ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು
ಹಿಂದೂಸ್ತಾನ್ ಟೈಮ್ಸ್‌ನ 100 ವರ್ಷಗಳ ನೆನಪಿಗಾಗಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು
ಭಾರತದ ಭವಿಷ್ಯವನ್ನು ರೂಪಿಸಿದ, ಭಾರತಕ್ಕೆ ದಿಕ್ಕನ್ನು ತೋರಿಸಿದ ಶಕ್ತಿಯು ಭಾರತದ ಜನಸಾಮಾನ್ಯರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಾಗಿದೆ: ಪ್ರಧಾನಮಂತ್ರಿ
ಜನರ ಪ್ರಗತಿ, ಜನರಿಂದ ಪ್ರಗತಿ, ಜನರಿಗಾ ಪ್ರಗತಿ ನವ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಂತ್ರವಾಗಿದೆ: ಪ್ರಧಾನಮಂತ್ರಿ
ಇಂದು ಭಾರತವು ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ ಮತ್ತು ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಆಧಾರವನ್ನಾಗಿ ಮಾಡಿಕೊಂಡಿದ್ದೇವೆ: ಪ್ರಧಾನಮಂತ್ರಿ
ನಮ್ಮ ಸರ್ಕಾರವು ನಾಗರಿಕರಿಗೆ ಹೂಡಿಕೆಯ ಮೂಲಕ ಉದ್ಯೋಗ, ಅಭಿವೃದ್ಧಿಯ ಮೂಲಕ ಘನತೆ ಎಂಬ ವಿಶಿಷ್ಟ ಸಂಯೋಜನೆಯನ್ನು ಒದಗಿಸಿದೆ: ಪ್ರಧಾನಮಂತ್ರಿ
ಜನರಿಗಾಗಿ ಹೆಚ್ಚು ಖರ್ಚು ಮಾಡುವುದು, ಜನರಿಗಾಗಿ ಹೆಚ್ಚು ಉಳಿಸುವುದು ನಮ್ಮ ಸರ್ಕಾರದ ದೃಷ್ಟಿಯಾಗಿದೆ: ಪ್ರಧಾನಮಂತ್ರಿ
ಈ ಶತಮಾನ ಭಾರತದ ಶತಮಾನವಾಗಲಿದೆ: ಪ್ರಧಾನಮಂತ್ರಿ
Posted On:
16 NOV 2024 12:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಿಂದೂಸ್ತಾನ್ ಟೈಮ್ಸ್ ಅನ್ನು 100 ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ಉದ್ಘಾಟಿಸಿದರು ಎಂದು ಹೇಳಿದರು. ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಐತಿಹಾಸಿಕ ಪ್ರಯಾಣಕ್ಕಾಗಿ ಮತ್ತು ಅದರ ಉದ್ಘಾಟನೆಯಿಂದ ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದರು. ಸ್ಥಳದಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರದರ್ಶನಕ್ಕೆ ಭೇಟಿ ನೀಡಿದ ಶ್ರೀ ಮೋದಿ, ಇದೊಂದು ಅಪೂರ್ವ ಅನುಭವವಾಗಿದೆ ಎಂದು ಹೇಳಿದರು ಮತ್ತು ಎಲ್ಲಾ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡುವಂತೆ ಒತ್ತಾಯಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಸಂವಿಧಾನ ಜಾರಿಯಾದ ಕಾಲದ ಹಳೆಯ ದಿನಪತ್ರಿಕೆಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದರು. ಮಾರ್ಟಿನ್ ಲೂಥರ್ ಕಿಂಗ್, ನೇತಾಜಿ ಸುಭಾಷಚಂದ್ರ ಬೋಸ್, ಡಾ.ಶ್ಯಾಮಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಎಂ.ಎಸ್. ಸ್ವಾಮಿನಾಥನ್ ಅವರಂತಹ ಅನೇಕ ದಿಗ್ಗಜರು ಹಿಂದೂಸ್ತಾನ್ ಟೈಮ್ಸ್ ಗಾಗಿ ಲೇಖನಗಳನ್ನು ಬರೆದಿದ್ದಾರೆ ಎಂದು ಶ್ರೀ ಮೋದಿ ಹೇಳಿರು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಭರವಸೆಯೊಂದಿಗೆ ಮುನ್ನಡೆಯುವ ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸುದೀರ್ಘ ಪ್ರಯಾಣವು ಅಸಾಧಾರಣ ಮತ್ತು ಅದ್ಭುತವಾಗಿದೆ ಎಂದು ಅವರು ಹೇಳಿದರು. 1947ರ ಅಕ್ಟೋಬರ್‌ನಲ್ಲಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನದ ಸುದ್ದಿಯನ್ನು ಓದಿದ ನಂತರ ಪ್ರತಿಯೊಬ್ಬ ಪ್ರಜೆಯಂತೆ ನಾನು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಹೇಳಿದರು. ಆದಾಗ್ಯೂ, ಏಳು ದಶಕಗಳ ಕಾಲ ಅನಿರ್ದಿಷ್ಟತೆಯು ಕಾಶ್ಮೀರವನ್ನು ಹೇಗೆ ಹಿಂಸಾಚಾರದಲ್ಲಿ ಮುಳುಗಿಸಿತು ಎಂಬುದನ್ನೂ ಆ ಕ್ಷಣದಲ್ಲಿ ತಾನು ಅರಿತುಕೊಂಡೆನು ಎಂದು ಅವರು ಹೇಳಿದರು. ಆದರೆ ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ದಾಖಲೆಯ ಮತದಾನದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ಪತ್ರಿಕೆಯಲ್ಲಿ ಅದರ ಒಂದು ಬದಿಯಲ್ಲಿ ಅಸ್ಸಾಂ ಅನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂಬ ಸುದ್ದಿ ಇದೆ, ಇನ್ನೊಂದು ಬದಿಯಲ್ಲಿ ಅಟಲ್ ಜಿ ಅವರು ಭಾರತೀಯ ಜನತಾ ಪಕ್ಷದ ಅಡಿಪಾಯವನ್ನು ಹಾಕಿದರು ಎಂಬ ಸುದ್ದಿಯು ಪ್ರಕಟವಾಗಿರುವುದನ್ನು ಗಮನಿಸಿದರು. ಇಂದು ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರುವಲ್ಲಿ ಬಿಜೆಪಿ ದೊಡ್ಡ ಪಾತ್ರವನ್ನು ವಹಿಸುತ್ತಿರುವುದು ಕಾಕತಾಳೀಯವಾಗಿದೆ ಎಂದು ಅವರು ಹೇಳಿದರು.
ನಿನ್ನೆ ಮೊದಲ ಬೋಡೋಲ್ಯಾಂಡ್ ಮಹೋತ್ಸೋವದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡ ಶ್ರೀ ಮೋದಿ, ಈ ಕಾರ್ಯಕ್ರಮದ ಬಗ್ಗೆ ಮಾಧ್ದಮಗಳ ಕಳಪೆ ಪ್ರಸಾರವನ್ನು ಕಂಡು ಆಶ್ಚರ್ಯವಾಯಿತು ಎಂದು ಹೇಳಿದರು. 5 ದಶಕಗಳ ನಂತರ ಯುವಕರು ಮತ್ತು ಜನರು ಹಿಂಸಾಚಾರವನ್ನು ತೊರೆದು ದೆಹಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. 2020ರ ಬೋಡೋ ಶಾಂತಿ ಒಪ್ಪಂದದ ನಂತರ ಜನರ ಜೀವನ ಬದಲಾಗಿದೆ ಎಂದು ಅವರು ಹೇಳಿದರು. ಹಿಂದೂಸ್ತಾನ್ ಟೈಮ್ಸ್ ಶೃಂಗಸಭೆಯ ಪ್ರದರ್ಶನದ ಭಾಗವಾಗಿರುವ ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ಚಿತ್ರಗಳನ್ನು ಶ್ರೀ ಮೋದಿ ಅವರು ನೋಡಿದರು ಮತ್ತು ನೆರೆಯ ದೇಶಗಳ ಪ್ರಾಯೋಜಿತ ಭಯೋತ್ಪಾದನೆಯಿಂದಾಗಿ ಜನರು ತಮ್ಮ ಸ್ವಂತ ಮನೆ ಮತ್ತು ನಗರಗಳಲ್ಲಿ ಅಸುರಕ್ಷಿತರಾಗಿದ್ದ ಕಾಲವಿತ್ತು. ಆದರೆ, ಈಗ ಕಾಲ ಬದಲಾಗಿದೆ ಮತ್ತು ಭಯೋತ್ಪಾದಕರು ತಮ್ಮ ಮನೆಗಳಲ್ಲಿಯೇ ಸುರಕ್ಷಿತವಾಗಿಲ್ಲ ಎಂದು ಅವರು ಹೇಳಿದರು.
