ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿಂದು ತ್ರಿಪುರಾದ ಅಗರ್ತಲಾದಲ್ಲಿ ಜರುಗಿದ “ನಾರ್ಥ್ ಈಸ್ಟರ್ನ್ ಸ್ಪೇಸ್ ಅಪ್ಲಿಕೇಶನ್ ಸೆಂಟರ್(ಎನ್ಇಎಸ್ಎಸಿ) ಸೊಸೈಟಿ”ಯ 12ನೇ ಸಭೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ, ಭಾರತದ ಬಾಹ್ಯಾಕಾಶ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ದೈತ್ಯ ಮುನ್ನಡೆ ಸಾಧಿಸಿದೆ

ಎನ್ಇಎಸ್ಎಸಿ ಸೊಸೈಟಿಯು ಈಶಾನ್ಯ ರಾಜ್ಯಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು

ಇಸ್ರೋ ಕೇಂದ್ರ ಕಾರ್ಯಾಲಯಕ್ಕೆ ಭೇಟಿಗೆ ಅವಕಾಶ ಒದಗಿಸಲು ಎನ್ಇಎಸ್ಎಸಿ ಸೊಸೈಟಿಯು ಈಶಾನ್ಯದ ಎಲ್ಲಾ ರಾಜ್ಯಗಳಿಂದ ವಿಜ್ಞಾನ ಹಿನ್ನೆಲೆ ಹೊಂದಿರುವ ತಲಾ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು

ಎನ್ಇಎಸ್ಎಸಿ ಸಹಾಯದಿಂದ 20 ಜಲಮಾರ್ಗಗಳನ್ನು ನಿರ್ಮಿಸಲಾಗಿದೆ ಮತ್ತು ಸೊಸೈಟಿಯು ಹೆಚ್ಚಿನ ಜಲಮಾರ್ಗಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಅನ್ವೇಷಿಸಬೇಕು

ಈಶಾನ್ಯ ರಾಜ್ಯಗಳಲ್ಲಿ ಖನಿಜ, ತೈಲ ಮತ್ತು ಕಲ್ಲಿದ್ದಲು ನಿಕ್ಷೇಪಗಳಿಗೆ ವ್ಯಾಪಕವಾದ ಮ್ಯಾಪಿಂಗ್ ಮಾಡುವ ಅಗತ್ಯವಿದೆ; ಇದು ಈ ಖನಿಜಗಳಿಂದ ಪಡೆದ ರಾಯಧನದಿಂದ ಆರ್ಥಿಕ ಪ್ರಯೋಜನ ಪಡೆಯುತ್ತದೆ

ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಜನರ ಜನಸಂಖ್ಯೆ ದತ್ತಾಂಶ ಕಲೆ ಹಾಕಬೇಕು; ಇದು ವಿಶೇಷವಾಗಿ ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ಗಡಿಯಲ್ಲಿ ಬೇಲಿ ಹಾಕಲು ಮತ್ತು ಒಳನುಸುಳುವಿಕೆ ನಿಲ್ಲಿಸಲು ಸಹಾಯ ಮಾಡಲಿದೆ

ಬಾಹ್ಯಾಕಾಶ ವಿಜ್ಞಾನ ಬಳಸಿಕೊಂಡು ಅರಣ್ಯ ಪ್ರದೇಶದ ಅಭಿವೃದ್ಧಿಗೆ ಎನ್ಇಎಸ್ಎಸಿ ಸೊಸೈಟಿಯು ಗಮನ ಕೇಂದ್ರೀಕರಿಸಬೇಕು

ಈಶಾನ್ಯ ರಾಜ್ಯಗಳು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು

Posted On: 21 DEC 2024 8:32PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ತ್ರಿಪುರಾದ ಅಗರ್ತಲಾದಲ್ಲಿಂದು ನಾರ್ಥ್ ಈಸ್ಟರ್ನ್ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (ಎನ್ಇಎಸ್ಎಸಿ) ಸೊಸೈಟಿಯ 12ನೇ ಸಭೆ ಜರುಗಿತು. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ(ಡಿಒಎನ್ಇಆರ್) ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ತ್ರಿಪುರಾದ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಮಣಿಪುರ ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್, ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು, ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಾಂಗ್, ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ರಾಜ್ಯ ಸಚಿವ ಶ್ರೀ ಸುಕಾಂತ ಮಜುಂದಾರ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ಎಸ್. ಸೋಮನಾಥ್ ಮತ್ತು ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಶ್ರೀ ತಪನ್ ದೇಕಾ, ಕೇಂದ್ರ ಸರ್ಕಾರ ಮತ್ತು ಈಶಾನ್ಯ ಪ್ರದೇಶದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರವು ಅಗಾಧ ಪ್ರಗತಿ ಸಾಧಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎನ್‌ಇಎಸ್‌ಎಸಿ ಸೊಸೈಟಿ ಸ್ಥಾಪನೆಯಾಗಿ 25 ವರ್ಷಗಳ ನಂತರ ಅದು ಮಾಡುತ್ತಿರುವ ಕಾರ್ಯದ ಸಕಾರಾತ್ಮಕ ಅಂಶಗಳು ಈಗ ಗೋಚರಿಸುತ್ತಿವೆ. ಎನ್‌ಇಎಸ್‌ಎಸಿ ಸೊಸೈಟಿಯು ಈ ರಾಜ್ಯಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು, ಇದಕ್ಕಾಗಿ ರಾಜ್ಯ ಸರ್ಕಾರಗಳು ಸಹ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಕೇಂದ್ರ ಕಾರ್ಯಾಲಯಕ್ಕೆ  ಭೇಟಿಗೆ ಅವಕಾಶ ಕಲ್ಪಿಸಲು ಈಶಾನ್ಯದ ಎಲ್ಲಾ ರಾಜ್ಯಗಳಿಂದ ವಿಜ್ಞಾನ ಹಿನ್ನೆಲೆ ಹೊಂದಿರುವ ತಲಾ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್ಇಎಸ್ಎಸಿ ಸೊಸೈಟಿಯನ್ನು ಒತ್ತಾಯಿಸಿದರು. ಇದರಿಂದ ವಿದ್ಯಾರ್ಥಿಗಳು ಬಾಹ್ಯಾಕಾಶ ಮತ್ತು ಸಂಬಂಧಿತ ತಂತ್ರಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಿದೆ. ಈ ಯೋಜನೆಗೆ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಶೇಕಡ 60ರಷ್ಟು ಕೊಡುಗೆ ನೀಡಬೇಕೆಂದು ಅವರು ಒತ್ತಾಯಿಸಿದರು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಈಶಾನ್ಯ ರಾಜ್ಯ ಸರ್ಕಾರಗಳನ್ನು ಶ್ರೀ ಶಾ ಒತ್ತಾಯಿಸಿದರು.

