ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾರತದ ರಾಷ್ಟ್ರಪತಿ


ಪ್ರತಿಯೊಬ್ಬ ಮಹಿಳೆಯೂ ಧೈರ್ಯವನ್ನು ಒಟ್ಟುಗೂಡಿಸಬೇಕು, ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಕನಸುಗಳನ್ನು ಸಾಧಿಸಲು ಎಲ್ಲಾ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಮುರ್ಮು ಕರೆ

Posted On: 14 FEB 2025 5:07PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಫೆಬ್ರವರಿ 14, 2025) ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದ್ದರು.

ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಭಾರತದ ನಾರಿ ಶಕ್ತಿಯು ಮಹತ್ವಾಕಾಂಕ್ಷೆ, ಸಾಧನೆ ಮತ್ತು ಕೊಡುಗೆ ನೀಡಲು ಸಿದ್ದಗೊಳ್ಳುತ್ತಿದೆ ಎಂದರು. ಅದು ವಿಜ್ಞಾನ, ಕ್ರೀಡೆ, ರಾಜಕೀಯ, ಕಲೆ ಅಥವಾ ಸಂಸ್ಕೃತಿಯಾಗಿರಲಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ತಲೆ ಎತ್ತಿ ಮುಂದೆ ಸಾಗುತ್ತಿದ್ದಾರೆ. ಅವರು ತಮ್ಮ ಕುಟುಂಬ, ಸಂಸ್ಥೆಗಳು ಮತ್ತು ದೇಶ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಮಾನಸಿಕ ಸ್ಥೈರ್ಯ-ಶಕ್ತಿಯಿಲ್ಲದೆ ಅಡೆತಡೆಗಳನ್ನು ಮುರಿಯಲು ಮತ್ತು ಸ್ಟೀರಿಯೊಟೈಪ್ ಗಳಿಗೆ  ಸವಾಲೆಸೆಯಲು  ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ಧೈರ್ಯವನ್ನು ಒಟ್ಟುಗೂಡಿಸಬೇಕು, ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ತನ್ನ ಕನಸುಗಳನ್ನು ಸಾಧಿಸಲು ಎಲ್ಲಾ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಯೊಬ್ಬರೂ ತಮ್ಮ ಗುರಿ ಸಾಧನೆಯತ್ತ  ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಅಭಿವೃದ್ಧಿ ಹೊಂದಿದ ಭಾರತದತ್ತ ಒಂದು ಹೆಜ್ಜೆಯಾಗುತ್ತದೆ ಎಂದು ಅವರು ಹೇಳಿದರು.

ನಾವು ತಾಂತ್ರಿಕ ಅಸ್ತವ್ಯಸ್ತಗಳ  ಯುಗದಲ್ಲಿದ್ದೇವೆ ಎಂದು ರಾಷ್ಟ್ರಪತಿ  ನುಡಿದರು. ತಂತ್ರಜ್ಞಾನದ ಪ್ರಗತಿಯು ನಮಗೆ ಕೆಲವು ರೀತಿಯಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ನೀಡಿದೆ. ಅಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಮ್ಮ ಮಾನವೀಯ ಮೌಲ್ಯಗಳು ಹಾಗೇ ಉಳಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ವಾಸ್ತವವಾಗಿ, ಸಹಾನುಭೂತಿ, ಪ್ರೀತಿ ಮತ್ತು ಏಕತೆಯ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿಯೊಬ್ಬ ಮನುಷ್ಯನು ಪ್ರಜ್ಞಾಪೂರ್ವಕವಾಗಿ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಾಗಿದೆ. ಇಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗುತ್ತದೆ. ಮಹಿಳೆಯರಿಗೆ ಸಹಾನುಭೂತಿಯ ಮೂಲಕ ಮುನ್ನಡೆಸುವ ವಿಶೇಷ ಸಾಮರ್ಥ್ಯವಿದೆ. ಅವರು ವ್ಯಕ್ತಿಯನ್ನು ಮೀರಿ ನೋಡುವ ಮತ್ತು ಜಾಗತಿಕ ಮಟ್ಟದಲ್ಲಿ ಕುಟುಂಬಗಳು, ಸಮುದಾಯಗಳು ಮತ್ತು ಸಂಬಂಧಗಳ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ  ಎಲ್ಲಾ ಮಹಿಳೆಯರು, ತಮ್ಮ ಜೀವನವನ್ನು ಮತ್ತು ತಮ್ಮ ಸುತ್ತಲಿನವರ ಜೀವನವನ್ನು ಹೆಚ್ಚು ಸುಂದರ ಮತ್ತು ಶಾಂತಿಯುತವಾಗಿಸಲು ಅನ್ವಯಿಸಬಹುದಾದ ಆಧ್ಯಾತ್ಮಿಕ ತತ್ವಗಳನ್ನು ಮೈಗೂಡಿಸಿಕೊಳ್ಳುತ್ತಾರೆ  ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಆರ್ಟ್ ಆಫ್ ಲಿವಿಂಗ್,  ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ನಮ್ಮ ಮಕ್ಕಳ ಶಿಕ್ಷಣಕ್ಕಿಂತ ಮಾನವೀಯತೆಯ ಕ್ಷೇತ್ರದಲ್ಲಿ ಬೇರೆ ಯಾವ  ದೊಡ್ಡ ಹೂಡಿಕೆಯೂ  ಇಲ್ಲ ಎಂದು ಅವರು ಹೇಳಿದರು. ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ, ಅನೇಕ ಮಕ್ಕಳು ನಮ್ಮ ರಾಷ್ಟ್ರದ ಪ್ರಯಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು ಎಂದ ಅವರು  ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವರು ಎಲ್ಲರನ್ನೂ ಒತ್ತಾಯಿಸಿದರು.

 

Please click here to see the President's Speech - 

 

*****


(Release ID: 2103318) Visitor Counter : 38