ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ‘ಕೇಂದ್ರೀಯ ಹಿಂದಿ ಸಮಿತಿʼಯ 32ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಭಾಷೆಗಳ ಸಂರಕ್ಷಣೆ, ಪ್ರಚಾರ ಮತ್ತು ವ್ಯಾಪಕ ಬಳಕೆಗಾಗಿ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದಾರೆ
ಮುಂದಿನ ಐದು ವರ್ಷಗಳಲ್ಲಿ, 'ಹಿಂದಿ ಶಬ್ದ ಸಿಂಧು' ನಿಘಂಟು ವಿಶ್ವದ ಅತಿದೊಡ್ಡ ಮತ್ತು ಸಮಗ್ರ ನಿಘಂಟು ಆಗಲಿದೆ
ಮೋದಿ ಸರ್ಕಾರದ ಅಧಿಕಾರಾವಧಿಯು ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರದ ಅದ್ಭುತ ಅವಧಿಯಾಗಿದೆ
11 ಶಾಸ್ತ್ರೀಯ ಭಾಷೆಗಳನ್ನು ಹೊಂದಿರುವ ವಿಶ್ವದ ಏಕೈಕ ದೇಶ ಭಾರತ
ಪ್ರತಿ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹಿಂದಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಹಿಂದಿಯ ಮಹತ್ವವನ್ನು ಹೆಚ್ಚಿಸಿದ್ದಾರೆ
ಯುವ ಪೀಳಿಗೆಯ ಸಂಪೂರ್ಣ ಸಾಮರ್ಥ್ಯವನ್ನು ದೇಶದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳಲು, ಅವರು ತಮ್ಮ ಮಾತೃಭಾಷೆಯಲ್ಲಿ ಓದುವುದು, ಯೋಚಿಸುವುದು, ವಿಶ್ಲೇಷಿಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು
ಹಿಂದಿ ಸಾಹಿತ್ಯವನ್ನು ಉತ್ತೇಜಿಸುವುದು ಮತ್ತು ಹಿಂದಿಯನ್ನು ದೇಶದ ಸಂಪರ್ಕ ಭಾಷೆಯಾಗಿ ಸ್ಥಾಪಿಸುವುದು ‘ಕೇಂದ್ರೀಯ ಹಿಂದಿ ಸಮಿತಿʼಯ ಉದ್ದೇಶವಾಗಿದೆ
ಭಾರತೀಯ ಭಾಷೆಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಲಭ್ಯತೆಯು ದೇಶದ ಎಲ್ಲಾ ಭಾಷೆಗಳ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ
ಹಿಂದಿಯನ್ನು ಸಶಕ್ತಗೊಳಿಸಲು ಕಳೆದ ಐದು ವರ್ಷಗಳಲ್ಲಿ ಕೈಗೊಂಡ ಮೂರು ಪ್ರಮುಖ ಉಪಕ್ರಮಗಳೆಂದರೆ ಹಿಂದಿ ಶಬ್ದ ಸಿಂಧು ನಿಘಂಟಿನ ರಚನೆ, ಭಾರತೀಯ ಭಾಷಾ ಅನುಭಾಗ್ ಸ್ಥಾಪನೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ರಾಜಭಾಷಾ ಸಮ್ಮೇಳನಗಳ ಆಯೋಜನೆ
Posted On:
04 NOV 2024 8:16PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ‘ಕೇಂದ್ರೀಯ ಹಿಂದಿ ಸಮಿತಿʼಯ 32 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ‘ಕೇಂದ್ರೀಯ ಹಿಂದಿ ಸಮಿತಿ’ ಹಿಂದಿ ಭಾಷೆಯ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಮಾರ್ಗಸೂಚಿಗಳನ್ನು ಒದಗಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
ಗೃಹ ಸಚಿವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಭಾಷೆಗಳ ಸಂರಕ್ಷಣೆ, ಪ್ರಚಾರ ಮತ್ತು ವ್ಯಾಪಕ ಬಳಕೆಗಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ, 2014 ರಿಂದ 2024 ರ ಅವಧಿಯನ್ನು ಭಾರತೀಯ ಭಾಷೆಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಸಮರ್ಪಿಸಲಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಇತ್ತೀಚೆಗೆ ಇನ್ನೂ ಐದು ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿದರು. 11 ಭಾಷೆಗಳನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ ಎಂದು ಅವರು ತಿಳಿಸಿದರು.
