ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
Posted On:
26 DEC 2024 9:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ ಮಂಟಪದಲ್ಲಿ 3ನೇ ವೀರ ಬಾಲ ದಿವಸ್ ಸಂದರ್ಭದಲ್ಲಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು
ನೇರ ಸಂವಾದದ ವೇಳೆ, ಪ್ರಧಾನಮಂತ್ರಿಯವರು ಮಕ್ಕಳ ಜೀವನ ಕಥೆಗಳನ್ನು ಆಲಿಸಿದರು ಮತ್ತು ಜೀವನದಲ್ಲಿ ಹೆಚ್ಚು ಶ್ರಮಿಸುವಂತೆ ಪ್ರೋತ್ಸಾಹಿಸಿದರು. ಪುಸ್ತಕಗಳನ್ನು ಬರೆದ ಹೆಣ್ಣು ಮಗುವಿನೊಂದಿಗೆ ಸಂವಹನ ನಡೆಸಿದರು. ಮತ್ತು ಆ ಮಗುವಿನ ಪುಸ್ತಕಗಳಿಗೆ ದೊರೆತ ಪ್ರತಿಕ್ರಿಯೆಯ ಬಗ್ಗೆ ಹುಡುಗಿಯ ಜೊತೆ ಚರ್ಚಿಸಿದರು, ಇತರರು ತಮ್ಮದೇ ಆದ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ ಎಂದು ಆ ಬಾಲಕಿ ಉತ್ತರಿಸಿದರು. ಇತರ ಮಕ್ಕಳಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಶ್ರೀ ಮೋದಿ ಅವರು ಬಾಲಕಿಯನ್ನು ಶ್ಲಾಘಿಸಿದರು.
ನಂತರ ಪ್ರಧಾನಮಂತ್ರಿಯವರು ಬಹು ಭಾಷೆಗಳಲ್ಲಿ ಹಾಡುವುದರಲ್ಲಿ ಪರಿಣತಿ ಹೊಂದಿದ್ದ ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಶ್ರೀ ಮೋದಿ ಅವರು ಹುಡುಗನ ತರಬೇತಿಯ ಬಗ್ಗೆ ಕೇಳಿದಾಗ, ಆ ಬಾಲಕ ತಾನು ಯಾವುದೇ ಔಪಚಾರಿಕ ತರಬೇತಿಯನ್ನು ಹೊಂದಿಲ್ಲ ಮತ್ತು ತಾನು ಹಿಂದಿ, ಇಂಗ್ಲಿಷ್, ಉರ್ದು ಮತ್ತು ಕಾಶ್ಮೀರಿ ಈ ನಾಲ್ಕು ಭಾಷೆಗಳಲ್ಲಿ ಹಾಡಬಲ್ಲೆ ಎಂದು ಉತ್ತರಿಸಿದರು. ತಾನು ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಮತ್ತು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾಗ್ಗಿಯೂ ಆ ಬಾಲಕ ಹೇಳಿದರು. ಶ್ರೀ ಮೋದಿ ಅವರು ಹುಡುಗನ ಪ್ರತಿಭೆಯನ್ನು ಶ್ಲಾಘಿಸಿದರು.
ಶ್ರೀ ಮೋದಿ ಅವರು ಯುವ ಚೆಸ್ ಆಟಗಾರನೊಂದಿಗೆ ಸಂವಾದ ನಡೆಸಿದರು ಮತ್ತು ಅವರಿಗೆ ಚೆಸ್ ಆಡಲು ಕಲಿಸಿದವರು ಯಾರು ಎಂದು ಕೇಳಿದರು. ತನ್ನ ತಂದೆಯಿಂದ ಮತ್ತು ಯೂಟ್ಯೂಬ್ ವೀಡಿಯೊಗಳನ್ನು ನೋಡುವ ಮೂಲಕ ಕಲಿತಿದ್ದೇನೆ ಎಂದು ಆ ಆಟಗಾರ ಬಾಲಕ ಉತ್ತರಿಸಿದರು.
ಕಾರ್ಗಿಲ್ ವಿಜಯ ದಿವಸದ 25 ನೇ ವಾರ್ಷಿಕೋತ್ಸವವನ್ನು ಆಚರಿಸಲು ಲಡಾಖ್ ನ ಕಾರ್ಗಿಲ್ ಯುದ್ಧ ಸ್ಮಾರಕದಿಂದ ಹೊಸದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ 13 ದಿನಗಳಲ್ಲಿ 1251 ಕಿಲೋಮೀಟರ್ ದೂರವನ್ನು ಸೈಕಲ್ ನಲ್ಲಿ ಕ್ರಮಿಸಿದ ಮತ್ತೊಂದು ಮಗುವಿನ ಸಾಧನೆಯನ್ನು ಪ್ರಧಾನಿ ಆಲಿಸಿದರು. ಎರಡು ವರ್ಷಗಳ ಹಿಂದೆ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಮಣಿಪುರದ ಮೊಯಿರಾಂಗ್ನ ಐಎನ್ಎ ಸ್ಮಾರಕದಿಂದ ಹೊಸದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ 32 ದಿನಗಳಲ್ಲಿ 2612 ಕಿಲೋಮೀಟರ್ ದೂರವನ್ನು ಸೈಕಲ್ನಲ್ಲಿ ಪ್ರಯಾಣಿಸಿದ್ದೆ ಎಂದು ಬಾಲಕ ಹೇಳಿದರು. ತಾನು ಒಂದು ದಿನದಲ್ಲಿ ಗರಿಷ್ಠ 129.5 ಕಿಲೋಮೀಟರ್ ಸೈಕಲ್ ತುಳಿದಿದ್ದೇನೆ ಎಂದೂ ಬಾಲಕ ಪ್ರಧಾನಿಯವರಿಗೆ ಮಾಹಿತಿ ನೀಡಿದರು.
ಶ್ರೀ ಮೋದಿ ಅವರು ಯುವತಿಯೊಬ್ಬರೊಂದಿಗೆ ಸಂವಾದ ನಡೆಸಿದರು, ಆ ಯುವತಿ ತಾನು ಅರೆ-ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಒಂದು ನಿಮಿಷದಲ್ಲಿ 80 ಸುತ್ತು ತಿರುಗುವಿಕೆ (ಸ್ಪಿನ್)ಗಳನ್ನು ಪೂರ್ಣಗೊಳಿಸಿದ ಮತ್ತು ಒಂದು ನಿಮಿಷದಲ್ಲಿ 13 ಸಂಸ್ಕೃತ ಶ್ಲೋಕಗಳನ್ನು ಪಠಿಸಿದ ಎರಡು ಅಂತರರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವುದಾಗಿ ಹೇಳಿದರು, ಇವೆರಡನ್ನು ತಾನು ಯೂಟ್ಯೂಬ್ ವೀಡಿಯೊಗಳನ್ನು ನೋಡುವುದರ ಮೂಲಕ ಕಲಿತಿದ್ದಾಗಿ ಅವರು ತಿಳಿಸಿದರು.
ಜೂಡೋದಲ್ಲಿ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬಯಸುವ ಹೆಣ್ಣು ಮಗುವಿಗೆ ಶುಭ ಹಾರೈಸಿದರು.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ಸ್ವಯಂ ಸ್ಥಿರಗೊಳಿಸುವ ಚಮಚವನ್ನು ತಯಾರಿಸಿದ ಮತ್ತು ಮೆದುಳಿನ ವಯಸ್ಸಿನ ಮುನ್ಸೂಚನೆ ಮಾದರಿಯನ್ನು ಅಭಿವೃದ್ಧಿಪಡಿಸಿದ ಹುಡುಗಿಯೊಂದಿಗೆ ಶ್ರೀ ಮೋದಿ ಸಂವಾದ ನಡೆಸಿದರು. ತಾನು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಉದ್ದೇಶಿಸಿದ್ದೇನೆ ಎಂದು ಬಾಲಕಿ ಪ್ರಧಾನಿಯವರಿಗೆ ಮಾಹಿತಿ ನೀಡಿದರು.
