ಉಪರಾಷ್ಟ್ರಪತಿಗಳ ಕಾರ್ಯಾಲಯ
ವಿಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಯಲು ವಿದೇಶಿ ಭಾಷೆ ಭೇದಿಸಲಾಗದ ತಡೆಗೋಡೆಯಾಗಬಾರದು – ಉಪರಾಷ್ಟ್ರಪತಿ
ಸಾಂಪ್ರದಾಯಿಕವಲ್ಲದ ಅಡೆತಡೆಗಳನ್ನು ಮುರಿಯುವುದು ಕಡ್ಡಾಯವಾಗಿದೆ; ಜ್ಞಾನ ಮತ್ತು ವಿಜ್ಞಾನ ಸಾಮರಸ್ಯದ ಮಿಶ್ರಣ ಹುಡುಕಿ - ಉಪರಾಷ್ಟ್ರಪತಿ
ಜಾಗತಿಕ ಪಾಲುದಾರರು ಭಾರತದಲ್ಲಿ ಪೂರೈಕೆ ಸರಪಳಿಗಳನ್ನು ನಿರ್ಮಿಸಲು 'ರಾಜಕೀಯ ಮತ್ತು ಆರ್ಥಿಕ ಶಕ್ತಿ'ಯಾಗಿ ನೋಡುತ್ತಿದ್ದಾರೆ - ವಿಪಿ
ಮಧ್ಯಮ ಆದಾಯದ ಬಲೆ ಭೇದಿಸಲು ಪ್ರತಿಯೊಬ್ಬ ಭಾರತೀಯನ ಸಾಮೂಹಿಕ ಆಕಾಂಕ್ಷೆಯ ಅಗತ್ಯವಿದೆ - ವಿಪಿ
ಯುಪಿಐ ಮೂಲಕ ಭಾರತವು ವಿಶ್ವಕ್ಕೆ ತಾಂತ್ರಿಕ ಅಳವಡಿಕೆ ಮತ್ತು ಪರಿವರ್ತನೆಯ ಮಾದರಿಯನ್ನು ಹೊಂದಿಸಿದೆ - ವಿಪಿ
ಐಐಟಿ ಜೋಧ್‌ಪುರದ 10ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪರಾಷ್ಟ್ರಪತಿ ಭಾಷಣ
Posted On:
26 OCT 2024 7:54PM by PIB Bengaluru
ವಿಜ್ಞಾನ, ವೈದ್ಯಕೀಯ ಮತ್ತು ತಂತ್ರಜ್ಞಾನ ಕಲಿಯಲು ವಿದೇಶಿ ಭಾಷೆಯು ಭೇದಿಸಲಾಗದ ತಡೆಗೋಡೆಯಾಗಬಾರದು ಎಂದು ಉಪರಾಷ್ಟ್ರಪತಿ ಶ್ರೀ ಧನಕರ್ ತಿಳಿಸಿದರು. ಜ್ಞಾನ ಮತ್ತು ವಿಜ್ಞಾನದ ಸಾಮರಸ್ಯದ ಮಿಶ್ರಣ ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣದಲ್ಲಿ ಸಾಂಪ್ರದಾಯಿಕವಲ್ಲದ ಅಡೆತಡೆಗಳನ್ನು ಮುರಿಯಬೇಕು ಎಂದು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. “ರಾಷ್ಟ್ರೀಯ ಶಿಕ್ಷಣ ನೀತಿ ಅಡಿ, ವಿದ್ಯಾರ್ಥಿಗಳು ಈಗ ಸಾಂಪ್ರದಾಯಿಕವಲ್ಲದ ಸಂಯೋಜನೆಗಳಲ್ಲಿ - ಜ್ಞಾನ ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಜ್ಞಾನದ ಸಾಮರಸ್ಯದ ಮಿಶ್ರಣದ ಕೋರ್ಸ್‌ಗಳನ್ನು ಮುಂದುವರಿಸಲು ಅವಕಾಶ ಹೊಂದಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಅರ್ಥಶಾಸ್ತ್ರ ಅಥವಾ ಸಂಗೀತವನ್ನು ತಮ್ಮ ಪ್ರಮುಖ ವಿಷಯಗಳ ಜೊತೆಗೆ ಅಧ್ಯಯನ ಮಾಡಬಹುದು, ಇದು ಸಮಗ್ರ ಮತ್ತು ಸುಸಜ್ಜಿತ ಶಿಕ್ಷಣದತ್ತ ದಿಟ್ಟ ಹೆಜ್ಜೆಯಾಗಿದೆ, ಕಟ್ಟುನಿಟ್ಟಾದ ಶಿಸ್ತಿನ ಗಡಿಗಳನ್ನು ಮೀರಿ ನೋಡಲು ಅಧಿಕಾರ ಹೊಂದುವವರೇ ಭಾರತದ ಭವಿಷ್ಯದ ಸಮಸ್ಯೆಗಳ ಪರಿಹಾರಕಾರರಾಗುತ್ತಾರೆ ಎಂದರು.
