ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ನವದೆಹಲಿಯ ಕರ್ತವ್ಯ ಪಥದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆಗೆ ಸಾಕ್ಷಿಯಾದ ಪಂಚಾಯತ್ ಪ್ರತಿನಿಧಿಗಳು


76ನೇ ಗಣರಾಜ್ಯೋತ್ಸವದ ಮುನ್ನಾ ದಿನ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರಿಂದ ಗ್ರಾಮ ಪ್ರಧಾನ್‌ಗಳಿಗೆ ಸನ್ಮಾನ

ನಮ್ಮ ಹಳ್ಳಿಗಳು ಸಬಲೀಕರಣವಾದಾಗ ಮಾತ್ರ ಭಾರತ "ಆತ್ಮನಿರ್ಭರ"ವಾಗಲು ಸಾಧ್ಯ: ಶ್ರೀ ರಾಜೀವ್ ರಂಜನ್ ಸಿಂಗ್

Posted On: 26 JAN 2025 2:04PM by PIB Bengaluru

76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಪತ್ನಿಯರು 575ಕ್ಕೂ ಹೆಚ್ಚು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು, ಅವರು ಗ್ರಾಮೀಣ ಭಾರತದ ನಾಡಿಮಿಡಿತ ಸಂಕೇತಿಸುವ ಭವ್ಯ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಿದರು. ಅವರಲ್ಲಿ, ಸುಮಾರು 40%ರಷ್ಟು ಮಹಿಳೆಯರು ಭಾಗವಹಿಸಿದ್ದರು, ಇದು ಲಿಂಗ-ಸಮಾನತೆಯ ಆಡಳಿತ ನೀಡುವ ಕಡೆಗಿನ ಗಮನಾರ್ಹ ಪ್ರಗತಿಗೆ ಉದಾಹರಣೆಯಾಗಿದೆ. ತಳಮಟ್ಟದ ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರಯತ್ನದಲ್ಲಿ, ಪಂಚಾಯತ್ ರಾಜ್ ಸಚಿವಾಲಯವು 2025 ಜನವರಿ 25ರಂದು ನವದೆಹಲಿಯಲ್ಲಿ ಸರಪಂಚ್‌ಗಳು, ಗ್ರಾಮ ಪ್ರಧಾನರು ಮತ್ತು ಇತರೆ ಪಂಚಾಯಿತಿ ಪ್ರತಿನಿಧಿಗಳು ಸೇರಿದಂತೆ ಪಂಚಾಯತ್ ಮಟ್ಟದ ನಾಯಕರನ್ನು ಸನ್ಮಾನಿಸಿತು. ಪಂಚಾಯತ್‌ಗಳ ಈ ವಿಶೇಷ ಅತಿಥಿಗಳು ಸರ್ಕಾರದ 10 ಮಹತ್ವಾಕಾಂಕ್ಷಿ ಯೋಜನೆಗಳಾದ ಹರ್ ಘರ್ ಜಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಮಿಷನ್ ಇಂದ್ರಧನುಷ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಆಯುಷ್ಮಾನ್ ಭಾರತ್), ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ್ ಮಂತ್ರಿ ಪೋಷಣ್ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಅಸಾಧಾರಣ ಕೆಲಸ ಮಾಡಿದ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದಾರೆ.

