ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಿಂಫನಿ ಆಫ್ ಇಂಡಿಯಾ ಚಾಲೆಂಜ್ 2025: WAVES ಅಡಿಯಲ್ಲಿ ಸಂಗೀತ ಪ್ರತಿಭೆ ಮತ್ತು ನಾವೀನ್ಯತೆಗೆ ವೇದಿಕೆ 


ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆಯಲ್ಲಿ ಪ್ರದರ್ಶನ ನೀಡಲಿರುವ ಟಾಪ್ 3 ವಿಜೇತ ತಂಡಗಳು

Posted On: 13 FEB 2025 6:53PM by PIB Bengaluru

ವಿಶ್ವ ಆಡಿಯೋ ವಿಷ್ಯುವಲ್ ಮತ್ತು ಎಂಟರ್ಟೈನ್ಮೆಂಟ್ ಸಮ್ಮಿಟ್ (WAVES) ಅಡಿಯಲ್ಲಿ ಬರುವ ಪ್ರಮುಖ ಕಾರ್ಯಕ್ರಮವಾದ ಸಿಂಫನಿ ಆಫ್ ಇಂಡಿಯಾ ಚಾಲೆಂಜ್, ರಾಷ್ಟ್ರದಾದ್ಯಂತದ ಶ್ರೇಷ್ಠ ಸಂಗೀತ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಆರಂಭದಲ್ಲಿ 212 ಸಂಗೀತಗಾರರು ಚಾಲೆಂಜ್ ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಕಠಿಣ ಆಯ್ಕೆ ವಿಧಾನದ ಮೂಲಕ ಈಗ ಅಗ್ರ 80 ಅಸಾಧಾರಣ ಶಾಸ್ತ್ರೀಯ ಮತ್ತು ಜಾನಪದ ಕಲಾವಿದರನ್ನು ಅಂತಿಮ ಗಾಲಾ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಏಕವ್ಯಕ್ತಿ ಪ್ರದರ್ಶನಗಳೊಂದಿಗೆ ಪ್ರಾರಂಭಿಸಿ, ಸ್ಪರ್ಧಿಗಳನ್ನು ನಾಲ್ಕು ಜನರ ಗುಂಪುಗಳಾಗಿ, ನಂತರ ಎಂಟು ಜನರ ಗುಂಪುಗಳಾಗಿ ಮತ್ತು ಅಂತಿಮವಾಗಿ ಹತ್ತು ಜನರ ಗುಂಪುಗಳಾಗಿ ಸಂಯೋಜಿಸಲಾಗಿದೆ. ಈ ಗುಂಪುಗಳು ಮೂಲ ಸಂಗೀತವನ್ನು ರಚಿಸುತ್ತವೆ ಮತ್ತು ಹಳೆಯ ಜಾನಪದ ಗೀತೆಗಳನ್ನು ಮರುಸೃಷ್ಟಿಸಿ ಸಂಗೀತ ಪ್ರತಿಭೆಯ ಅದ್ಭುತ ಸಿಂಫನಿಯನ್ನು ರೂಪಿಸುತ್ತವೆ. ಹತ್ತು ಜನರನ್ನು ಒಳಗೊಂಡಿರುವ ಅಂತಿಮ ಟಾಪ್ 3 ತಂಡಗಳು ಮಹಾ ಸಿಂಫನಿಯನ್ನು ರಚಿಸುತ್ತವೆ, ಅಲ್ಲಿ ಅವರು ಪ್ರತಿಷ್ಠಿತ WAVES ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ಮಾಡುವ ಅವಕಾಶವನ್ನು ಪಡೆಯುತ್ತಾರೆ. ಈ ಸರಣಿಯ ಮೂರು ವಿಜೇತ ತಂಡಗಳು ಉತ್ಸಾಹಭರಿತ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಹೊಸ ಶೈಲಿಗಳು, ಪ್ರಕಾರಗಳು ಮತ್ತು ಸಂಗೀತದ ಪ್ರಭಾವಗಳನ್ನು ಪರಿಚಯಿಸುವ ಅವಕಾಶವನ್ನು ಸಹ ಪಡೆಯುತ್ತಾರೆ.

ಸಿಂಫನಿ ಆಫ್ ಚಾಲೆಂಜ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಶ್ವ ಆಡಿಯೋ ವಿಷ್ಯುವಲ್ & ಎಂಟರ್ಟೈನ್ಮೆಂಟ್ ಸಮ್ಮಿಟ್ (WAVES) ಗಾಗಿ ಆರಂಭಿಸಿದ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1' ರ 25 ಚಾಲೆಂಜ್ ಗಳಲ್ಲಿ ಒಂದಾಗಿದೆ.

ವಿವರವಾಗಿ ಓದಿ. https://pib.gov.in/PressReleaseIframePage.aspx?PRID=2047812

ಸಿಂಫನಿ ಆಫ್ ಇಂಡಿಯಾ ಚಾಲೆಂಜ್, ಭಾಗವಹಿಸುವವರಿಗೆ ತಮ್ಮ ಸಂಗೀತವನ್ನು ವಿವಿಧ ಮತ್ತು ವಿಶಾಲ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವ, ತಮ್ಮ ವೃತ್ತಿಜೀವನಕ್ಕೆ ಒಂದು ಅದ್ಭುತ ಆರಂಭ ನೀಡುವ, ಮತ್ತು ಸಂಗೀತ ಹಾಗೂ ಮನರಂಜನೆಯ ಕ್ರಿಯಾತ್ಮಕ ಜಗತ್ತಿನಲ್ಲಿ ಮನ್ನಣೆ ಪಡೆಯುವ ಒಂದು ಅಮೂಲ್ಯ ಅವಕಾಶವನ್ನು ಒದಗಿಸುತ್ತದೆ.

ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಒಂದು ರೋಮಾಂಚಕ ಅನುಭವವಾಗಲಿದೆ ಎಂದು ನಂಬಲಾಗಿದೆ. ವಿವಿಧ ಪ್ರಕಾರಗಳ ಸಂಗೀತದ ರಸದೌತಣವನ್ನು ಸವಿಯುವ ಅವಕಾಶ ಅವರಿಗೆ ಸಿಗುತ್ತದೆ. ಸಂಗೀತ ಪ್ರಿಯರ ವಿವಿಧ ಅಭಿರುಚಿಗಳನ್ನು ಆಚರಿಸುವ ಈ ಕಾರ್ಯಕ್ರಮ ನಿಜಕ್ಕೂ ವಿಶೇಷವಾಗಿರುತ್ತದೆ.

ಸಿಂಫನಿ ಆಫ್ ಇಂಡಿಯಾ ಚಾಲೆಂಜ್ ಸೃಜನಶೀಲತೆ ಮತ್ತು ಸಂಗೀತದ ಗಡಿಗಳನ್ನು ಮೀರಿ, ಸಮುದಾಯ, ನಾವೀನ್ಯತೆ ಮತ್ತು ಬೆಳವಣಿಗೆಯ ಪ್ರಜ್ಞೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. WAVES ಯುವ ಪ್ರತಿಭೆಯನ್ನು ಪೋಷಿಸಲು ಮತ್ತು ಜಗತ್ತಿನಾದ್ಯಂತ ಪ್ರೇಕ್ಷಕರಿಗೆ ಹೊಸ ಸಂಗೀತ ಅನುಭವಗಳನ್ನು ನೀಡಲು ಒಂದು ಪ್ರಮುಖ ವೇದಿಕೆಯಾಗಲಿದೆ.

ಈ ಚಾಲೆಂಜ್ ಅನ್ನು ದೂರದರ್ಶನವು, ಮಹಾವೀರ್ ಜೈನ್ ಫಿಲ್ಮ್ಸ್  ಸಹಯೋಗದೊಂದಿಗೆ ನಿರ್ಮಾಣ ಮಾಡುತ್ತಿದೆ ಮತ್ತು ಅನುಭವಿ ಶೋ ನಿರ್ದೇಶಕಿ ಶ್ರುತಿ ಅನಿಂದಿತ ವರ್ಮಾ ಅವರ ನಿರ್ದೇಶನದಲ್ಲಿ ನಡೆಯುತ್ತಿದೆ. ಪ್ರತಿಭಾವಂತ ನಿರೂಪಕ ಗೌರವ್ ದುಬೆ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಪದ್ಮಶ್ರೀ ಸೋಮಾ ಘೋಷ್, ಗಾಯಕಿ ಶ್ರುತಿ ಪಾಠಕ್ ಮತ್ತು ಜಾನಪದ ಗಾಯಕ ಸ್ವರೂಪ್ ಖಾನ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಹೊಂದಿರುವ ಭಾರತೀಯ ಮಾರ್ಗದರ್ಶಕರಾದ ತಾಳವಾದ್ಯ ವಾದಕ ತೌಫೀಕ್ ಖುರೇಶಿ, ಪದ್ಮಶ್ರೀ ಕೊಳಲು ವಾದಕ ರೋಣು ಮಜುಂದಾರ್, ಪಿಟೀಲು ವಾದಕಿ ಸುನಿತಾ ಭುಯಾನ್, ತಾಳವಾದ್ಯ ವಾದಕ ಪಂಡಿತ್ ದಿನೇಶ್, ಶ್ರೀ ತನ್ಮೋಯ್ ಬೋಸ್, ಲೆಸ್ಲಿ ಲೂಯಿಸ್ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಅವರು ಈ ಸರಣಿಯಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

ಸಿಂಫನಿ ಆಫ್ ಇಂಡಿಯಾ ಚಾಲೆಂಜ್ ಶೀಘ್ರದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಈವೆಂಟ್ ನವೀಕರಣಗಳಿಗಾಗಿ ನೋಂದಾಯಿಸಲು, ದಯವಿಟ್ಟು ಅಧಿಕೃತ WAVES ವೆಬ್ಸೈಟ್ http://www.wavesindia.org ಗೆ ಭೇಟಿ ನೀಡಿ.

WAVES ಕುರಿತು:

ವಿಶ್ವ ಆಡಿಯೋ ವಿಷ್ಯುವಲ್ ಮತ್ತು ಎಂಟರ್ಟೈನ್ಮೆಂಟ್ ಸಮ್ಮಿಟ್ನ (WAVES) ಉದ್ಘಾಟನಾ ಆವೃತ್ತಿಯು 2025 ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯವು WAVES ಅನ್ನು ಪ್ರಸಾರ, ಡಿಜಿಟಲ್ ಮಾಧ್ಯಮ, ಜಾಹೀರಾತು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಇ-ಸ್ಪೋರ್ಟ್ಸ್ ಮತ್ತು ಸಂಗೀತ ಕ್ಷೇತ್ರಗಳ ಜಾಗತಿಕ ವೇದಿಕೆಯಾಗಿ ರೂಪಿಸಿದೆ. WAVES 2025, ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಭಾರತವನ್ನು ಪ್ರಮುಖ ಹೂಡಿಕೆ ತಾಣವಾಗಿ ಸ್ಥಾಪಿಸಲು ಮಹತ್ವದ ಘೋಷಣೆಗಳು ಮತ್ತು ಉಪಕ್ರಮಗಳನ್ನು ಒಳಗೊಂಡಿರುತ್ತದೆ.

 

*****


(Release ID: 2103099) Visitor Counter : 22