ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಿನಿಮಾದ ವೈಭವವನ್ನು ಮುಂಚೂಣಿಗೆ ತಂದಿದ್ದಕ್ಕಾಗಿ ಆಸ್ಟ್ರೇಲಿಯಾದ ಖ್ಯಾತ ನಿರ್ದೇಶಕ ಫಿಲಿಪ್ ನೋಯ್ಸ್ ಗೆ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
“ಭಾರತೀಯ ಪ್ರೇಕ್ಷಕರಂತಹವರು ಎಲ್ಲೂ ಇಲ್ಲ’’ – ಫಿಲಿಪ್ ನೋಯ್ಸ್, ಭಾರತೀಯ ಸಿನಿಮಾ ಜಾಗತಿಕ ಪ್ರಭಾವದ ಪ್ರತಿಪಾದನೆ
ಸಿನಿಮಾದ ಭವಿಷ್ಯ ಸತ್ಯಜಿತ್ ರೇ ಅವರ ತತ್ವಗಳ ಮೇಲೆ ನಿಂತಿದೆ: ಸಣ್ಣದು ಹೆಚ್ಚು ಇಷ್ಟ; ಸಿನಿಮಾಗಳು ಚಿಕ್ಕದಾಗಿರಲಿ, ಚಿಂತನೆಗಳು ದೊಡ್ಡದಾಗಿರಲಿ-ನೋಯ್ಸೆ
ಗೋವಾದಲ್ಲಿ ಇಂದು ನಡೆದ 55ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಖ್ಯಾತ ನಿರ್ದೇಶಕ ಫಿಲಿಪ್ ನೋಯ್ಸ್ ಅವರು ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಶ್ರೇಷ್ಠ ಕೊಡುಗೆಗಾಗಿ ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮತಾನಾಡಿದ ಖ್ಯಾತ ಚಿತ್ರ ನಿರ್ದೇಶಕರು ಭಾರತೀಯ ಪ್ರೇಕ್ಷರಿಗೆ ಹೃದಯಪೂರ್ವಕ ಗೌರವವನ್ನು ಸಲ್ಲಿಸಿದರು ಹಾಗೂ 1978ರಲ್ಲಿ ಮುಂಬೈನಲ್ಲಿ ಮೊದಲ ಸಿನಿಮಾ ವೀಕ್ಷಿಸಿದ ಅನುಭವವನ್ನು ಸ್ಮರಿಸಿದರು. “ಅದು ಎಂತಹ ಮರೆಲಾಗದ ಅನುಭವ, ನನಗೆ ನಾನು ಅದೇ ಮೊದಲ ಬಾರಿಗೆ ಸಿನಿಮಾ ನೋಡುತ್ತಿದ್ದೇನೆ ಎನ್ನುವ ಅನುಭವವಾಯಿತು. ಭಾರತೀಯ ಪ್ರೇಕ್ಷಕರು ಬೇರೆಯವರಂತಲ್ಲ. ಅವರು ಸಿನಿಮಾದ ಭಾವನೆಯೊಂದಿಗೆ ಬೆರೆತು ಹೋಗಿದ್ದರು. ಅವರು ಕೂಡ ಸಿನಿಮಾದ ಭಾಗವೇ ಆಗಿದ್ದರು. ಭಾರತೀಯ ಪ್ರೇಕ್ಷಕರಂತಹವರನ್ನು ನಾನೆಲ್ಲೂ ನೋಡಿಲ್ಲ” ಎಂದು ನೋಯ್ಸ್ ಹರ್ಷದಿಂದ ಹೇಳಿದರು. ಅಲ್ಲದೆ ಭಾರತೀಯ ಚಲನಚಿತ್ರದ ಪ್ರಭಾವವನ್ನು ಉಲ್ಲೇಖಿಸಿದ ಅವರು, ಭಾರತ ಪ್ರತಿ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ದೇಶವಾಗಿದೆ ಎಂದರು.

