ್ಞಾನ ಪ್ರಯೋಗಾಲಯಗಳಿಂದ 28 ಲಕ್ಷ 70 ಸಾವಿರಕ್ಕೂ ಹೆಚ್ಚು ವಿಧಿವಿಜ್ಞಾನ ದಾಖಲೆಗಳನ್ನು ಇ-ಫಾರೆನ್ಸಿಕ್ಸ್‌ ನಲ್ಲಿ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು. NAFEES ನಲ್ಲಿ 1 ಕೋಟಿ 12 ಲಕ್ಷ ಬೆರಳಚ್ಚುಗಳು ಮತ್ತು NIDAAN (ನ್ಯಾಷನಲ್ ಇಂಟಿಗ್ರೇಟೆಡ್ ಡೇಟಾಬೇಸ್ ಆನ್ ಅರೆಸ್ಟೆಡ್ ನಾರ್ಕೋ-ಆಫೆಂಡರ್ಸ್) ನಲ್ಲಿ 8 ಲಕ್ಷ 11 ಸಾವಿರಕ್ಕೂ ಹೆಚ್ಚು ನಾರ್ಕೋ ಅಪರಾಧಿಗಳ ದತ್ತಾಂಶಗಳಿವೆ. ಈ ಡೇಟಾವನ್ನು ಇಲ್ಲಿಯವರೆಗೆ ಪ್ರತ್ಯೇಕವಾಗಿ ಸಂಗ್ರಹಿಸಲಾಗಿದ್ದರೂ, ಅಪರಾಧವನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಸಹಾಯ ಮಾಡುವ ವಿವರವಾದ ವಿಶ್ಲೇಷಣೆಗಳನ್ನು ಒದಗಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಈ ಎಲ್ಲಾ ದತ್ತಾಂಶಗಳನ್ನು ಲಿಂಕ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಈ ಏಕೀಕರಣವು ಸರಿಸುಮಾರು ಆರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ, ನಂತರ ಅಪರಾಧಿಗಳು ಎಲ್ಲಿಯೂ ಅಡಗಿಕೊಲ್ಳು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸರ್ಕಾರವು ವಿಧಿವಿಜ್ಞಾನ ಕ್ಷೇತ್ರದಲ್ಲಿ ನಾಲ್ಕು ಆಯಾಮದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು. ಇದರಲ್ಲಿ ಮೂಲಸೌಕರ್ಯವನ್ನು ಬಲಪಡಿಸುವುದು, ಪರಿಣತಿ ಮತ್ತು ಮಾನವಶಕ್ತಿಯನ್ನು ನಿರ್ಮಿಸುವುದು, ವಿಶ್ವಾದ್ಯಂತ ಇತ್ತೀಚಿನ ವಿಧಿವಿಜ್ಞಾನ ತಂತ್ರಜ್ಞಾನಕ್ಕೆ ಪ್ರವೇಶವನ್ನು ಒದಗಿಸುವುದು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಅನ್ನು ಉತ್ತೇಜಿಸುವುದು ಇದರಲ್ಲಿ ಸೇರಿವೆ ಎಂದು ಅವರು ಹೇಳಿದರು. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಅವರು ಪ್ರಸ್ತಾಪಿಸಿದರು, ಅಲ್ಲಿ 72 ವಿವಿಧ ಕ್ಷೇತ್ರಗಳಲ್ಲಿ ಪಿ ಎಚ್‌ ಡಿ ಮಟ್ಟದ ಕೋರ್ಸ್‌ ಗಳನ್ನು ಪರಿಚಯಿಸಲಾಗಿದೆ. ಪ್ರಸ್ತುತ, ಸುಮಾರು 5,137 ವಿದ್ಯಾರ್ಥಿಗಳು ದಾಖಲಾಗಿದ್ದಾರೆ, ಎರಡು ವರ್ಷಗಳಲ್ಲಿ, 14 ರಾಜ್ಯಗಳಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿರುವುದರಿಂದ ಈ ಸಂಖ್ಯೆ 35,000 ಕ್ಕೆ ಏರುತ್ತದೆ ಎಂದು ಅವರು ಹೇಳಿದರು.

ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸುಮಾರು 30,000 ಸಂಶೋಧನಾ ಪ್ರಕಟಣೆಗಳನ್ನು ಘೋಷಿಸಲಾಗಿದ್ದು, 100 ಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳು ನಡೆಯುತ್ತಿವೆ ಎಂದು ಶ್ರೀ ಶಾ ಹೇಳಿದರು. ಕಳೆದ ವರ್ಷದಲ್ಲಿ 350 ಕ್ಕೂ ಹೆಚ್ಚು ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಯಿತು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವನ್ನು ಬಲಪಡಿಸಲಾಗುತ್ತಿದೆ ಮತ್ತು ರಾಜ್ಯ ಮಟ್ಟದ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಸಹಾಯ ಮಾಡಲು ಮತ್ತು ಮುನ್ನಡೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಹೆಚ್ಚುವರಿಯಾಗಿ, ನಿರ್ಭಯಾ ನಿಧಿಯ ಬೆಂಬಲದೊಂದಿಗೆ ಪ್ರತಿ ರಾಜ್ಯದಲ್ಲಿ ಡಿ ಎನ್‌ ಎ ವಿಶ್ಲೇಷಣೆಗಾಗಿ ಒಂದು ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯದ (ಎನ್‌ ಸಿ ಎಫ್‌ ಎಲ್) ಬಗ್ಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು, ಇದನ್ನು ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯ (ಎನ್‌ ಎಫ್‌ ಎಸ್‌ ಯು) ಅಭಿವೃದ್ಧಿಪಡಿಸುತ್ತಿದೆ. ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (ಎನ್‌ ಎ ಎಫ್‌ ಐ ಎಸ್) ಯನ್ನು ಬಲಪಡಿಸುವ ಬಗ್ಗೆ ಸಹ ಎನ್‌ ಎಫ್‌ ಎಸ್‌ ಯು ಕೆಲಸ ಮಾಡುತ್ತಿದೆ. ವಿಧಿವಿಜ್ಞಾನ ವಿಜ್ಞಾನದ ಮೂಲಕ ಸರ್ಕಾರವು ಶಿಕ್ಷೆಯ ಪ್ರಮಾಣವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಶ್ರೀ ಶಾ ಒತ್ತಿ ಹೇಳಿದರು.

2014 ಕ್ಕಿಂತ ಮೊದಲು ವಿಪತ್ತು ನಿರ್ವಹಣೆಯು ಪರಿಹಾರ ಕೇಂದ್ರಿತವಾಗಿತ್ತು, ಆದರೆ 2014 ರ ನಂತರ, ರಕ್ಷಣೆ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ ವರ್ಷ ದೇಶದಲ್ಲಿ ಎರಡು ಪ್ರಮುಖ ವಿಪತ್ತುಗಳು ಸಂಭವಿಸಿದವು, ಅಲ್ಲಿ ಯಾವುದೇ ಮಾನವ ಜೀವಗಳು ಬಲಿಯಾಗಲಿಲ್ಲ ಎಂದು ಅವರು ಹೇಳಿದರು. ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಒತ್ತಿ ಹೇಳಿದರು.

ಸರ್ಕಾರವು ತಡೆಗಟ್ಟುವಿಕೆ, ತಗ್ಗಿಸುವಿಕೆ ಮತ್ತು ಸನ್ನದ್ಧತೆಯನ್ನು ತನ್ನ ನೀತಿಯ ತಿರುಳನ್ನಾಗಿ ಮಾಡಿಕೊಂಡಿದೆ. ಸಿದ್ಧತೆ ಆಧಾರಿತ ರಕ್ಷಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ಬಲಪಡಿಸಲಾಗಿದೆ. ಪ್ರವಾಹ ಅಥವಾ ಚಂಡಮಾರುತಗಳು ಸಂಭವಿಸುವ ಮೊದಲು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ ಡಿ ಆರ್‌ ಎಫ್) ಆಗಲೇ ಸ್ಥಳದಲ್ಲಿರುತ್ತದೆ. ವಿಪತ್ತು ನಿಧಿಯನ್ನು ವೈಜ್ಞಾನಿಕವಾಗಿ ವಿತರಿಸಲಾಗುತ್ತಿದೆ ಮತ್ತು ಸಮುದಾಯ ಆಧಾರಿತ ವಿಪತ್ತು ನಿರ್ವಹಣೆಯನ್ನು ಪ್ರಾರಂಭಿಸಲಾಗಿದೆ. ವಿಪತ್ತು ಅಪಾಯ ಕಡಿತ (ಡಿ ಆರ್‌ ಆರ್) ದೇಶದ ನೀತಿಯ ಅಡಿಪಾಯವಾಗಿದೆ ಎಂದು ಅವರು ಹೇಳಿದರು.‌

