ಪ್ರಧಾನ ಮಂತ್ರಿಯವರ ಕಛೇರಿ
ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್ʼ ಪ್ರಶಸ್ತಿ ಸ್ವೀಕಾರ ಕುರಿತು ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
Posted On:
19 NOV 2024 10:26PM by PIB Bengaluru
ಗೌರವಾನ್ವಿತ ಅಧ್ಯಕ್ಷರಾದ ಟಿನುಬು ಅವರೇ,
ನೈಜೀರಿಯಾದ ರಾಷ್ಟ್ರೀಯ ಪ್ರಶಸ್ತಿಯಾದ ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ʼ ಅನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನಾನು ನಿಮಗೆ, ನಿಮ್ಮ ಸರ್ಕಾರಕ್ಕೆ ಮತ್ತು ನೈಜೀರಿಯಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನಾನು ಈ ಗೌರವವನ್ನು ನಮ್ರತೆ ಮತ್ತು ಗೌರವದಿಂದ ಸ್ವೀಕರಿಸುತ್ತೇನೆ. ಮತ್ತು ನಾನು ಈ ಗೌರವವನ್ನು ಭಾರತದ 1.4 ಶತಕೋಟಿ ಜನರಿಗೆ ಹಾಗೂ ಭಾರತ ಮತ್ತು ನೈಜೀರಿಯಾ ನಡುವಿನ ಶಾಶ್ವತ ಸ್ನೇಹಕ್ಕೆ ಅರ್ಪಿಸುತ್ತೇನೆ. ಈ ಗೌರವವು ಭಾರತ ಮತ್ತು ನೈಜೀರಿಯಾ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸ್ಫೂರ್ತಿ ನೀಡುತ್ತದೆ.
ಸ್ನೇಹಿತರೇ,
ಭಾರತ ಮತ್ತು ನೈಜೀರಿಯಾ ನಡುವಿನ ಸಂಬಂಧಗಳು ಪರಸ್ಪರ ಸಹಕಾರ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಆಧರಿಸಿವೆ. ಎರಡು ಸದೃಢ ಪ್ರಜಾಪ್ರಭುತ್ವಗಳು ಮತ್ತು ಕ್ರಿಯಾತ್ಮಕ ಆರ್ಥಿಕತೆಗಳಾಗಿ, ನಾವು ನಮ್ಮ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಮ್ಮ ಎರಡೂ ದೇಶಗಳಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೇ ನಮ್ಮ ಅಸ್ಮಿತೆ, ನಮ್ಮ ಶಕ್ತಿ. ನೈಜೀರಿಯಾದ 'ನವೀಕರಿಸಿದ ಭರವಸೆ ಕಾರ್ಯಸೂಚಿ' ಮತ್ತು ಭಾರತದ 'ವಿಕಸಿತ ಭಾರತ 2047' ಗುರಿಯು ಅನೇಕ ವಿಚಾರಗಳಲ್ಲಿ ಸಾಮ್ಯತೆ ಹೊಂದಿವೆ. ಕಳೆದ ವರ್ಷ ಅಧ್ಯಕ್ಷರಾದ ಟಿನುಬು ಅವರ ಭಾರತ ಭೇಟಿಯಿಂದ ನಮ್ಮ ಬಾಂಧವ್ಯಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗಿದೆ. ಇಂದು, ನಾವು ನಮ್ಮ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಬಗ್ಗೆ ಆಳವಾದ ಚರ್ಚೆ ನಡೆಸಿದ್ದೇವೆ. ಆರ್ಥಿಕತೆ, ಇಂಧನ, ಕೃಷಿ, ಭದ್ರತೆ, ಫಿನ್‌ಟೆಕ್, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಹಾಗೂ ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ನಾವು ಹೊಸ ಅವಕಾಶಗಳನ್ನು ಗುರುತಿಸಿದ್ದೇವೆ. ನಿಕಟ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ ಭಾರತವು ನೈಜೀರಿಯಾದ ಜನರ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆಗೆ ವಿಶೇಷ ಒತ್ತು ನೀಡಲಿದೆ. ನೈಜೀರಿಯಾದಲ್ಲಿ ವಾಸಿಸುತ್ತಿರುವ 60,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಭಾರತೀಯ ಸಮುದಾಯವು ನಮ್ಮ ಬಾಂಧವ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವರ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾನು ಅಧ್ಯಕ್ಷರಾದ ಟಿನುಬು ಮತ್ತು ಅವರ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.
ಸ್ನೇಹಿತರೇ,
ನೈಜೀರಿಯಾವು ಆಫ್ರಿಕಾದಲ್ಲಿ ಮಹತ್ವದ ಮತ್ತು ಸಕಾರಾತ್ಮಕ ಪಾತ್ರ ವಹಿಸಿದೆ. ಅಲ್ಲದೆ, ಆಫ್ರಿಕಾದೊಂದಿಗಿನ ನಿಕಟ ಸಂಬಂಧವು ಭಾರತದ ಪಾಲಿಗೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳಲ್ಲಿ, ನಾವು ನೈಜೀರಿಯಾದಂತಹ ಸ್ನೇಹಪರ ದೇಶದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗಿದ್ದೇವೆ.
ಆಫ್ರಿಕಾದ ಗಾದೆಯೊಂದು ಹೇಳುವಂತೆ: 'ಸ್ನೇಹಿತ ಎಂದರೆ ನೀವು ಮಾರ್ಗವನ್ನು ಹಂಚಿಕೊಳ್ಳುವ ವ್ಯಕ್ತಿ'. ಭಾರತ ಮತ್ತು ನೈಜೀರಿಯಾ ಒಟ್ಟಾಗಿ ನಮ್ಮ ಜನರ ಮತ್ತು ಇಡೀ ಆಫ್ರಿಕಾ ಖಂಡದ ಸಮೃದ್ಧಿಗಾಗಿ ಹೆಜ್ಜೆ ಹಾಕಲಿವೆ.
ನಿಕಟ ಸಮನ್ವಯದಿಂದ ಕೆಲಸ ಮಾಡುವ ಮೂಲಕ, ನಾವು ಜಾಗತಿಕ ದಕ್ಷಿಣದ ಹಿತಾಸಕ್ತಿಗಳು ಮತ್ತು ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ.
ಗೌರವಾನ್ವಿತರೇ,
ಮತ್ತೊಮ್ಮೆ 1.4 ಶತಕೋಟಿ ಭಾರತೀಯರ ಪರವಾಗಿ, ಈ ಗೌರವಕ್ಕಾಗಿ ನನ್ನ ಆಳವಾದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಗಮನಿಸಿ: ಇದು ಪ್ರಧಾನ ಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಹೇಳಿಕೆ ಹಿಂದಿಯಲ್ಲಿತ್ತು.
*****
(Release ID: 2075075)
Visitor Counter : 3