ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರ ಭೇಟಿಗೆ ಮುಂಚಿತವಾಗಿ ಜಮುಯಿಯಲ್ಲಿ ಜನ ಜಾತೀಯ ಗೌರವ್ ದಿವಸ್ ಆಚರಣೆಯ ಸಿದ್ಧತೆಗಳನ್ನು ಕೇಂದ್ರ ಸಚಿವ ಶ್ರೀ ಜುಯಲ್ ಓರಮ್ ಅವರು ಪರಿಶೀಲಿಸಿದರು


ಆದಿವಾಸಿಗಳ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಚಿವರು ಸದಾ ಮಹತ್ವ ನೀಡಿ ಪ್ರಯತ್ನ ಮಾಡುತ್ತಿದ್ದಾರೆ 

Posted On: 11 NOV 2024 7:13PM by PIB Bengaluru

ಜನಜಾತಿಯ ಗೌರವ್ ದಿವಸ್ ಆಚರಣೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ಭೇಟಿಗೆ ಮುನ್ನ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುಯಲ್ ಓರಮ್ ಅವರು ಜಮುಯಿಗೆ ಆಗಮಿಸಿದರು.  

ದೇಶದಾದ್ಯಂತ ಬುಡಕಟ್ಟು ಸಮುದಾಯಗಳನ್ನು ಉನ್ನತೀಕರಿಸುವಲ್ಲಿ ಮತ್ತು ಗೌರವಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಪ್ರಸ್ತುತ ಸರ್ಕಾರ ನೀಡಿರುವ ಮಹತ್ವಪೂರ್ಣ ಕೊಡುಗೆಗಳನ್ನು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ವಿವರಿಸಿದರು. "1999ರಲ್ಲಿ ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಿದ್ದು ಬುಡಕಟ್ಟು ಕಲ್ಯಾಣಕ್ಕಾಗಿ ಒಂದು ಮೈಲಿಗಲ್ಲು ಆಗಿದೆ" ಎಂದು ಶ್ರೀ ಜುಯಲ್ ಓರಮ್ ಹೇಳಿದರು.  ಮೋದಿ ಸರ್ಕಾರದ ವಿವಿಧ ಉಪಕ್ರಮಗಳನ್ನು ಸಚಿವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. 

ವಿಶೇಷವಾಗಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ ಪರಂಪರೆಯನ್ನು ಗೌರವಿಸಲು 2021 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನ ಜಾತೀಯ ಗೌರವ್ ದಿವಸ್ ಘೋಷಣೆ ಮಾಡಿದ್ದಾರೆ. ಭಾರತದ ಬುಡಕಟ್ಟು ಸಮುದಾಯಗಳ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಈ ದಿನವನ್ನು ಈಗ ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭೇಟಿಗೆ ಸರ್ವ ಸಿದ್ಧತೆಗಳು ನಡೆಯುತ್ತಿವೆ

ನವೆಂಬರ್ 15, 2024 ರಂದು ಜಮುಯಿ ಜಿಲ್ಲೆಯ ಖೈರಾ ಬ್ಲಾಕ್‌ ನಲ್ಲಿರುವ ಬಳ್ಳೋಪುರ್ ಗ್ರಾಮದಲ್ಲಿ ಜನಜಾತೀಯ ಗೌರವ್ ದಿವಸ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮುಯಿಗೆ ಆಗಮಿಸಲಿದ್ದಾರೆ.  ಈ ಸಂದರ್ಭದಲ್ಲಿ, ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಸಾವಿರಾರು ಕೋಟಿ ಮೌಲ್ಯದ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಇದು ಬುಡಕಟ್ಟು ಕಲ್ಯಾಣ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿಯವರ ಆಗಮನದ ಪೂರ್ವಭಾವಿಯಾಗಿ ಕೇಂದ್ರ ಸಚಿವ ಶ್ರೀ ಜುಯಲ್ ಓರಮ್ ಅವರು ಬಳ್ಳೋಪುರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಸೂಚನೆಗಳನ್ನು ನೀಡಿದರು.  ರಸ್ತೆಗಳ ನಿರ್ಮಾಣ, ಹೆಲಿಪ್ಯಾಡ್‌ ಗಳು, ಬ್ಯಾರಿಕೇಡಿಂಗ್‌ ಗಳು ಮತ್ತು ಜರ್ಮನ್ ಹ್ಯಾಂಗರ್ ಟೆಂಟ್‌ ಗಳ ಸ್ಥಾಪನೆ ಸೇರಿದಂತೆ ವ್ಯಾಪಕವಾದ ವ್ಯವಸ್ಥೆಗಳು ಪ್ರಗತಿಯಲ್ಲಿವೆ.  ಈ ರಾಷ್ಟ್ರೀಯ ಆಚರಣೆಯ ಮಹತ್ವವನ್ನು ಪ್ರತಿಬಿಂಬಿಸುವ ವಿವಿಧ ಸ್ಥಳಗಳನ್ನು ಕೂಡ ಸೂಕ್ಷ್ಮವಾಗಿ ಸಿದ್ಧಪಡಿಸಲಾಗುತ್ತಿದೆ.