ತನ್ನ 100 ವರ್ಷಗಳಲ್ಲಿ, ಹಿಂದೂಸ್ತಾನ್ ಟೈಮ್ಸ್ 25 ವರ್ಷಗಳ ಗುಲಾಮಗಿರಿ ಮತ್ತು 75 ವರ್ಷಗಳ ಸ್ವಾತಂತ್ರ್ಯವನ್ನು ಕಂಡಿದೆ ಮತ್ತು ಭಾರತದ ಭವಿಷ್ಯವನ್ನು ರೂಪಿಸಿದ, ಭಾರತಕ್ಕೆ ದಿಕ್ಕನ್ನು ತೋರಿಸಿದ ಶಕ್ತಿಯು ಭಾರತದ ಜನಸಾಮಾನ್ಯರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಸಾಮಾನ್ಯ ನಾಗರಿಕನ ಈ ಸಾಮರ್ಥ್ಯವನ್ನು ಗುರುತಿಸುವಲ್ಲಿ ತಜ್ಞರು ಆಗಾಗ್ಗೆ ತಪ್ಪುಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಇತಿಹಾಸವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಬ್ರಿಟಿಷರು ಭಾರತವನ್ನು ತೊರೆಯುವಾಗ, ದೇಶವು ವಿಭಜನೆಯಾಗುತ್ತದೆ ಮತ್ತು ಒಡೆಯುತ್ತದೆ ಎಂದು ಹೇಳಲಾಗುತ್ತಿತ್ತು ಮತ್ತು ತುರ್ತು ಪರಿಸ್ಥಿತಿಯನ್ನು ಹೇರಿದಾಗ, ಕೆಲವರು ಈಗ ತುರ್ತು ಪರಿಸ್ಥಿತಿ ಶಾಶ್ವತವಾಗಿ ಉಳಿಯುತ್ತದೆ ಎಂದು ಭಾವಿಸಿದ್ದರು, ಕೆಲವು ಜನರು ಮತ್ತು ಸಂಘಟನೆಗಳು ತುರ್ತು ಪರಿಸ್ಥಿತಿ ಹೇರಿದವರ ಬಳಿಯೇ ಆಶ್ರಯ ಪಡೆದರು. ಆ ಸಮಯದಲ್ಲಿಯೂ ಭಾರತದ ನಾಗರಿಕರು ಎದ್ದುನಿಂತು ತುರ್ತು ಪರಿಸ್ಥಿತಿಯನ್ನು ಕಿತ್ತುಹಾಕಿದರು ಎಂದು ಮೋದಿ ಹೇಳಿದರು. ಶ್ರೀಸಾಮಾನ್ಯನ ಶಕ್ತಿಯನ್ನು ಎತ್ತಿ ತೋರಿಸಿದ ಪ್ರಧಾನಿಯವರು, ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಪ್ರಬಲ ಹೋರಾಟದಲ್ಲಿ ಸಾಮಾನ್ಯ ನಾಗರಿಕರ ಉತ್ಸಾಹವನ್ನು ಶ್ಲಾಘಿಸಿದರು.