2004 ರಿಂದ 2014 ರವರೆಗೆ, ಎಸ್ ಡಿ ಆರ್‌ ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ) ಗೆ 37,727 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು, ಆದರೆ, 2014 ರ ನಂತರ, ಅದು 1.20 ಲಕ್ಷ ಕೋಟಿ ರೂ.ಗೆ ಏರಿತು ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಅದೇ ರೀತಿ, 2004 ಮತ್ತು 2014 ರ ನಡುವೆ ಎನ್‌ ಡಿ ಆರ್‌ ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ) ಹಂಚಿಕೆ 27,000 ಕೋಟಿ ರೂ.ಆಗಿತ್ತು ಮತ್ತು 2014 ರ ನಂತರ ಅದು 80,000 ಕೋಟಿ ರೂ.ಗೆ ಏರಿತು. ಇದು ವಿಪತ್ತುಗಳನ್ನು ತಡೆಗಟ್ಟಲು ದೇಶದ ಪ್ರಯತ್ನಗಳ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಎನ್‌ ಡಿ ಆರ್‌ ಎಫ್ ಅಡಿಯಲ್ಲಿ ಹೆಚ್ಚುವರಿಯಾಗಿ ₹83,000 ಕೋಟಿ ಮತ್ತು ಎಸ್ ಡಿ ಆರ್‌ ಎಫ್ ಅಡಿಯಲ್ಲಿ ₹1,36,000 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು. ಒಟ್ಟಾರೆಯಾಗಿ, ಕಳೆದ 10 ವರ್ಷಗಳಲ್ಲಿ ಸುಮಾರು ₹2 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (ಎನ್‌ ಡಿ ಎಂ ಎಫ್) ಅನ್ನು ₹13,000 ಕೋಟಿಯೊಂದಿಗೆ ಸ್ಥಾಪಿಸಲಾಗಿದೆ. ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟಲು ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಬಹಳ ದೂರದೃಷ್ಟಿಯಿಂದ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಗಮನಸೆಳೆದರು. ಇಲ್ಲಿಯವರೆಗೆ, ವಿವಿಧ ಎಚ್ಚರಿಕೆಗಳಿಗಾಗಿ ₹4,300 ಕೋಟಿಗೂ ಹೆಚ್ಚು ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಎನ್‌ ಡಿ ಆರ್‌ ಎಫ್ ನ ಸಕ್ರಿಯ ಲಭ್ಯತೆಯು ಶೇ.183 ರಷ್ಟು ಹೆಚ್ಚಾಗಿದೆ ಮತ್ತು 28 ನಗರಗಳಲ್ಲಿ ಪ್ರಾದೇಶಿಕ ಪ್ರತಿಕ್ರಿಯೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಕ್ಷಣದ ಪ್ರತಿಕ್ರಿಯೆಗಾಗಿ ಈಗ ₹250 ಕೋಟಿಗಳ ಆವರ್ತ ನಿಧಿ ಲಭ್ಯವಿದೆ ಎಂದರು. 2019 ರಲ್ಲಿ, ಎನ್‌ ಡಿ ಆರ್‌ ಎಫ್ ಅಕಾಡೆಮಿಯನ್ನು ನಾಗ್ಪುರದಲ್ಲಿ ಸ್ಥಾಪಿಸಲಾಯಿತು. ಕಳೆದ ಐದು ವರ್ಷಗಳಲ್ಲಿ, ವಿಪತ್ತು ನಿರ್ವಹಣೆಗಾಗಿ 34 ಅಂತರರಾಷ್ಟ್ರೀಯ ಮಟ್ಟದ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ತುರ್ತು ಸಂಖ್ಯೆ 112 ವಿಪತ್ತು ನಿರ್ವಹಣಾ ಸೇವೆಗಳನ್ನು ಸಂಯೋಜಿಸಿದೆ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾತ್ರವನ್ನು ಗಟ್ಟಿಗೊಳಿಸಲು, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿ ಡಿ ಆರ್‌ ಐ) ರಚಿಸಲಾಯಿತು, ಇದರಲ್ಲಿ 42 ದೇಶಗಳು ಮತ್ತು 60 ಬಹುರಾಷ್ಟ್ರೀಯ ಸಂಸ್ಥೆಗಳು ಸೇರಿವೆ ಎಂದು ಅವರು ಹೇಳಿದರು.

