ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೊಸದಿಲ್ಲಿಯಲ್ಲಿ 2023ನೇ ತಂಡದ (76 ಆರ್.ಆರ್.) ಐಪಿಎಸ್ ಪ್ರೊಬೇಷನರಿಗಳೊಂದಿಗೆ ಸಂವಾದ ನಡೆಸಿದರು


2047ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ, ಭಯೋತ್ಪಾದನೆ ಮುಕ್ತ ಮತ್ತು ಮಾದಕವಸ್ತು ಮುಕ್ತ ದೇಶವಾಗಲಿದೆ, ಆಂತರಿಕ ಭದ್ರತೆಯನ್ನು ಹೊಂದಿದ ಮತ್ತು ಮಾನವ ಹಕ್ಕುಗಳು ಹಾಗು  ನಾಗರಿಕರ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಲಿದೆ

ಜಮ್ಮು ಮತ್ತು ಕಾಶ್ಮೀರ, ಎಲ್ ಡಬ್ಲ್ಯುಇ ಪೀಡಿತ ಪ್ರದೇಶಗಳು ಮತ್ತು ಈಶಾನ್ಯದ ಮೂರು ಹಾಟ್ ಸ್ಪಾಟ್ ಗಳಲ್ಲಿ ಹಿಂಸಾಚಾರವನ್ನು ಕಡಿಮೆ ಮಾಡುವ ಮೂಲಕ ಭದ್ರತಾ ಸಂಸ್ಥೆಗಳು ತಮ್ಮ ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸಿವೆ

ಎಲ್ಲಾ ಅಧಿಕಾರಿಗಳು ನಿರ್ದಯ ವಿಧಾನದಿಂದ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ತೊಡೆದುಹಾಕಬೇಕು ಮೂರು ಕ್ರಿಮಿನಲ್ ಕಾನೂನುಗಳಲ್ಲಿ ಸಮಯೋಚಿತ ಸಕಾಲಿಕ ನ್ಯಾಯ, ಶಿಕ್ಷೆಗೆ ಸಾಕಷ್ಟು ಪುರಾವೆಗಳು ಮತ್ತು ತಂತ್ರಜ್ಞಾನದ ಬಳಕೆಯನ್ನು ಸಂಯೋಜಿಸಲಾಗಿದೆ

ನಾಗರಿಕರ ಸುರಕ್ಷತೆಯು ರಾಷ್ಟ್ರೀಯ ಭದ್ರತೆಯ ಆಧಾರವಾಗಿದೆ

ಯುವ ಪೊಲೀಸ್ ಅಧಿಕಾರಿಗಳು ನಾಗರಿಕರ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆಯ ಬಗ್ಗೆ ಗಮನ ಹರಿಸಬೇಕು
ಬಡವರು, ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿದೆ

ನೀವು ಜಿಲ್ಲೆಯನ್ನು ತೊರೆದ ನಂತರವೂ ಜನರು ನಿಮ್ಮ ಒಳ್ಳೆಯ ಕೆಲಸಗಳನ್ನು ನೆನಪಿಸಿಕೊಂಡರೆ ಅದೇ ದೊಡ್ಡ ಪದಕ

