ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಆಯ್ಕೆ ಪ್ರಕ್ರಿಯೆಯು ತಾಂತ್ರಿಕ ಪರಿಣತಿಯನ್ನು ಮೀರಿ ಭಾವನಾತ್ಮಕ ಅನುರಣನ, ಸ್ವಂತಿಕೆ ಮತ್ತು ಸೃಜನಶೀಲತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ: ಅಂತಾರಾಷ್ಟ್ರೀಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಅಶುತೋಷ್ ಗೋವಾರಿಕರ್
"ಮಹಾನ್ ಕಥೆಗಳು ಗಡಿಗಳನ್ನು ದಾಟುತ್ತವೆ": ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿ ಸದಸ್ಯೆ ಎಲಿಜಬೆತ್ ಕಾರ್ಲ್ಸನ್
ಉತ್ತಮ ಚಲನಚಿತ್ರಗಳು ಪ್ರೇಕ್ಷಕರೊಂದಿಗೆ ಸಾರ್ವತ್ರಿಕ ಭಾವನಾತ್ಮಕ ಸಂಪರ್ಕವನ್ನು ರೂಪಿಸುತ್ತವೆ: ಅಂತರರಾಷ್ಟ್ರೀಯ ಜ್ಯೂರಿ ಸದಸ್ಯ ಆಂಥೋನಿ ಚೆನ್
ಅತ್ಯುತ್ತಮ ಚಿತ್ರಕ್ಕಾಗಿರುವ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ 12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳು ಸ್ಪರ್ಧೆಯಲ್ಲಿವೆ; ನಾಳೆ ನಡೆಯಲಿರುವ ಐಎಫ್ಎಫ್ಐನ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗುವುದು
ಐಎಫ್ಎಫ್ಐ 2024ರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
ಗೋವಾದಲ್ಲಿ ನಡೆಯುತ್ತಿರುವ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) 2024ರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರು ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಈ ವರ್ಷದ ಉತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಮತ್ತು ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ವಿಜೇತರನ್ನು ನಿರ್ಧರಿಸಲು ಗೌರವಾನ್ವಿತ ಗೋಲ್ಡನ್ ಪೀಕಾಕ್ ಜ್ಯೂರಿಯನ್ನು ರಚಿಸಲಾಗಿದೆ. ಖ್ಯಾತ ಭಾರತೀಯ ಚಲನಚಿತ್ರ ನಿರ್ಮಾಪಕ ಅಶುತೋಷ್ ಗೋವಾರಿಕರ್ ನೇತೃತ್ವದ ತೀರ್ಪುಗಾರರ ಈ ಸಮಿತಿಯು ಅಂತಾರಾಷ್ಟ್ರೀಯ ಚಲನಚಿತ್ರ ತಜ್ಞರ ತಂಡವನ್ನು ಒಳಗೊಂಡಿದೆ.
ತೀರ್ಪುಗಾರರ ತಂಡವು ಈ ಕೆಳಗಿನ ಸದಸ್ಯರನ್ನು ಒಳಗೊಂಡಿದೆ:
- ಆಂಥೋನಿ ಚೆನ್, ಸಿಂಗಾಪುರದ ನಿರ್ದೇಶಕ
- ಎಲಿಜಬೆತ್ ಕಾರ್ಲ್ಸನ್, ಬ್ರಿಟಿಷ್ ಅಮೇರಿಕನ್ ನಿರ್ಮಾಪಕಿ
- ಫ್ರಾನ್ ಬೋರ್ಗಿಯಾ, ಸ್ಪ್ಯಾನಿಷ್ ನಿರ್ಮಾಪಕ
- ಜಿಲ್ ಬಿಲ್ಲಾಕ್, ಆಸ್ಟ್ರೇಲಿಯಾ ಚಲನಚಿತ್ರ ಸಂಕಲನಕಾರ/ಸಂಪಾದಕ
ಉತ್ಸವದ ಗೋಲ್ಡನ್ ಪೀಕಾಕ್ ಪ್ರಶಸ್ತಿ ವಿಜೇತರು ಉತ್ಸವದ ಉನ್ನತ ಗೌರವಗಳಲ್ಲಿ ಒಂದಾದ 40 ಲಕ್ಷ ರೂ.ಗಳ ಬಹುಮಾನವನ್ನು ಪಡೆಯಲಿದ್ದಾರೆ. ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಿನಿಮೀಯ ಕಲಾತ್ಮಕತೆಯನ್ನು ಪ್ರತಿನಿಧಿಸುವ ಈ ಪ್ರತಿಷ್ಠಿತ ಸ್ಪರ್ಧೆಗೆ ಒಟ್ಟು 15 ಚಲನಚಿತ್ರಗಳನ್ನು (12 ಅಂತರರಾಷ್ಟ್ರೀಯ ಮತ್ತು 3 ಭಾರತೀಯ ಚಲನಚಿತ್ರಗಳ ಮಿಶ್ರಣ) ಆಯ್ಕೆ ಮಾಡಲಾಗಿದೆ.