ಐಐಟಿ ಜೋಧ್‌ಪುರದಲ್ಲಿಂದು ನಡೆದ 10ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವಕ್ಕೆ ಒತ್ತು ನೀಡಿದರು. ಮಾತೃಭಾಷೆಯಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳನ್ನು ನೀಡುವ ಐಐಟಿ ಜೋಧ್‌ಪುರ ರಾಷ್ಟ್ರ ಮಟ್ಟದ ಮೊದಲ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು. “ಎಂಜಿನಿಯರಿಂಗ್‌ನಲ್ಲಿ ಉತ್ಕೃಷ್ಟರಾಗಿರುವ ಹಲವಾರು ದೇಶಗಳಿವೆ. ಆದರೆ ಈ ವಿಷಯಗಳನ್ನು ವಿದೇಶಿ ಭಾಷೆಯಲ್ಲಿ ಕಲಿಸುವುದಿಲ್ಲ. ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಜಪಾನ್, ಜರ್ಮನಿ, ಚೀನಾ ಮತ್ತು ಇತರ ಹಲವು ದೇಶಗಳನ್ನು ನೋಡಿ - ಅವರು ವಿದೇಶಿ ಭಾಷೆಯ ಆಶ್ರಯ ಪಡೆದಿಲ್ಲ. ದೇಶವು ನಂಬುವ, ವ್ಯಕ್ತಿಯು ನಂಬುವ ಭಾಷೆಯನ್ನು ಅವರು ಬಳಸುತ್ತಿದ್ದಾರೆ. ನೀವು ಜರ್ಮನ್, ಜಪಾನೀಸ್, ಚೈನೀಸ್ ಅಥವಾ ಭಾರತೀಯ ಭಾಷೆಯನ್ನು ಅಳವಡಿಸಿಕೊಳ್ಳಬಹುದು. ನಮ್ಮ ಸ್ವದೇಶಿ ಚಿಂತಕರು - ಬೌದ್ಧಯಾನ ಇರಲಿ ಅಥವಾ ಪೈಥಾಗರಸ್ ಇರಲಿ - ಇಂಗ್ಲಿಷ್‌ನಲ್ಲಿ ಯೋಚಿಸುತ್ತಿದ್ದರು. ಆದರೂ ಅವರಿಬ್ಬರೂ ತಮ್ಮ ಮಾತೃಭಾಷೆಯಲ್ಲಿ ಈ ಅದ್ಭುತ ಸಿದ್ಧಾಂತಗಳನ್ನು ರಚಿಸಿದರು” ಎಂದರು.
ಭಾರತದ ಆರ್ಥಿಕತೆಯನ್ನು ಪ್ರಸ್ತಾಪಿಸಿದ ಅವರು, ಮಧ್ಯಮ ಆದಾಯದ ಬಲೆಯನ್ನು ದಾಟಿ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಮೂಹಿಕ ಕ್ರಮಗಳ ಅಗತ್ಯವಿದೆ. “ನಾವು ನಮ್ಮ ತಲಾದಾಯವನ್ನು 8 ಪಟ್ಟು ಹೆಚ್ಚಿಸಬೇಕು. 2047ರ ವೇಳೆಗೆ ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮದಲ್ಲಿರುವಾಗ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. 8 ಪಟ್ಟು ತಲಾದಾಯ ಹೆಚ್ಚಳವೂ ತಲುಪಬಹುದು, ಸಾಧಿಸಬಹುದು. ಮೌಲ್ಯ ಸರಪಳಿಯಲ್ಲಿ ನಾವು ಅರ್ಥಪೂರ್ಣ ಉದ್ಯೋಗವನ್ನು ಸೃಷ್ಟಿಸಬೇಕು, ”ಎಂದು ಅವರು ಒತ್ತಿ ಹೇಳಿದರು.
ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ನಿರ್ವಹಿಸಿದ ಹೊಸ ತನದ ಪಾತ್ರವನ್ನು ಅಂಗೀಕರಿಸಿದ ಅವರು, ಈಗ ಜಗತ್ತು ಅನುಸರಿಸುತ್ತಿರುವ ತಾಂತ್ರಿಕ ಪರಿವರ್ತನೆ ಮತ್ತು ರೂಪಾಂತರ ಮಾದರಿಯನ್ನು ದೇಶವು ಹೊಂದಿಸಿದೆ. "ಈ ದೇಶವು ಇತರರು ಅನುಸರಿಸಲು ತಾಂತ್ರಿಕ ಪರಿವರ್ತನೆ ಮತ್ತು ರೂಪಾಂತರದ ಮಾದರಿಯನ್ನು ಹೊಂದಿಸಿದೆ. ಪ್ರತಿದಿನ, ಭಾರತದಲ್ಲಿ ಸರಾಸರಿ 466 ದಶಲಕ್ಷ ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ. ಈ ದೇಶದಲ್ಲಿ ನಾವು ವಹಿವಾಟು ನಡೆಸುತ್ತಿರುವ ರೀತಿಯಲ್ಲಿ ಯುಪಿಐ ಕ್ರಾಂತಿ ಉಂಟುಮಾಡಿದೆ. ಎಲ್ಲರಿಗೂ ಅದರ ಬಗ್ಗೆ ತಿಳಿದು ಬಂದಿದೆ. ಅದರ ಪ್ರಭಾವ ಎಷ್ಟು ವ್ಯಾಪಕವಾಗಿದೆ. ಹೆಚ್ಚು ಮುಖ್ಯವಾಗಿ, ನನ್ನ ಯುವ ಸ್ನೇಹಿತರೆ, ಯುಪಿಐ ನಮ್ಮ ಎಲ್ಲೆ ಮೀರಿ ಸ್ವೀಕಾರ ಕಂಡುಕೊಂಡಿದೆ, ”ಎಂದರು.
1.25 ಲಕ್ಷಕ್ಕೂ ಹೆಚ್ಚಿನ ಸ್ಟಾರ್ಟಪ್‌ಗಳು ಮತ್ತು 110 ಯುನಿಕಾರ್ನ್‌ಗಳೊಂದಿಗೆ ಈಗ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ತ್ವರಿತ ಬೆಳವಣಿಗೆ ಕಂಡಿದೆ ಎಂದು ಶ್ಲಾಘಿಸಿದರು. “ನಮ್ಮ ಏರುಗತಿಯ ಮತ್ತೊಂದು ವೈಶಿಷ್ಟ್ಯವೆಂದರೆ ನಾವೀನ್ಯತೆ. ಭಾರತವು ಈಗ 1.25 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಮತ್ತು 110 ಯುನಿಕಾರ್ನ್‌ಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಭಾರತೀಯ ಮೂಲದ ಆದರೆ ಜಾಗತಿಕವಾಗಿ ಅವರ ಹೆಜ್ಜೆಗುರುತು ಹೊಂದಿರುವ ಹೆಚ್ಚಿನ ‘ಇಂಡಿಕಾರ್ನ್‌ಗಳು’ ನಮಗೆ ಅಗತ್ಯವಿದೆ. "ಇನ್ನೂ ಹೆಚ್ಚು ಸ್ಫೂರ್ತಿದಾಯಕ ಸಂಗತಿಯೆಂದರೆ, ಭಾರತದ ಆರಂಭಿಕ ಪರಿಸರ ವ್ಯವಸ್ಥೆಯು ಇನ್ನು ಮುಂದೆ ಮೆಟ್ರೋ ನಗರಗಳಿಗೆ ಸೀಮಿತವಾಗಿಲ್ಲ - ಇದು ಸಾಮಾಜಿಕ ಸಂಸ್ಕೃತಿಯಾಗಿ ಮಾರ್ಪಟ್ಟಿದೆ, ಇದು ದೇಶದ ಉದ್ದ ಅಗಲಕ್ಕೆ ಹರಡಿದೆ. ಇಲ್ಲಿ ಜೋಧ್‌ಪುರವೊಂದರಲ್ಲೇ, 300ಕ್ಕೂ ಹೆಚ್ಚಿನ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿವೆ. 