ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ
ಕಳೆದ ದಶಕದಲ್ಲಿ, ಈ ಯೋಜನೆಯು ಭಾರತದಲ್ಲಿ ಲಿಂಗ ಸಮಾನತೆ ಮತ್ತು ಹೆಣ್ಣು ಮಗುವಿನ ಸ್ಥಿತಿಯನ್ನು ಸುಧಾರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ
10ನೇ ವಾರ್ಷಿಕೋತ್ಸವದ ಆಚರಣೆಗಳು ಜನವರಿ 22 ರಿಂದ ಮಾರ್ಚ್ 8, 2025 ರವರೆಗೆ ಮುಂದುವರಿಯುತ್ತವೆ, ಅಂತರರಾಷ್ಟ್ರೀಯ ಮಹಿಳಾ ದಿನದಂದು ಮುಕ್ತಾಯಗೊಳ್ಳುತ್ತವೆ
ಉದ್ಘಾಟನಾ ಸಮಾರಂಭದಲ್ಲಿ ಅತ್ಯುತ್ತಮ ಅಭ್ಯಾಸಗಳ ಸಂಕಲನ, ಮಿಷನ್ ವಾತ್ಸಲ್ಯ ಪೋರ್ಟಲ್, ಮಿಷನ್ ಶಕ್ತಿ ಪೋರ್ಟಲ್ ಮತ್ತು ಮಿಷನ್ ಶಕ್ತಿ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಹಲವಾರು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಯಿತು, ಇವೆಲ್ಲವೂ ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೆ ಸರ್ಕಾರದ ಬದ್ಧತೆಯನ್ನು ಇನ್ನಷ್ಟು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ
Posted On:
22 JAN 2025 6:59PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇಂದು ಬೇಟಿ ಬಚಾವೋ ಬೇಟಿ ಪಢಾವೋ (ಬಿಬಿಬಿಪಿ) ಯೋಜನೆಯ 10ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಇದು ಲಿಂಗ ಅಸಮತೋಲನವನ್ನು ತೊಡೆದುಹಾಕುವ ಮತ್ತು ಹೆಣ್ಣು ಮಗುವಿನ ಸಬಲೀಕರಣದ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾರತ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುವ ಬಿಬಿಬಿಪಿ ಯೋಜನೆಯಡಿಯಲ್ಲಿ ಒಂದು ದಶಕದಲ್ಲಿ ಮಾಡಿದ ಪ್ರಗತಿಯನ್ನು ಕಾರ್ಯಕ್ರಮವು ಎತ್ತಿ ತೋರಿಸಿತು. ಇದು ಲಿಂಗ ಸಮಾನತೆಯು ನೀತಿಯ ಆದ್ಯತೆ ಮಾತ್ರವಲ್ಲದೆ ಸಾಮಾಜಿಕ ಮಾನದಂಡವೂ ಆಗಿರುವ ವಿಕಸಿತ ಭಾರತ 2047ರ ದೇಶದ ದೃಷ್ಟಿಯನ್ನು ಪುನರುಚ್ಚರಿಸಿತು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ತಮ್ಮ ವಿಶೇಷ ಭಾಷಣದಲ್ಲಿ ಆರೋಗ್ಯ ಮತ್ತು ಶಿಕ್ಷಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಒತ್ತಿ ಹೇಳಿದರು. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಯಶಸ್ಸು ಮಕ್ಕಳ ಲಿಂಗ ಅನುಪಾತ, ಆಸ್ಪತ್ರೆ ಹೆರಿಗೆ ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯ ಸೇವೆಗಳ ಪ್ರವೇಶದಲ್ಲಿ ಗಮನಾರ್ಹ ಸುಧಾರಣೆಯಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಪ್ರತಿ ಹೆಣ್ಣು ಮಗುವೂ ನಾಳಿನ ನಾಯಕಿಯಾಗಿ ಬೆಳೆಯಲು ಅರ್ಹವಾದ ಆರೈಕೆ ಮತ್ತು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಬದ್ಧವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ತಮ್ಮ ಮುಖ್ಯ ಭಾಷಣದಲ್ಲಿ ಬಿಬಿಬಿಪಿಯ ಪರಿವರ್ತಕ ಪರಿಣಾಮವನ್ನು ಶ್ಲಾಘಿಸಿದರು ಮತ್ತು ಈ ಯೋಜನೆಯು ಸಾಮಾಜಿಕ ಬದಲಾವಣೆಗೆ ವೇಗವರ್ಧಕವಾಗಿದೆ ಎಂದು ಒತ್ತಿ ಹೇಳಿದರು. ಬೇಟಿ ಬಚಾವೋ ಬೇಟಿ ಪಢಾವೋ ಉಪಕ್ರಮವು ಸರ್ಕಾರದ ಯೋಜನೆಯಿಂದ ರಾಷ್ಟ್ರವ್ಯಾಪಿ ಆಂದೋಲನವಾಗಿ ಬೆಳೆದಿದೆ ಎಂದು ಹೇಳಿದರು. ಈ 10 ವರ್ಷಗಳ ಪ್ರಯಾಣವು ಹೆಣ್ಣು ಮಗುವಿನ ಸ್ಥಿತಿಯನ್ನು ಸುಧಾರಿಸುವಲ್ಲಿ ಮತ್ತು ಅವರಿಗೆ ಶಿಕ್ಷಣ, ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಸಮಾನ ಅವಕಾಶಗಳನ್ನು ಪಡೆಯುವಲ್ಲಿ ಗಣನೀಯ ಕೊಡುಗೆ ನೀಡಿದೆ ಎಂದು ಶ್ರೀಮತಿ ಅನ್ನಪೂರ್ಣ ದೇವಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ವಿಶೇಷ ಭಾಷಣ ಮಾಡುತ್ತಾ, ಈ ಯೋಜನೆಯಿಂದ ಉಂಟಾದ ಸಾಂಸ್ಕೃತಿಕ ಬದಲಾವಣೆಯನ್ನು ಎತ್ತಿ ತೋರಿಸಿದರು. “ಬೇಟಿ ಬಚಾವೋ ಬೇಟಿ ಪಢಾವೋ ಮಹಿಳೆಯರ ಉನ್ನತಿಗಾಗಿ ನಮ್ಮ ಸಾಮೂಹಿಕ ಬದ್ಧತೆಯ ಪ್ರತಿಬಿಂಬವಾಗಿದೆ” ಎಂದು ಅವರು ಹೇಳಿದರು. ಈ ಸಾಧನೆಯನ್ನು ಆಚರಿಸುವ ಮೂಲಕ, ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ, ಆರೋಗ್ಯ ಮತ್ತು ಅವಕಾಶಗಳ ಪೂರ್ಣ ಭವಿಷ್ಯವನ್ನು ಹೊಂದಿರುವ ವಾತಾವರಣವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಶ್ರೀಮತಿ ಠಾಕೂರ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಅಭ್ಯಾಸಗಳ ಸಂಕಲನ, ಮಿಷನ್ ವಾತ್ಸಲ್ಯ ಪೋರ್ಟಲ್, ಮಿಷನ್ ಶಕ್ತಿ ಪೋರ್ಟಲ್ ಮತ್ತು ಮಿಷನ್ ಶಕ್ತಿ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ಹಲವಾರು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಯಿತು, ಇವೆಲ್ಲವನ್ನೂ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಇನ್ನಷ್ಟು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಸಶಸ್ತ್ರ ಪಡೆಗಳು, ಪೊಲೀಸ್, ಅರೆಸೇನಾ ಪಡೆಗಳು, ವೈದ್ಯಕೀಯ, ವಿಜ್ಞಾನ, ಸರ್ಕಾರ ಮತ್ತು ಇತರ ಕ್ಷೇತ್ರಗಳ ಹೆಸರಾಂತ ಮಹಿಳಾ ಅಧಿಕಾರಿಗಳು ಹಾಗೂ ಉತ್ಸಾಹಿ ವಿದ್ಯಾರ್ಥಿನಿಯರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಕಳೆ ತಂದಿತು.
Click here to see pdf
ಕಳೆದ ದಶಕದಲ್ಲಿ, ಬಿಬಿಬಿಪಿ ಯೋಜನೆಯು ಭಾರತದಲ್ಲಿ ಲಿಂಗ ಸಮಾನತೆ ಮತ್ತು ಹೆಣ್ಣು ಮಗುವಿನ ಸ್ಥಿತಿಯನ್ನು ಸುಧಾರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ.
ಜನನದಲ್ಲಿ ರಾಷ್ಟ್ರೀಯ ಲಿಂಗ ಅನುಪಾತ (ಎಸ್ ಆರ್ ಬಿ) 2014-15 ರಲ್ಲಿದ್ದ 918 ರಿಂದ 2023-24 ರಲ್ಲಿ 930 ಕ್ಕೆ ಸುಧಾರಿಸಿದೆ. ಮಾಧ್ಯಮಿಕ ಹಂತದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು ಶೇ.75.5% ರಿಂದ ಶೇ.78 ಕ್ಕೆ ಏರಿದೆ ಮತ್ತು ಆಸ್ಪತ್ರೆ ಹೆರಿಗೆಗಳು ಶೇ.61 ರಿಂದ ಶೇ.97.3 ಕ್ಕೆ ಏರಿಕೆಯಾಗಿವೆ. ಹೆಚ್ಚುವರಿಯಾಗಿ, ಮೊದಲ ತ್ರೈಮಾಸಿಕ ಪ್ರಸವಪೂರ್ವ ಆರೈಕೆ ನೋಂದಣಿಗಳು ಶೇ.61 ರಿಂದ ಶೇ.80.5 ಕ್ಕೆ ಹೆಚ್ಚಿವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 22, 2015 ರಂದು ಚಾಲನೆ ನೀಡಿದ ಬಿಬಿಬಿಪಿ ಯೋಜನೆಯು ಭಾರತದಲ್ಲಿ ಲಿಂಗ ತಾರತಮ್ಯ ಮತ್ತು ಕ್ಷೀಣಿಸುತ್ತಿರುವ ಮಕ್ಕಳ ಲಿಂಗ ಅನುಪಾತಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಿದೆ. ಹೆಣ್ಣು ಮಗುವನ್ನು ಗೌರವಿಸುವ, ಅವರ ಹಕ್ಕುಗಳು ಮತ್ತು ಅವಕಾಶಗಳ ರಕ್ಷಣೆಯನ್ನು ಖಾತ್ರಿಪಡಿಸುವ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಸಾಂಸ್ಕೃತಿಕ ಬದಲಾವಣೆಯನ್ನು ಉತ್ತೇಜಿಸುವಲ್ಲಿ ಈ ಯೋಜನೆಯು ಪ್ರಮುಖ ಪಾತ್ರ ವಹಿಸಿದೆ.
10ನೇ ವಾರ್ಷಿಕೋತ್ಸವದ ಆಚರಣೆಗಳು ಜನವರಿ 22 ರಿಂದ ಮಾರ್ಚ್ 8, 2025 ರವರೆಗೆ ನಡೆಯಲಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮುಕ್ತಾಯವಾಗುತ್ತವೆ. ಬಿಬಿಬಿಪಿ ಯೋಜನೆಯ ಉದ್ದೇಶಗಳನ್ನು ಉತ್ತೇಜಿಸಲು ರ್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಭಿಯಾನಗಳು ಸೇರಿದಂತೆ ರಾಷ್ಟ್ರವ್ಯಾಪಿ ಚಟುವಟಿಕೆಗಳ ಸರಣಿಯನ್ನು ಆಯೋಜಿಸಲಾಗುತ್ತದೆ. ಹೆಚ್ಚುವರಿಯಾಗಿ, ಭಾರತ ಸರ್ಕಾರದ ಸಮಗ್ರ ಅಭಿವೃದ್ಧಿಯ ವಿಶಾಲ ದೃಷ್ಟಿಗೆ ಅನುಗುಣವಾಗಿ ಸುಸ್ಥಿರತೆ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸಲು ಗಿಡ ನೆಡುವ ಅಭಿಯಾನವನ್ನು ಕೈಗೊಳ್ಳಲಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ಸಕಾರಾತ್ಮಕ ಬದಲಾವಣೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ, ದೇಶಾದ್ಯಂತ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುತ್ತಿದೆ.
*****
(Release ID: 2095301)
Visitor Counter : 8