ಹಿಂದಿನ ಕಾಲವನ್ನು ಉಲ್ಲೇಖಿಸಿದ ಪ್ರಧಾನಿ, 1990 ರ ದಶಕದಲ್ಲಿ ಭಾರತವು 10 ವರ್ಷಗಳ ಅವಧಿಯಲ್ಲಿ 5 ಚುನಾವಣೆಗಳನ್ನು ಕಂಡಿತು, ಇದು ದೇಶದಲ್ಲಿ ಅಸ್ಥಿರತೆಗೆ ಸಾಕ್ಷಿಯಾಯಿತು ಎಂದು ಹೇಳಿದರು. ಪತ್ರಿಕೆಗಳಲ್ಲಿ ಬರೆಯುವ ತಜ್ಞರು ಹೀಗೆಯೇ ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದಿದ್ದರು, ಆದರೆ ಭಾರತದ ನಾಗರಿಕರು ಅದನ್ನು ಮತ್ತೊಮ್ಮೆ ಅದು ತಪ್ಪೆಂದು ಸಾಬೀತುಪಡಿಸಿದರು ಎಂದು ಅವರು ಹೇಳಿದರು. ಇಂದು ಪ್ರಪಂಚದಾದ್ಯಂತ ಅನಿಶ್ಚಿತತೆ ಮತ್ತು ಅಸ್ಥಿರತೆಯ ಬಗ್ಗೆ ಮಾತನಾಡುತ್ತಿದ್ದಾರೆ, ಪ್ರಪಂಚದ ಅನೇಕ ದೇಶಗಳಲ್ಲಿ ಹೊಸ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿರುವುದನ್ನು ನೋಡುತ್ತಿದ್ದೇವೆ, ಆದರೆ ಭಾರತದಲ್ಲಿ ಜನರು ಮೂರನೇ ಬಾರಿಗೆ ಅದೇ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.
ಹಿಂದಿನ ನೀತಿಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ, 'ಒಳ್ಳೆಯ ಅರ್ಥಶಾಸ್ತ್ರ ಕೆಟ್ಟ ರಾಜಕೀಯ' ಎಂಬುದನ್ನು ತಜ್ಞರು ಪ್ರಚಾರ ಮಾಡಿದರು ಮತ್ತು ಸರ್ಕಾರಗಳಿಂದ ಬೆಂಬಲ ದೊರೆಯಿತು ಎಂದು ಹೇಳಿದರು. ಇದು ಹಿಂದಿನ ಸರಕಾರಗಳಿಗೆ ಕೆಟ್ಟ ಆಡಳಿತ ಮತ್ತು ಅದಕ್ಷತೆಯನ್ನು ಮರೆಮಾಚುವ ಸಾಧನವಾಗಿ ಮಾರ್ಪಟ್ಟಿತು ಎಂದರು. ಇದು ದೇಶದಲ್ಲಿ ಅಸಮತೋಲಿತ ಬೆಳವಣಿಗೆಗೆ ಕಾರಣವಾಯಿತು, ಇದು ಸರ್ಕಾರದ ಮೇಲಿನ ಜನರ ನಂಬಿಕೆಗೆ ಅಡ್ಡಿಯಾಯಿತು ಎಂದು ಅವರು ಹೇಳಿದರು. ಜನರ ಪ್ರಗತಿ, ಜನರಿಂದ ಪ್ರಗತಿ ಮತ್ತು ಜನರಿಗಾಗಿ ಪ್ರಗತಿಯ ಮಂತ್ರವನ್ನು ಖಾತ್ರಿಪಡಿಸುವ ಮೂಲಕ ತಮ್ಮ ಸರ್ಕಾರ ಜನರ ವಿಶ್ವಾಸವನ್ನು ಮರಳಿ ಗಳಿಸಿದೆ ಎಂದು ಪ್ರಧಾನಿ ಹೇಳಿದರು. ನವ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಮತ್ತು ಭಾರತದ ಜನರು ಅವರ ನಂಬಿಕೆಯ ಬಂಡವಾಳವನ್ನು ತಮಗೆ ವಹಿಸಿದ್ದಾರೆ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ತಪ್ಪು ಮಾಹಿತಿ, ಅಪಪ್ರಚಾರದ ಹೊರತಾಗಿಯೂ ಭಾರತದ ನಾಗರಿಕರು ನಮ್ಮ ಮೇಲೆ, ನಮ್ಮ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಶ್ರೀ ಮೋದಿ ಹೇಳಿದರು.