 ಜನಜಾತೀಯ ಗೌರವ್ ದಿವಸ್: ರಾಷ್ಟ್ರೀಯ ಆಚರಣೆ

27 ರಾಜ್ಯಗಳು ಮತ್ತು ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಚರಿಸಲಾಗುವ ಜನಜಾತೀಯ ಗೌರವ್ ದಿವಸ್‌ ಕಾರ್ಯಕ್ರಮದ ಮಹತ್ವವನ್ನು ಕೇಂದ್ರ ಸಚಿವ ಓರಮ್ ವಿವರಿಸಿ ಹೇಳಿದರು. "ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಜಮುಯಿಯಲ್ಲಿ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭದ ಯಶಸ್ಸಿಗಾಗಿ ತಂಡವನ್ನು ಮುನ್ನಡೆಸಲಿದ್ದಾರೆ" ಎಂದು ಸಚಿವರು ಹೇಳಿದರು.  ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಕ್ಯಾಬಿನೆಟ್ ಮಂತ್ರಿಗಳು ರಾಷ್ಟ್ರವ್ಯಾಪಿ ಆಚರಣೆಗಳಲ್ಲಿ ಭಾಗವಹಿಸಲಿದ್ದಾರೆ. ಇದು ನಿಜವಾದ ರಾಷ್ಟ್ರೀಯ ಗೌರವ ಹಾಗೂ ಹೆಮ್ಮೆಯ ಸಂದರ್ಭದ ಕೂಡ ಆಗಿದೆ.

"ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಉನ್ನತ ಮಟ್ಟದಲ್ಲಿ ಗುರುತಿಸಲಾಗಿದೆ ಎಂಬುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಕಾರ್ಯಯೋಜನೆಗಳ ಮೂಲಕ ಖಚಿತಪಡಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸಲಾಯಿತು. ಇದು ಬುಡಕಟ್ಟು ಇತಿಹಾಸ ಮತ್ತು ಪರಂಪರೆಯನ್ನು ಗುರುತಿಸುವಲ್ಲಿ ಶ್ಲಾಘನೀಯ ಹಾಗೂ  ಐತಿಹಾಸಿಕ ಹೆಜ್ಜೆಯಾಗಿದೆ" ಎಂದು ಕೇಂದ್ರ ಸಚಿವ ಶ್ರೀ ಜುಯಲ್ ಓರಮ್ ಅವರು ಹೇಳಿದರು.ಕಳೆದ ವರ್ಷ ಬಿರ್ಸಾ ಮುಂಡಾ ಅವರ ಪೂರ್ವಜರ ಗ್ರಾಮವಾದ ಜಾರ್ಖಂಡ್‌ ನ ಉಲಿಹಟುಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದನ್ನು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಹಾಗೂ "ಈ  ಪಾರಂಪರಿಕ ಬಡ ಬುಡಕಟ್ಟು ನಾಯಕನ ಜನ್ಮಸ್ಥಳದಲ್ಲಿ ಗೌರವ ಸಲ್ಲಿಸಿದ ಮೊದಲ ಪ್ರಧಾನಮಂತ್ರಿ ಎಂಬ  ಹೆಗ್ಗಳಿಕೆಗೆ ಪಾತ್ರರಾದರು" ಎಂದು ಹೇಳಿದರು. ಜಮುಯಿಯಲ್ಲಿ ಜರುಗಲಿರುವ ಈ ವರ್ಷದ ಪ್ರಮುಖ ಕಾರ್ಯಕ್ರಮವು ಬಿರ್ಸಾ ಮುಂಡಾ ಪರಂಪರೆ ಮತ್ತು ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಗೌರವಿಸುವ ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಸೂಚಿಸುತ್ತದೆ.

ಈ ಬೃಹತ್ ಸಮಾರಂಭದಲ್ಲಿ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಸಚಿವರು ಸೇರಿದಂತೆ ಪ್ರಮುಖ ಗಣ್ಯರ ಉಪಸ್ಥಿತಿಗೆ ಜಮುಯಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಸದರು, ಶಾಸಕರು ಮತ್ತು ಸ್ಥಳೀಯ ಮುಖಂಡರು ಸಹ ಭಾಗವಹಿಸುವ ನಿರೀಕ್ಷೆಯಿದೆ. ಈ ವ್ಯವಸ್ಥೆಗಳು ಅದ್ಧೂರಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಚರಣೆಯಾಗಿದೆ ಎಂಬುದನ್ನು ಕೂಡ ಖಚಿತಪಡಿಸುತ್ತದೆ.

ಕೇಂದ್ರ ಸಚಿವರು ಸಿದ್ಧತೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸುವಂತೆ ಸಮುದಾಯದ ಎಲ್ಲಾ ಸದಸ್ಯರು ಮತ್ತು ಸ್ಥಳೀಯ ಮುಖಂಡರಿಗೆ ಕರೆ ನೀಡಿದರು.  ಜನಜಾತೀಯ ಗೌರವ್ ದಿವಸ್ ಆಚರಣೆಯು ಭಾರತದ ಬುಡಕಟ್ಟು ಸಮುದಾಯಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಹಮ್ಮಿಕೊಂಡಿರುವ ಸಮಾರಂಭವಾಗಿದೆ. ಕೇಂದ್ರ ಸರ್ಕಾರವು ಪ್ರಾರಂಭಿಸಿದ "ಗೌರವಿಸುವುದು ಮತ್ತು ಸಬಲೀಕರಣಗೊಳಿಸುವುದು" ಹಾಗೂ ಪರಂಪರೆಯನ್ನು ಮುಂದುವರಿಸುವುದು  ಕೂಡ ಈ ಸಮಾರಂಭದ ಗುರಿಯಾಗಿದೆ.

 

 

 ******


(Release ID: 2072632) Visitor Counter : 19