20ಕ್ಕೂ ಹೆಚ್ಚಿನ ಐಐಟಿಯ ಸ್ವಂತ ತಂತ್ರಜ್ಞಾನ ಇನ್‌ಕ್ಯುಬೇಶನ್ ಕೇಂದ್ರದಲ್ಲಿ ಪೋಷಣೆ ನೀಡಲಾಗುತ್ತಿದೆ. ಈ ಸಂಸ್ಥೆಯು ಜೋಧಪುರದ ಮೊದಲ ಯುನಿಕಾರ್ನ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಅನನ್ಯವಾದ ವೈಶಿಷ್ಟ್ಯತೆಗಳೊಂದಿಗೆ ಮುನ್ನಡೆಯುವಂತೆ ಐಐಟಿಗಳನ್ನು ಪ್ರೋತ್ಸಾಹಿಸಿದ ಅವರು, "ಇಂದು, ನಾನು ಒಂದು ಮಂತ್ರ ಹೇಳಲು ಬಯಸುತ್ತೇನೆ: ಪ್ರತಿ ಐಐಟಿಯು ಕನಿಷ್ಟ ಒಂದು ಸ್ಥಾಪಿತ ಪ್ರದೇಶ ಹೊಂದಿರಬೇಕು, ಅದಕ್ಕಾಗಿ ಅವರು ಜಾಗತಿಕವಾಗಿ ತಿಳಿದಿರಬೇಕು. ನಿಮ್ಮ ಮಾರ್ಗವನ್ನು ಆಯ್ಕೆ ಮಾಡಿ, ವೇಗವಾಗಿ ಸಾಗಿ ಎಂದರು.
ಬಾಹ್ಯಾಕಾಶ ಮತ್ತು ನೀಲಿ ಆರ್ಥಿಕತೆಗಳಲ್ಲಿ ಭಾರತದ ಪಾತ್ರದ ವಿಸ್ತರಿತ ವ್ಯಾಪ್ತಿ ಕುರಿತು ಮಾತನಾಡಿದ ಅವರು, “ಭಾರತವು ಈಗ ಮಂಗಳಯಾನ, ಗಗನಯಾನ ಮತ್ತು ಆದಿತ್ಯ ಮಿಷನ್‌ಗಳೊಂದಿಗೆ ಸರ್ವವ್ಯಾಪಿ ಬಾಹ್ಯಾಕಾಶ ಹೆಜ್ಜೆಗುರುತು ಹೊಂದಿದೆ. ಭಾರತದ ಸಾಮರ್ಥ್ಯವು ಭೂಮಂಡಲದ ಆಚೆಗೂ ವಿಸ್ತರಿಸಿದೆ. ನಮ್ಮ ಬಾಹ್ಯಾಕಾಶ ಆರ್ಥಿಕತೆಯು 2030ರ ವೇಳೆಗೆ 4 ಪಟ್ಟು ಬೆಳೆಯಲಿದೆ. ಇದು ಪ್ರಮುಖ ದಾಪುಗಾಲುಗಳನ್ನು ಮಾಡಿದೆಯಾದರೂ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ನಮ್ಮ ಪಾಲು ಒಂದೇ ಅಂಕೆಯಲ್ಲಿದೆ. ನಾವು ದೊಡ್ಡ ಕನಸು ಕಾಣಬೇಕಾಗಿದೆ". ಸಾಗರಗಳು ಮೀನುಗಾರಿಕೆ ಮತ್ತು ಜಲಚರ ಸಾಕಣೆ, ಬಂದರುಗಳು ಮತ್ತು ಹಡಗು, ಸಾಗರ ಮತ್ತು ಕರಾವಳಿ ಪ್ರವಾಸೋದ್ಯಮ, ಸಾಗರ ಜೈವಿಕ ತಂತ್ರಜ್ಞಾನ, ಐಟಿ-ಚಾಲಿತ ಸಮುದ್ರ ನಾವೀನ್ಯತೆ, ಆಳ ಸಾಗರ ತಳದ ಗಣಿಗಾರಿಕೆಯಂತಹ ವ್ಯಾಪಕವಾದ ವಲಯಗಳು ವಿಫುಲ ಅವಕಾಶಗಳನ್ನು ನೀಡುತ್ತವೆ. ಮತ್ತೊಂದು ದೊಡ್ಡ ಭರವಸೆಯ ಪ್ರದೇಶವೆಂದರೆ ಹಸಿರು ಹೈಡ್ರೋಜನ್. ಭಾರತವು 2030ರ ವೇಳೆಗೆ 5 ದಶಲಕ್ಷ ಮೆಟ್ರಿಕ್ ಟನ್(ಎಂಎಂಟಿ) ಹಸಿರು ಹೈಡ್ರೋಜನ್ ಉತ್ಪಾದಿಸುವ ಆಕಾಂಕ್ಷೆ ಹೊಂದಿದೆ, ಅದು ಪರಿಸರವನ್ನು ಇನ್ನಷ್ಟು ಕೆಡದಂತೆ ಇಂಧನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದರು.
