ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ದ್ವೀಪ ಅಭಿವೃದ್ಧಿ ಏಜೆನ್ಸಿಯ (ಐಡಿಎ) 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು
‘ಪಿಎಂ ಸೂರ್ಯ ಘರ್’ ಯೋಜನೆಯಡಿ, ಅಂಡಮಾನ್-ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪದ ಎಲ್ಲಾ ಮನೆಗಳಲ್ಲಿ ಶೇಕಡ 100ರಷ್ಟು ಸೌರ ಶಕ್ತಿ ಫಲಕಗಳನ್ನು ಸ್ಥಾಪಿಸಬೇಕು
ಎರಡೂ ದ್ವೀಪಗಳಲ್ಲಿ ಸೌರ ಫಲಕಗಳು ಮತ್ತು ಪವನ ಯಂತ್ರಗಳ ಮೂಲಕ ಶೇ.100ರಷ್ಟು ನವೀಕರಿಸಬಹುದಾದ ಇಂಧನವನ್ನು ಸಾಧಿಸುವ ಗುರಿ
ಈ ದ್ವೀಪಗಳು ದೆಹಲಿಯಿಂದ ದೂರವಿದ್ದರೂ, ಅವು ನಮ್ಮ ಹೃದಯಕ್ಕೆ ಹತ್ತಿರವಾಗಿವೆ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಇಲ್ಲಿ ಪ್ರವಾಸೋದ್ಯಮ ಸೌಲಭ್ಯಗಳನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ
ನರೇಂದ್ರ ಮೋದಿ ಸರ್ಕಾರವು ಈ ದ್ವೀಪಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುತ್ತಿದೆ
ಎರಡೂ ದ್ವೀಪ ಸಮೂಹಗಳಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಬೇಕು
Posted On:
03 JAN 2025 5:56PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ದ್ವೀಪ ಅಭಿವೃದ್ಧಿ ಏಜೆನ್ಸಿಯ (ಐಡಿಎ) 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ (ನಿವೃತ್ತ) ಶ್ರೀ ಡಿ.ಕೆ.ಜೋಶಿ, ಲಕ್ಷ ದ್ವೀಪದ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ವಿವಿಧ ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪಗಳಲ್ಲಿನಡೆಯುತ್ತಿರುವ ಅಭಿವೃದ್ಧಿ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು. ಗೃಹ ವ್ಯವಹಾರಗಳ ಸಚಿವಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಮತ್ತು ಲಕ್ಷ ದ್ವೀಪ ಆಡಳಿತವು ಡಿಜಿಟಲ್ ಸಂಪರ್ಕ, ವಾಯು ಸಂಪರ್ಕ ಮತ್ತು ಬಂದರು ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಗ್ರ ಪ್ರಸ್ತುತಿಯನ್ನು ನೀಡಿತು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪಗಳಲ್ಲಿ ಸೌರ ಮತ್ತು ಪವನ ಶಕ್ತಿ ಉಪಕ್ರಮಗಳನ್ನು ಮುಂದುವರಿಸುವ ಮಹತ್ವವನ್ನು ಕೇಂದ್ರ ಗೃಹ ಸಚಿವರು ಒತ್ತಿ ಹೇಳಿದರು. ಈ ಪ್ರದೇಶಗಳಲ್ಲಿ ಸೌರ ಫಲಕಗಳು ಮತ್ತು ಗಾಳಿಯಂತ್ರಗಳ ಮೂಲಕ ಶೇ.100 ರಷ್ಟು ನವಿಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯನ್ನು ಸಾಧಿಸಲು ಅವರು ಒತ್ತಿ ಹೇಳಿದರು. ಎರಡೂ ದ್ವೀಪ ಸಮೂಹಗಳ ಎಲ್ಲಾ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ‘ಪಿಎಂ ಸೂರ್ಯ ಘರ್’ ಯೋಜನೆಯನ್ನು ಜಾರಿಗೆ ತರುವಂತೆ ಶ್ರೀ ಅಮಿತ್ ಶಾ ಅವರು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಕ್ಕೆ (ಎಂಎನ್‌ಆರ್‌ಇ) ನಿರ್ದೇಶನ ನೀಡಿದರು.
ಈ ದ್ವೀಪಗಳು ದೆಹಲಿಯಿಂದ ದೂರವಿದ್ದರೂ, ಅವು ನಮ್ಮ ಹೃದಯಕ್ಕೆ ಹತ್ತಿರವಾಗಿವೆ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಇಲ್ಲಿ ಪ್ರವಾಸೋದ್ಯಮ ಸೌಲಭ್ಯಗಳನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನರೇಂದ್ರ ಮೋದಿ ಸರ್ಕಾರವು ಈ ದ್ವೀಪಗಳ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುತ್ತಿದೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸುತ್ತಿದೆ. ಎರಡೂ ದ್ವೀಪ ಗುಂಪುಗಳಲ್ಲಿಮೂಲಸೌಕರ್ಯ ಯೋಜನೆಗಳಿಗೆ ಸಮಗ್ರ ವಿಧಾನದ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಪ್ರವಾಸೋದ್ಯಮ, ವ್ಯಾಪಾರ ಮತ್ತು ಇತರ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಉಪಕ್ರಮಗಳಲ್ಲಿ ಸಹಕರಿಸುವಂತೆ ಸಂಬಂಧಪಟ್ಟ ಎಲ್ಲಾ ಕೇಂದ್ರ ಸಚಿವಾಲಯಗಳಿಗೆ ಕರೆ ನೀಡಿದರು. ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರೀ ಅಮಿತ್ ಶಾ ಸ್ಪಷ್ಟ ನಿರ್ದೇಶನಗಳನ್ನು ನೀಡಿದರು.
*****
(Release ID: 2090052)
Visitor Counter : 21