“ಸಾಹಿತ್ಯ ಉತ್ಕೃಷ್ಟಗಳನ್ನು ಆಕರ್ಷಕ ಚಲನಚಿತ್ರವಾಗಿಸುವ ರೂಪಾಂತರ ಪ್ರಕ್ರಿಯೆ” ಕುರಿತಂತೆ 55 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ನಲ್ಲಿ " ದಿಗ್ಗಜ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರು ನಡೆಸಿಕೊಟ್ಟ ಮಾಸ್ಟರ್ ಕ್ಲಾಸ್ ಸಭಿಕರನ್ನು ಸೆಳೆಯಿತು. ಮತ್ತೋರ್ವ ಹೆಸರಾಂತ ಭಾರತೀಯ ಚಲನಚಿತ್ರ ನಿರ್ದೇಶಕ ಗೌತಮ್ ವಿ. ಮೆನನ್ ಅವರೊಂದಿಗಿನ ಒಳನೋಟದ ಸಂಭಾಷಣೆಯಲ್ಲಿ, ಚಲನಚಿತ್ರ ನಿರ್ಮಾತೃಗಳಿಗೆ ಮತ್ತು ಸಿನಿಪ್ರಿಯರಿಗೆ ಸಮಾನ ಮೌಲ್ಯಯುತ ಸಲಹೆಗಳನ್ನು ನೀಡುತ್ತಾ ಮಣಿರತ್ನಂ ಅವರು ಚಲನಚಿತ್ರಕ್ಕೆ ಸಾಹಿತ್ಯವನ್ನು ಅಳವಡಿಸಿಕೊಳ್ಳುವ ಕಲೆಯ ಬಗ್ಗೆ ಆಳವಾದ ಚರ್ಚೆ ನಡೆಸಿದರು.

ಕಥಾ ನಿರೂಪಣೆಯ ತಮ್ಮ ಜೀವನಪರ್ಯಂತದ ಕುತೂಹಲ ಮತ್ತು ಒಲವಿನ ಬಗ್ಗೆ ತಿಳಿಸುತ್ತಾ ರತ್ನಂ ಅವರು "ನಾನು ಇನ್ನೂ ಪ್ರೇಕ್ಷಕನಾಗಿ ಕುಳಿತಿರುವ ವ್ಯಕ್ತಿ" ಎಂದು ವಿನಮ್ರರಾಗಿ ಹೇಳಿದರು. ಚಿತ್ರ ನಿರ್ದೇಶನದ ಪರಿಣತರಾದರೂ ಅವರು, “ನಾನು ಎಷ್ಟೋ ವಿಷಯಗಳಲ್ಲಿ ಇನ್ನೂ ಕಲಿಕಾರ್ಥಿ ಎಂಬ ಭಾವವಿದೆ” ಎಂದು ಉದ್ಗರಿಸಿದ್ದಾರೆ.

ಸಿನಿಮಾ ಮತ್ತು ಸಾಹಿತ್ಯದ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿದ ಮಣಿರತ್ನಂ ಅವರು "ಸಿನಿಮಾ ಮತ್ತು ಸಾಹಿತ್ಯದ ನಡುವೆ ಸಂಬಂಧ ನಿಕಟವಾದಷ್ಟೂ ಭಾರತೀಯ ಸಿನಿಮಾ ಉತ್ತಮವಾಗಿರಲಿದೆ" ಎಂದು ಪ್ರತಿಪಾದಿಸಿದರು. ಚಿತ್ರ ನಿರ್ಮಾತೃಗಳು ಬರವಣಿಗೆಯನ್ನು ಆಕರ್ಷಕ ದೃಶ್ಯ ನಿರೂಪಣೆಗಳಾಗಿ ಪರಿವರ್ತಿಸುವ ಸೂಕ್ಷ್ಮ ಕಲೆಯ ಸಾಣೆ ಹಿಡಿಯಬೇಕು ಎಂದು ಅವರು ಒತ್ತಿ ಹೇಳಿದರು.
