ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮಾರಕ ಆರೋಗ್ಯ ವಿಜ್ಞಾನ ಮತ್ತು ಛತ್ತೀಸ್‌ ಗಢದ ಆಯುಷ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಭಾಗವಹಿಸಿದರು

Posted On: 26 OCT 2024 5:55PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 26 , 2024) ರಾಯ್‌ ಪುರದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮಾರಕ ಆರೋಗ್ಯ ವಿಜ್ಞಾನ ಮತ್ತು ಛತ್ತೀಸ್‌ ಗಢದ ಆಯುಷ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಛತ್ತೀಸ್‌ಗಢದಲ್ಲಿ ಔಷಧೀಯ ಸಸ್ಯಗಳ ದೊಡ್ಡ ಸಂಗ್ರಹವಿದೆ.  ಗ್ರಾಮೀಣ ಮತ್ತು ಬುಡಕಟ್ಟು ಜನರಿಗೆ ಬೀಜ ಮತ್ತು ಧವ್ಡಾದಂತಹ ಮರಗಳ ಔಷಧೀಯ ಪ್ರಾಮುಖ್ಯತೆಯ ಬಗ್ಗೆ ತಿಳಿದಿದೆ. ಈ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸುವ ಮತ್ತು ಪ್ರಮಾಣೀಕರಿಸುವ ಮೂಲಕ ಉಳಿಸಬಹುದು. ಸಂಶೋಧನೆಯನ್ನು ಉತ್ತೇಜಿಸುವ ಮೂಲಕ ಅಂತಹ ಮಾಹಿತಿಯನ್ನು ವೈಜ್ಞಾನಿಕವಾಗಿ ವ್ಯಾಪಕವಾಗಿ ಬಳಸಬಹುದು.

ಮಲೇರಿಯಾ, ಲಿಂಫೆಟಿಕ್ ಫೈಲೇರಿಯಾಸಿಸ್ ಮತ್ತು ಕ್ಷಯರೋಗದಂತಹ ಸಾಂಕ್ರಾಮಿಕ ರೋಗಗಳು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದರು. ಭಾರತ ಸರ್ಕಾರವು ಈ ರೋಗಗಳನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಮುಂಚೂಣಿ ಯೋಧರಾಗಿ ಆರೋಗ್ಯ ಕಾರ್ಯಕರ್ತರು ಸಾಮಾನ್ಯ ಜನರಲ್ಲಿ ಆರೋಗ್ಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬಹುದು. ಅವರು ನೀತಿ ನಿರೂಪಕರು ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬಹುದು ಎಂದು ರಾಷ್ಟ್ರಪತಿಯವರು ಹೇಳಿದರು. 

ವೈದ್ಯರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ಜನರ ನೈಜ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರಪತಿಯವರು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಅವರ ವಾಸ್ತವ್ಯವು ಅವರ ಅನುಭವಗಳನ್ನು ಸಮೃದ್ಧಗೊಳಿಸುವುದಲ್ಲದೆ, ಸಮಾಜ ಮತ್ತು ದೇಶದ ಬಗೆಗಿನ ಅವರ ಕರ್ತವ್ಯ ಪ್ರಜ್ಞೆಯನ್ನು ಬಲಪಡಿಸುತ್ತದೆ. ವೈದ್ಯರು ತಮ್ಮ ವೃತ್ತಿಜೀವನದ ಕೆಲವು ವರ್ಷಗಳನ್ನು ಗ್ರಾಮೀಣ ಪ್ರದೇಶಗಳಿಗೆ ಮುಡಿಪಾಗಿಡಲು ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.

ಶಿಕ್ಷಕರು ಮತ್ತು ವೈದ್ಯರ ಬಗೆಗಿನ ಗೌರವದ ಭಾವನೆಯನ್ನು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಳಸಬಹುದು ಎಂದು ರಾಷ್ಟ್ರಪತಿಗಳು ಹೇಳಿದರು. ಉದಾಹರಣೆಗೆ , ಮಾದಕ ದ್ರವ್ಯ ಸೇವನೆಯು ಅವರ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ, ಮಾತ್ರವಲ್ಲದೆ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಜನರಿಗೆ ಮನವರಿಕೆ ಮಾಡಬಹುದು. ಅಂತೆಯೇ, ವೈದ್ಯರು ರಕ್ತ ಮತ್ತು ಅಂಗಾಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸಬಹುದು ಎಂದು ಹೇಳಿದರು.

ಘಟಿಕೋತ್ಸವ ದಿನವು ಸಂಭ್ರಮಾಚರಣೆಯ ಜೊತೆಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಂದರ್ಭವಾಗಿದೆ ಎಂದು ರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ತಿಳಿಸಿದರು. ತಮ್ಮ ಭವಿಷ್ಯಕ್ಕಾಗಿ ಯೋಜಿಸುವಾಗ, ಅವರ ಶಿಕ್ಷಣಕ್ಕೆ ಸಮಾಜವೂ ಕೊಡುಗೆ ನೀಡಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಅವರು ಸಲಹೆ ನೀಡಿದರು. ಸಮಾಜವು ತಮ್ಮ ಶಿಕ್ಷಣದಲ್ಲಿ ಹೂಡಿಕೆ ಮಾಡಿದ್ದನ್ನು ಸಮಾಜಕ್ಕೆ ಮರಳಿ ನೀಡುವುದು ಅವರ ಕರ್ತವ್ಯ ಎಂದು ಅವರು ಅವರಿಗೆ ನೆನಪಿಸಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡುವಲ್ಲಿ ಅಭಿವೃದ್ಧಿ ಹೊಂದಿದ ಛತ್ತೀಸ್‌ ಗಢವು ಮಹತ್ವದ ಪಾತ್ರ ವಹಿಸಲಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ನಾಗರಿಕರ ಉತ್ತಮ ಆರೋಗ್ಯವು ಜನರ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಅಭಿವೃದ್ಧಿಗೆ ಮಹತ್ವವಾಗಿದೆ ಎಂದು ಅವರು ಸೂಚಿಸಿದರು. ಆದ್ದರಿಂದ, ರಾಜ್ಯದ ಆರೋಗ್ಯ ಕಾರ್ಯಕರ್ತರು ಅಭಿವೃದ್ಧಿ ಹೊಂದಿದ ಛತ್ತೀಸ್‌ ಗಢವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಛತ್ತೀಸ್‌ ಗಢದ ಎರಡು ಇಂಜಿನಿಯರಿಂಗ್ ಮತ್ತು ಎರಡು ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸಂವಾದದ ಸಮಯದಲ್ಲಿ, ಯುವಜನರಲ್ಲಿ, ವಿಶ್ವದಲ್ಲಿ ತನ್ನ ಸರಿಯಾದ ಸ್ಥಾನವನ್ನು ಪಡೆಯಲು ಪೂರ್ಣ ಶಕ್ತಿಯೊಂದಿಗೆ ಮುನ್ನಡೆಯುತ್ತಿರುವ ನವ ಭಾರತವನ್ನು ನೋಡಿದ್ದಾಗಿ ರಾಷ್ಟ್ರಪತಿಯವರು ಹೇಳಿದರು.

ರಾಷ್ಟ್ರಪತಿಯವರ ಭಾಷಣಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

 

*****


(Release ID: 2068725) Visitor Counter : 31