ಸಂಪುಟ
azadi ka amrit mahotsav

ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಸಚಿವ ಸಂಪುಟ

Posted On: 27 DEC 2024 1:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸಿದೆ. ಸಂಪುಟ ಸಭೆಯಲ್ಲಿ ಎರಡು ನಿಮಿಷದ ಮೌನಾಚರಣೆ ಮೂಲಕ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

01.01.2025 ರವರೆಗೆ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಈ ಶೋಕಾಚರಣೆ ಅವಧಿಯಲ್ಲಿ ದೇಶಾದ್ಯಂತ ರಾಷ್ಟ್ರ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು.

ಏಳು ದಿನಗಳ ಕಾಲ ಅಂದರೆ 01.01.2025 ವಿದೇಶಗಳಲ್ಲಿನ ಎಲ್ಲಾ ರಾಯಭಾರ ಕಚೇರಿಗಳು/ ಹೈ ಕಮೀಷನರ್‌ ಕಚೇರಿಗಳಲ್ಲಿಯೂ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು.

ಡಾ.ಮನಮೋಹನ್‌ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು. ಅಂತ್ಯಕ್ರಿಯೆ ದಿನ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಸಿಪಿಎಸ್ ಯುಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ.

ಅಂಗೀಕರಿಸಲಾದ ನಿರ್ಣಯ ಪಠ್ಯ ಹೀಗಿದೆ.

“ಭಾರತದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್‌ ಸಿಂಗ್ ಅವರು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯಲ್ಲಿ 2024 ರ ಡಿಸೆಂಬರ್ 26ರಂದು ನಿಧನರಾಗಿರುವುದಕ್ಕೆ ಸಚಿವ ಸಂಪುಟ ತೀವ್ರ ಶೋಕವನ್ನು ವ್ಯಕ್ತಪಡಿಸುತ್ತದೆ.

ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಪಶ್ಚಿಮ ಪಂಜಾಬ್‌ನ ಗಾಹ್ ಗ್ರಾಮದಲ್ಲಿ 1932ರ ಸೆಪ್ಟೆಂಬರ್ 26 ರಂದು ಜನಿಸಿದ ಡಾ. ಸಿಂಗ್ ಅವರು ಅದ್ಭುತ ಶೈಕ್ಷಣಿಕ ವೃತ್ತಿಜೀವನವನ್ನು ಹೊಂದಿದ್ದರು. ಪಂಜಾಬ್ ವಿಶ್ವವಿದ್ಯಾಲಯದಿಂದ 1954ರಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು 1957ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ತಮ್ಮ ಟ್ರಿಪೋಸ್ ಅನ್ನು ಪ್ರಥಮ ದರ್ಜೆ ಗೌರವಗಳೊಂದಿಗೆ ಪಡೆದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು 1962ರಲ್ಲಿ ಅವರಿಗೆ ಡಿ.ಫಿಲ್ ಪದವಿಯನ್ನು ನೀಡಿತು.

ಡಾ.ಸಿಂಗ್ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು ಮತ್ತು ಅದೇ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ಅವರು 1969ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ವಿಷಯದ ಪ್ರಾಧ್ಯಾಪಕರಾದರು. 1971ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಅಂದಿನ ವಿದೇಶಿ ವ್ಯಾಪಾರ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾದರು. ಅವರು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ (1972-76), ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ (1976 ನವೆಂಬರ್ ನಿಂದ 1980 ಏಪ್ರಿಲ್), ಯೋಜನಾ ಆಯೋಗದ ಸದಸ್ಯ ಕಾರ್ಯದರ್ಶಿ (1980 ಏಪ್ರಿಲ್ ನಿಂದ 1982ರ ಸೆಪ್ಟೆಂಬರ್ ವರೆಗೆ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ( ಸೆಪ್ಟೆಂಬರ್ 1982 ರಿಂದ ಜನವರಿ 1985) ಆಗಿ ಸೇವೆ ಸಲ್ಲಿಸಿದ್ದರು.

⁠ಡಾ. ಸಿಂಗ್ ಅವರಿಗೆ ಅವರ ವೃತ್ತಿಜೀವನದಲ್ಲಿ ನೀಡಲಾದ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳಲ್ಲಿ ಅತ್ಯಂತ ಪ್ರಮುಖವಾದವುಗಳೆಂದರೆ,  ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ (1987), ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಜವಾಹರಲಾಲ್ ನೆಹರು ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಯುರೋ ಮನಿಯಿಂದ ವರ್ಷದ ಹಣಕಾಸು ಮಂತ್ರಿಗಾಗಿ ಪ್ರಶಸ್ತಿ (1993) ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಪ್ರಶಸ್ತಿ (1956).

ಡಾ.ಮನಮೋಹನ್ ಸಿಂಗ್ ಅವರು 1991ರಿಂದ 1996ರವರೆಗೆ ಭಾರತ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆರ್ಥಿಕ ಸುಧಾರಣೆಗಳ ಸಮಗ್ರ ನೀತಿಯನ್ನು ಪರಿಚಯಿಸುವಲ್ಲಿ ಅವರ ಪಾತ್ರವು ಪ್ರಮುಖವಾಗಿ ಗುರುತಿಸಲ್ಪಟ್ಟಿದೆ. ಡಾ.ಸಿಂಗ್ ಅವರು 2004ರ ಮೇ 22 ರಂದು ಭಾರತದ ಪ್ರಧಾನಮಂತ್ರಿಯಾದರು ಮತ್ತು ಮೇ 2009ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು ಮೇ 2009 ರಿಂದ 2014 ರವರೆಗೆ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿದ್ದರು.

ಡಾ.ಮನಮೋಹನ್ ಸಿಂಗ್ ಅವರು ನಮ್ಮ ರಾಷ್ಟ್ರೀಯ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದಾಗಿ ರಾಷ್ಟ್ರವು ಒರ್ವ ಮುತ್ಸದ್ಧಿ ರಾಜಕಾರಣಿ, ಹೆಸರಾಂತ ಅರ್ಥಶಾಸ್ತ್ರಜ್ಞ ಮತ್ತು ಪ್ರತಿಷ್ಠಿತ ನಾಯಕನನ್ನು ಕಳೆದುಕೊಂಡಂತಾಗಿದೆ.

ಮೃತರ ಕುಟುಂಬಕ್ಕೆ ಸರ್ಕಾರ ಮತ್ತು ಇಡೀ ರಾಷ್ಟ್ರದ ಪರವಾಗಿ ಸಂಪುಟವು ತನ್ನ ಹೃದಯಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ.’’

 

*****


(Release ID: 2088377) Visitor Counter : 69