ತೆರೆಯ ಮೇಲೆ ಸಾಹಿತ್ಯಕ್ಕೆ ಜೀವ ತುಂಬುವುದು

ಪುಸ್ತಕಗಳನ್ನು ಚಲನಚಿತ್ರಗಳಾಗಿ ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಚರ್ಚಿಸುತ್ತಾ, ರತ್ನಂ ಅವರು “ಚಲನಚಿತ್ರಗಳು ದೃಶ್ಯ ಮಾಧ್ಯಮವಾಗಿದೆ, ಆದರೆ ಪುಸ್ತಕಗಳು ಮುಖ್ಯವಾಗಿ ಕಾಲ್ಪನಿಕವಾಗಿವೆ. ಓದುಗನ ಕಲ್ಪನೆಗೆ ಜೀವ ನೀಡುವಲ್ಲಿ ಚಲನಚಿತ್ರ ನಿರ್ದೇಶಕರು ಹೆಚ್ಚು ಜಾಗರೂಕರಾಗಿರಬೇಕು” ಎಂದು ವಿವರಿಸಿದರು. ಚಿತ್ರಕಥೆಗೆ ಹೊಂದಾಣಿಕೆಗಳ ಅಗತ್ಯವಿದ್ದರೂ, ಈ ಬದಲಾವಣೆಗಳು ಕಥೆಯ ಮೂಲ ಆಶಯವನ್ನು ಬದಲಿಸದೇ ಕಥೆಗೆ ಇನ್ನಷ್ಟು ಮೆರುಗು ನೀಡಬೇಕು ಎಂದು ಅವರು ತಿಳಿಸಿದರು.
ಪುರಾಣ ಮತ್ತು ಪುರಾತನ ಭಾರತೀಯ ಇತಿಹಾಸವು ತಮ್ಮ ದೃಷ್ಟಿಕೋನದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಮಣಿರತ್ನಂ ಅವರು ಹಂಚಿಕೊಂಡರು. ಇದರಿಂದಾಗಿ ಅವರು ವಿಶಿಷ್ಟ ರೀತಿಯಲ್ಲಿ ಪಾತ್ರಗಳನ್ನು ಚಿತ್ರಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಸಂಭಾಷಣೆಯನ್ನು ನಟರು ನೈಜವಾಗಿ ಅಭಿವ್ಯಕ್ತಿಪಡಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಲಿಖಿತ ಸಾಹಿತ್ಯದ ಭಾಷೆಯನ್ನು ಚಲನಚಿತ್ರ ಸಂಭಾಷಣೆಗೆ ಅಳವಡಿಸಿಕೊಳ್ಳುವಾಗ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದರು.
1955ರ ಕಲ್ಕಿ ಕೃಷ್ಣಮೂರ್ತಿಯವರ ಅಪ್ರತಿಮ ಕಾದಂಬರಿಯಾದ 'ಪೊನ್ನಿಯನ್ ಸೆಲ್ವನ್' ಅನ್ನು ಅದೇ ಹೆಸರಿನಿಂದ ಅಳವಡಿಸಿಕೊಂಡ ಇತ್ತೀಚಿನ ಅದ್ಭುತ ಚಿತ್ರದ ಬಗ್ಗೆ ಚರ್ಚಿಸುತ್ತಾ, ಮಣಿರತ್ನಂ ಅವರು ಚೋಳರ ಕಾಲವನ್ನು ಹೇಗೆ ಚಿತ್ರಿಸಬೇಕಾಗಿತ್ತು ಎಂಬ ಬಗ್ಗೆ ತಿಳಿಸಿದರು. ತಂಜಾವೂರಿನಲ್ಲಿ ಚೋಳರ ಕಾಲದ ಎಲ್ಲಾ ಅವಶೇಷಗಳು ನಶಿಸಿ ಹೋಗಿತ್ತು, ಅಲ್ಲದೇ ವಿಸ್ತಾರವಾದ ಸೆಟ್ಗಳನ್ನು ರಚಿಸಲು ಬಯಸದ ಕಾರಣ ಭಾರತದ ಉತ್ತರ ಭಾಗದಲ್ಲಿ ಚಿತ್ರೀಕರಣ ಮಾಡಿ ಅಲ್ಲಿನ ವಾಸ್ತುಶಿಲ್ಪವನ್ನು ಚೋಳರ ವಾಸ್ತುಶಿಲ್ಪವನ್ನು ಹೋಲುವಂತೆ ಪರಿವರ್ತಿಸಿದ ಬಗೆಯನ್ನು ಕಟ್ಟಿಕೊಟ್ಟರು.
ಸಹಯೋಗದ ಕಲೆಯಾಗಿ ಚಲನಚಿತ್ರಗಳು

ಸಿನಿಮಾದ ಸಹಯೋಗದ ಸ್ವರೂಪವನ್ನು ಒತ್ತಿಹೇಳುತ್ತಾ, ಮಣಿರತ್ನಂ ಅವರು, "ಚಿತ್ರದಲ್ಲಿನ ಪ್ರತಿಯೊಬ್ಬ ವ್ಯಕ್ತಿಯನ್ನು, ನಟನಾಗಿರಲಿ ಅಥವಾ ಸಿಬ್ಬಂದಿಯಾಗಿರಲಿ- ಎಲ್ಲರನ್ನೂ ಒಂದು ಕೇಂದ್ರಬಿಂದುವಿಗೆ ಒಟ್ಟಿಗೆ ತರುವುದು ನಿರ್ದೇಶಕನಾಗಿ ನನ್ನ ಕೆಲಸ" ಎಂದು ಹೇಳಿದರು.
ಮಾಸ್ಟರ್ ಕ್ಲಾಸ್ ಪ್ರೇಕ್ಷಕರಿಗೆ ಉತ್ಕೃಷ್ಟವಾದ ಅನುಭವವನ್ನು ನೀಡಿತು, ಸೃಜನಶೀಲ ಸ್ವಾತಂತ್ರ್ಯವನ್ನು ಚಿಂತನಶೀಲವಾಗಿ ಅಭಿವ್ಯಕ್ತಗೊಳಿಸುವಂತೆ ರತ್ನಂ ಅವರು ಯುವ ಚಲನಚಿತ್ರ ನಿರ್ಮಾತೃಗಳಿಗೆ ಸಲಹೆ ನೀಡಿದರು. ಚಿತ್ರಕ್ಕಾಗಿ ವಿಶಿಷ್ಟ ಕ್ರಿಯಾತ್ಮಕ ಮಾರ್ಪಾಡುಗಳನ್ನು ಮಾಡಿಕೊಳ್ಳುವಾಗ ಪುಸ್ತಕದ ಮೂಲ ಆಶಯವನ್ನು ಬದಲಿಸದೇ ಸಂರಕ್ಷಿಸುವಂತೆ ಅವರು ಕಿವಿಮಾತು ಹೇಳಿದರು.
ಈ ಮಾಸ್ಟರ್ ಕ್ಲಾಸ್ ಚಲನಚಿತ್ರ ನಿರ್ದೇಶಕರ ಪಾಂಡಿತ್ಯ ಮತ್ತು ನಮ್ರತೆಗೆ ಸಾಕ್ಷಿಯಾಗಿದೆ ಮತ್ತು ಎಲ್ಲಾ ಮಹತ್ವಾಕಾಂಕ್ಷಿ ಕಥಾ ನಿರೂಪಕರಿಗೆ ಸಾಹಿತ್ಯ ಮತ್ತು ಸಿನಿಮಾದ ಎರಡರ ನಡುವೆ ಹೇಗೆ ಕೊಂಡಿಯಾಗಬೇಕು ಎಂಬ ಬಗ್ಗೆ ಮೌಲ್ಯಯುತ ಪಾಠವನ್ನು ನೀಡಿದೆ.
*****