ಹೆಸರಾಂತ ಚಿತ್ರ ನಿರ್ದೇಶಕ ಸತ್ಯಜಿತ್ ರೇ, ಅವರನ್ನು ಸ್ಮರಿಸಿದ ನೋಯ್ಸ್ “ಆಸ್ಟ್ರೇಲಿಯಾದಲ್ಲಿ ಬೆಳೆದರೂ ನಾವೆಲ್ಲಾ ಸತ್ಯಜಿತ್ ರೇ ಅವರ ಚಿತ್ರಗಳಿಂದ ಪ್ರೇರಿತರಾಗಿದ್ದೇವೆ. ಅವರ ವಿಧಾನವನ್ನು ನಾನು ನನ್ನ ಕಾರ್ಯದಲ್ಲಿ ಅಳವಡಿಸಿಕೊಂಡಿದ್ದೇನೆ. ವಿಶೇಷವಾಗಿ ತಾರಾಗಣ ಆಯ್ಕೆಯಲ್ಲಿ ರೇ ಅವರಂತೆ ನನ್ನ ಚಿತ್ರಗಳಿಗೆ ಆಸ್ಟ್ರೇಲಿಯಾದ ನಟರು ದೊರಕದಿದ್ದಾಗ ನಾನು ಸರಳವಾಗಿರುವಂತಹ ನೈಜ ವ್ಯಕ್ತಿಗಳನ್ನು ತಾರಾಗಣಕ್ಕೆ ಆಯ್ಕೆ ಮಾಡಲು ನೋಡಿದೆ’’ ಎಂದು ಹೇಳಿದರು.
ರೇ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಅವರು “ಆಸ್ಟ್ರೇಲಿಯಾದ ಸಿನಿಮಾ ಜಗತ್ತಿನಲ್ಲಿ ಚಿತ್ರ ನಿರ್ಮಾಪಕರಾದ ನಾವು, ಸತ್ಯಜಿತ್ ರೇ ಅವರಿಗೆ ಋಣಿಯಾಗಿದ್ದೇವೆ. ಅದು ಎಲ್ಲಾ ಪ್ರಶಸ್ತಿಗಿಂತಲೂ ಮಿಗಿಲಾದುದು. ಅವರ ಪ್ರಭಾವ ನಿರಂತರವಾಗಿ ನಮಗೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಿದೆ ‘’ ಎಂದರು.

ಸಿನಿಮಾದ ಭವಿಷ್ಯ ಕುರಿತಂತೆ ಪ್ರಸ್ತಾಪಿಸಿದ ನೋಯ್ಸ್, ಚಿತ್ರ ನಿರ್ಮಾಣದ ಸ್ವರೂಪ ಬದಲಾಗುತ್ತಿರುವ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. “ನಾವು ಮತ್ತೊಮ್ಮೆ ಸತ್ಯಜಿತ್ ರೇ ಅವರ ಸಿನಿಮಾ ತತ್ವದತ್ತ ಅಂದರೆ ಚಿಕ್ಕದಾಗಿದ್ದರೂ ಹೆಚ್ಚು ಪ್ರಿಯವಾಗಿರಬೇಕು (ಲೆಸ್ ಈಸ್ ಮೋರ್) ಎಂಬುದರತ್ತ ನೋಡಬೇಕಾಗಿದೆ. ತಂತ್ರಜ್ಞಾನ ಬೆಳವಣಿಗೆಯಾಗುತ್ತಿರುವಂತೆಯೇ ನಾವು ಬೆಳವಣಿಗೆಯಾಗಬೇಕು. ಸಿನಿಮಾಗಳು ಚಿಕ್ಕದಾಗಿರಬೇಕು. ಆದರೆ ಚಿಂತನೆಗಳು ದೊಡ್ಡದಾಗಿರಬೇಕು. ಹಾಗಾಗಿ ನನಗೆ ಸಿನಿಮಾದ ಭವಿಷ್ಯದಲ್ಲಿ ನಂಬಿಕೆ ಇದೆ” ಎಂದು ಪ್ರತಿಪಾದಿಸಿದರು.
ಐಎಫ್ ಎಫ್ ಐ ಚಲನಚಿತ್ರೋತ್ಸವ ನಿರ್ದೇಶಕ ಶೇಖರ್ ಕಪೂರ್ ಅವರು ಜಾಗತಿಕ ಸಿನಿಮಾಕ್ಕೆ ನೀಡಿರುವ ಅದ್ಭುತ ಕೊಡುಗೆಗಾಗಿ ಅವರನ್ನು ಶ್ಲಾಘಿಸಿದ ನೋಯ್ಸ್, ಅವರು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು
ಫಿಲಿಪ್ ನೋಯ್ಸ್ ಒಬ್ಬ ಹೆಸರಾಂತ ಹಾಗೂ ಪ್ರಶಸ್ತಿ ಪುರಸ್ಕೃತ ಆಸ್ಟ್ರೇಲಿಯಾ ನಿರ್ದೇಶಕ, ಅವರು ತಮ್ಮ ಕಥಾ ನಿರೂಪಣೆಗೆ ಮತ್ತು ಸಸ್ಪೆನ್ಸ್ ಫುಲ್ ಮಿಸ್ಟ್ರಿಗೆ ಹೆಸರಾದವರು. ಸಾಂಸ್ಕೃತಿಕ ಹಿನ್ನೆಲೆಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ನೋಯ್ಸ್ ಚಲನಚಿತ್ರಗಳಲ್ಲಿ ಪ್ಯಾಟ್ರಿಯಾಟ್ ಗೇಮ್ಸ್, ಕ್ಲಿಯರ್ ಮತ್ತು ಪ್ರೆಸೆಂಟ್ ಡೇಂಜರ್, ಸಾಲ್ಟ್ ದಿ ಸೇಂಟ್, ದಿ ಬೋನ್ ಕಲೆಕ್ಟರ್ ಮತ್ತಿತರವು ಸೇರಿವೆ. ಅವರು ಹೆಸರಾಂತ ನಟರಾದ ಹ್ಯಾರಿಸನ್ ಫೋರ್ಡ್, ನಿಕೋಲ್ ಕಿಡ್ಮನ್, ಏಂಜಲೀನಾ ಜೋಲೀ, ಡೆನ್ಜೆಲ್ ವಾಷಿಂಗ್ಟನ್ ಮತ್ತು ಮೈಕೆಲ್ ಕೇನ್ ಅವರೊಂದಿಗೆ ಸಿನಿಮಾಗಳಲ್ಲಿ ಶಾಶ್ವತ ಪ್ರಭಾವವನ್ನು ಬೀರಿದ್ದಾರೆ.
ನೋಯ್ಸ್ ಅವರು, ಎಎಸಿಟಿಎ ಪ್ರಶಸ್ತಿ ಮತ್ತು ಪ್ರತಿಷ್ಠಿತ ಲಾಂಗ್ ಫೋರ್ಡ್ ಲೈಲ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಆಸ್ಟ್ರೇಲಿಯಾ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರಿದ್ದಾರೆ. ಅವರು, ಹ್ಯಾರಿಸನ್ ಫೋರ್ಡ್, ನಿಕೋಲ್ ಕಿಡ್ಮನ್, ಏಂಜಲೀನಾ ಜೋಲೀ, ಡೆನ್ಜೆಲ್ ವಾಷಿಂಗ್ಟನ್ ಮತ್ತು ಮೈಕೆಲ್ ಕೇನ್ ಅವರೊಂದಿಗೆ ಸಿನೆಮಾ ಜಗತ್ತಿನಲ್ಲಿ ಅಚ್ಚಳಿಯ ಛಾಪು ಮೂಡಿಸಿದ್ದಾರೆ.

ಪ್ರತಿಷ್ಠಿತ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ಒಂದು ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಇದರನ್ನು ಐಎಫ್ಎಫ್ಐ ಆರಂಭಿಸಿದೆ. ಸಿನಿಮಾ ಜಗತ್ತಿಗೆ ತಮ್ಮ ಅಸಮಾನ್ಯ ಕೊಡುಗೆ ನೀಡಿರುವುದಕ್ಕಾಗಿ ಈ ಹಿಂದೆ ಖ್ಯಾತ ದಿಗ್ಗಜರಾದ ಮಾರ್ಟಿನ್ ಸ್ಕೋರ್ಸೆಸೆ, ಬರ್ನಾರ್ಡೊ ಬರ್ಟೊಲುಸಿ, ದಿಲೀಪ್ ಕುಮಾರ್, ಕಾರ್ಲೋಸ್ ಸೌರಾ, ಕ್ರಿಸ್ಜ್ಟೋಫ್ ಜನುಸ್ಸಿ, ವಾಂಗ್ ಕರ್-ವೈ ಮತ್ತು ಮೈಕೆಲ್ ಡೌಗ್ಲಾಸ್ ಅವರುಗಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
*****
(Release ID: 2078855)
Visitor Counter : 43