ವಾರ್ತಾ ಮತ್ತು ಪ್ರಸಾರ ಸಚಿವಾಲಯ
55ನೇ ಐ ಎಫ್ ಎಫ್ ಐ ನಲ್ಲಿ ನಡೆದ ಮೊದಲ ಪ್ಯಾನಲ್ ಚರ್ಚೆಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಿನೆಮಾ ಕುರಿತು ಚರ್ಚಿಸಲಾಯಿತು
ಚಲನಚಿತ್ರ ಉದ್ಯಮವು ತೆರೆಯ ಮೇಲೆ ಮತ್ತು ತೆರೆಮರೆಯಲ್ಲಿ ಮಹಿಳೆಯರನ್ನು ಉತ್ತಮವಾಗಿ ಬೆಂಬಲಿಸಬಹುದು ಮತ್ತು ಸಬಲೀಕರಣಗೊಳಿಸಬಹುದು: ಪ್ಯಾನೆಲಿಸ್ಟ್ ಗಳು
55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಮೊದಲ ಪ್ಯಾನಲ್ ಚರ್ಚೆ ಇಂದು ಮಹಿಳಾ ಸುರಕ್ಷತೆ ಮತ್ತು ಸಿನೆಮಾ ಕುರಿತು ಸಂವಾದದೊಂದಿಗೆ ಪ್ರಾರಂಭವಾಯಿತು. ಖ್ಯಾತ ನಟ ಮತ್ತು ನಿರ್ಮಾಪಕ ವಾಣಿ ತ್ರಿಪಾಠಿ ಟಿಕೂ ಅವರ ಮಾರ್ಗದರ್ಶನದಲ್ಲಿ, ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ, ನಟರಾದ ಸುಹಾಸಿನಿ ಮಣಿರತ್ನಂ, ಖುಷ್ಬೂ ಸುಂದರ್ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಪ್ಯಾನಲಿಸ್ಟ್ ಗಳನ್ನು ಒಟ್ಟುಗೂಡಿಸಿ, ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆ, ಲಿಂಗ ಪ್ರಾತಿನಿಧ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ರೂಪಿಸುವಲ್ಲಿ ಸಿನೆಮಾ ವಹಿಸುವ ಪಾತ್ರದ ಬಗ್ಗೆ ಚರ್ಚಿಸಲಾಯಿತು.
ಚಲನಚಿತ್ರೋದ್ಯಮವು ತೆರೆಯ ಮೇಲೆ ಮತ್ತು ತೆರೆಮರೆಯಲ್ಲಿ ಮಹಿಳೆಯರನ್ನು ಹೇಗೆ ಉತ್ತಮವಾಗಿ ಬೆಂಬಲಿಸುತ್ತದೆ ಮತ್ತು ಸಬಲೀಕರಣಗೊಳಿಸುತ್ತದೆ ಎಂಬುದರ ಕುರಿತು ಪ್ಯಾನಲಿಸ್ಟ್ ಗಳು ವೈಯಕ್ತಿಕ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಂಡರು. ಸಿನೆಮಾದಲ್ಲಿ ಮಹಿಳೆಯರು ಕಿರುಕುಳ ಅಥವಾ ಶೋಷಣೆಯ ಚಿಂತೆಗಳಿಲ್ಲದೆ ಮುಕ್ತವಾಗಿ ಕೆಲಸ ಮಾಡುವಂತಹ ಸುರಕ್ಷಿತ ವಾತಾವರಣವನ್ನು ಬೆಳೆಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಲೈಂಗಿಕ ಅಪರಾಧಿಯನ್ನು ಗುರುತಿಸಿದಾಗ ಚಿತ್ರೀಕರಣ ತಂಡಗಳು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಚರ್ಚೆಯ ಗಮನಾರ್ಹ ಭಾಗ ಕೇಂದ್ರೀಕೃತವಾಗಿತ್ತು. ಕಾರ್ಯಸ್ಥಳದಲ್ಲಿ ಲಿಂಗ ಅನ್ಯಾಯವನ್ನು ಸಹಿಸುವುದು ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಎಂದು ಪ್ಯಾನೆಲಿಸ್ಟ್ ಗಳು ಒಪ್ಪಿಕೊಂಡರು. ಪುರುಷ ನಟರು ಸಾಮಾನ್ಯವಾಗಿ ಸೆಟ್ ಗಳಿಗೆ ಬಂದು ದೃಶ್ಯಗಳಲ್ಲಿ ಬದಲಾವಣೆಗಳನ್ನು ಸೂಚಿಸುತ್ತಾರೆ, ಆದರೆ ಇದು ಮಹಿಳೆಯರ ವಿಷಯದಲ್ಲಿ ಅಪರೂಪವಾಗಿ ನಡೆಯುತ್ತದೆ ಎಂಬ ತಮ್ಮ ಅನುಭವವನ್ನು ಸುಹಾಸಿನಿ ಮಣಿರತ್ನಂ ಹಂಚಿಕೊಂಡರು. ಮಹಿಳೆಯರು ತಮ್ಮ ಪ್ರಾತಿನಿಧ್ಯದಲ್ಲಿ ನಿಷ್ಕ್ರಿಯವಾಗಿ ಭಾಗವಹಿಸುವ ಬದಲು ತಮ್ಮ ದೃಶ್ಯಗಳ ಉಸ್ತುವಾರಿಯನ್ನು ವಹಿಸಿಕೊಳ್ಳಬೇಕು ಮತ್ತು ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ಅವರು ಒತ್ತಿ ಹೇಳಿದರು. ಉದ್ಯಮದ ವೃತ್ತಿಪರರು ಈ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಕೆಲಸದ ನೈತಿಕತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ಇಮ್ತಿಯಾಜ್ ಅಲಿ ಅವರು, ಚಿತ್ರೀಕರಣ ತಾಣದಲ್ಲಿರುವ ಮಹಿಳೆಯರು ತಮ್ಮೊಂದಿಗೆ ಹೇಗೆ ವರ್ತಿಸಲಾಗುತ್ತದೆ ಎಂಬ ಚಿಂತೆ ಇಲ್ಲದೆ, ಕೇವಲ ಕಲೆಯ ಮೇಲೆ ಗಮನ ಕೇಂದ್ರೀಕರಿಸಬಹುದಾದ ಕೆಲಸದ ಸಂಸ್ಕೃತಿಯನ್ನು ಸೃಷ್ಟಿಸುವ ಮಹತ್ವವನ್ನು ಒತ್ತಿ ಹೇಳಿದರು. ಚಿತ್ರೀಕರಣ ತಾಣಗಳಲ್ಲಿ ಲಿಂಗ ಅನ್ಯಾಯವನ್ನು ಚಲನಚಿತ್ರ ನಿರ್ಮಾಪಕರು ಸಹಿಸಬಾರದು ಎಂದು ಅವರು ಹೇಳಿದರು.
