ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

55ನೇ ಐಎಫ್ಎಫ್ಐ ನ ಕೇಂದ್ರ ಪ್ರದರ್ಶನದಲ್ಲಿ ‘ಮಂಜುಮ್ಮೆಲ್ ಬಾಯ್ಸ್:’ ಸ್ನೇಹ ಮತ್ತು ಶೌರ್ಯದ ನೈಜ ಕಥನ' 


"ನನ್ನ ಚಿತ್ರದಲ್ಲಿ ಗುಹೆಯೇ ನಿಜವಾದ ನಾಯಕ. ಗುಹೆಯ ಅನುಭೂತಿಯನ್ನು ಪರದೆಯ ಮೇಲೆ ತೆರೆದಿಡಬಹುದಿತ್ತೆಂದು ನನ್ನ ಬಯಕೆ" -  'ಮಂಜುಮ್ಮೆಲ್ ಬಾಯ್ಸ್' ನಿರ್ದೇಶಕ ಚಿದಂಬರಂ

ಮಲಯಾಳಂ ಚಿತ್ರೋದ್ಯಮವು ವಿಕಸನಗೊಂಡಿದೆ; ಒಟಿಟಿ ವೇದಿಕೆಗಳ ಉದಯವು ಮಂಜುಮ್ಮೆಲ್ ಬಾಯ್ಸ್‌ನಂತಹ ಕಥೆಗಳನ್ನು ತೆರೆಯ ಮೇಲೆ ತರಲು ಅವಕಾಶ ಒದಗಿಸಿದೆ : ಚಿದಂಬರಂ

ಮಲಯಾಳಂನ ಮನಮೋಹಕ ರಕ್ಷಿಸುವ ಕಥಾ ಹಂದರದ ನಾಟಕ ‘ಮಂಜುಮ್ಮೆಲ್ ಬಾಯ್ಸ್ ಅನ್ನು 55 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಗಿದೆ. ಗೋವಾದ ಪಿಐಬಿ ಮಾಧ್ಯಮ ಕೇಂದ್ರದಲ್ಲಿ ಇಂದು, ಈ ಚಿತ್ರದ ನಿರ್ದೇಶಕರಾದ ಶ್ರೀ ಚಿದಂಬರಂ ಅವರು 55ನೇ ಐಎಫ್‌ಎಫ್‌ಐನ 6ನೇ ದಿನದ ಆರಂಭಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಚಿತ್ರದ ಕಥೆಯು ಕೇರಳದ ಕೊಚ್ಚಿ ಸಮೀಪದ ಮಂಜುಮ್ಮೆಲ್ ಎಂಬ ಹಳ್ಳಿಯ ಮಲಯಾಳಿ ಯುವಕರ 11 ಸದಸ್ಯರ ತಂಡದ ನೈಜ ಘಟನೆಯಿಂದ ಪ್ರೇರಿತವಾಗಿದೆ. ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಗುಣ ಗುಹೆ ಎಂದು ಕರೆಯಲ್ಪಡುವ ಡೆವಿಲ್ಸ್ ಕಿಚನ್‌ಗೆ ತಂಡ ಭೇಟಿ ನೀಡಿತ್ತು. ಕಮಲ್ ಹಾಸನ್ ಅಭಿನಯದ ಗುಣ ಚಿತ್ರವು ಇಲ್ಲಿ ಚಿತ್ರೀಕರಣಗೊಂಡ ನಂತರ ಈ ಗುಹೆಗಳಿಗೆ ಖ್ಯಾತಿ‌ ದೊರೆತಿದೆ. ಈ ತಂಡವು ಗುಹೆಗೆ ಭೇಟಿ ನೀಡಿದ ಸಮಯದಲ್ಲಿ, ತಂಡದ ಸದಸ್ಯರಲ್ಲಿ ಒಬ್ಬರು ಆಕಸ್ಮಿಕವಾಗಿ ಗುಹೆಯೊಳಗಿನ ಹಳ್ಳಕ್ಕೆ ಬಿದ್ದರು. ರಕ್ಷಣೆಯಲ್ಲಿ ಸ್ಥಳೀಯ ಪೋಲೀಸರು ಮತ್ತು ಅಗ್ನಿಶಾಮಕ ದಳವೂ ಸಹ ಭರವಸೆಯನ್ನು ಕೈ ಚೆಲ್ಲಿದಾಗ, ಸಿಜು ಡೇವಿಡ್ ತನ್ನ ಸ್ನೇಹಿತನನ್ನು ರಕ್ಷಿಸಲು ಸ್ವತಃ ವೀರೋಚಿತ ಪ್ರಯತ್ನ ಮಾಡಲು ಮುಂದಾಗುವನು. ಧೈರ್ಯಶಾಲಿ ಮತ್ತು ಸಾಹಸಮಯ ಕಾರ್ಯಗಳನ್ನು ಮಾಡುವನು. ಸ್ನೇಹ ಮತ್ತು ನಿಸ್ವಾರ್ಥತೆಯ ಶಕ್ತಿಯನ್ನು ಎತ್ತಿ ತೋರಿಸುವ ಈ ಘಟನೆಯು ಮಂಜುಮ್ಮೆಲ್‌ನ ಈ ಹನ್ನೊಂದು ಯುವಕರ ಶೌರ್ಯಕ್ಕೆ ಸಾಕ್ಷಿಯಾಗಿದೆ.