ಎನ್‌ಇಎಸ್‌ಎಸಿ ನೆರವಿನಿಂದ ಇದುವರೆಗೆ 20 ಜಲಮಾರ್ಗಗಳನ್ನು ನಿರ್ಮಿಸಲಾಗಿದೆ, ಸೊಸೈಟಿಯು ಇನ್ನೂ ಹೆಚ್ಚಿನ ಜಲಮಾರ್ಗಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಅನ್ವೇಷಿಸಬೇಕು. ಈಶಾನ್ಯ ರಾಜ್ಯಗಳಲ್ಲಿ ಖನಿಜ, ತೈಲ ಮತ್ತು ಕಲ್ಲಿದ್ದಲು ನಿಕ್ಷೇಪಗಳಿಗೆ ವ್ಯಾಪಕ ಮ್ಯಾಪಿಂಗ್ ಮಾಡುವ ಅಗತ್ಯವಿದೆ. ಈ ಖನಿಜಗಳಿಂದ ದೊರೆಯುವ ರಾಯಧನದಿಂದ ಈಶಾನ್ಯ ರಾಜ್ಯಗಳು ಆರ್ಥಿಕವಾಗಿ ಲಾಭ ಪಡೆಯುತ್ತವೆ.

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ವಿಶೇಷವಾಗಿ ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರದ ಜನಸಂಖ್ಯಾ ದತ್ತಾಂಶವನ್ನು ಕಲೆ ಹಾಕಬೇಕು, ಇದರಿಂದ ಗಡಿಯ ಬೇಲಿ ಹಾಕಬಹುದು ಮತ್ತು ಒಳನುಸುಳುವಿಕೆ ನಿಲ್ಲಿಸಬಹುದು, ಇದಕ್ಕಾಗಿ ಗಡಿ ಭಾಗಗಳಲ್ಲಿ ಸಮಗ್ರ ಸಮೀಕ್ಷೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ಎನ್‌ಇಎಸ್‌ಎಸಿ ಸೊಸೈಟಿಯು ಬಾಹ್ಯಾಕಾಶ ವಿಜ್ಞಾನ ಬಳಸಿಕೊಂಡು ಅರಣ್ಯ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು. ಇದಕ್ಕಾಗಿ ಹಳೆಯ ನಕ್ಷೆಗಳನ್ನು ಇತ್ತೀಚಿನ ನಕ್ಷೆಗಳೊಂದಿಗೆ ಹೋಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಸಾಧ್ಯತೆಗಳು ಇರುವಲ್ಲಿ ರಾಜ್ಯ ಸರ್ಕಾರಗಳ ಸಭಾಗಿತ್ವಗದಲ್ಲಿ ಮರಗಳನ್ನು ನೆಡಲು ಪ್ರಯತ್ನಿಸಬೇಕು. ಅದೇ ರೀತಿ, ಈಶಾನ್ಯ ರಾಜ್ಯಗಳಲ್ಲಿನ ಪ್ರವಾಹದ ಮ್ಯಾಪಿಂಗ್ ಮಾಡಬೇಕು ಎಂದು ಗೃಹ ಸಚಿವರು ಸೊಸೈಟಿಗೆ ಸೂಚನೆ ನೀಡಿದರು.

ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಸರಿಯಾದ ಮತ್ತು ಸಕಾರಾತ್ಮಕ ಬಳಕೆಗಾಗಿ ಎನ್‌ಇಎಸ್‌ಎಸಿ ಸೊಸೈಟಿಯ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. ಮುಂಬರುವ ದಿನಗಳಲ್ಲಿ ಈಶಾನ್ಯದಂತಹ ಕಠಿಣ ಭೌಗೋಳಿಕ ಪ್ರದೇಶದ ಅಭಿವೃದ್ಧಿಯಲ್ಲಿ ಅದರ ತಂತ್ರಜ್ಞಾನದ ವ್ಯಾಪಕ ಬಳಕೆಗೆ ಒತ್ತು ನೀಡಿದರು. ಎನ್‌ಇಎಸ್‌ಎಸಿ ಸೊಸೈಟಿಯು ತನ್ನ ಆದಾಯ ಮಾದರಿಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ಶ್ರೀ ಶಾ ಹೇಳಿದರು.

 

*****


(Release ID: 2087011) Visitor Counter : 7


Read this release in: Khasi , English , Hindi , Assamese