Posted On: 15 OCT 2024 8:17PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಇಂದು ಹೊಸದಿಲ್ಲಿಯಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 2023 ಬ್ಯಾಚ್ (76 ಆರ್.ಆರ್.)ನ ಪ್ರೊಬೇಷನರಿಗಳೊಂದಿಗೆ ಸಂವಾದ ನಡೆಸಿದರು. ಸಂವಾದದ ವೇಳೆ, ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳು ತರಬೇತಿಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಕೇಂದ್ರ ಗೃಹ ಸಚಿವರೊಂದಿಗೆ ಹಂಚಿಕೊಂಡರು. ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಎಸ್ ವಿಪಿಎನ್ ಪಿಎ) ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂವಾದದ ವೇಳೆ, ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು, 2047 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಆಂತರಿಕ ಭದ್ರತೆಯನ್ನು ಹೊಂದಿ,  ಭಯೋತ್ಪಾದನೆ ಮುಕ್ತ ಮತ್ತು ಮಾದಕವಸ್ತು ಮುಕ್ತ ದೇಶವಾಗಲಿದೆ, ಹಾಗು ಮಾನವ ಹಕ್ಕುಗಳು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ತರಬೇತಿ ಪಡೆದ ಐಪಿಎಸ್ ಅಧಿಕಾರಿಗಳು ತಾವು ಯಾವ ಸಮಯದಲ್ಲಿ ಐಪಿಎಸ್ ಅಧಿಕಾರಿಗಳಾಗಿದ್ದೇವೆ ಎಂಬುದರ ಬಗ್ಗೆ ಆಲೋಚಿಸಬೇಕು ಮತ್ತು ಅದನ್ನು ಪ್ರತಿಬಿಂಬಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಬಾರಿ ಐಪಿಎಸ್ ಅಧಿಕಾರಿಗಳಾಗಿ ಹೊರಹೊಮ್ಮುವ ಬ್ಯಾಚ್ ಹಿಂದಿನ 75 ಬ್ಯಾಚ್ ಗಳಿಗಿಂತ ದೊಡ್ಡ ಜವಾಬ್ದಾರಿಯನ್ನು ಹೊಂದಿರುವುದರಿಂದ ತರಬೇತಿ ಅಧಿಕಾರಿಗಳು ಯೋಚಿಸಬೇಕು ಎಂದು ಅವರು ಹೇಳಿದರು. ನಮ್ಮ ದೇಶವು ವ್ಯಾಪಕ ರೀತಿಯಲ್ಲಿ ಬದಲಾಗುತ್ತಿದೆಯೇ ಮತ್ತು ಮುಂದಿನ ಪೀಳಿಗೆಯ ಪೊಲೀಸಿಂಗ್  ವ್ಯವಸ್ಥೆಗೆ ಪ್ರವೇಶಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುವುದು ಸಂಪೂರ್ಣವಾಗಿ ಅವರಿಗೆ ಮತ್ತು ಅವರ ನಂತರ ಬರುವ ಬ್ಯಾಚ್ ಗಳಿಗೆ ಬಿಟ್ಟ ಹೊಣೆಗಾರಿಕೆಯಾಗಿದೆ ಎಂದು ಶ್ರೀ ಶಾ ಹೇಳಿದರು.

ನಮ್ಮ ಗಡಿಗಳನ್ನು ಮತ್ತು ನಮ್ಮ ಸೇನೆಯನ್ನು ಅವಮಾನಿಸುವ ಧೈರ್ಯ ಈಗ ಯಾರಿಗೂ ಇಲ್ಲ ಎಂದು ದೇಶದ ಗೃಹ ಸಚಿವರಾಗಿ ತಾವು ಖಚಿತವಾಗಿ ಹೇಳುವ ಸ್ಥಿತಿಯಲ್ಲಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಗಡಿಗಳಿಗೆ ಬಿಗಿ ಭದ್ರತೆ ಒದಗಿಸಲು ನಾವು ಸಾಕಷ್ಟು ಕೆಲಸ ಮಾಡಿದ್ದೇವೆ ಮತ್ತು ಇನ್ನುಳಿದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು ಮೂರು ಹುಣ್ಣುಗಳಾಗಿದ್ದವು, ಆದರೆ ಈಗ ನಾವು ಮೂರು ಸ್ಥಳಗಳಲ್ಲಿ ಹಿಂಸಾಚಾರವನ್ನು 70% ರಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದೂ ಶ್ರೀ ಶಾ ಹೇಳಿದರು. ಇಂದು ಭಾರತೀಯ ಏಜೆನ್ಸಿಗಳು ಮೂರು ಹಾಟ್ಸ್ಪಾಟ್ಗಳಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಹೊಂದಿವೆ ಎಂದು ಅವರು ನುಡಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಬದಲಾವಣೆಯ ಬೇಡಿಕೆಗಳು ಮತ್ತು ಆಕಾಂಕ್ಷೆ ಎರಡನ್ನೂ ಮಾಡುವ ಸಂಸ್ಕೃತಿ ಈಗ ತಳಮಟ್ಟವನ್ನು ತಲುಪಿದೆ, ಇದರಿಂದಾಗಿ ಹಿಂದೆ ಕಂಡುಬರುತ್ತಿದ್ದ ದೊಡ್ಡ ಪ್ರತಿಭಟನೆಗಳು ಈಗ ಕೊನೆಗೊಂಡಿವೆ ಎಂದು ಶ್ರೀ ಶಾ ಹೇಳಿದರು.

