ಸಂಸ್ಕೃತಿ ಸಚಿವಾಲಯ
azadi ka amrit mahotsav

ಮಹಾ ಕುಂಭ: ಗಡಿಯಾಚೆಗೂ ಹರಡಿದೆ ಸಂಭ್ರಮ

Posted On: 13 JAN 2025 6:58PM by PIB Bengaluru

ಮಹಾ ಕುಂಭಕ್ಕೆ ಪಿನಾರ್ ಅವರ ಪ್ರಯಾಣವು ಆ ಕುರಿತ ಕನಸಿನೊಂದಿಗೆ ಪ್ರಾರಂಭವಾಯಿತು. ಟರ್ಕಿಯ ಪ್ರಜೆಯಾಗಿದ್ದ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತೀವ್ರ ಕುತೂಹಲ ಹೊಂದಿದ್ದರು, ಮಹಾ ಕುಂಭವನ್ನು ವ್ಯಾಖ್ಯಾನಿಸುವ ನಂಬಿಕೆ, ಸಂಪ್ರದಾಯ ಮತ್ತು ಮಾನವೀಯತೆಯ ನಿಗೂಢ ಸಂಗಮದ ಕಥೆಗಳನ್ನು ಬಹಳ ಸಮಯದಿಂದ ಕೇಳಿದ್ದರು. 2025 ರ ಜನವರಿಯಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮ ಸ್ಥಳದ ಮರಳಿನ ಮೇಲೆ ನಿಂತಾಗ ಅವರ ಕನಸು ನನಸಾಯಿತು.

ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ ಪಿನಾರ್ ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದರು, ಇದು ಸನಾತನ ಧರ್ಮದಲ್ಲಿ ಆಳವಾದ ಮಹತ್ವವನ್ನು ಹೊಂದಿರುವ ಶುದ್ಧೀಕರಣದ ಕ್ರಿಯೆಯಾಗಿದೆ. ಹಣೆಯ ಮೇಲೆ ತಿಲಕವಿಟ್ಟ ಅವರು ಪವಿತ್ರ ನೀರು ತಮ್ಮನ್ನು ಆವರಿಸಿಕೊಂಡ ಕ್ಷಣದಲ್ಲಿ ದೈವತ್ವದಲ್ಲಿ ಸಂಪೂರ್ಣವಾಗಿ ಮುಳುಗಿದರು. "ಇಲ್ಲಿನ ವಾತಾವರಣವು ದೈವಿಕ ಮತ್ತು ಭವ್ಯವಾಗಿದೆ" ಎಂದು ಅವರು ತಮ್ಮ ಅನುಭವ ಹಂಚಿಕೊಂಡರು, ಅವರ ಧ್ವನಿ ವಿಸ್ಮಯದಿಂದ ತುಂಬಿ ತುಳುಕುತ್ತಿತ್ತು. ಪಿನಾರ್ ಗೆ ಇದು ಕೇವಲ ಖಂಡಗಳಾದ್ಯಂತದ ಪ್ರಯಾಣವಾಗಿರಲಿಲ್ಲ, ಬದಲು ಆಳವಾದ ಆಧ್ಯಾತ್ಮಿಕ ಜಾಗೃತಿಯಾಗಿತ್ತು.

ಕಾರ್ಯಕ್ರಮದ  ಶಕ್ತಿ ಮತ್ತು ಪಾವಿತ್ರ್ಯದ ಬಗ್ಗೆ ಅವರ ಮೆಚ್ಚುಗೆ ಬಹಳ ಸ್ಪಷ್ಟವಾಗಿತ್ತು. ಧ್ಯಾನ ಮತ್ತು ತಿಲಕ ಇಡುವ ಆಚರಣೆಗಳಲ್ಲಿ ಭಾಗವಹಿಸಿದ ಅವರು ಭಾರತದ ಪ್ರಾಚೀನ ಸಂಪ್ರದಾಯಗಳೊಂದಿಗೆ ಆಳವಾದ ಸಂಪರ್ಕವನ್ನು ಅನುಭವಿಸಿದರು. "ಸಂಗಮದ ಮರಳಿನ ಮೇಲೆ ನಡೆಯುವುದು ಮತ್ತು ಗಂಗಾದಲ್ಲಿ ಪವಿತ್ರ ಸ್ನಾನ ಮಾಡುವುದು ನಾನು ಎಂದಿಗೂ ಮರೆಯಲಾಗದ ಅನುಭವಗಳು" ಎಂದು ಅವರು ಸನಾತನ ಧರ್ಮದ ಬಗ್ಗೆ ತಮಗೆ ಲಭಿಸಿದ ಹೊಸ ತಿಳುವಳಿಕೆ ಮತ್ತು ಗೌರವವನ್ನು ಪ್ರತಿಬಿಂಬಿಸಿದರು.