ಜಗತ್ತಿನ ಎಲ್ಲಿಯಾದರೂ ವಿಪತ್ತು ಸಂಭವಿಸಿದಾಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಕ್ಷಣವೇ ಎನ್‌ ಡಿ ಆರ್‌ ಎಫ್ ಅನ್ನು ಅಲ್ಲಿಗೆ ಕಳುಹಿಸುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬೆಂಕಿ ನಂದಿಸುವ ಪ್ರಯತ್ನಗಳಿಗಾಗಿ ಭಾರತ ಸರ್ಕಾರವು ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿದೆ. ಪ್ರವಾಹದ ಅಪಾಯಗಳನ್ನು ಪರಿಹರಿಸಲು, ಕೋಲ್ಕತ್ತಾ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ ಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಲಾಗಿದೆ. 'ಆಪರೇಷನ್ ದೋಸ್ತ್' ಅಡಿಯಲ್ಲಿ, ಟರ್ಕಿ ಮತ್ತು ನೇಪಾಳಕ್ಕೆ ಸಹಾಯವನ್ನು ಒದಗಿಸಲಾಗಿದೆ. ಸಾಮಾನ್ಯ ಎಚ್ಚರಿಕೆ ಶಿಷ್ಟಾಚಾರವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಶ್ರೇಷ್ಠತೆಗಾಗಿ ಈ ಹಿಂದೆ ಯಾವುದೇ ಪ್ರಶಸ್ತಿ ಇರಲಿಲ್ಲ, ಆದರೆ ಈಗ ನಾವು 'ನೇತಾಜಿ ಸುಭಾಷ್ ಚಂದ್ರ ಬೋಸ್ ವಿಪತ್ತು ನಿರ್ವಹಣಾ ಪ್ರಶಸ್ತಿ'ಯನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು. 'ಮೇಘದೂತ್' ಅಪ್ಲಿಕೇಶನ್ ರೈತರಿಗೆ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ, 'ಪ್ರವಾಹ ಎಚ್ಚರಿಕೆ' ಪ್ರವಾಹ ಪರಿಸ್ಥಿತಿಯ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ನೀಡುತ್ತದೆ, 'ದಾಮಿನಿ' ಮಿಂಚಿನ ಮೊದಲು ಎಚ್ಚರಿಕೆಗಳನ್ನು ನೀಡುತ್ತದೆ, 'ಭುವನ್' ಅಪ್ಲಿಕೇಶನ್ ಭುವನ್ ನಕ್ಷೆಗಳು ಮತ್ತು ಉಪಗ್ರಹ ಡೇಟಾವನ್ನು ವಾಯ್ಸ್‌-ಓವರ್ ನ್ಯಾವಿಗೇಷನ್‌ ನೊಂದಿಗೆ ಒದಗಿಸುತ್ತದೆ ಮತ್ತು 'ಸಚೇತ್' ನೈಜ-ಸಮಯದ ಭೂ-ಉದ್ದೇಶಿತ ಎಚ್ಚರಿಕೆಗಳನ್ನು ಒದಗಿಸುತ್ತದೆ, 'ವನ್ ಅಗ್ನಿ' ಕಾಡಿನ ಬೆಂಕಿಯ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಮತ್ತು 'ಸಮುದ್ರ' ಮೀನುಗಾರರಿಗೆ ಸಾಗರ ಮಾಹಿತಿಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಗಾಗಿ ನಾವು ವಿಪತ್ತು ನಿರ್ವಹಣಾ ವ್ಯವಸ್ಥೆಗೆ ಗಣನೀಯ ಒಳಹರಿವುಗಳನ್ನು ನೀಡುತ್ತೇವೆ ಎಂದು ಅವರು ಹೇಳಿದರು. ಈ ಎಲ್ಲಾ ಮೊಬೈಲ್ ಅಪ್ಲಿಕೇಶನ್‌ಗಳನ್ನು 2014 ರ ನಂತರ ಅಭಿವೃದ್ಧಿಪಡಿಸಲಾಗಿದೆ. ಭಾರತವು ಈಗ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ನಾವು ಉನ್ನತ ಸ್ಥಾನ ಪಡೆಯುವ ಗುರಿಯೊಂದಿಗೆ ಮುಂದುವರಿಯುತ್ತಿದ್ದೇವೆ, ಇದರಲ್ಲಿ ರಾಜ್ಯ ಸರ್ಕಾರಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ ಎಂದು ಶ್ರೀ ಶಾ ಹೇಳಿದರು.

ಅಂತರರಾಜ್ಯ ಮಂಡಳಿಯು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. 2004 ಮತ್ತು 2014 ರ ನಡುವೆ, ವಲಯ ಮಂಡಳಿಯ ಕೇವಲ 11 ಸಭೆಗಳು ನಡೆದಿದ್ದವು, ಆದರೆ 2014 ರಿಂದ 27 ಸಭೆಗಳು ನಡೆದಿವೆ. ಸ್ಥಾಯಿ ಸಮಿತಿಯು 2004 ಮತ್ತು 2014 ರ ನಡುವೆ 14 ಸಭೆಗಳನ್ನು ನಡೆಸಿತ್ತು, ಆದರೆ 2014 ರಿಂದ 33 ಸಭೆಗಳನ್ನು ನಡೆಸಲಾಗಿದೆ. ಹಿಂದೆ, ವಲಯ ಮಂಡಳಿ ಸಭೆಗಳಲ್ಲಿ ಕೇವಲ 448 ಸಮಸ್ಯೆಗಳನ್ನು ಪರಿಹರಿಸಲಾಗಿತ್ತು, ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ, 1280 ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಮ್ಮ ಒಕ್ಕೂಟ ವ್ಯವಸ್ಥೆ ರಚನೆಯನ್ನು ಬಲಪಡಿಸುವಲ್ಲಿ ಅಂತರರಾಜ್ಯ ಮಂಡಳಿಯು ಪ್ರಮುಖ ಸಾಧನವಾಗಿದೆ ಎಂದು ಅವರು ಹೇಳಿದರು.

ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವು ನಮ್ಮ ಪ್ರಮುಖ ಉಪಕ್ರಮ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಗಡಿಗಳಲ್ಲಿ ಕಠಿಣ ಪರಿಸ್ಥಿತಿಯಲ್ಲಿರುವ ಹಳ್ಳಿಗಳಿಂದ ಉತ್ತಮ ಸೌಲಭ್ಯಗಳನ್ನು ಹುಡುಕುತ್ತಾ ವಲಸೆ ಬರುತ್ತಾರೆ ಮತ್ತು ಗಡಿ ಗ್ರಾಮಗಳು ಖಾಲಿಯಾಗಿರುವ ದೇಶವು ಎಂದಿಗೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಈ ಹಿಂದೆ, ಗಡಿಗಳಲ್ಲಿರುವ ಹಳ್ಳಿಗಳನ್ನು "ಕೊನೆಯ ಹಳ್ಳಿಗಳು" ಎಂದು ಕರೆಯಲಾಗುತ್ತಿತ್ತು, ಆದರೆ ಮೋದಿ ಸರ್ಕಾರದ ಹೊಸ ವಿಧಾನದಿಂದಾಗಿ, ಇವುಗಳನ್ನು ಈಗ "ಮೊದಲ ಹಳ್ಳಿಗಳು" ಎಂದು ಕರೆಯಲಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಈ ಹಳ್ಳಿಗಳು ಸೌಲಭ್ಯಗಳ ವಿಷಯದಲ್ಲಿಯೂ ಮೊದಲಿಗರಾಗುತ್ತವೆ ಮತ್ತು ಇದು ವೈಬ್ರೆಂಟ್ ವಿಲೇಜ್ ಕಾರ್ಯಕ್ರಮದ ಗುರಿಯಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, ಶೇ.90 ರಷ್ಟು ಹಣಕಾಸು ಕೇಂದ್ರ ಸರ್ಕಾರದಿಂದ ಮತ್ತು ಶೇ.10 ರಷ್ಟು ರಾಜ್ಯ ಸರ್ಕಾರದಿಂದ ಬರುತ್ತದೆ. ಮೊದಲ ಹಂತದಲ್ಲಿ, ಅರುಣಾಚಲ ಪ್ರದೇಶದ 455, ಹಿಮಾಚಲ ಪ್ರದೇಶದ 75, ಉತ್ತರಾಖಂಡದ 51, ಸಿಕ್ಕಿಂನ 46 ಮತ್ತು ಲಡಾಖ್‌ ನ 35 ಗ್ರಾಮಗಳನ್ನು ಈ ಕಾರ್ಯಕ್ರಮದಡಿಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಗಡಿ ಭದ್ರತೆಗಾಗಿ ಹಲವು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಒಟ್ಟು 12 ಭೂ ಬಂದರುಗಳಲ್ಲಿ 11 ನಮ್ಮ ಅವಧಿಯಲ್ಲಿ ಸ್ಥಾಪಿಸಲ್ಪಟ್ಟಿವೆ ಮತ್ತು ಈ ಭೂ ಬಂದರುಗಳ ಮೂಲಕ ₹70,959 ಕೋಟಿ ಮೌಲ್ಯದ ವ್ಯಾಪಾರ ಮತ್ತು 30 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರ ನಡೆದಿದೆ ಎಂದು ಅವರು ಹೇಳಿದರು. ಒಟ್ಟು 26 ಭೂ ಬಂದರುಗಳಿಗೆ ನಾವು ಯೋಜನೆಗಳನ್ನು ಹೊಂದಿದ್ದೇವೆ ಎಂದು ಶ್ರೀ ಶಾ ಹೇಳಿದರು.

ಸಾಮಾನ್ಯ ಜನರ ಹೀರೋಗಳು ಮತ್ತು ಸಮಾಜ ಮತ್ತು ದೇಶದಲ್ಲಿ ಸಣ್ಣ ಬದಲಾವಣೆಗಳನ್ನು ತರಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಜನರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಂಥವರಿಗೆ ಈಗ ಯಾವ ಶಿಫಾರಸ್ಸು ಬೇಕಿಲ್ಲ. ಅವರು ತಮ್ಮನ್ನು ಪೋರ್ಟಲ್‌ ನಲ್ಲಿ ನಾಮನಿರ್ದೇಶನ ಮಾಡುತ್ತಾರೆ ಮತ್ತು ನಂತರ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿರುವುದಾಗಿ ಕರೆ ಬರುತ್ತದೆ. ಪದ್ಮ ಪ್ರಶಸ್ತಿಗೆ ಇಂತಹ ಪಾರದರ್ಶಕ ಪ್ರಕ್ರಿಯೆ ಬಹಳ ಹಿಂದೆಯೇ ನಡೆಯಬೇಕಿತ್ತು ಎಂದು ಅವರು ಹೇಳಿದರು. ಈ ಪಾರದರ್ಶಕ ಪ್ರಕ್ರಿಯೆಯನ್ನು ಜಾರಿಗೆ ತಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಶ್ರೀ ಶಾ ಕೃತಜ್ಞತೆ ಸಲ್ಲಿಸಿದರು.

 

*****

 

 


(Release ID: 2113930) Visitor Counter : 34