ನಮ್ಮ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಪೊಲೀಸ್ ವ್ಯವಸ್ಥೆ ಮುಂದೆ ಬರುವ ಸಮಯ ಈಗ ಬಂದಿದೆ, ದೇಶದ ಗಡಿಯೊಳಗೆ ನಡೆಯುತ್ತಿರುವ ಅಪರಾಧಗಳನ್ನು ಕಡಿಮೆ ಮಾಡಲು ಪೊಲೀಸ್ ವ್ಯವಸ್ಥೆ ಜಾಗರೂಕವಾಗಿರಬೇಕು ಮತ್ತು ನಾವು ನಾಗರಿಕರಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುವ ಸಮಯ ಬಂದಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು,ಹೇಳಿದರು.

ಇಂದು ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಹಾಗು ಸಿಸ್ಟಮ್ಸ್ (ಸಿಸಿಟಿಎನ್ ಎಸ್) ಮೂಲಕ ದೇಶದ 99% ಪೊಲೀಸ್ ಠಾಣೆಗಳು ಆನ್ ಲೈನ್ ಆಗಿವೆ, ಆನ್ ಲೈನ್ ಡೇಟಾವನ್ನು ರೂಪಿಸಲಾಗಿದೆ ಮತ್ತು ಮೂರು ಹೊಸ ಕಾನೂನುಗಳ ಮೂಲಕ ಅನೇಕ ನಿಬಂಧನೆಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೊಸ ಕಾನೂನುಗಳಲ್ಲಿ, ಸಮಯೋಚಿತ ನ್ಯಾಯ, ಶಿಕ್ಷೆಯ ಪುರಾವೆಗಳನ್ನು ಹೆಚ್ಚಿಸುವುದು ಮತ್ತು ತಂತ್ರಜ್ಞಾನದ ಗರಿಷ್ಠ ಬಳಕೆಗೆ ಒತ್ತು ನೀಡಲಾಗಿದೆ. ನಾವು ವೈಜ್ಞಾನಿಕ ಪುರಾವೆಗಳನ್ನು ಕಡ್ಡಾಯಗೊಳಿಸಿರುವುದರಿಂದ, ಪ್ರಾಸಿಕ್ಯೂಷನ್ ಅನೇಕ ಸಾಕ್ಷಿಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ, ಮತ್ತು ಈಗ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಅಪರಾಧವನ್ನು ಸಾಬೀತುಪಡಿಸಬಹುದು ಎಂದವರು ವಿವರಿಸಿದರು.

ಹೊಸ ಕಾನೂನುಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಕಾಲಮಿತಿಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. 5 ವರ್ಷಗಳಲ್ಲಿ, ತಂತ್ರಜ್ಞಾನದ ಸ್ಥಾಪನೆ, ಸಾಫ್ಟ್ವೇರ್ ಅಭಿವೃದ್ಧಿ ಮತ್ತು ತರಬೇತಿ ಸೇರಿದಂತೆ ದೇಶಾದ್ಯಂತದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಹೊಸ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ಅದರ ನಂತರ, ಎಫ್ಐಆರ್ ದಾಖಲಾದ 3 ವರ್ಷಗಳಲ್ಲಿ ನ್ಯಾಯ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹೊಸ ಕಾನೂನುಗಳು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ ಮತ್ತು ಮುಂಬರುವ 100 ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಆಗಲಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನುಗಳನ್ನು ಮಾಡಲಾಗಿದೆ ಎಂದೂ ಶ್ರೀ ಶಾ ಹೇಳಿದರು. ಇ-ಸಮನ್ಸ್ ಉದಾಹರಣೆ ನೀಡಿದ ಅವರು, ಮುಂಬರುವ 100 ವರ್ಷಗಳ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅದರಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಪ್ರಾಸಿಕ್ಯೂಷನ್ ನಿರ್ದೇಶಕರಿಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಕಡ್ಡಾಯಗೊಳಿಸಲಾಗಿದೆ. ಯಾರೂ ಯಾರನ್ನೂ ಬೆಂಬಲಿಸಲು ಸಾಧ್ಯವಿಲ್ಲ. ಪಕ್ಷಪಾತ ಮಾಡುವುದು ಸಾಧ್ಯವಾಗುವುದಿಲ್ಲ ಏಕೆಂದರೆ ಒಬ್ಬ ಅಧಿಕಾರಿ ತನ್ನ ಕರ್ತವ್ಯದಲ್ಲಿ ರಾಜಿ ಮಾಡಿಕೊಂಡರೂ, ವೈಜ್ಞಾನಿಕ ಪುರಾವೆಗಳಿಂದಾಗಿ, ಅವನು ನ್ಯಾಯಾಲಯದ ಮುಂದೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ.ಎಫ್.ಎಸ್.ಎಲ್. ವರದಿ ನೇರವಾಗಿ ನ್ಯಾಯಾಲಯಕ್ಕೆ ಹೋಗುತ್ತದೆ ಮತ್ತು ಅದರ ಪ್ರತಿ ಪೊಲೀಸರಿಂದಲೂ ಬರುತ್ತದೆ ಎಂದವರು ನುಡಿದರು.