ಜನರ ವಿಶ್ವಾಸ ಹೆಚ್ಚಿದಾಗ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ, ಇದು ದೇಶದ ಅಭಿವೃದ್ಧಿಯ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಅಪಾಯವನ್ನು ತೆಗೆದುಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, ನಮ್ಮ ಪೂರ್ವಜರು ಅಪಾಯವನ್ನು ತೆಗೆದುಕೊಂಡರು, ಇದು ವಿದೇಶಗಳಲ್ಲಿ ಭಾರತೀಯ ಸರಕು ಮತ್ತು ಸೇವೆಗಳನ್ನು ಉತ್ತೇಜಿಸಲು ಮತ್ತು ಭಾರತವನ್ನು ವಾಣಿಜ್ಯ ಮತ್ತು ಸಂಸ್ಕೃತಿಯ ಕೇಂದ್ರವನ್ನಾಗಿ ಮಾಡಲು ನಮಗೆ ಸಹಾಯ ಮಾಡಿತು ಎಂದು ಹೇಳಿದರು. ಆದಾಗ್ಯೂ, ಹಿಂದಿನ ಸರ್ಕಾರಗಳಿಂದ ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಈ ಅಪಾಯವನ್ನು ತೆಗೆದುಕೊಳ್ಳುವ ಸಂಸ್ಕೃತಿಯು ಕಳೆದುಹೋಯಿತು ಎಂದು ಅವರು ಹೇಳಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 10 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಮತ್ತು ಬದಲಾವಣೆಗಳನ್ನು ನೋಡುತ್ತಿದೆ ಮತ್ತು ಭಾರತದ ನಾಗರಿಕರಲ್ಲಿ ಅಪಾಯವನ್ನು ತೆಗೆದುಕೊಳ್ಳುವ ಸಂಸ್ಕೃತಿಗೆ ಹೊಸ ಶಕ್ತಿಯನ್ನು ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ನಮ್ಮ ಯುವಜನತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು, ಇದು ಭಾರತದಲ್ಲಿ 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ ಗಳ ನೋಂದಣಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವುದೂ ಅಪಾಯ ಎಂಬ ಕಾಲವಿತ್ತು. ಆದರೆ, ಇಂದು ನಮ್ಮ ಸಣ್ಣ ಪಟ್ಟಣಗಳ ಯುವಕರು ಕೂಡ ಈ ರಿಸ್ಕ್ ತೆಗೆದುಕೊಂಡು ದೇಶಕ್ಕೆ ವಿಶ್ವದಲ್ಲಿ ಕೀರ್ತಿ ತರುತ್ತಿದ್ದಾರೆ ಎಂದರು. ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರ ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು ಇಂದು ಪ್ರತಿ ಹಳ್ಳಿಯಲ್ಲಿ ಸುಮಾರು 1 ಕೋಟಿ ಲಕ್ಷಾಪತಿ ದೀದಿಯರು ಉದ್ಯಮಿಗಳಾಗುವ ಮೂಲಕ ತಮ್ಮದೇ ಆದ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.