ಪ್ರತಿ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹಿಂದಿಯಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಹಿಂದಿಯ ಮಹತ್ವ ಹೆಚ್ಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತೀಯ ಭಾಷೆಗಳಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಲಭ್ಯತೆಯು ದೇಶದ ಎಲ್ಲಾ ಭಾಷೆಗಳ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಇದು ಭಾರತದಲ್ಲಿ ಭಾಷಾ ಬೆಳವಣಿಗೆಯ ದಿಕ್ಕಿನಲ್ಲಿ ಸ್ಪೂರ್ತಿದಾಯಕ ಬದಲಾವಣೆಯಾಗಿದ್ದು, ರಾಷ್ಟ್ರದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಶ್ರೀ ಶಾ ಹೇಳಿದರು. ದೇಶದ ಅಭಿವೃದ್ಧಿಗೆ ನಮ್ಮ ಮಕ್ಕಳು ಮತ್ತು ಯುವಜನರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾದರೆ ಅವರು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ, ವಿಶ್ಲೇಷಣೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಹಿಂದಿಯ ಅಭಿವೃದ್ಧಿ, ಹಿಂದಿ ಸಾಹಿತ್ಯದ ಸಂರಕ್ಷಣೆ ಮತ್ತು ಅದನ್ನು ದೇಶದ ಸಂಪರ್ಕ ಭಾಷೆಯಾಗಿ ಸ್ಥಾಪಿಸುವುದು ಕೇಂದ್ರೀಯ ಹಿಂದಿ ಸಮಿತಿಯ ಉದ್ದೇಶವಾಗಿದೆ ಎಂದು ಶ್ರೀ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ಹಿಂದಿಯನ್ನು ಸಶಕ್ತಗೊಳಿಸಲು ಮೂರು ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹಿಂದಿ ಶಬ್ದ ಸಿಂಧು ನಿಘಂಟಿನ ರಚನೆಯು ಮೊದಲ ಪ್ರಮುಖ ಉಪಕ್ರಮ ಎಂದರು. ಮುಂದಿನ ಐದು ವರ್ಷಗಳಲ್ಲಿ ಶಬ್ದ ಸಿಂಧು ನಿಘಂಟು ವಿಶ್ವದ ಅತ್ಯಂತ ಸಮಗ್ರ ನಿಘಂಟು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಭಾಷಾ ಅನುಭಾಗದ ಸ್ಥಾಪನೆಯು ಮತ್ತೊಂದು ಪ್ರಮುಖ ಉಪಕ್ರಮವಾಗಿದೆ ಎಂದು ಶ್ರೀ ಶಾ ಹೇಳಿದರು. ನಾವು ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸದ ಹೊರತು ನಾವು ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಭಾಷಾಂತರಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಈ ವಿಭಾಗ ಆರಂಭಿಸಿದೆ ಎಂದರು. ದೇಶದ ವಿವಿಧ ಭಾಗಗಳಲ್ಲಿ ಅಧಿಕೃತ ಭಾಷಾ ಸಮ್ಮೇಳನಗಳನ್ನು ಆಯೋಜಿಸುವುದು ಮೂರನೇ ಪ್ರಮುಖ ಉಪಕ್ರಮವಾಗಿದೆ, ಇದು ಅಧಿಕೃತ ಭಾಷೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಹಿಂದಿಯನ್ನು ಬಲಪಡಿಸಲು ಎರಡು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ಮೊದಲನೆಯದಾಗಿ, ಹಿಂದಿ ಸಾಹಿತ್ಯ ಮತ್ತು ಅದರ ವಿವಿಧ ವ್ಯಾಕರಣ ರೂಪಗಳ ಪ್ರಚಾರ, ಸಂರಕ್ಷಣೆ ಮತ್ತು ದೀರ್ಘಾಯುಷ್ಯಕ್ಕಾಗಿ ದೀರ್ಘಾವಧಿಯ ನೀತಿಯನ್ನು ಅಭಿವೃದ್ಧಿಪಡಿಸುವುದು. ಇದರೊಂದಿಗೆ ಎಲ್ಲಾ ಆಧುನಿಕ ಶಿಕ್ಷಣ ಕೋರ್ಸ್ ಗಳನ್ನು ಹಿಂದಿ ಮತ್ತು ಇತರ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಿಸುವುದು ಸಹ ಅಗತ್ಯವಾಗಿದೆ ಎಂದು ಅವರು ಹೇಳಿದರು. ಹಿಂದಿಯನ್ನು ಸಾರ್ವತ್ರಿಕ ಮತ್ತು ಸುಲಭವಾಗಿಸಲು ಒತ್ತು ನೀಡಬೇಕು ಎಂದು ಗೃಹ ಸಚಿವರು ಹೇಳಿದರು.
ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ, ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್.ಮುರುಗನ್, ಒಡಿಶಾದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಉಪಾಧ್ಯಕ್ಷ ಶ್ರೀ ಭರ್ತೃಹರಿ ಮಹತಾಬ್, ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಮೂರು ಉಪ ಸಮಿತಿಗಳ ಸಂಚಾಲಕರು, ಅಧಿಕೃತ ಭಾಷಾ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅಂಶುಲಿ ಆರ್ಯ, ಮತ್ತು ಜಂಟಿ ಕಾರ್ಯದರ್ಶಿ ಮೀನಾಕ್ಷಿ ಜಾಲಿ ಉಪಸ್ಥಿತರಿದ್ದರು.
'ಕೇಂದ್ರೀಯ ಹಿಂದಿ ಸಮಿತಿ' ಹಿಂದಿಯ ಪ್ರಚಾರ ಮತ್ತು ಅದರ ಪ್ರಗತಿಪರ ಬಳಕೆಗೆ ಮಾರ್ಗಸೂಚಿಗಳನ್ನು ಒದಗಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ಹಿಂದಿಯ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೊಳಿಸಿದ ಕೆಲಸಗಳು ಮತ್ತು ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವುದು ಸಮಿತಿಯ ಕಾರ್ಯವಾಗಿದೆ. ಸಮಿತಿಯು ತನ್ನ ಕಾರ್ಯಚಟುವಟಿಕೆಯಲ್ಲಿ ಸಹಾಯ ಮಾಡಲು ಅಗತ್ಯವಿರುವ ಹೆಚ್ಚುವರಿ ಸದಸ್ಯರನ್ನು ಉಪ-ಸಮಿತಿಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿದೆ. ಸಮಿತಿಯ ಅಧಿಕಾರಾವಧಿಯು ಸಾಮಾನ್ಯವಾಗಿ ಮೂರು ವರ್ಷಗಳು. ಪ್ರಸ್ತುತ ಸಮಿತಿಯನ್ನು ನವೆಂಬರ್ 9, 2021 ರಂದು ಪುನರ್ರಚಿಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 'ಕೇಂದ್ರೀಯ ಹಿಂದಿ ಸಮಿತಿ' 9 ಕೇಂದ್ರ ಸಚಿವರು, 6 ಮುಖ್ಯಮಂತ್ರಿಗಳು, ಅಧಿಕೃತ ಭಾಷೆಯ ಸಂಸದೀಯ ಸಮಿತಿಯ ಉಪಾಧ್ಯಕ್ಷರು ಮತ್ತು ಮೂವರು ಸಂಚಾಲಕರು ಸೇರಿ ಒಟ್ಟು 21 ಸದಸ್ಯರನ್ನು ಹೊಂದಿದೆ.
*****
(Release ID: 2070734)
Visitor Counter : 23