ತೀರ್ಪುಗಾರರ ತಂಡದ ಅಧ್ಯಕ್ಷ ಅಶುತೋಷ್ ಗೋವಾರಿಕರ್ ಅವರು ಗೋವಾದ ರೋಮಾಂಚಕ ವಾತಾವರಣ ಮತ್ತು ಉತ್ಸವವನ್ನು ಹತ್ತಿರದಿಂದ ಅನುಭವಿಸುವ ಅವಕಾಶದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅವರು ತೀರ್ಪುಗಾರರ ಸದಸ್ಯರ ನಡುವಿನ ಅನನ್ಯ ಸ್ನೇಹ-ಸೌಹಾರ್ದತೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಚಲನಚಿತ್ರಗಳಲ್ಲಿ ಅವರ ಪರಸ್ಪರ ಹಂಚಿಕೆಯ ಅಭಿರುಚಿಯನ್ನು ಉಲ್ಲೇಖಿಸಿದರು. ಆಯ್ಕೆ ಪ್ರಕ್ರಿಯೆಯು ತಾಂತ್ರಿಕ ಪರಿಣತಿಯನ್ನು ಮೀರಿ, ಭಾವನಾತ್ಮಕ ಅನುರಣನ, ಸ್ವಂತಿಕೆ ಮತ್ತು ಸೃಜನಶೀಲತೆಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಅವರು ವಿವರಿಸಿದರು. ಉತ್ತಮ ಚಲನಚಿತ್ರಗಳು ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತವೆ, ವೈವಿಧ್ಯಮಯ ಸಂಸ್ಕೃತಿಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಪ್ರೇಕ್ಷಕರು ಕಲಿಯಲು ಮತ್ತು ಬೆಳೆಯಲು ಅನುವು ಮಾಡಿಕೊಡುತ್ತವೆ ಎಂದು ಗೋವಾರಿಕರ್ ಒತ್ತಿ ಹೇಳಿದರು.
ಚಲನಚಿತ್ರಗಳನ್ನು ಹೋಲಿಸುವುದು ಕಷ್ಟಕರವಾಗಿದ್ದರೂ, ಎದ್ದು ಕಾಣುವ ಒಂದು ಚಲನಚಿತ್ರವನ್ನು ಆಯ್ಕೆ ಮಾಡುವುದು ಅವಶ್ಯವಾಗಿದೆ ಮತ್ತು ಅದು ಪ್ರಶಸ್ತಿಯ ಸ್ವರೂಪವಾಗಿದೆ ಎಂಬುದರತ್ತ ಗೋವಾರಿಕರ್ ಬೆಟ್ಟು ಮಾಡಿದರು. ತೀರ್ಪುಗಾರರೊಳಗಿನ ಕ್ರಿಯಾತ್ಮಕ ಸಂಭಾಷಣೆಗಳ ಬಗ್ಗೆ ಮಾತನಾಡಿದ ಅವರು, ವಿಶೇಷವಾಗಿ ಚಲನಚಿತ್ರಗಳ ಸಾಂಸ್ಕೃತಿಕ ವ್ಯತ್ಯಾಸಗಳು ಮತ್ತು ಭಾವನಾತ್ಮಕ ಅಂಶಗಳನ್ನು ಅನ್ವೇಷಿಸುವಾಗ ಅವರ ವಿಭಿನ್ನ ದೃಷ್ಟಿಕೋನಗಳು ಚರ್ಚೆಗಳಿಗೆ ಆಳ-ಅಗಲವನ್ನು ಸೇರಿಸಿವೆ ಎಂದರು.