ಚಲನಚಿತ್ರಗಳಲ್ಲಿ ಮಹಿಳೆಯರ ಚಿತ್ರಣ ಮತ್ತು ಅದು ಅವರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವಲ್ಲಿ ನೇರವಾಗಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಹ ಈ ಸಂವಾದ ಚರ್ಚಿಸಿತು. ಮಹಿಳೆಯರ ಘನತೆ ಮತ್ತು ಪರದೆಯ ಮೇಲೆ ಅವರನ್ನು ಪ್ರತಿನಿಧಿಸುವ ರೀತಿ ಗೌರವಯುತ ಮತ್ತು ಸಬಲೀಕರಣ ವಾತಾವರಣವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭೂಮಿ ಪೆಡ್ನೇಕರ್ ಒತ್ತಿ ಹೇಳಿದರು.
ಖುಷ್ಬೂ ಸುಂದರ್ ಅವರು ತಮ್ಮ ಚಲನಚಿತ್ರಗಳನ್ನು ಮನರಂಜನಾತ್ಮಕವಾಗಿ ಮಾಡುವುದರ ಜೊತೆಗೆ, ಸಮಾನತೆ ಮತ್ತು ಗೌರವದ ತತ್ವಗಳನ್ನು ರಾಜಿ ಮಾಡಿಕೊಳ್ಳದೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿರುವುದಾಗಿ ಹೇಳಿದರು. ಮಹಿಳೆಯರನ್ನು ಗೌರವದಿಂದ ಚಿತ್ರೀಕರಿಸುವುದು ಕೇವಲ ಪಾತ್ರಗಳಿಗೆ ಸೀಮಿತವಾಗಿರದೆ, ಇಡೀ ಚಲನಚಿತ್ರ ಉದ್ಯಮಕ್ಕೆ ಮಾದರಿಯಾಗಬೇಕು ಎಂಬುದನ್ನು ಚರ್ಚಾ ವೇದಿಕೆಯಲ್ಲಿದ್ದ ಎಲ್ಲರೂ ಒಪ್ಪಿಕೊಂಡರು.
ಚರ್ಚೆಯಲ್ಲಿ ಪ್ರೇಕ್ಷಕರು ಸಕ್ರಿಯವಾಗಿ ಭಾಗವಹಿಸಿ, ಸಿನಿಮಾ ರಂಗದಲ್ಲಿ ಮಹಿಳೆಯರ ಬದಲಾಗುತ್ತಿರುವ ಪಾತ್ರ ಮತ್ತು ಅವರ ಸುರಕ್ಷತೆ ಅಥವಾ ಗೌರವಕ್ಕೆ ಧಕ್ಕೆ ತರದಂತೆ ಅವರ ಯಶಸ್ಸಿಗೆ ಉದ್ಯಮವು ಹೇಗೆ ಅವಕಾಶಗಳನ್ನು ಸೃಷ್ಟಿಸಬಹುದು ಎಂಬ ಕುರಿತು ಪ್ರಶ್ನೆಗಳನ್ನು ಕೇಳಿದರು.
2024ರ ಐ ಎಫ್ ಎಫ್ ಐ ಯ ಮೊದಲ ಪ್ಯಾನೆಲಾಗಿ, ಈ ಸಂವಾದವು ಸಿನೆಮಾದ ಕಲೆಯನ್ನು ಆಚರಿಸುವುದಲ್ಲದೆ, ಎಲ್ಲರಿಗೂ ಸುರಕ್ಷಿತ ಮತ್ತು ಹೆಚ್ಚು ಸಮಾನವಾದ ಭವಿಷ್ಯವನ್ನು ರೂಪಿಸುವಲ್ಲಿ ಉದ್ಯಮದ ಜವಾಬ್ದಾರಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದಕ್ಕೆ ನಾಂದಿ ಹಾಡಿತು.
*****
(Release ID: 2075968)
Visitor Counter : 7