ಮಹಾ ಕುಂಭ 2025 ಭಾರತದ ಅತಿದೊಡ್ಡ ಆಧ್ಯಾತ್ಮಿಕ ಕೂಟವಾಗಿ ಮಾತ್ರವಲ್ಲದೆ ಲಕ್ಷಾಂತರ ಜನರನ್ನು ಆಕರ್ಷಿಸುವ ಜಾಗತಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿದೆ. ಮಾನವೀಯತೆಯ ಅಮೂರ್ತ ಪರಂಪರೆ ಎಂದು ಹೆಸರಿಸಲಾದ ಮಹಾ ಕುಂಭವು ಸನಾತನ ಸಂಸ್ಕೃತಿಯ ಸಾರವನ್ನು ಪ್ರತಿನಿಧಿಸುತ್ತದೆ ಮತ್ತು ವಿಶ್ವಾದ್ಯಂತ ಕುತೂಹಲವನ್ನು ಹುಟ್ಟುಹಾಕಿದೆ. ಈ ವರ್ಷ, ಕಾರ್ಯಕ್ರಮದ ಜಾಗತಿಕ ಆಕರ್ಷಣೆಯು ಅಂತರರಾಷ್ಟ್ರೀಯ ಸಂದರ್ಶಕರು ಮತ್ತು ಆನ್ ಲೈನ್ ಬಳಕೆದಾರರಿಂದ ಆಸಕ್ತಿಯ ಹೆಚ್ಚಳದಲ್ಲಿ ಸ್ಪಷ್ಟವಾಗಿದೆ. ಖಂಡಗಳಾದ್ಯಂತದ ಜನರು ಭವ್ಯ ಘಟನೆಯ ಬಗ್ಗೆ ಸಕ್ರಿಯವಾಗಿ ಮಾಹಿತಿಯನ್ನು ಹುಡುಕುತ್ತಿದ್ದಾರೆ, ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಆಧ್ಯಾತ್ಮಿಕ ಚೈತನ್ಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.

ಜಾಗತಿಕ ಕುತೂಹಲವನ್ನು ಪೂರೈಸಲು, ಉತ್ತರ ಪ್ರದೇಶದ ಯೋಗಿ ಸರ್ಕಾರವು ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಂಡಿದೆ, ಮಹಾ ಕುಂಭ 2025 ಅನ್ನು "ಡಿಜಿಟಲ್ ಮಹಾ ಕುಂಭ" ಎಂದು ಪ್ರಸ್ತುತಪಡಿಸಿದೆ. ಈ ಉಪಕ್ರಮದ ಕೇಂದ್ರಬಿಂದು ಅಧಿಕೃತ ವೆಬ್ಸೈಟ್ https://kumbh.gov.in/, ಇದು ಮಹಾ ಕುಂಭದ ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಮಹತ್ವದಿಂದ ಹಿಡಿದು ಪ್ರಯಾಣದ ಮಾರ್ಗಸೂಚಿಗಳು ಮತ್ತು ವಸತಿ ಆಯ್ಕೆಗಳವರೆಗೆ ಈ ಪೋರ್ಟಲ್ ಭಕ್ತರು ಮತ್ತು ಪ್ರವಾಸಿಗರಿಗೆ ಏಕ ಗವಾಕ್ಷ ತಾಣವಾಗಿದೆ. ಪ್ರಮುಖ ಆಕರ್ಷಣೆಗಳು, ಪ್ರಮುಖ ಸ್ನಾನದ ಉತ್ಸವಗಳು, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಮತ್ತು ಮಾಧ್ಯಮ ಗ್ಯಾಲರಿಗಳನ್ನು ಆಳವಾದ ಅನುಭವವನ್ನು ಖಚಿತಪಡಿಸಿಕೊಳ್ಳಲು ನಿಖರವಾಗಿ ವಿವರಿಸಲಾಗಿದೆ.

ಡಿಜಿಟಲ್ ಉಪಕ್ರಮವು ಗಮನಾರ್ಹವಾದ ತೊಡಗಿಸಿಕೊಳ್ಳುವಿಕೆಯನ್ನು ದಾಖಲಿಸಿದೆ. ಜನವರಿ ಮೊದಲ ವಾರದಲ್ಲಿ, 183 ದೇಶಗಳಿಂದ 33 ಲಕ್ಷಕ್ಕೂ ಹೆಚ್ಚು ವೀಕ್ಷಕರು ವೆಬ್ಸೈಟ್ ಪ್ರವೇಶಿಸಿದ್ದಾರೆ, ಬಳಕೆದಾರರು ವಿಶ್ವದಾದ್ಯಂತ 6,206 ನಗರಗಳಿಂದ ಬಳಕೆದಾರರು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿ/ಪ್ರವೇಶದಲ್ಲಿ ಭಾರತವು ಮುಂಚೂಣಿಯಲ್ಲಿದ್ದರೆ, ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿವೆ. ವೇದಿಕೆಯ ವ್ಯಾಪ್ತಿಯು ಮತ್ತು ಅದು ತಲುಪಿದ ಪ್ರಮಾಣ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಕಾರ್ಯಕ್ರಮದ ಸಾರ್ವತ್ರಿಕ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.

ವೆಬ್ಸೈಟ್ (ಜಾಲತಾಣವನ್ನು) ನಿರ್ವಹಿಸುವ ತಾಂತ್ರಿಕ ತಂಡವು ಅದರ ಪ್ರಾರಂಭವಾದಾಗಿನಿಂದ ದಟ್ಟಣೆಯಲ್ಲಿ (ವೀಕ್ಷಿಸುವ/ ಭೇಟಿ ನೀಡುವವರ ಸಂಖ್ಯೆಯಲ್ಲಿ)  ಗಣನೀಯ ಏರಿಕೆಯನ್ನು ವರದಿ ಮಾಡಿದೆ, ಕಾರ್ಯಕ್ರಮ  ಸಮೀಪಿಸುತ್ತಿದ್ದಂತೆ ದೈನಂದಿನ ಬಳಕೆದಾರರ ಸಂಖ್ಯೆ  ಲಕ್ಷಾಂತರ ತಲುಪುತ್ತದೆ. ಸಂದರ್ಶಕರು ತಾಣವನ್ನು ಪ್ರವೇಶಿಸುವುದಲ್ಲದೆ, ಅದರ ವಿಷಯವನ್ನು ಅನ್ವೇಷಿಸಲು, ಮಹಾ ಕುಂಭದ ಶ್ರೀಮಂತ ಇತಿಹಾಸ ಮತ್ತು ಆಧ್ಯಾತ್ಮಿಕ ಸಾರವನ್ನು ತಿಳಿಯಲು ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಡಿಜಿಟಲ್ ಮಹಾ ಕುಂಭ ಉಪಕ್ರಮವು ಪ್ರಾಚೀನ ಸಂಪ್ರದಾಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ತಡೆರಹಿತವಾಗಿ ಬೆರೆಸುವುದನ್ನು ಒತ್ತಿಹೇಳುತ್ತದೆ. ವಿಶ್ವಾಸಾರ್ಹ ಮಾಹಿತಿಗೆ ಸುಲಭ ಪ್ರವೇಶವನ್ನು ಒದಗಿಸುವ ಮೂಲಕ, ಭಕ್ತರು ಮತ್ತು ಪ್ರವಾಸಿಗರು ಸಾರಿಗೆ ಸವಾಲುಗಳಿಲ್ಲದೆ ಮಹಾ ಕುಂಭದ ಆಧ್ಯಾತ್ಮಿಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುವುದಕ್ಕೆ  ಉತ್ತರ ಪ್ರದೇಶ ಸರ್ಕಾರ ಈ ವ್ಯವಸ್ಥೆಗಳನ್ನು ಮಾಡಿದೆ.

ಮಹಾ ಕುಂಭ 2025 ತೆರೆದುಕೊಳ್ಳುತ್ತಿದ್ದಂತೆ, ಅದರ ಭವ್ಯತೆಗೆ ಸಾಕ್ಷಿಯಾದವರಲ್ಲಿ ಇದು ವಿಸ್ಮಯ ಮತ್ತು ಪೂಜ್ಯಭಾವನೆಯನ್ನು ಪ್ರೇರೇಪಿಸುತ್ತದೆ. ಪಿನಾರ್ ನಂತಹ ಸಂದರ್ಶಕರಿಗೆ, ಇದು ಹಬ್ಬಕ್ಕಿಂತ ಹೆಚ್ಚು; ಇದು ಸಂಸ್ಕೃತಿಗಳನ್ನು ಬೆಸೆಯುವ ಮತ್ತು ಆಧ್ಯಾತ್ಮಿಕ ಸಂಪರ್ಕಗಳನ್ನು ಆಳಗೊಳಿಸುವ ಪರಿವರ್ತಕ ಪ್ರಯಾಣವಾಗಿದೆ. ಮಹಾ ಕುಂಭದ ಭವ್ಯತೆಯು ಮಾನವೀಯತೆಯನ್ನು ಒಂದುಗೂಡಿಸುವ ನಂಬಿಕೆಯ ಶಾಶ್ವತ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಅದರ ನದಿಗಳಲ್ಲಿ, ಮರಳು ಮತ್ತು ಪವಿತ್ರ ಆಚರಣೆಗಳಲ್ಲಿ, ಇದು ಶುದ್ಧತೆ, ಭಕ್ತಿ ಮತ್ತು ಅರ್ಥಕ್ಕಾಗಿ ಹಂಚಿಕೊಂಡ ಮಾನವ ಅನ್ವೇಷಣೆಯ ಕಾಲಾತೀತ ಸಂದೇಶವನ್ನು ಸಾರುತ್ತದೆ. ತನ್ನ ಜಾಗತಿಕ ವ್ಯಾಪ್ತಿ ಮತ್ತು ಡಿಜಿಟಲ್ ಆವಿಷ್ಕಾರಗಳೊಂದಿಗೆ, ಮಹಾ ಕುಂಭವು ತನ್ನ ಸಂಪ್ರದಾಯಗಳನ್ನು ಸಂರಕ್ಷಿಸುವುದಲ್ಲದೆ ಅವುಗಳನ್ನು ಸಂಪರ್ಕಿತ ಜಗತ್ತಿಗೂ  ಕೊಂಡೊಯ್ಯುತ್ತಿದೆ.

ವರ್ಷ, ಸಂಗಮದಲ್ಲಿ ಲಕ್ಷಾಂತರ ಜನರು ಸೇರುತ್ತಿರುವಾಗ, ಮಹಾ ಕುಂಭವು ಆಧ್ಯಾತ್ಮಿಕ ಕೇಂದ್ರಬಿಂದುವಾಗಿ ತನ್ನ ಸ್ಥಾನವನ್ನು ಮರುದೃಢೀಕರಿಸುತ್ತದೆ, ಅಲ್ಲಿ ಪ್ರಾಚೀನ ಆಚರಣೆಗಳು ಮತ್ತು ಆಧುನಿಕ ಆಕಾಂಕ್ಷೆಗಳು ಜೀವನ ಮತ್ತು ದೈವತ್ವದ ಕೊಂಡಾಡುವಿಕೆಯಲ್ಲಿ ಜೊತೆಗೂಡುತ್ತವೆ.

ಉಲ್ಲೇಖಗಳು

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಪಿಐಆರ್), ಉತ್ತರ ಪ್ರದೇಶ ಸರ್ಕಾರ

www.kumbh.gov.in

Click here to see in PDF:

 

*****


(Release ID: 2095178) Visitor Counter : 38