ನೌಕಾ ಸಚಿವಾಲಯ
"ಡಾನಾ" ಚಂಡಮಾರುತಕ್ಕೆ ಪ್ರತಿಕ್ರಿಯೆಯಾಗಿ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ
ಭೀಕರ ಚಂಡಮಾರುತ ಎದುರಿಸಲು ಪಾರಾದೀಪ್ ಬಂದರು ಸಜ್ಜು
ಪಾರಾದೀಪ್ ಬಂದರಿನಲ್ಲಿರುವ ಎಲ್ಲಾ ಹೂಳೆತ್ತುವ ನೌಕೆಗಳು, ದೋಣಿಗಳು ಮತ್ತು ಸಹಾಯಕ ಹಡಗುಗಳನ್ನು ಭಾರೀ ಹವಾಮಾನದಿಂದ ರಕ್ಷಿಸುವಂತೆ ಸಚಿವಾಲಯವು ನಿರ್ದೇಶಿಸಿದೆ
Posted On:
24 OCT 2024 9:25PM by PIB Bengaluru
ತೀವ್ರ ಚಂಡಮಾರುತ "ಡಾನಾ"ದ ಮುನ್ಸೂಚನೆ ಹಿನ್ನೆಲೆಯಲ್ಲು, ಬಂದರು, ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ, ಬಂದರು, ನೌಕಾಯಾನ ಮತ್ತು ಜಲಮಾರ್ಗ ಸಚಿವಾಲಯ (MoPSW) ಸಮಗ್ರ ಸುರಕ್ಷತಾ ಕ್ರಮಗಳನ್ನು ಆರಂಭಿಸಿದೆ. ಬಂದರು, ನೌಕಾಯಾನ ಮತ್ತು ಜಲಮಾರ್ಗ ರಾಜ್ಯ ಸಚಿವರಾದ ಶ್ರೀ ಶಾಂತನು ಠಾಕೂರ್ ಅವರ ಅಅಧ್ಯಕ್ಷತೆಯಲ್ಲಿ, ಬಂದರು, ನೌಕಾಯಾನ ಮತ್ತು ಜಲಮಾರ್ಗ ಸಚಿವಾಲಯ (ಎಂಒಪಿಎಸ್‌ಡಬ್ಲ್ಯೂ), ನೌಕಾಯಾನ ಮಹಾನಿರ್ದೇಶನಾಲಯ ಮತ್ತು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ವಿಸ್ತೃತ ಪರಿಶೀಲನಾ ಸಭೆ ನಡೆಯಿತು.
ಸಮುದ್ರ ಕಾರ್ಯಾಚರಣೆಗಳ ಮೇಲೆ ಚಂಡಮಾರುತದ ಪರಿಣಾಮವನ್ನು ತಗ್ಗಿಸಲು ಮತ್ತು ಬಂದರು ಸಿಬ್ಬಂದಿ ಮತ್ತು ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಘಟಿತ ಕ್ರಮದ ಅಗತ್ಯವನ್ನು ಶ್ರೀ ಠಾಕೂರ್ ಒತ್ತಿ ಹೇಳಿದರು. ಶ್ರೀ ಠಾಕೂರ್ ಅವರು ಸಂಬಂಧಿತ ಏಜೆನ್ಸಿಗಳು ಕೈಗೊಂಡ ಪೂರ್ವಭಾವಿ ಕ್ರಮಗಳನ್ನು ಶ್ಲಾಘಿಸಿದರು ಮತ್ತು ಚಂಡಮಾರುತ ತೀವ್ರಗೊಳ್ಳುತ್ತಿದ್ದಂತೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಜಾಗರೂಕರಾಗಿರಲು ಒತ್ತಾಯಿಸಿದರು.
ಪ್ರಸ್ತುತ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತವು ತೀವ್ರಗೊಂಡು, ಅಕ್ಟೋಬರ್ 24ರ ರಾತ್ರಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ಭೂಭಾಗವನ್ನು ತಲುಪುವ ನಿರೀಕ್ಷೆಯಿದೆ. ಈ ಚಂಡಮಾರುತದ ಗಾಳಿಯ ವೇಗವು ಗಂಟೆಗೆ 100-110 ಕಿಲೋಮೀಟರ್ ಇದ್ದು, ಅದು 120 ಕಿಲೋಮೀಟರ್ ವರೆಗೆ ಏರುವ ಸಾಧ್ಯತೆಯಿದೆ.