ಎಲಿಜಬೆತ್ ಕಾರ್ಲ್ಸನ್ ಅವರು ಗಡಿಗಳನ್ನು ಮೀರಿದ ಕಥೆ ಹೇಳುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು, ಮಹಾನ್ ಕಥೆಗಳು ಮತ್ತು ಆಲೋಚನೆಗಳು ರಾಜಕೀಯ ಗಡಿಗಳನ್ನು ಲೆಕ್ಕಿಸದೆ ಗಡಿಗಳನ್ನು ದಾಟುವ ಶಕ್ತಿಯನ್ನು ಹೊಂದಿವೆ ಎಂದು ನುಡಿದರು. ಅವರು ಚಲನಚಿತ್ರಗಳ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಅನುರಣನವನ್ನು ಎತ್ತಿ ತೋರಿಸಿದರು, ಅನೇಕರು ದಬ್ಬಾಳಿಕೆಯ ವಿರುದ್ಧ ವೈಯಕ್ತಿಕ ವಿಜಯಗಳ ಬಗ್ಗೆ ಒಳನೋಟಗಳನ್ನು ನೀಡುತ್ತಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಚೊಚ್ಚಲ ಅಥವಾ ಎರಡನೇ ಬಾರಿಗೆ ನಿರ್ದೇಶನ ಕೈಗೊಂಡ ನಿರ್ದೇಶಕರ ಚಲನಚಿತ್ರಗಳಲ್ಲಿ ನಂಬಲಸಾಧ್ಯವಾದಂತಹ ಹೆಚ್ಚಳವಾಗಿರುವುದರತ್ತ ಕಾರ್ಲ್ಸನ್ ಗಮನ ಸೆಳೆದರು, ವಿಶೇಷವಾಗಿ ಮಹಿಳೆಯರ ಬಗ್ಗೆ, ಗಮನಿಸಿದಾಗ ಇದು ಜಾಗತಿಕ ಸಿನೆಮಾದಲ್ಲಿ ಸಬಲೀಕರಣ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತೋರಿಸುತ್ತದೆ ಎಂದು ಅವರು ವಿವರಿಸಿದರು.
ಆಂಥೋನಿ ಚೆನ್ ಉತ್ಸವದೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕವನ್ನು ಹಂಚಿಕೊಂಡರು, ಐಎಫ್ಎಫ್ಐನಲ್ಲಿ ಐಸಿಎಫ್ಟಿ ಯುನೆಸ್ಕೋ ಗಾಂಧಿ ಪದಕದ ಗೌರವವನ್ನು ಗೆದ್ದ ಅವರ ಒಂದು ಚಿತ್ರವನ್ನು ನೆನಪಿಸಿಕೊಂಡರು. ಚಲನಚಿತ್ರ ನಿರ್ಮಾಣದ ಸವಾಲುಗಳನ್ನು ಪ್ರತಿಬಿಂಬಿಸಿದ ಅವರು, ಇದು ಸ್ವಯಂ ಸಂದೇಹ ಮತ್ತು ನಿರಂತರ ಪ್ರಶ್ನೆಗಳಿಂದ ಗುರುತಿಸಲ್ಪಡುವ ಪ್ರಯಾಣ ಎಂದು ಬಣ್ಣಿಸಿದರು. ಆದರೂ, ಪ್ರೇಕ್ಷಕರೊಂದಿಗೆ ಸಾರ್ವತ್ರಿಕ ಭಾವನಾತ್ಮಕ ಸಂಪರ್ಕವನ್ನು ರೂಪಿಸುವಲ್ಲಿ ಉತ್ತಮ ಚಲನಚಿತ್ರಗಳ ಶಕ್ತಿ ಸಾಮರ್ಥ್ಯಗಳನ್ನು ಅವರು ಎತ್ತಿ ತೋರಿಸಿದರು. ಚೆನ್ ಗೆ, ಚಲನಚಿತ್ರವು ಬರಹಗಾರ, ನಿರ್ದೇಶಕ ಮತ್ತು ಸಂಕಲನಕಾರರ ನಡುವಿನ ಕ್ರಿಯಾತ್ಮಕ ಸಂಭಾಷಣೆಯಂತೆ ಕಾಣುತ್ತದೆ, ಚಿತ್ರೀಕರಣ ಮತ್ತು ಸಂಕಲನದ ಸಮಯದಲ್ಲಿ ಸ್ಕ್ರಿಪ್ಟ್ (ಚಿತ್ರಕಥೆ) ನಿರಂತರವಾಗಿ ವಿಕಸನಗೊಳ್ಳುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.