"ಭಾರತೀಯ ಸಮಾಜವು ಇಂದು ಅಭೂತಪೂರ್ವ ಮಹತ್ವಾಕಾಂಕ್ಷೆಗಳಿಂದ ತುಂಬಿದೆ ಮತ್ತು ನಾವು ಈ ಆಕಾಂಕ್ಷೆಗಳನ್ನು ನಮ್ಮ ನೀತಿಗಳ ಆಧಾರವನ್ನಾಗಿ ಮಾಡಿಕೊಂಡಿದ್ದೇವೆ" ಎಂದು ಶ್ರೀ ಮೋದಿ ಹೇಳಿದರು. ಹೂಡಿಕೆಯ ಮೂಲಕ ಉದ್ಯೋಗ ಮತ್ತು ಅಭಿವೃದ್ಧಿಯ ಮೂಲಕ ಘನತೆಯ ಸಂಯೋಜನೆಯನ್ನು ಒಳಗೊಂಡಿರುವ ಅಭಿವೃದ್ಧಿಯ ಮಾದರಿಯನ್ನು ಸರ್ಕಾರವು ಉತ್ತೇಜಿಸಿದೆ ಎಂದು ಅವರು ಹೇಳಿದರು. ಅಭಿವೃದ್ಧಿಗೆ ಕಾರಣವಾಗುವ ಹೂಡಿಕೆಯ ಮೂಲಕ ಉದ್ಯೋಗವನ್ನು ಸೃಷ್ಟಿಸಲಾಗುತ್ತದೆ ಮತ್ತು ಅಭಿವೃದ್ಧಿಯು ಭಾರತದ ನಾಗರಿಕರ ಘನತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಶೌಚಾಲಯ ನಿರ್ಮಾಣದ ಉದಾಹರಣೆ ನೀಡಿದ ಅವರು, ಇದು ಸೌಕರ್ಯದ ಜೊತೆಗೆ ಸುರಕ್ಷತೆ ಮತ್ತು ಗೌರವದ ಸಾಧನವಾಗಿದೆ. ಇದು ಅಭಿವೃದ್ಧಿಗೂ ಉತ್ತೇಜನ ನೀಡಿದೆ ಎಂದು ಶ್ರೀ ಮೋದಿ ಹೇಳಿದರು, ಇದರಿಂದಾಗಿ ಹೂಡಿಕೆಯ ಮೂಲಕ ಉದ್ಯೋಗ ಮತ್ತು ಅಭಿವೃದ್ಧಿಯ ಮೂಲಕ ಘನತೆಯ ಮಂತ್ರದ ಯಶಸ್ಸು ತಳಮಟ್ಟದಲ್ಲಿ ಸ್ಪಷ್ಟವಾಗಿದೆ. ಈ ಹಿಂದೆ ಸ್ಟೇಟಸ್ ಸಿಂಬಲ್ ಎಂದು ಪರಿಗಣಿಸಲಾಗಿದ್ದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಉದಾಹರಣೆಯನ್ನೂ ಅವರು ನೀಡಿದರು. ಹಿಂದಿನ ಸರ್ಕಾರಗಳು ಜನರಿಗೆ ಎಷ್ಟು ಸಿಲಿಂಡರ್‌ಗಳನ್ನು ನೀಡಬೇಕೆಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದವು, ಆದರೆ ತಮ್ಮ ಸರ್ಕಾರ ಪ್ರತಿ ಮನೆಗೆ ಗ್ಯಾಸ್ ಸಂಪರ್ಕವನ್ನು ಒದಗಿಸಲು ಆದ್ಯತೆ ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ದೇಶದಲ್ಲಿ 30 ಕೋಟಿಗೂ ಹೆಚ್ಚು ಗ್ಯಾಸ್ ಸಂಪರ್ಕಗಳಿದ್ದು, 2014ರಲ್ಲಿ ಈ ಸಂಖ್ಯೆ 14 ಕೋಟಿಯಷ್ಟಿತ್ತು. ಗ್ಯಾಸ್ ಸಿಲಿಂಡರ್‌ಗಳ ಬೇಡಿಕೆಯನ್ನು ಪೂರೈಸಲು ಪೂರಕ ಮೂಲಸೌಕರ್ಯಗಳು ಜಾರಿಯಲ್ಲಿವೆ ಎಂದು ಶ್ರೀ ಮೋದಿ ಅವರು ತಿಳಿಸಿದರು. ಇದರಿಂದ ವಿವಿಧೆಡೆ ಬಾಟ್ಲಿಂಗ್ ಘಟಕಗಳನ್ನು ಸ್ಥಾಪಿಸುವುದರಿಂದ ಕಟ್ಟಡ ವಿತರಣಾ ಕೇಂದ್ರಗಳು ಮತ್ತು ಸಿಲಿಂಡರ್ ಗಳ ವಿತರಣೆಯವರೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಮೊಬೈಲ್ ಫೋನ್, ರುಪೇ ಕಾರ್ಡ್, ಯುಪಿಐ ಇತ್ಯಾದಿಗಳಂತಹ ಇತರ ಉದಾಹರಣೆಗಳನ್ನು ಪಟ್ಟಿ ಮಾಡಿದ ಪ್ರಧಾನಿಯವರು, ಇದು ಹೂಡಿಕೆಯಿಂದ ಉದ್ಯೋಗಕ್ಕೆ, ಅಭಿವೃದ್ಧಿಯಿಂದ ಘನತೆಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಭಾರತ ಇಂದು