ವಾರ್ತಾ ಮತ್ತು ಪ್ರಸಾರ ಸಚಿವಾಲಯ
'ಆಡುಜೀವಿತಂ' ಬದುಕುಳಿಯುವಿಕೆ ಮತ್ತು ಭರವಸೆಯ ಸ್ಪೂರ್ತಿದಾಯಕ ಚರಿತ್ರೆ; ಐಎಫ್ಎಫ್ಐನಲ್ಲಿ ದೊರೆತ ಅಭೂತಪೂರ್ವ ಪ್ರತಿಕ್ರಿಯೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ: ಐಎಫ್ಎಫ್ಐ 2024ರಲ್ಲಿ ನಿರ್ದೇಶಕ ಬ್ಲೆಸ್ಸಿ
ಆಧುನಿಕ ಯುಗದ ದಂಪತಿಗಳಲ್ಲಿ ಬಂಜೆತನದ ಸವಾಲುಗಳನ್ನು 'ಥನುಪ್' ಅನ್ವೇಷಿಸುತ್ತದೆ: ಸಂಕಲನಕಾರ ಸಫ್ದರ್ ಮೆರ್ವಾ
ಅದು ಒಂದು ಪುನರುಜ್ಜೀವನ ಮತ್ತು ಆಶಾವಾದದ ಪ್ರೇರಣೆಯನ್ನು ಒಳಗೊಂಡ ಕಥೆಯಾಗಿದ್ದು, ಕೇರಳದ ಹಳ್ಳಿಯಲ್ಲಿನ ಸರಳ ಜೀವನದಿಂದ ದೂರದ ದೇಶದಲ್ಲಿ ಗುಲಾಮಗಿರಿಯ ಹೋರಾಟಗಳನ್ನು ತಾಳಿಕೊಳ್ಳುವ ಬದಲಾವಣೆಯನ್ನು ವಿವರಿಸುತ್ತದೆ. ಎರಡನೆಯದು ಜೀವನಶೈಲಿ ಬದಲಾವಣೆಗಳು ಮತ್ತು ಹವಾಮಾನದ ಪರಿಣಾಮದಿಂದಾಗಿ ಸಮಕಾಲೀನ ದಂಪತಿಗಳ ಮೇಲೆ ಪರಿಣಾಮ ಬೀರುವ ಬಂಜೆತನದ ಗಮನಾರ್ಹ ಸಾಮಾಜಿಕ ಕಾಳಜಿಯನ್ನು ವಿವೇಚಿಸುತ್ತದೆ. ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ಆಡುಜೀವಿತಂ ಮತ್ತು ತನುಪ್ ಎಂಬ ಎರಡು ಗಮನಾರ್ಹ ಮಲಯಾಳಂ ಚಲನಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸಿದವು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಎರಡೂ ಚಲನಚಿತ್ರಗಳ ಪಾತ್ರವರ್ಗ ಮತ್ತು ಸಿಬ್ಬಂದಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಸೃಜನಶೀಲ ಪ್ರಕ್ರಿಯೆ ಮತ್ತು ಅವರ ಕೃತಿಗಳಲ್ಲಿ ವಿವೇಚನೆಗೆ ಒಳಪಡಿಸಿದ ಆಳವಾದ ವಿಷಯಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.
ಆಡುಜೀವಿತಂ: ಬದುಕುಳಿಯುವಿಕೆ ಮತ್ತು ಭರವಸೆಯ ಕಥೆ
ಮೆಚ್ಚುಗೆ ಪಡೆದ ಚಲನಚಿತ್ರ ನಿರ್ಮಾಪಕ ಬ್ಲೆಸ್ಸಿ ನಿರ್ದೇಶಿಸಿದ ಆಡುಜೀವಿತಂ, ಬೆನ್ಯಾಮಿನ್ ಅವರ ಹೆಚ್ಚು ಮಾರಾಟವಾದ ಕಾದಂಬರಿಯನ್ನು ಆಧರಿಸಿದ ಬದುಕುಳಿಯುವುದಕ್ಕೆ ಸಂಬಂಧಿಸಿದ ಭಯಾನಕ ಕಥೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಉತ್ತಮ ಜೀವನವನ್ನು ಹುಡುಕುತ್ತಾ ಕೇರಳದಲ್ಲಿ ತನ್ನ ಕುಟುಂಬವನ್ನು ಬಿಟ್ಟು ಹೋದ ನಜೀಬ್, ಮೇಕೆ ಫಾರಂನಲ್ಲಿ ಗುಲಾಮನಾಗಿ ದುಡಿಮೆ ಕಂಡುಕೊಳ್ಳುತ್ತಾನೆ. ತನ್ನ ಗುರುತನ್ನು ಕಳೆದುಕೊಂಡ ನಜೀಬ್ ತನ್ನ ಉತ್ಸಾಹವನ್ನು ಉಳಿಸಿಕೊಳ್ಳಲು ಎಲ್ಲಾ ಅಡೆತಡೆಗಳ ವಿರುದ್ಧ ಹೋರಾಡುತ್ತಾನೆ, ಜಮೀನಿನಲ್ಲಿ ಆಡುಗಳು ಮತ್ತು ಒಂಟೆಗಳೊಂದಿಗೆ ಅವನು ರೂಪಿಸುವ ಬಾಂಧವ್ಯಗಳಲ್ಲಿ ಸಾಂತ್ವನವನ್ನು ಕಂಡುಕೊಳ್ಳುತ್ತಾನೆ.

ಬ್ಲೆಸ್ಸಿ ತಮ್ಮ ಮಾತುಗಳಲ್ಲಿ, ಕಥೆಯು ತಮ್ಮ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಹಂಚಿಕೊಂಡರು, ಊಹಿಸಲಾಗದ ಕಷ್ಟಗಳನ್ನು ಸಹಿಸುವ ನಜೀಬ್ ಅವರ ಕಥೆಯು ಅನೇಕರು ಎದುರಿಸುತ್ತಿರುವ ಹೋರಾಟಗಳ ಪ್ರತಿಬಿಂಬವಾಗಿದೆ ಎಂದು ಅವರು ಒತ್ತಿ ಹೇಳಿದರು. ಐಎಫ್ಎಫ್ಐನಲ್ಲಿ ಚಿತ್ರಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಗೆ ಅವರು ಕೃತಜ್ಞತೆ ಸಲ್ಲಿಸಿದರು, ಇದು ಕೇವಲ ಉಳಿವಿನ ಕಥೆಯಲ್ಲ, ಅದು ಭರವಸೆಯ ಕಥೆ ಎಂದೂ ಹೇಳಿದರು.
ಗೋಕುಲ್ ಕೆ.ಆರ್, ಕೇಂದ್ರ ಪಾತ್ರಗಳಲ್ಲಿ ಒಂದಾದ ಹಕೀಮ್ ಪಾತ್ರವನ್ನು ನಿರ್ವಹಿಸಿರುವಪಾತ್ರಕ್ಕೆ ಅಗತ್ಯವಿರುವ ತೀವ್ರವಾದ ದೈಹಿಕ ಮತ್ತು ಮಾನಸಿಕ ರೂಪಾಂತರಗಳ ಬಗ್ಗೆ ಮಾತನಾಡಿದರು. "ಈ ಚಿತ್ರವು ಹೆಚ್ಚಿನ ಬದ್ಧತೆಯನ್ನು ಬಯಸಿತು, ಏಕೆಂದರೆ ನನ್ನ ಪಾತ್ರ ಮತ್ತು ನಜೀಬ್ ಪಾತ್ರ ಎರಡೂ ಅಪಾರ ಕಷ್ಟಗಳನ್ನು ಅನುಭವಿಸಬೇಕಾಗಿತ್ತು. ಈ ಕಷ್ಟಗಳನ್ನು ಚಿತ್ರಿಸುವುದು ಒಂದು ಸವಾಲಾಗಿತ್ತು, ಆದರೆ ಚಿತ್ರದ ಸತ್ಯಾಸತ್ಯತೆಗೆ/ಅಧಿಕೃತತೆಗೆ ಅದು ಅತ್ಯಗತ್ಯವಾಗಿತ್ತು" ಎಂದು ಅವರು ವಿವರಿಸಿದರು.
ಥನುಪ್: ಬಂಜೆತನ ಮತ್ತು ಸಾಮಾಜಿಕ ಕಳಂಕದ ಅನ್ವೇಷಣೆ/ವಿವೇಚನೆ
ರಾಗೇಶ್ ನಾರಾಯಣನ್ ನಿರ್ದೇಶನದ ಥನುಪ್, ಬದಲಾಗುತ್ತಿರುವ ಜೀವನಶೈಲಿ ಮತ್ತು ಪರಿಸರದ ಅಂಶಗಳಿಂದಾಗಿ ಆಧುನಿಕ ದಂಪತಿಗಳಲ್ಲಿ ಹೆಚ್ಚುತ್ತಿರುವ ಬಂಜೆತನದ ಸಮಸ್ಯೆಯನ್ನು ವಿವೇಚಿಸುತ್ತದೆ. ಈ ಚಿತ್ರವು ಸುಂದರವಾದ ಹಳ್ಳಿಯಲ್ಲಿ ವಾಸಿಸುವ ಯುವ ದಂಪತಿಗಳಾದ ಪ್ರಧೀಶ್ ಮತ್ತು ಟ್ರೀಸಾ ಅವರ ಹೋರಾಟಗಳನ್ನು ಚಿತ್ರಿಸುತ್ತದೆ. ತಮ್ಮ ಬಂಜೆತನದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಅವರ ಅನ್ವೇಷಣೆಯು ಗಾಸಿಪ್, ತೀರ್ಪು ಮತ್ತು ಅವರ ಖಾಸಗಿತನದಲ್ಲಿ ಅವರು ವಾಸಿಸುವ ಪ್ರತಿ ಸಮುದಾಯವು ಮಾಡುವ ಆಕ್ರಮಣದಿಂದ ಜಟಿಲವಾಗುತ್ತಾ ಹೋಗುತ್ತದೆ.

ಈ ಚಿತ್ರವು ಗೌಪ್ಯವಾಗಿ ಉಳಿಯುವ ಸಾಮಾಜಿಕ ಸಮಸ್ಯೆಯ ಧೈರ್ಯಶಾಲಿ ವಿವರಣೆಯಾಗಿದೆ ಎಂದು ಸಂಕಲನಕಾರ ಸಫ್ದರ್ ಮೆರ್ವಾ ವಿವರಿಸಿದರು. "ಬಂಜೆತನವು ಅನೇಕ ದಂಪತಿಗಳು ಎದುರಿಸುತ್ತಿರುವ ಆಳವಾದ ವೈಯಕ್ತಿಕ ಮತ್ತು ಸೂಕ್ಷ್ಮ ಸಮಸ್ಯೆಯಾಗಿದೆ. ಥನುಪ್ ನಲ್ಲಿ, ಜೀವನಶೈಲಿ ಬದಲಾವಣೆಗಳು ಮತ್ತು ಹವಾಮಾನ ಬದಲಾವಣೆಗಳು ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುವ ಮೂಲಕ ನಾವು ಈ ವಾಸ್ತವದ ಮೇಲೆ ಬೆಳಕು ಬೀರಿದ್ದೇವೆ. ಇದು ಕೇವಲ ಕಥೆಯಲ್ಲ, ಅನುಭೂತಿ ಮತ್ತು ತಿಳುವಳಿಕೆಗೆ ಒಂದು ಕರೆ" ಎಂದು ಅವರು ಹೇಳಿದರು. ಈ ಚಿತ್ರವು ತಮ್ಮ ಸ್ನೇಹಿತರೊಬ್ಬರ ನೈಜ ಕಥೆಯನ್ನು ಆಧರಿಸಿದೆ ಎಂದೂ ಮೆರ್ವಾ ಹೇಳಿದರು.
ದಂಪತಿಗಳು ಅನುಭವಿಸಿದ ಭಾವನಾತ್ಮಕ ಪ್ರಕ್ಷುಬ್ಧತೆಯ ವಾಸ್ತವಿಕ ಚಿತ್ರಣ ಮತ್ತು ಅವರ ಹೋರಾಟವನ್ನು ಮತ್ತಷ್ಟು ಜಟಿಲಗೊಳಿಸುವ ಸಾಮಾಜಿಕ ಒತ್ತಡಗಳನ್ನು ಪ್ರತಿಬಿಂಬಿಸುವ ಈ ಚಿತ್ರ ಬಿಗಿಯಾದ ನಿರೂಪಣೆಯಿಂದಾಗಿ ಮನಮೋಹಕವಾಗಿ ಮೂಡಿ ಬಂದಿದೆ.
ಚಿತ್ರದ ಬಗ್ಗೆ
ಮೇಕೆ ಜೀವನ (ಆಡುಜೀವಿತಂ)
ಭಾರತ | 2023 | ಮಲಯಾಳಂ | 172 ' | ಬಹುವರ್ಣ

ಸಾರಾಂಶ
ಬೆನ್ಯಮಿನ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಆಡುಜೀವಿತಂ, ಮಧ್ಯಪ್ರಾಚ್ಯದಲ್ಲಿ ಉತ್ತಮ ಜೀವನವನ್ನು ಅರಸಿ ಕೇರಳದಲ್ಲಿ ತನ್ನ ಕುಟುಂಬವನ್ನು ಬಿಟ್ಟು ಹೋದ ನಜೀಬ್ ನನ್ನು ಅನುಸರಿಸುತ್ತದೆ. ಆದರೆ ಅಲ್ಲಿ ಉತ್ತಮ ಜೀವನಕ್ಕೆ ಬದಲಾಗಿ, ಅವನು ಮೇಕೆ ಸಾಕಣೆಯಲ್ಲಿ ಕಠಿಣ ದುಡಿಮೆಗೆ ದೂಡಲ್ಪಡುತ್ತಾನೆ, ಜೀವನದಲ್ಲಿ ಅಶಾವಾದ/ಭರವಸೆ ಮತ್ತು ಗುರುತನ್ನು ಕಳೆದುಕೊಳ್ಳುತ್ತಾನೆ. ಈ ಹೃದಯ ವಿದ್ರಾವಕ ಕಥೆಯು ತನ್ನ ಕುಟುಂಬ ಮತ್ತು ಭಾಷೆಯಿಂದ ಬೇರ್ಪಟ್ಟ ಕಠಿಣ ಪರಿಸ್ಥಿತಿಗಳಲ್ಲಿ ಅವನು ಬದುಕುಳಿಯುವುದನ್ನು ಚಿತ್ರಿಸುತ್ತದೆ. ಆಡುಗಳು ಮತ್ತು ಒಂಟೆಗಳೊಂದಿಗಿನ ಅನನ್ಯ ಬಂಧದ ಮೂಲಕ, ನಜೀಬ್ ತನ್ನ ಜೀವನೋತ್ಸಾಹವನ್ನು ಜೀವಂತವಾಗಿರಿಸುತ್ತಾನೆ. ಮೂರು ವರ್ಷಗಳ ನಂತರ, ಅವನಿಗೆ ಅನಿರೀಕ್ಷಿತ ಸಹಾಯ ಲಭಿಸಿ ತನ್ನ ಭೀಕರ ಪರಿಸ್ಥಿತಿಯಿಂದ ಪಾರಾಗುತ್ತಾನೆ, ಒಬ್ಬ ವ್ಯಕ್ತಿಯ ದುಃಸ್ಥಿತಿಯನ್ನು ಎತ್ತಿ ತೋರಿಸುವ ಈ ಚಿತ್ರ ಅನೇಕರ ಹೋರಾಟಗಳಿಗೆ ಕನ್ನಡಿ ಹಿಡಿಯುತ್ತದೆ.
ಪಾತ್ರವರ್ಗ ಮತ್ತು ಸಿಬ್ಬಂದಿ
ನಿರ್ದೇಶಕ: ಬ್ಲೆಸ್ಸಿ
ನಿರ್ಮಾಪಕ: ವಿಷುಯಲ್ ರೊಮ್ಯಾನ್ಸ್
ಛಾಯಾಗ್ರಹಣ: ಸುನಿಲ್ ಕೆ.ಎಸ್.