ಫ್ರಾನ್ ಬೋರ್ಗಿಯಾ ಅವರು ತೀರ್ಪುಗಾರರ ಸದಸ್ಯರ ನಡುವಿನ ಸಮೃದ್ಧ ಚರ್ಚೆಗಳನ್ನು ಶ್ಲಾಘಿಸಿದರು ಮತ್ತು ಪ್ರಪಂಚದಾದ್ಯಂತದ ಚಲನಚಿತ್ರಗಳನ್ನು ನೋಡುವುದು ವಿಭಿನ್ನ ಸಂಸ್ಕೃತಿಗಳು ಮತ್ತು ದೃಷ್ಟಿಕೋನಗಳನ್ನು ಅನ್ವೇಷಿಸಲು ಹೇಗೆ ಅನುವು ಮಾಡಿಕೊಡುತ್ತದೆ ಎಂಬುದರತ್ತ ಗಮನ ಸೆಳೆದರು. ಆಳವಾದ ವೈಯಕ್ತಿಕ ಕಥೆಗಳಿಂದ ಹಿಡಿದು ವಿಶಾಲವಾದ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವವರೆಗಿನ ಚಲನಚಿತ್ರಗಳ ವೈವಿಧ್ಯತೆಯ ಬಗ್ಗೆ ಅವರು ವಿವರಿಸಿದರು.
ಶ್ರೀ ಧರ್ಮೇಂದ್ರ ತಿವಾರಿ ಪತ್ರಿಕಾಗೋಷ್ಠಿಯನ್ನು ನಿರ್ವಹಿಸಿದರು.
ಪತ್ರಿಕಾಗೋಷ್ಠಿಯನ್ನು ವಿವರವಾಗಿ ಇಲ್ಲಿ ನೋಡಿ:
55ನೇ ಐಎಫ್ಎಫ್ಐನಲ್ಲಿ ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗಾಗಿ ಈ ಕೆಳಗಿನ ಚಲನಚಿತ್ರಗಳು ಸ್ಪರ್ಧಿಸುತ್ತಿವೆ:
1. (ಫಿಯರ್ ಅಂಡ್ ಟ್ರಂಬಿಂಗ್ (ಟಾರ್ಸ್ ಒ ಲಾರ್ಜ್) - ಮಣಿಜೆಹ್ ಹೆಕ್ಮತ್, ಫೈಜ್ ಅಜೀಜ್ಖಾನಿ ನಿರ್ದೇಶಿಸಿದ್ದಾರೆ)
2. ಗುಲಿಜರ್ (ಗುಲಿಜಾರ್) - ಬೆಲ್ಕಿಸ್ ಬೇರಾಕ್ ನಿರ್ದೇಶಿಸಿದ್ದಾರೆ)
3. ಹೋಲಿ ಕೌ (ವಿಂಗ್ಟ್ ಡೈಕ್ಸ್) - ಲೂಯಿಸ್ ಕುರ್ವೋಸಿಯರ್ ನಿರ್ದೇಶಿಸಿದ್ದಾರೆ)
4. ಐ ಆಮ್ ನೆವೆಂಕಾ (ಸೋಯ್ ನೆವೆಂಕಾ) - ಐಸಿಯರ್ ಬೊಲ್ಲೈನ್ ನಿರ್ದೇಶಿಸಿದ್ದಾರೆ)
5. ಪ್ಯಾನೋಪ್ಟಿಕಾನ್ (ಪನೋಪ್ಟಿಕೋನಿ) - ಜಾರ್ಜ್ ಸಿಖರುಲಿಡ್ಜೆ ನಿರ್ದೇಶಿಸಿದ್ದಾರೆ)
6. ಪಿಯರ್ಸ್ (ಸಿ ಕ್ಸಿನ್ ಕ್ವಿಯೆ ಜಿ) – ನೆಲಿಸಿಯಾ ಲೋ ನಿರ್ದೇಶಿಸಿದ್ದಾರೆ)