ಸುರಕ್ಷತಾ ಕ್ರಮಗಳ ಭಾಗವಾಗಿ, ಬರ್ತ್ ನಲ್ಲಿರುವ ಎಲ್ಲಾ ಹಡಗುಗಳು 23 ಅಕ್ಟೋಬರ್ 2024ರ ಮಧ್ಯಾಹ್ನದೊಳಗಾಗಿ ಸಮತೋಲನ ಮತ್ತು ಸ್ಥಿರತೆಯನ್ನು ಕಾಯ್ದುಕೊಂಡು, ಅವುಗಳ ಪ್ರಧಾನ ಯಂತ್ರಗಳು (ಮುಖ್ಯ ಎಂಜಿನ್) ಸಮುದ್ರಯಾನಕ್ಕೆ ಸಜ್ಜಾಗಿರಬೇಕು. ಕಡಿಮೆ ಆಳದ ಹಡಗುಗಳು (ಲೈಟ್ ಡ್ರಾಫ್ಟ್ ಹಡಗುಗಳು) ಬಿರುಗಾಳಿ ಎದುರಿಸಲು ಹೆಚ್ಚುವರಿ ತೂಕದ ನೀರನ್ನು (ಹೆವಿ ವೆದರ್ ಬ್ಯಾಲಾಸ್ಟ್) ತುಂಬಿಸಿಕೊಳ್ಳಬೇಕೆಂದು ನಿರ್ದೇಶಿಸಲಾಗಿದೆ. ಜೊತೆಗೆ, ಪಾರಾದೀಪ್ ಲಂಗರು ಪ್ರದೇಶದಲ್ಲಿರುವ ಹಡಗುಗಳು 23 ಅಕ್ಟೋಬರ್ ಸಂಜೆಯೊಳಗೆ ಸುರಕ್ಷಿತ ಸಮುದ್ರ ಭಾಗಕ್ಕೆ ತೆರಳಬೇಕು. ಬಂದರಿನೊಳಗಿರುವ ಕಡಲ ಕಾವಲುಪಡೆಯ (ಕೋಸ್ಟ್ ಗಾರ್ಡ್) ಹಡಗುಗಳು ಬಿರುಗಾಳಿಯನ್ನು ಎದುರಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಅಥವಾ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು.
ಸಭೆಯ ಸಮಯದಲ್ಲಿ ಮಾನ್ಯ ರಾಜ್ಯ ಸಚಿವರು, ಕೊಲ್ಕತ್ತಾ ಬಂದರು ಮತ್ತು ಶ್ಯಾಮಾ ಪ್ರಸಾದ್ ಮುಖರ್ಜಿ ಬಂದರಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ, ಈ ಪ್ರದೇಶದಲ್ಲಿ 'ಡಾನಾ' ಚಂಡಮಾರುತದ ಪರಿಣಾಮ ಕಡಿಮೆ ಇರುವ ನಿರೀಕ್ಷೆ ಇದ್ದರೂ, ಯಾವುದೇ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಸಿದ್ಧರಾಗಿರಲು ಮತ್ತು ಜೀವ ಹಾನಿ ಅಥವಾ ಆಸ್ತಿ ನಷ್ಟವನ್ನು ತಡೆಯಲು ಸಂಪೂರ್ಣ ಸಿದ್ಧತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
ಪಾರಾದೀಪ್ ಬಂದರಿನಲ್ಲಿರುವ ಎಲ್ಲಾ ಮರಳು/ಹೂಳು ತೆಗೆಯುವ ಯಂತ್ರಗಳು, ಸರಕು ಸಾಗಿಸುವ ದೋಣಿ ಮತ್ತು ಸಹಾಯಕ ನೌಕೆಗಳನ್ನು ಭಾರೀ ಹವಾಮಾನಕ್ಕೆ ಸುರಕ್ಷಿತಗೊಳಿಸಬೇಕು. ಡಿಸಿಐ ಡ್ರೆಡ್ಜ್ XV, XVI, XVIII, ಡಿಸಿಐ ಡ್ರೆಡ್ಜ್ ಗಂಗಾ ಮತ್ತು NDCಯಲ್ಲಿರುವ DCI ಮಲ್ಟಿಕ್ಯಾಟ್ ನೌಕೆಗಳು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ಪಶ್ಚಿಮ ಮತ್ತು ಉತ್ತರ ಡಾಕ್ ಪ್ರದೇಶಗಳಲ್ಲಿರುವ ಇತರ ನೌಕೆಗಳಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲ ನಾವಿಕ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. PPL, IFFCO, KICT, MCHP ಮತ್ತು IOHPಯಲ್ಲಿರುವ ಬಂದರಿನ ಚಲನಶೀಲ ಕ್ರೇನ್‌ಗಳು ಮತ್ತು ಹಡಗುಗಳಿಂದ ಸರಕು ಇಳಿಸುವ ಯಂತ್ರಗಳು ಸೇರಿದಂತೆ ಎಲ್ಲ ಭಾರೀ ಯಂತ್ರೋಪಕರಣಗಳನ್ನು ಅಕ್ಟೋಬರ್ 23ರ ಸಂಜೆಯೊಳಗೆ ಸುರಕ್ಷಿತಗೊಳಿಸಬೇಕು ಎಂದು ಸಚಿವಾಲಯ ಆದೇಶ ನೀಡಿದೆ.
ಬಂದರು ಆಡಳಿತವು ನಿರ್ಮಾಣ ಹಂತದಲ್ಲಿರುವ ಪ್ರದೇಶಗಳ ಅತ್ಯಾವಶ್ಯಕ ಉಪಕರಣಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದು, ಎತ್ತರದ ಕಂಬದ ದೀಪಗಳು, ಲೋಡಿಂಗ್ ಆರ್ಮ್‌ಗಳು ಮತ್ತು ಗ್ಯಾಂಗ್ ವೇಗಳನ್ನು ಸುರಕ್ಷಿತಗೊಳಿಸುತ್ತಿದೆ. ಪಾರಾದೀಪ್ ಬಂದರು ಪ್ರಾಧಿಕಾರದ ಸಹಯೋಗದಲ್ಲಿ ತುರ್ತು ಸೇವೆಗಳಾದ ಮರಗಳನ್ನು ಕಡಿಯಲು ವಿದ್ಯುತ್ ಗರಗಸಗಳು, ಜನರನ್ನು ಸ್ಥಳಾಂತರಿಸಲು ಬಸ್ಸುಗಳು ಮತ್ತು ತುರ್ತು ಆಹಾರ ಪೂರೈಕೆಯನ್ನು ಲಭ್ಯವಾಗುವಂತೆ ಮಾಡಲಾಗುವುದು.
ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ಸಹಯೋಗದಲ್ಲಿ, ಸಚಿವಾಲಯವು ಜನರನ್ನು ಚಂಡಮಾರುತ ಆಶ್ರಯ ಕೇಂದ್ರಗಳಿಗೆ ಸಾಗಿಸಲು ಬಸ್ಸುಗಳನ್ನು ವ್ಯವಸ್ಥೆ ಮಾಡಿ ಸ್ಥಳಾಂತರ ಕಾರ್ಯಕ್ಕೆ ಸಜ್ಜಾಗಿದೆ. ಚಂಡಮಾರುತ ಪೀಡಿತರ ಯೋಗಕ್ಷೇಮ ಖಾತ್ರಿಪಡಿಸಲು ಆಶ್ರಯ ಕೇಂದ್ರಗಳಲ್ಲಿ ಸಾಕಷ್ಟು ಔಷಧಿಗಳು, ಕುಡಿಯುವ ನೀರು ಮತ್ತು ಬೇಯಿಸಿದ ಆಹಾರವನ್ನು ವಿತರಿಸಲಾಗುತ್ತಿದೆ.
ಚಂಡಮಾರುತ ಡಾನಾದಿಂದ ಬಂದರಿನ ಕಾರ್ಯಾಚರಣೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸಮುದ್ರ ಸಂಚಾರ ಸುರಕ್ಷತೆ ಮತ್ತು ಕಾರ್ಯಾಚರಣಾ ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ MoPSWಯ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.
*****
(Release ID: 2068054)
Visitor Counter : 32