ಸಂಕಲನ: ಎ.ಶ್ರೀಕರ್ ಪ್ರಸಾದ್
ಚಿತ್ರಕಥೆ: ಬ್ಲೆಸ್ಸಿ
ತಾರಾಗಣ: ಪೃಥ್ವಿರಾಜ್ ಸುಕುಮಾರನ್, ಕೆ.ಆರ್.ಗೋಕುಲ್, ಅಮಲಾ ಪೌಲ್, ಜಿಮ್ಮಿ ಜೀನ್ ಲೂಯಿಸ್, ಶೋಭಾ ಮೋಹನ್, ತಾಲಿಬ್ ಅಲ್ ಬಲೂಶಿ, ರಿಕ್ ಅಬಿ
ಪತ್ರಿಕಾಗೋಷ್ಠಿಯ ವಿವರಗಳಿಗೆ ಇಲ್ಲಿ ನೋಡಿ:
ಥನುಪ್
ಬಹುವರ್ಣ | 109 ನಿಮಿಷಗಳು | ಮಲಯಾಳಂ | 2023

ಸಾರಾಂಶ
ಥನುಪ್ ನಲ್ಲಿ ಯುವ ದಂಪತಿಗಳಾದ ಪ್ರಧೀಶ್ ಮತ್ತು ಟ್ರೀಸಾ ಸುಂದರವಾದ ಹಳ್ಳಿಯಲ್ಲಿ ನೆಲೆಸಿರುತ್ತಾರೆ ಮತ್ತು ನದಿಯ ಬಗ್ಗೆ ಆಗಾಗ್ಗೆ ವಿಚಾರಿಸುವ ಮೂಲಕ ಬೇಗನೆ ಅನುಮಾನಗಳಿಗೆ ಕಾರಣರಾಗುತ್ತಾರೆ. ಪ್ರಧೀಶ್ ನ ರಹಸ್ಯ ರಾತ್ರಿಯ ಚಟುವಟಿಕೆಗಳು ಮತ್ತು ಟ್ರೀಸಾ ಅವರೊಂದಿಗಿನ ಆತ್ಮೀಯ ಕ್ಷಣಗಳನ್ನು ಕಿಡಿಗೇಡಿತನದ ಗ್ರಾಮಸ್ಥರು ಸೆರೆಹಿಡಿಯುತ್ತಾರೆ. ಸೋರಿಕೆಯಾದ ವೀಡಿಯೊ ಅವರನ್ನು ಅಲ್ಲಿಂದ ದೂರ ಹೋಗುವಂತೆ ಒತ್ತಾಯಿಸುತ್ತದೆ, ಇದರಿಂದಾಗಿ ಅವರ ಸ್ನೇಹಿತ ಪ್ರಕಾಶನ್ ಸಹಾಯಕ್ಕಾಗಿ ಸಂತೋಷ್ ಅವರನ್ನು ಕರೆಯುತ್ತಾರೆ. ಸಂತೋಷ್ ದಂಪತಿಗಳ ಬಗ್ಗೆ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸುತ್ತಾನೆ, ಎಲ್ಲರನ್ನೂ ದಿಗ್ಭ್ರಮೆಗೊಳಿಸುತ್ತಾನೆ. ಈ ಚಿತ್ರವು ಸಾಮಾಜಿಕ ಸಮಸ್ಯೆಗಳನ್ನು ಅಚಲ ಬದ್ಧತೆಯೊಂದಿಗೆ ವಿವರಿಸುತ್ತದೆ, ಗೌಪ್ಯತೆಯ ಆಕ್ರಮಣ ಮತ್ತು ಸಾಮಾಜಿಕ ತೀರ್ಪುಗಳ ಪರಿಣಾಮಗಳನ್ನು ವಿವೇಚಿಸುತ್ತದೆ.
ಪಾತ್ರವರ್ಗ ಮತ್ತು ಸಿಬ್ಬಂದಿ
ನಿರ್ದೇಶನ: ರಾಗೇಶ್ ನಾರಾಯಣನ್
ನಿರ್ಮಾಪಕರು: ಕಾಶಿ ಸಿನೆಮಾಸ್
ಛಾಯಾಗ್ರಹಣ: ಮಣಿಕಂಠನ್ ಪಿ.ಎಸ್.
ಸಂಕಲನ: ಸಫ್ದರ್ ಮೆರ್ವಾ
ಚಿತ್ರಕಥೆ: ರಾಗೇಶ್ ನಾರಾಯಣನ್
ತಾರಾಗಣ: ನಿಧೀಶ್, ಜಿಬಿಯಾ
ಪತ್ರಿಕಾಗೋಷ್ಠಿಗೆ ಇಲ್ಲಿ ನೋಡಿ:
*****
(Release ID: 2078886)
Visitor Counter : 34