7. ರೆಡ್ ಪಾಥ್ (ಲೆಸ್ ಎನ್ಫಾಂಟ್ಸ್ ರೂಜ್ಸ್) - ಲೋಟ್ಫಿ ಅಚೌರ್ ನಿರ್ದೇಶಿಸಿದ್ದಾರೆ)
8. ಶೆಫರ್ಡ್ಸ್ (ಬರ್ಗರ್ಸ್) - ಸೋಫಿ ಡೆರಾಸ್ಪೆ ನಿರ್ದೇಶಿಸಿದ್ದಾರೆ)
9. ದಿ ನ್ಯೂ ಇಯರ್ ದಟ್ ನೆವರ್ ಕೇಮ್ (ಅನುಲ್ ನೌ ಕೇರ್ ನಾ ಫೋಸ್ಟ್) - ಬೊಗ್ಡಾನ್ ಮುರೇಸಾನು ನಿರ್ದೇಶಿಸಿದ್ದಾರೆ)
10. ಟಾಕ್ಸಿಕ್ (ಅಕಿರೋಬಾ) - ಸೌಲೆ ಬ್ಲಿಯುವೈಟೆ ನಿರ್ದೇಶಿಸಿದ್ದಾರೆ )
11. ವೇವ್ಸ್ (ವಿಎಲ್ಎನ್ವೈ) - ಜಿರಿ ಮ್ಯಾಡ್ಲ್ ನಿರ್ದೇಶಿಸಿದ್ದಾರೆ)
12. ಹೂ ಡೂ ಐ ಬಿಲಾಂಗ್ ಟು-ನಾನು ಯಾರಿಗೆ ಸೇರಿದವನು (ಮೆ ಎಲ್ ಐನ್) - ಮೆರಿಯಮ್ ಜೂಬರ್ ನಿರ್ದೇಶಿಸಿದ್ದಾರೆ)
13. ಆರ್ಟಿಕಲ್ 370 (ಆರ್ಟಿಕಲ್ 370) - ಆದಿತ್ಯ ಸುಹಾಸ್ ಜಂಬಲೆ ನಿರ್ದೇಶಿಸಿದ್ದಾರೆ)
14. ರಾವ್ ಸಾಹೇಬ್ (ರಾವ್ ಸಾಹೇಬ್) - ನಿಖಿಲ್ ಮಹಾಜನ್ ನಿರ್ದೇಶಿಸಿದ್ದಾರೆ)
15. ದಿ ಗೋಟ್ ಲೈಫ್ (ಆಡುಜೀವಿತಂ) - ಬ್ಲೆಸ್ಸಿ ನಿರ್ದೇಶಿಸಿದ್ದಾರೆ)
ಪ್ರಪಂಚದಾದ್ಯಂತದ ವೈವಿಧ್ಯಮಯ ಚಿಂತನೆ/ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವ ವಿಶಿಷ್ಟ ಕಲಾತ್ಮಕ ದೃಷ್ಟಿ, ಸಾಂಸ್ಕೃತಿಕ ಪ್ರಸ್ತುತತೆ ಮತ್ತು ಭಾವನಾತ್ಮಕ ಆಳಗಳನ್ನು ತುಲನೆ ಮಾಡಿ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧಿಸುವ ಚಲನಚಿತ್ರಗಳು ಮತ್ತು ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಪರಿಶೀಲಿಸಿ (https://pib.gov.in/PressReleaseIframePage.aspx?PRID=2073053).
*****
(Release ID: 2078381)
Visitor Counter : 5