ಕರ್ನಾಟಕ ಸಂಗೀತ ಮತ್ತು ಸಂಸ್ಕೃತ ಶ್ಲೋಕಗಳೊಂದಿಗೆ ಹರಿಕಥಾ ಪಠಣದ ಸುಮಾರು 100 ಪ್ರದರ್ಶನಗಳನ್ನು ನೀಡಿದ ಮಹಿಳಾ ಕಲಾವಿದೆಯನ್ನು ಮಾತನಾಡಿಸಿದ ಪ್ರಧಾನಿಯವರು ಆ ಬಾಲಕಿಯನ್ನು ಶ್ಲಾಘಿಸಿದರು.
ಕಳೆದ 2 ವರ್ಷಗಳಲ್ಲಿ 5 ವಿವಿಧ ದೇಶಗಳಲ್ಲಿ 5 ಎತ್ತರದ ಶಿಖರಗಳನ್ನು ಏರಿದ ಯುವ ಪರ್ವತಾರೋಹಿಯೊಂದಿಗೆ ಮಾತನಾಡಿದ ಪ್ರಧಾನಿ, ಇತರ ದೇಶಗಳಿಗೆ ಭೇಟಿ ನೀಡಿದಾಗ ಭಾರತೀಯಳಾಗಿ ನಿಮ್ಮ ಅನುಭವದ ಬಗ್ಗೆ ಹೇಳಿ ಎಂದರು. ಜನರಿಂದ ಸಾಕಷ್ಟು ಪ್ರೀತಿ ಮತ್ತು ಆತ್ಮೀಯತೆಯನ್ನು ಪಡೆದಿದ್ದೇನೆ ಎಂದು ಹುಡುಗಿ ಉತ್ತರಿಸಿದರು. ಹೆಣ್ಣು ಮಕ್ಕಳ ಸಬಲೀಕರಣ ಮತ್ತು ದೈಹಿಕ ಸಾಮರ್ಥ್ಯವನ್ನು ಉತ್ತೇಜಿಸುವುದು ಪರ್ವತಾರೋಹಣದ ಹಿಂದಿನ ತಮ್ಮ ಉದ್ದೇಶವಾಗಿದೆ ಎಂದೂ ಅವರು ಪ್ರಧಾನಿಯವರಿಗೆ ತಿಳಿಸಿದರು.
ಶ್ರೀ ಮೋದಿ ಅವರು ಈ ವರ್ಷ ನ್ಯೂಜಿಲೆಂಡ್ ನಲ್ಲಿ ನಡೆದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಚಿನ್ನದ ಪದಕ ಮತ್ತು 6 ರಾಷ್ಟ್ರೀಯ ಪದಕಗಳನ್ನು ಗೆದ್ದ ಕಲಾತ್ಮಕ ರೋಲರ್ ಸ್ಕೇಟಿಂಗ್ ಹೆಣ್ಣು ಮಗುವಿನ ಸಾಧನೆಗಳನ್ನು ಆಲಿಸಿದರು. ಈ ತಿಂಗಳು ಥೈಲ್ಯಾಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ-ಅಥ್ಲೀಟ್ ಹೆಣ್ಣು ಮಗುವಿನ ಸಾಧನೆಯ ಬಗ್ಗೆಯೂ ಅವರು ಕೇಳಿದರು. ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ದಾಖಲೆ ನಿರ್ಮಿಸುವುದರ ಜೊತೆಗೆ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮತ್ತೊಬ್ಬ ಮಹಿಳಾ ಕ್ರೀಡಾಪಟುವಿನ ಅನುಭವದ ಬಗ್ಗೆ ಅವರು ಕೇಳಿದರು.
ಬೆಂಕಿಗೆ ಆಹುತಿಯಾದ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಅನೇಕ ಜೀವಗಳನ್ನು ಉಳಿಸುವಲ್ಲಿ ಧೈರ್ಯ ಸಾಹಸ ಮೆರೆದ ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಿ ಶ್ಲಾಘಿಸಿದರು. ಈಜುವಾಗ ಇತರರನ್ನು ಮುಳುಗದಂತೆ ರಕ್ಷಿಸಿದ ಚಿಕ್ಕ ಹುಡುಗನನ್ನು ಅವರು ಶ್ಲಾಘಿಸಿದರು.
ಶ್ರೀ ಮೋದಿ ಅವರು ಎಲ್ಲಾ ಯುವಜನರನ್ನು ಅಭಿನಂದಿಸಿದರು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
*****
(Release ID: 2088309)
Visitor Counter : 9