ಗಣರಾಜ್ಯೋತ್ಸವದ ಮುನ್ನಾ ದಿನ ನವದೆಹಲಿಯಲ್ಲಿ ನಡೆದ ಗ್ರಾಮ ಪಂಚಾಯಿತಿಗಳ ಮುಖ್ಯಸ್ಥರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಪಂಚಾಯತ್ ನಾಯಕರು ಗ್ರಾಮೀಣ ಪರಿವರ್ತನೆಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದು, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸರಾಗವಾಗಿ ಅನುಷ್ಠಾನಗೊಳಿಸುವಲ್ಲಿ ಮತ್ತು ಸಕ್ರಿಯವಾಗಿ ಭಾಗವಹಿಸುವ ಆಡಳಿತದ ಮನೋಭಾವ ಬೆಳೆಸುವಲ್ಲಿ ಅತ್ಯಂತ ಜವಾಬ್ದಾರಿಯುತರಾಗಿದ್ದಾರೆ. ಈ ತಳಮಟ್ಟದ ನಾಯಕರು ದೇಶಾದ್ಯಂತ, ಸಮಾಜದ ಎಲ್ಲಾ ವರ್ಗಗಳಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಪ್ರಯೋಜನಕಾರಿಯಾದ 10 ಪ್ರಮುಖ ಯೋಜನೆಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಸ್ಪಷ್ಟ ಫಲಿತಾಂಶಗಳ ಮೂಲಕ ಸುಧಾರಿತ "ಜೀವನ ಸುಲಭತೆ"ಯನ್ನು ಖಚಿತಪಡಿಸಿದ್ದಾರೆ. ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನ ವಿಶೇಷ ಅತಿಥಿಗಳಾಗಿ 575ಕ್ಕಿಂತ ಹೆಚ್ಚಿನ ಪಂಚಾಯತ್ ಪ್ರತಿನಿಧಿಗಳು ಮತ್ತು ಅವರ ಸಂಗಾತಿಗಳು ಭಾಗವಹಿಸಿದ್ದಕ್ಕಾಗಿ ಕೇಂದ್ರ ಸಚಿವರು ಹೆಮ್ಮೆ ವ್ಯಕ್ತಪಡಿಸಿದರು, ಅವರ ಭಾಗವಹಿಸುವಿಕೆಯು ಕರ್ಮಕ್ಷೇತ್ರದಿಂದ ಕರ್ತವ್ಯ ಪಥದವರೆಗಿನ ಅವರ ಪ್ರಯಾಣವನ್ನು ಸಂಕೇತಿಸುತ್ತದೆ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರ ಮಹತ್ವದ ನಾಯಕತ್ವವನ್ನು ಶ್ರೀ ರಾಜೀವ್ ರಂಜನ್ ಸಿಂಗ್ ಶ್ಲಾಘಿಸಿದರು, ವಿಶೇಷ ಅತಿಥಿಗಳಲ್ಲಿ 132 ಮಹಿಳಾ ಪ್ರಧಾನರು ಸೇರಿದ್ದಾರೆ, ಗ್ರಾಮೀಣ ಆಡಳಿತದಲ್ಲಿ ಅವರು ಪರಿವರ್ತನೀಯ ಪಾತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂದರು. ಆರ್ಥಿಕ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಕಳೆದ ದಶಕದಲ್ಲಿ ಪಂಚಾಯತ್‌ಗಳಿಗೆ ಹಣಕಾಸು ಹಂಚಿಕೆಯಲ್ಲಿ 6 ಪಟ್ಟು ಹೆಚ್ಚಳವಾಗಿದೆ. ನಿಧಿ ಹಂಚಿಕೆ 60,972 ಕೋಟಿ ರೂ.ಗಳಿಂದ(2005–2014) 3,94,140 ಕೋಟಿ ರೂ.ಗಳಿಗೆ(2014–2024) ಹೆಚ್ಚಾಗಿದೆ. ಇದು ಸ್ಥಳೀಯ ಪರಂಪರೆ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತಾ ಅಭಿವೃದ್ಧಿಯನ್ನು ಹೆಚ್ಚಿಸುವ ಅವರ ಸಾಮರ್ಥ್ಯವನ್ನು ಬಲಪಡಿಸಿದೆ. "ಒಂದು ಸಮೃದ್ಧ ಗ್ರಾಮೀಣ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯವಾಗಿದೆ. "ಸ್ವಾಮಿತ್ವ ಯೋಜನೆಯ ಮೂಲಕ ಹಳ್ಳಿಗಳಲ್ಲಿನ ಆಸ್ತಿ ವಿವಾದಗಳು ಕಡಿಮೆಯಾಗಿವೆ, ಇದು ಶಾಂತಿ, ಸಾಮರಸ್ಯ ಮತ್ತು ಆರ್ಥಿಕ ಸಮೃದ್ಧಿಗೆ ದಾರಿ ಮಾಡಿಕೊಟ್ಟಿದೆ". ಮಹಿಳೆಯರು "ಆತ್ಮನಿರ್ಭರ"ವಾಗಲು ಅವರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.

ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಾಘೇಲ್ ಮಾತನಾಡಿ, ಕಳೆದ ದಶಕದಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗಾಗಿ ಪಂಚಾಯತ್‌ಗಳಿಗೆ ಹಂಚಿಕೆಯಾದ ನಿಧಿಯಲ್ಲಿ ಗಮನಾರ್ಹ ಬೆಳವಣಿಗೆ ಆಗಿದೆ. ಹಣಕಾಸು ವಿತರಣೆಯಲ್ಲಿ 6 ಪಟ್ಟು ಹೆಚ್ಚಾಗಿದೆ. 13ನೇ ಹಣಕಾಸು ಆಯೋಗದ ಅಡಿ, ಆಗುತ್ತಿದ್ದ ತಲಾ ವಾರ್ಷಿಕ ಹಂಚಿಕೆ 176 ರೂ.ನಿಂದ 15ನೇ ಹಣಕಾಸು ಆಯೋಗದ ಅಡಿ 674 ರೂ.ಗೆ ಏರಿಕೆ ಕಂಡಿದೆ. ತಳಮಟ್ಟದ ಆಡಳಿತಕ್ಕೆ ಸರಕಾರವು ಮಹತ್ವ ನೀಡಿದೆ. ಪಂಚಾಯತ್ ಪ್ರತಿನಿಧಿಗಳು ಭಾರತದ ಪ್ರಜಾಪ್ರಭುತ್ವದ ಬೆನ್ನೆಲುಬಾಗಿದ್ದು, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುತ್ತಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಲಾಗಿದ್ದು, ಪರಿವರ್ತನೀಯ ಪರಿಣಾಮಗಳು ಕಂಡುಬರುತ್ತಿವೆ. ಇದು ಗ್ರಾಮೀಣ ಅಭಿವೃದ್ಧಿ ಮುನ್ನಡೆಸಲು ಮಹಿಳೆಯರಿಗೆ ಅಧಿಕಾರ ನೀಡಿದೆ, ಲಿಂಗ-ಸಮಾನತೆಯ ಆಡಳಿತಕ್ಕಾಗಿ ಜಾಗತಿಕ ಮಾನದಂಡವನ್ನು ನಿಗದಿಪಡಿಸಿದೆ. ವಿವಿಧ ಸರ್ಕಾರಿ ಯೋಜನೆಗಳ ಅಡಿ, ಪಿಂಚಣಿ ಮತ್ತು ಸವಲತ್ತುಗಳಂತಹ ಅಗತ್ಯ ಸೇವೆಗಳನ್ನು ಜನರಿಗೆ ಒದಗಿಸಲು ಪಂಚಾಯತ್ ಭವನಗಳನ್ನು ಬಳಸಿಕೊಳ್ಳುವಂತೆ ಪ್ರೊ. ಬಘೇಲ್ ಅವರು ಪಂಚಾಯಿತಿಗಳನ್ನು ಪ್ರೋತ್ಸಾಹಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹವಾಮಾನ ಮುನ್ಸೂಚನೆಯ ಪ್ರಾಮುಖ್ಯತೆಗೆ ಒತ್ತು ನೀಡಬೇಕು, 'ಮೇರಿ ಪಂಚಾಯತ್' ಆ್ಯಪ್ ಬಳಕೆ ಬಗ್ಗೆಯೂ ಜಾಗೃತರಾಗಬೇಕು. ಗ್ರಾಮ ಪ್ರಧಾನರನ್ನು, ವಿಶೇಷವಾಗಿ ಮಹಿಳಾ ಪ್ರಧಾನರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಆಚೆಗೆ ನಾಯಕತ್ವದ ಪಾತ್ರಗಳತ್ತ ಗುರಿ ಇಡಬೇಕು. ಆಡಳಿತದಲ್ಲಿ ಹೆಚ್ಚಿನ ಸಬಲೀಕರಣದತ್ತ ಒಂದು ಹೆಜ್ಜೆಯಾಗಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮಾತನಾಡಿ, ಇ-ಗ್ರಾಮ್ ಸ್ವರಾಜ್, ಭಾಷಿಣಿ, ಮೇರಿ ಪಂಚಾಯತ್ ಆಪ್, ಪಂಚಾಯತ್ ನಿರ್ನೈ, ಗ್ರಾಮ ಮಂಚಿತ್ರ ಮುಂತಾದ ತಾಂತ್ರಿಕ ಆವಿಷ್ಕಾರಗಳ ಮೂಲಕ ಗ್ರಾಮೀಣ ಸಬಲೀಕರಣದತ್ತ ಸಾಮೂಹಿಕ ಸಂಕಲ್ಪ ಮಾಡಲಾಗಿದೆ. ಪಂಚಾಯತ್‌ಗಳು ಹೆಚ್ಚು ಚುರುಕಾಗುತ್ತಿವೆ ಮತ್ತು ಪಾರದರ್ಶಕವಾಗುತ್ತಿವೆ. ಅವು ಭಾರತವನ್ನು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವತ್ತ ಕೊಂಡೊಯ್ಯುತ್ತಿವೆ. ದೀರ್ಘಕಾಲೀನ ಅಭಿವೃದ್ಧಿ ಗುರಿಗಳನ್ನು ಉಳಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ "ಗ್ರಾಮೋದಯ ಸಂಕಲ್ಪ" ಪತ್ರಿಕೆಯ 15ನೇ ಇ-ಆವೃತ್ತಿಯ ಬಿಡುಗಡೆ ನಡೆಯಿತು. ಇದರಲ್ಲಿ ವಿಶಿಷ್ಟ ಸಾಧನೆ ಮಾಡಿದ ಪಂಚಾಯತ್‌ಗಳನ್ನು ಗೌರವಿಸಲಾಯಿತು, ಸಂವಿಧಾನ ದಿನದ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ, ಪಂಚಾಯತಿ ರಾಜ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹನಿ, ಜಂಟಿ ಕಾರ್ಯದರ್ಶಿ ಶ್ರೀ ಅಲೋಕ್ ಪ್ರೇಮ್ ನಗರ್, ಆರ್ಥಿಕ ಸಲಹೆಗಾರ ಶ್ರೀ ಡಾ. ಬಿಜಯ ಕುಮಾರ್ ಬೆಹೆರಾ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

SH1_6220.JPG

SH1_6299.JPG

SH1_6304.JPG

WhatsApp Image 2025-01-26 at 13.26.10.jpeg

WhatsApp Image 2025-01-26 at 12.20.24.jpeg

WhatsApp Image 2025-01-26 at 13.02.36.jpeg

 

*****


(Release ID: 2096511) Visitor Counter : 19