ಚಲನಚಿತ್ರವು ಆಧರಿಸಿರುವ ವ್ಯಾಪಕವಾಗಿ ತಿಳಿದಿರುವ ಘಟನೆಯ ಬಗ್ಗೆ ಶ್ರೀ ಚಿದಂಬರಂ ಅವರು ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಸಿನಿಮಾ ಮಾಡುವ ಪ್ರಯತ್ನವನ್ನು ದಶಕದ ಹಿಂದೆಯೇ ಬೇರೊಂದು ತಂಡ ಮಾಡಿತ್ತು. ಆದರೆ ಆ ಸಮಯದಲ್ಲಿ ಅಂತಹ ಕಥೆಗೆ ಬಂಡವಾಳ ಹೂಡಲು ಚಿತ್ರರಂಗದಲ್ಲಿ ಯಾರೂ ಸಿದ್ಧರಿರಲಿಲ್ಲ. ಅಂದಿನಿಂದ ಮಲಯಾಳಂ ಚಲನಚಿತ್ರೋದ್ಯಮವು ವಿಕಸನಗೊಂಡಿತು ಮತ್ತು ಒಟಿಟಿ ವೇದಿಕೆಗಳ ಉಗಮವು ಈ ರೀತಿಯ ಕಥೆಗಳ ನಿರೂಪಣೆಗೆ ಹೆಚ್ಚಿನ ಅವಕಾಶಗಳನ್ನು ತೆರೆಯಿತು.

ಈ ಸಿನಿಮಾ ನಿರ್ಮಾಣದಲ್ಲಿ ಎದುರಿಸಿದ ಸವಾಲುಗಳನ್ನು ಚರ್ಚಿಸುತ್ತಾ, ನಿರ್ದೇಶಕರು ನೈಜ ಗುಹೆಯಲ್ಲಿ ಚಿತ್ರೀಕರಣ ಸಾಧ್ಯವಿಲ್ಲವಾದ್ದರಿಂದ ಕೊಚ್ಚಿಯ ಗೋದಾಮಿನಲ್ಲಿ ಗುಣ ಗುಹೆಯನ್ನು ಮರುಸೃಷ್ಟಿಸುವಲ್ಲಿ ಯಾವ ತೊಂದರೆಗಳನ್ನು ಎದುರಿಸಬೇಕಾಯಿತು ಎಂಬ ಬಗ್ಗೆ ತಿಳಿಸಿದರು. ಗುಹೆಯ ವಾಸ್ತವ ಚಿತ್ರಣ ನೀಡಲು ಮತ್ತು ಅದರ ವಿಶಿಷ್ಟ ಲಕ್ಷಣಗಳನ್ನು ಸೆರೆಹಿಡಿಯುವಲ್ಲಿ ತಂಡವು ಶೌರ್ಯದಿಂದ ಸತತ ಪರಿಶ್ರಮ ವಹಿಸಿ ಸೂಕ್ಷ್ಮಗಳ ಬಗ್ಗೆ ನಿಖರವಾಗಿ ಗಮನಹರಿಸಬೇಕಾಗಿತ್ತು ಎಂದು ಅವರು ಚಿತ್ರೀಕರಣದ ವೇಳೆ ಎದುರಾದ ಸವಾಲುಗಳ ಬಗ್ಗೆ ವಿವರಿಸಿದರು.

"ಚಿತ್ರದ ನಿಜವಾದ ನಾಯಕ ಗುಹೆ" ಎಂದು ಬಣ್ಣಿಸಿದ ಶ್ರೀ ಚಿದಂಬರಂ ಅವರು "ಗುಹೆಯ ಅನುಭೂತಿಯನ್ನು ಪರದೆಯ ಮೇಲೆ ತೆರೆದಿಡಬಹುದಿತ್ತು ಎಂದಷ್ಟೇ ನಾನು ಬಯಸುತ್ತೇನೆ" ಎಂದು ಹೇಳಿದರು.

ಸಂಪೂರ್ಣ ಸಂವಾದವನ್ನು ಇಲ್ಲಿ ವೀಕ್ಷಿಸಿ: 

 

*****

iffi reel

(Release ID: 2077376)