ಮೂರು ಹೊಸ ಕಾನೂನುಗಳಲ್ಲಿ ನಾವು ನಾಗರಿಕರ ಹಕ್ಕುಗಳನ್ನು ಸಹ ಭದ್ರಪಡಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪೊಲೀಸ್ ಕಸ್ಟಡಿಯಲ್ಲಿರುವ ಜನರ ಸಂಖ್ಯೆಯನ್ನು ಆನ್ ಲೈನ್ ನಲ್ಲಿ ಘೋಷಿಸಬೇಕಾಗುತ್ತದೆ. 90 ದಿನಗಳ ಒಳಗೆ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಬೇಕು ಮತ್ತು ಶೋಧ ಹಾಗು ವಶಪಡಿಸಿಕೊಳ್ಳುವಿಕೆಯ ವೀಡಿಯೊಗ್ರಫಿ ಮಾಡಬೇಕಾಗುತ್ತದೆ. ರಾಷ್ಟ್ರೀಯ ಸ್ವಯಂಚಾಲಿತ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್ ಸಿಸ್ಟಮ್ (ಎನ್ ಎಎಫ್ ಐಎಸ್)ನಲ್ಲಿರುವ  ಬೆರಳಚ್ಚು (ಫಿಂಗರ್ ಪ್ರಿಂಟ್) ದತ್ತಾಂಶದ ಜೊತೆಗೆ, ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಡೇಟಾವನ್ನು ಪ್ರತ್ಯೇಕವಾಗಿ ರೂಪಿಸಲಾಗುತ್ತದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ಸಹ ಎಲ್ಲಾ ಸಿಸಿಟಿಎನ್ಎಸ್ ಡೇಟಾವನ್ನು ವಿಭಿನ್ನ ರೀತಿಯಲ್ಲಿ ನಿರ್ವಹಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಡೇಟಾ ಬ್ಯಾಂಕ್ ರಚಿಸುವ ಕೆಲಸವನ್ನು ಸಾಕಷ್ಟು ಡೇಟಾದೊಂದಿಗೆ ಮಾಡಲಾಗಿದೆ. ಈಗ ಗೃಹ ಸಚಿವಾಲಯದ ತಂಡವು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಾಫ್ಟ್ ವೇರ್ ನಿರ್ಮಿಸುವ ಮೂಲಕ ನಿಮ್ಮ ಕೆಲಸವನ್ನು ಸರಳೀಕರಿಸುವ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗಿದೆ, ಇದು ವಿಶ್ಲೇಷಣೆಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರದ ಭದ್ರತೆ ಎಂದರೆ ಕೇವಲ ಗಡಿಯ ಭದ್ರತೆ ಮಾತ್ರ ಎಂದರ್ಥವಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ರಾಷ್ಟ್ರವು ಅದರ ಪ್ರಜೆಗಳಿಂದ ರೂಪಿಸಲ್ಪಟ್ಟಿದೆ. ನಾಗರಿಕರ ಭದ್ರತೆಯು ರಾಷ್ಟ್ರದ ಭದ್ರತೆಯ ಆಧಾರವಾಗಿದೆ ಎಂದರು. ತಾವು ಭದ್ರತೆಯ ಬಗ್ಗೆ ಮಾತನಾಡುವಾಗ, ಅದು ಜೀವನ ಮತ್ತು ಆಸ್ತಿಯ ಭದ್ರತೆಗೆ ಸೀಮಿತವಾಗಿಲ್ಲ, ನಮ್ಮ ಸಂವಿಧಾನವು ನಾಗರಿಕರಿಗೆ ನೀಡಿದ ಹಕ್ಕುಗಳ ಭದ್ರತೆಯೂ ಅದರ ಅಡಿಯಲ್ಲಿ ಬರುತ್ತದೆ ಎಂದು ಅವರು ಹೇಳಿದರು. ಸಂವಿಧಾನವು ದೇಶದ ಪ್ರಧಾನ ಮಂತ್ರಿಗಳು ಅನುಭವಿಸುತ್ತಿರುವಂತಹ ಹಕ್ಕುಗಳನ್ನು ಕಡು ಬಡವರಿಗೂ ನೀಡಿ  ಸಮಾನ ಹಕ್ಕುಗಳನ್ನು ನೀಡಿದೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಹೆಚ್ಚಿನ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ ಎಂದವರು ನುಡಿದರು.

75 ವರ್ಷಗಳ ನಂತರ, ನಾವು ನಮ್ಮ ಪ್ರಮುಖ ಕೆಲಸಗಳತ್ತ ಗಮನ ಹರಿಸುವ ಸಮಯ ಬಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರ ವಿರುದ್ಧದ ದೌರ್ಜನ್ಯಗಳನ್ನು ತಡೆಗಟ್ಟುವ ಪ್ರಯತ್ನಗಳನ್ನು ಮಾಡುವ ಸಮಯ ಇದು. ಬಡವರು, ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಅತ್ಯಂತ ಪ್ರಾಮುಖ್ಯತೆಯದ್ದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಸುಧಾರಿಸಲು/ಪರಿಷ್ಕರಿಸಲು ಸಾಧ್ಯವಿಲ್ಲದ ಕೆಲಸ ಯಾವುದೂ ಇಲ್ಲ ಮತ್ತು ಅದೇ ರೀತಿ ಕಡಿಮೆ ಪ್ರಾಮುಖ್ಯತೆಯ ಕೆಲಸ ಎಂಬುದೂ ಇಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರೊಬೇಷನರಿಗಳಿಗೆ ಹೇಳಿದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅವರು ಜೀವನದಲ್ಲಿ ಅನೇಕ ನಿರಾಶೆಗಳಿಂದ ದೂರವಿರುತ್ತಾರೆ. ತಮ್ಮ ಯೌವನದಲ್ಲಿ ಎಸ್ಪಿಯಾಗಿ ನೇಮಕಗೊಂಡ ಯಾವುದೇ ಪೊಲೀಸ್ ಅಧಿಕಾರಿಗೆ ದೊಡ್ಡ ಪದಕವೆಂದರೆ ಅವರ ಉತ್ತಮ ಕೆಲಸಕ್ಕಾಗಿ ಜಿಲ್ಲೆಯ ಜನರು ಅವರನ್ನು ಅನೇಕ ವರ್ಷಗಳವರೆಗೆ ನೆನಪಿಸಿಕೊಳ್ಳುವುದು ಎಂದು ಸಚಿವರು  ಹೇಳಿದರು. ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ತೊಡೆದುಹಾಕಲು ಎಲ್ಲಾ ಯುವ ಅಧಿಕಾರಿಗಳು ನಿರ್ದಯ ವಿಧಾನದಿಂದ ಕೆಲಸ ಮಾಡಬೇಕಾಗುತ್ತದೆ ಎಂದೂ ಶ್ರೀ ಶಾ ಹೇಳಿದರು. ಪೊಲೀಸ್ ಕೆಲಸ ಮಾಡುವಾಗ, ರಾಷ್ಟ್ರದ ಭದ್ರತೆ ಸದಾ ನಮ್ಮ ಮನಸ್ಸಿನಲ್ಲಿರಬೇಕು ಮತ್ತು ರಾಷ್ಟ್ರದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಕಣ್ಣುಗಳು ಯಾವಾಗಲೂ ತೆರೆದಿರಬೇಕು ಎಂದವರು ನುಡಿದರು.

 

*****



(Release ID: 2065184) Visitor Counter : 17