ಸಾಗುತ್ತಿರುವ ಅಭಿವೃದ್ಧಿ ಪಥವನ್ನು ಅರ್ಥಮಾಡಿಕೊಳ್ಳಲು, ಸರ್ಕಾರದ ಇನ್ನೊಂದು ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ಒತ್ತಿ ಹೇಳಿದರು. "ಜನರಿಗಾಗಿ ಹೆಚ್ಚು ಖರ್ಚು ಮಾಡಿ ಮತ್ತು ಜನರಿಗಾಗಿ ಹೆಚ್ಚು ಉಳಿಸಿ" ಎಂಬುದೇ ಆ ವಿಧಾನವಾಗಿದೆ ಎಂದು ಅವರು ಹೇಳಿದರು. ಇದನ್ನು ವಿವರಿಸಿದ ಶ್ರೀ ಮೋದಿ ಅವರು, ಇಂದು ಭಾರತದ ಕೇಂದ್ರ ಬಜೆಟ್ 48 ಲಕ್ಷ ಕೋಟಿ ರೂ.ಗಳಾಗಿದ್ದರೆ, 2014 ರಲ್ಲಿ ಅದು 16 ಲಕ್ಷ ಕೋಟಿ ರೂ. ಇತ್ತು. 2013-14ರಲ್ಲಿ 2.25 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಇಂದಿನ ಬಂಡವಾಳ ವೆಚ್ಚ 11 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ ಎಂದರು. ಹೊಸ ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು, ರೈಲು ಮಾರ್ಗಗಳು, ಸಂಶೋಧನಾ ಸೌಲಭ್ಯಗಳು ಮತ್ತು ಅಂತಹ ಅನೇಕ ಸಾರ್ವಜನಿಕ ಮೂಲಸೌಕರ್ಯಗಳಿಗೆ ಬಂಡವಾಳ ವೆಚ್ಚವನ್ನು ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರವು ಸಾರ್ವಜನಿಕ ಹಣವನ್ನು ಸಹ ಉಳಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಂಕಿಅಂಶಗಳನ್ನು ಪ್ರಸ್ತುತಪಡಿಸಿದ ಶ್ರೀ ಮೋದಿ, ಸೋರಿಕೆಯಿಂದ ದೇಶಕ್ಕೆ ಆಗುತ್ತಿದ್ದ 3.5 ಲಕ್ಷ ಕೋಟಿ ರೂಪಾಯಿಗಳನ್ನು ಡಿಬಿಟಿ ಉಳಿಸಿದೆ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆಯು ಬಡವರಿಗೆ 1.10 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ಹೇಳಿದರು. ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿ ದರದಲ್ಲಿ ದೊರೆಯುವ ಔಷಧಗಳಿಂದ ನಾಗರಿಕರಿಗೆ 30 ಸಾವಿರ ಕೋಟಿ ಉಳಿತಾಯವಾದರೆ, ಸ್ಟೆಂಟ್, ಮಂಡಿಚಿಪ್ಪು ಅಳವಡಿಕೆಗಳ ಬೆಲೆ ನಿಯಂತ್ರಣದಿಂದ ಜನರಿಗೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದರು. ಪಟ್ಟಿಯನ್ನು ಮುಂದುವರಿಸಿದ ಅವರು, ಉಜಾಲ ಯೋಜನೆಯು ಜನರ ವಿದ್ಯುತ್ ಬಿಲ್ ನಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ, ಸ್ವಚ್ಛ ಭಾರತ್ ಮಿಷನ್ ರೋಗಗಳನ್ನು ಕಡಿಮೆ ಮಾಡಿದೆ ಮತ್ತು ಇದರಿಂದ ಹಳ್ಳಿಗಳ ಪ್ರತಿ ಕುಟುಂಬಕ್ಕೆ ಸುಮಾರು 50 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಿದರು. ಯುನಿಸೆಫ್ ವರದಿಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಸ್ವಂತ ಶೌಚಾಲಯ ಹೊಂದಿರುವ ಕುಟುಂಬವು ಸುಮಾರು 70 ಸಾವಿರ ರೂಪಾಯಿಗಳನ್ನು ಉಳಿಸುತ್ತಿದೆ ಮತ್ತು ಮೊದಲ ಬಾರಿಗೆ ನಲ್ಲಿ ನೀರನ್ನು ಹೊಂದಿರುವ 12 ಕೋಟಿ ಜನರ ಮೇಲೆ ಡಬ್ಲ್ಯು ಎಚ್ ಒ ನಡೆಸಿದ ಅಧ್ಯಯನವು ಪ್ರತಿ ವರ್ಷ 80 ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯವಾಗುತ್ತಿರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
10 ವರ್ಷಗಳ ಹಿಂದೆ ಭಾರತದಲ್ಲಿ ಇಂತಹ ದೊಡ್ಡ ಬದಲಾವಣೆಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಮೋದಿ ಹೇಳಿದರು. ಭಾರತದ ಯಶಸ್ಸು ದೊಡ್ಡ ಕನಸುಗಳನ್ನು ಕಾಣಲು ಮತ್ತು ಅವುಗಳನ್ನು ಈಡೇರಿಸಲು ನಮಗೆ ಸ್ಫೂರ್ತಿ ನೀಡಿತು ಎಂದು ಅವರು ಹೇಳಿದರು. ಇದು ಭರವಸೆ ಮೂಡಿಸಿದ್ದು, ಈ ಶತಮಾನ ಭಾರತದ ಶತಮಾನವಾಗಲಿದೆ ಎಂದು ಅಭಿಪ್ರಾಯಪಟ್ಟರು. ಈ ದಿಸೆಯಲ್ಲಿ ಮುನ್ನಡೆಯಲು ಬಹುಪ್ರಯತ್ನಗಳನ್ನು ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಮೋದಿಯವರು, ಪ್ರತಿಯೊಂದು ಕ್ಷೇತ್ರದಲ್ಲೂ ಅತ್ಯುತ್ತಮವಾದುದನ್ನು ಮಾಡಲು ಸರ್ಕಾರವು ವೇಗವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಉತ್ಪನ್ನಗಳ ತಯಾರಿಕೆ ಅಥವಾ ಉತ್ಪಾದನೆ, ಶಿಕ್ಷಣ ಅಥವಾ ಮನರಂಜನೆಯಲ್ಲಿ ಭಾರತದ ಮಾನದಂಡಗಳನ್ನು 'ವಿಶ್ವ ದರ್ಜೆ' ಎಂದು ಕರೆಯುವಂತೆ ಮಾಡಲು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನವನ್ನು ಜನರ ಮನಸ್ಸಿನಲ್ಲಿ ಪುನರುಚ್ಚರಿಸುವಲ್ಲಿ ಹಿಂದೂಸ್ತಾನ್ ಟೈಮ್ಸ್ ಕೂಡ ದೊಡ್ಡ ಪಾತ್ರವನ್ನು ವಹಿಸಿದೆ ಮತ್ತು ಅದರ 100 ವರ್ಷಗಳ ಅನುಭವವು ಅಭಿವೃದ್ಧಿ ಹೊಂದಿದ ಭಾರತದ ಪಯಣದಲ್ಲಿ ಬಹಳ ಉಪಯುಕ್ತವಾಗಿದೆ ಎಂದು ಶ್ರೀ ಮೋದಿ ಹೇಳಿದರು.
ಭಾರತವು ಅಭಿವೃದ್ಧಿಯ ಈ ವೇಗವನ್ನು ಉಳಿಸಿಕೊಳ್ಳುತ್ತದೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ವೇಗವಾಗಿ ಬದಲಾಗುತ್ತಿರುವ ಭಾರತದ ಹೊಸ ಶತಮಾನಕ್ಕೂ ಹಿಂದೂಸ್ತಾನ್ ಟೈಮ್ಸ್ ಸಾಕ್ಷಿಯಾಗಲಿದೆ ಎಂದು ಅವರು ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.
*****
(Release ID: 2073936)
Visitor Counter : 25
Read this release in:
English
,
Urdu
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam