ವಾರ್ತಾ ಮತ್ತು ಪ್ರಸಾರ ಸಚಿವಾಲಯ
ತಾಷ್ಕೆಂಟ್ ನಿಂದ ಬೆಲ್ ಗ್ರೇಡ್ ಗೆ: 55ನೇ ಐ ಎಫ್ ಎಫ್ ಐ ಗಡಿಗಳು ಮತ್ತು ಸಂಸ್ಕೃತಿಗಳನ್ನು ಮೀರಿದ ಕಥೆಗಳನ್ನು ಪ್ರದರ್ಶಿಸುತ್ತಿದೆ
ಗಡಿರಹಿತ ಸಿನಿಮಾ: 55ನೇ ಐ ಎಫ್ ಎಫ್ ಐನಲ್ಲಿ ಉಜ್ಬೇಕಿಸ್ತಾನ ಮತ್ತು ಸರ್ಬಿಯಾ ಮಾನವೀಯ ಸಂಬಂಧಗಳನ್ನು ಬೆಸೆಯುತ್ತಿವೆ
ಸಿನಿಮಾ ಭಿನ್ನತೆಗಳನ್ನು ಸೇತುವೆಯಾಗಿ ಬೆಸೆಯುವ ಬಲಿಷ್ಠ ಭಾಷೆ: ಸರ್ಬಿಯನ್ ಚಲನಚಿತ್ರ ನಿರ್ಮಾಪಕ ಬೋರಿಸ್ ಗಟ್ಸ್
ಮಾನವ ಸಂಬಂಧಗಳಲ್ಲಿನ ನಿಷ್ಠೆಯೇ ನಮ್ಮ ಕಥೆಗಳ ಮೂಲಾಂಶ: ಉಜ್ಬೇಕ್ ಚಲನಚಿತ್ರ ನಿರ್ಮಾಪಕ ಜಮ್ಶಿದ್ ನಾರ್ಜಿಕುಲೋವ್
"ಭವಿಷ್ಯ ಈಗ ಇದೆ ": ಉತ್ತಮ ನಾಳೆಯ ನಿರ್ಮಾಣದಲ್ಲಿ ಸಿನಿಮಾದ ಪಾತ್ರವನ್ನು ಒತ್ತಿ ಹೇಳಿದ ನಿರ್ದೇಶಕರು
55ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (IFFI) ಉಜ್ಬೇಕಿಸ್ತಾನ್, ಎಸ್ಟೋನಿಯಾ ಮತ್ತು ಸರ್ಬಿಯಾದಿಂದ ಮೂರು ವಿಶೇಷ ಚಲನಚಿತ್ರಗಳ ಪ್ರದರ್ಶನವನ್ನು ಒಳಗೊಂಡಿತ್ತು. ದೂರದೃಷ್ಟಿಯ ನಿರ್ದೇಶಕರು ಮತ್ತು ನಿರ್ಮಾಪಕರು ರಚಿಸಿದ ಈ ಸಿನೆಮಾಗಳು, ಸ್ಥೈರ್ಯ, ಸ್ವಯಂ-ಪ್ರಜ್ಞೆ ಮತ್ತು ಅಚಲ ಮಾನವ ಮನೋಭಾವದ ವಿಷಯಗಳನ್ನು ಅನ್ವೇಷಿಸುತ್ತವೆ. ವೈವಿಧ್ಯಮಯ ಸಾಂಸ್ಕೃತಿಕ ಭೂದೃಶ್ಯಗಳ ಮೂಲಕ ಭಾವೋದ್ರಿಕ್ತ ಪ್ರಯಾಣಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯುತ್ತದೆ.

ಪ್ರಮುಖ ಆಕರ್ಷಣೆಗಳಲ್ಲಿ 'ದಿ ಸಾಂಗ್ ಸುಸ್ಕ್ಸೋಟಿನ್' ಎಂಬ ಚಲನಚಿತ್ರವಿದ್ದು, ಇದು ಬರಗಾಲ ಪೀಡಿತ ಉಜ್ಬೇಕ್ ಗ್ರಾಮದಲ್ಲಿ ನಡೆಯುವ ಹೃದಯ ಸ್ಪರ್ಶಿ ಕಥೆಯಾಗಿದೆ. ಅಂತರರಾಷ್ಟ್ರೀಯ ಮನ್ನಣೆ ಪಡೆದ ಖುಸ್ನೋರಾ ರೊಜ್ಮಾಟೋವಾ ನಿರ್ದೇಶಿಸಿರುವ ಈ ಚಲನಚಿತ್ರವು ಪ್ರಕೃತಿಯ ರೌದ್ರ ಮತ್ತು ಸಾಮಾಜಿಕ ನಿರಾಶೆಯ ವಿರುದ್ಧ ಒಂದು ಸಮುದಾಯದ ಹೋರಾಟವನ್ನು ಚಿತ್ರಿಸುತ್ತದೆ. ಕಜಾನ್ ಅಂತರರಾಷ್ಟ್ರೀಯ ಮುಸ್ಲಿಂ ಚಲನಚಿತ್ರೋತ್ಸವದಲ್ಲಿ "ಫಾರ್ ಹ್ಯೂಮನಿಸಂ" ಪ್ರಶಸ್ತಿ ಪಡೆದಿರುವ ರೊಜ್ಮಾಟೋವಾ, ತಮ್ಮ ಎರಡನೇ ಪೂರ್ಣಪ್ರಮಾಣದ ಚಲನಚಿತ್ರದಲ್ಲಿ ಮಾನವೀಯ ಕಥನದ ಬಗೆಗಿನ ತಮ್ಮ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಪ್ರದರ್ಶನದ ಮತ್ತೊಂದು ಆಕರ್ಷಣೆಯೆಂದರೆ ಉಜ್ಬೇಕಿಸ್ತಾನದಿಂದ ಬಂದಿರುವ 'ಹೌಸ್'. ಇದು ಜಮ್ಶಿದ್ ನಾರ್ಜಿಕುಲೋವ್ ನಿರ್ದೇಶಿಸಿರುವ ಭಾವನಾತ್ಮಕ ಕಥನ. ಅಜಾಗರೂಕ ಆನ್ಲೈನ್ ಚಾಲೆಂಜ್ ಗೆ ತನ್ನ ಏಕೈಕ ಮಗನನ್ನು ಕಳೆದುಕೊಳ್ಳುವ ದುಃಖಿತ ವಿಧವೆಯೊಬ್ಬಳನ್ನು ಕಥೆಯನ್ನು ಇದು ಹೇಳುತ್ತದೆ. ನ್ಯಾಯಕ್ಕಾಗಿ ಆಕೆ ಶಾಂತ ಗ್ರಾಮದಿಂದ ವಿಸ್ತಾರವಾದ ಮಹಾನಗರದ ಗೊಂದಲಮಯ ವಾತಾವರಣಕ್ಕೆ ತೆರಳುತ್ತಾಳೆ, ಅಲ್ಲಿ ಆಕೆ ಕಠಿಣ ವಾಸ್ತವಗಳನ್ನು ಎದುರಿಸುತ್ತಾ ತನ್ನ ಶಕ್ತಿ ಮತ್ತು ಮೌಲ್ಯಗಳನ್ನು ಮರುಕಂಡುಕೊಳ್ಳುತ್ತಾಳೆ. ನಾರ್ಜಿಕುಲೋವ್ ಅವರ ಈ ಮೊದಲ ಪೂರ್ಣಪ್ರಮಾಣದ ಚಲನಚಿತ್ರವು ವೈಯಕ್ತಿಕ ದುರಂತವನ್ನು ಪರಿವರ್ತನಾತ್ಮಕ ಸ್ವ-ಅನ್ವೇಷಣೆಯೊಂದಿಗೆ ಬೆಸೆದು, ಸೂಕ್ಷ್ಮ ಕಥನ ಕೌಶಲ್ಯವನ್ನು ಪ್ರದರ್ಶಿಸುತ್ತದೆ.

ಎಸ್ಟೋನಿಯಾ ಮತ್ತು ಸರ್ಬಿಯಾದಿಂದ ಬಂದಿರುವ 'ಡೆಫ್ ಲವರ್ಸ್' ಖ್ಯಾತ ರಷ್ಯನ್ ಪ್ರಯೋಗಾತ್ಮಕ ಚಲನಚಿತ್ರ ನಿರ್ಮಾಪಕ ಬೋರಿಸ್ ಗಟ್ಸ್ ನಿರ್ದೇಶಿಸಿದ್ದಾರೆ. ಇಸ್ತಾಂಬುಲ್ನಲ್ಲಿ ನಡೆಯುವ ಈ ಸಮಕಾಲೀನ ಕಥೆಯು ಉಕ್ರೇನಿಯನ್ ಸೋನ್ಯಾ ಮತ್ತು ರಷ್ಯನ್ ದಾನ್ಯಾ ಅವರು ವಿದೇಶಿ ನಗರದಲ್ಲಿ ಬದುಕುಳಿಯುವ ಸವಾಲುಗಳನ್ನು ಎದುರಿಸುತ್ತಾ, ಹಂಚಿಕೊಂಡ ಹೋರಾಟಗಳು ಮತ್ತು ಆಕಾಂಕ್ಷೆಗಳೊಂದಿಗೆ ಹೇಗೆ ಹೋರಾಡುತ್ತಾರೆ ಎಂಬುದನ್ನು ಹೇಳುತ್ತದೆ. ಅವರ ಪಯಣವು ಪ್ರಕ್ಷುಬ್ಧ ಭೂತಕಾಲದ ನಡುವೆ ಗುರುತಿನ ಹುಡುಕಾಟ, ಸ್ಥೈರ್ಯ ಮತ್ತು ಹಂಚಿಕೊಂಡ ಭವಿಷ್ಯದ ಅನ್ವೇಷಣೆಯ ವಿಷಯಗಳನ್ನು ಅನ್ವೇಷಿಸುತ್ತದೆ. ಗಟ್ಸ್ ಅವರು ಬಡತನ, ಜಾತಿವಾದ ಮತ್ತು ಅಸಾಧ್ಯ ರೋಗಗಳಂತಹ ನಿರ್ಣಾಯಕ ವಿಷಯಗಳನ್ನು ತಮ್ಮ ನಿರ್ಭೀತ ದೃಷ್ಟಿಕೋನದಿಂದ ಅನ್ವೇಷಿಸಿ, ಈ ಅಂತರರಾಷ್ಟ್ರೀಯ ಪ್ರಥಮ ಪ್ರದರ್ಶನಕ್ಕೆ ತಮ್ಮದೇ ಆದ ಅನನ್ಯತ್ತೆ ಮತ್ತು ದೃಷ್ಟಿಕೋನವನ್ನು ತುಂಬಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೋರಿಸ್ ಗಟ್ಸ್, ಯುದ್ಧ ಪೀಡಿತ ಪ್ರದೇಶಗಳಲ್ಲಿಯೂ ಭಿನ್ನತೆಗಳನ್ನು ಸೇತುವೆಯಾಗಿ ಬೆಸೆಯುವ ಶಕ್ತಿ ಹೊಂದಿರುವ ಬಲಿಷ್ಠ ಭಾಷೆಯಾಗಿ ಚಲನಚಿತ್ರದ ಮಹತ್ವವನ್ನು ಒತ್ತಿ ಹೇಳಿದರು.
ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕರೀಮ್, ಗಡಿಗಳಾದ್ಯಂತ ಜನರನ್ನು ಒಗ್ಗೂಡಿಸುವಲ್ಲಿ, ಭಿನ್ನಾಭಿಪ್ರಾಯಗಳನ್ನು ಗುಣಪಡಿಸುವಲ್ಲಿ ಮತ್ತು ಹಂಚಿಕೊಂಡ ಕಥೆಗಳ ಮೂಲಕ ಮಾನವೀಯತೆಯನ್ನು ಹತ್ತಿರ ತರುವಲ್ಲಿ ಚಲನಚಿತ್ರದ ಪಾತ್ರವನ್ನು ಒತ್ತಿ ಹೇಳಿದರು.
ನಿರ್ದೇಶಕರು "ಉತ್ತಮ ಭವಿಷ್ಯವನ್ನು ನಿರ್ಮಿಸುವಲ್ಲಿ" ಚಲನಚಿತ್ರದ ಪಾತ್ರವನ್ನೂ ಒತ್ತಿ ಹೇಳಿದರು.

ಒಟ್ಟಾರೆಯಾಗಿ ಈ ಚಲನಚಿತ್ರಗಳು ಗಡಿಗಳನ್ನು ಮೀರಿ, ಸಂಸ್ಕೃತಿಗಳನ್ನು ಸಂಪರ್ಕಿಸಲು ಮತ್ತು ಮಾನವ ಸ್ಥಿತಿಯ ಸಂಕೀರ್ಣತೆಗಳನ್ನು ಅನ್ವೇಷಿಸಲು ಸಿನಿಮಾದ ಸಾರ್ವತ್ರಿಕ ಶಕ್ತಿಯನ್ನು ಪ್ರದರ್ಶಿಸುತ್ತವೆ. ಅವರ ವಿಶಿಷ್ಟ ಶೈಲಿಯ ಕಥೆ ಹೇಳುವಿಕೆ, ವಿಮರ್ಶಾತ್ಮಕ ಕಥಾವಸ್ತು ಮತ್ತು ಕಲಾತ್ಮಕ ಪ್ರತಿಭೆಯೊಂದಿಗೆ, ಅವರು ಐ ಎಫ್ ಎಫ್ ಐ 2024ನಲ್ಲಿ ಪ್ರೇಕ್ಷಕರ ಮೇಲೆ ಅಳಿಸಲಾಗದ ಪ್ರಭಾವ ಬೀರುವ ಭರವಸೆ ನೀಡುತ್ತಾರೆ.
*****
(Release ID: 2076415)