ಭಾರತದ ಯುವಕರು ತಮ್ಮ ಶಕ್ತಿ ಅಳವಡಿಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಮನವಿ ಮಾಡಿದರು: “ಜಗತ್ತು ಭಾರತದ ಬೆಳವಣಿಗೆಯ ಯಶೋಗಾಥೆ ಸೇರಲು ಬಯಸುತ್ತಿದೆ, ಜಾಗತಿಕ ಪಾಲುದಾರರು ತಮ್ಮ ಪೂರೈಕೆ ಸರಪಳಿಗಳನ್ನು ನಮ್ಮ ದೇಶದಲ್ಲಿ ನಿರ್ಮಿಸುವ ಗುರಿ ಹೊಂದಿದ್ದಾರೆ. ನಮ್ಮ ಜಾಗತಿಕ ಪಾಲುದಾರರು ನಮ್ಮ ದೇಶದಲ್ಲಿ ತಮ್ಮ ಪೂರೈಕೆ ಸರಪಳಿಗಳನ್ನು ನಿರ್ಮಿಸಲು 'ರಾಜಕೀಯ ಮತ್ತು ಆರ್ಥಿಕ ಶಕ್ತಿ(ಫ್ರೆಂಡ್ ಶೋರ್)ಯಾಗಿ ಭಾರತವನ್ನು ನೋಡುತ್ತಿದ್ದಾರೆ. ಇಂದಿನ ಇಡೀ ವಿಶ್ವವೇ ಪ್ರತಿದಿನ ಸರಾಸರಿ 466 ದಶಲಕ್ಷ ಡಿಜಿಟಲ್ ವಹಿವಾಟುಗಳನ್ನು ಸಾಧಿಸಿರುವ, ತಾಂತ್ರಿಕ ಅಳವಡಿಕೆಯ ಮಾದರಿಯಾಗಿ ಭಾರತವನ್ನು ನೋಡುತ್ತಿದೆ. ನಮ್ಮ ಯುವಕರು ಹಿಂದಿನ ಕಾಲದ ‘ದುರ್ಬಲ ಮತ್ತು ಕಳಹೀನ’ ಮನಸ್ಥಿತಿ ತಿರಸ್ಕರಿಸಬೇಕು, ತಮ್ಮ ನೈಜಶಕ್ತಿಯನ್ನು ಅಳವಡಿಸಿಕೊಳ್ಳಬೇಕು, ಸಮೃದ್ಧ ಮತ್ತು ಸ್ವಾವಲಂಬಿ ಭಾರತದ ಚಾಲನಾಶಕ್ತಿಯಾಗಬೇಕು ಎಂದು ಕರೆ ನೀಡಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಇಂಡಿಯಾ ಫೌಂಡೇಶನ್ ಅಧ್ಯಕ್ಷ ಡಾ ರಾಮ್ ಮಾಧವ್, ಐಐಟಿ ಜೋಧ್‌ಪುರದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಎ.ಎಸ್. ಕಿರಣ್ ಕುಮಾರ್, ಐಐಟಿ ಜೋಧ್‌ಪುರದ ನಿರ್ದೇಶಕ ಪ್ರೊ. ಅವಿನಾಶ್ ಕುಮಾರ್ ಅಗರ್ವಾಲ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಲ್ಲಿ ಭಾಷಣದ ಪೂರ್ಣ ಪಠ್ಯ ಓದಿ: https://pib.gov.in/PressReleasePage.aspx?PRID=2068516
*****
(Release ID: 2068733)
Visitor Counter : 30