ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಾವೋ ಪಿಡಿಆರ್ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ

Posted On: 11 OCT 2024 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಂಟಿಯಾನ್ ನಲ್ಲಿ ಲಾವೋ ಪಿಡಿಆರ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಸೋನೆಕ್ಸೇ ಸಿಫಾಂಡೋನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. 21ನೇ ಆಸಿಯಾನ್-ಭಾರತ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅವರು ಲಾವೋ ಪ್ರಧಾನಿಯವರನ್ನು ಅಭಿನಂದಿಸಿದರು.

ಇಬ್ಬರೂ ಪ್ರಧಾನಮಂತ್ರಿಗಳು ಭಾರತ-ಲಾವೋಸ್ ನಾಗರಿಕತೆ ಮತ್ತು ಸಮಕಾಲೀನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಫಲಪ್ರದ ಮಾತುಕತೆ ನಡೆಸಿದರು. ಅಭಿವೃದ್ಧಿ ಪಾಲುದಾರಿಕೆ, ಸಾಮರ್ಥ್ಯ ವರ್ಧನೆ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ, ಪಾರಂಪರಿಕ ಪುನಃಸ್ಥಾಪನೆ, ಆರ್ಥಿಕ ಸಂಬಂಧಗಳು, ರಕ್ಷಣಾ ಸಹಯೋಗ ಮತ್ತು ಜನರ ನಡುವಿನ ಸಂಬಂಧಗಳಂತಹ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಬಗ್ಗೆ ಅವರು ಚರ್ಚಿಸಿದರು. ಯಗಿ ಚಂಡಮಾರುತದ ನಂತರ ಲಾವೋ ಪಿಡಿಆರ್ ಗೆ ಭಾರತ ನೀಡಿದ ಪ್ರವಾಹ ಪರಿಹಾರ ನೆರವಿಗಾಗಿ ಪ್ರಧಾನಮಂತ್ರಿ ಸಿಫಾಂಡೋನ್ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ಭಾರತದ ನೆರವಿನಡಿಯಲ್ಲಿ ನಡೆಸುತ್ತಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವ್ಯಾಟ್ ಫೌನ ಪುನಃಸ್ಥಾಪನೆ ಮತ್ತು ಸಂರಕ್ಷಣೆಯು ದ್ವಿಪಕ್ಷೀಯ ಸಂಬಂಧಗಳಿಗೆ ವಿಶೇಷ ಆಯಾಮವನ್ನು ನೀಡುತ್ತದೆ ಎಂಬುದನ್ನು ಉಭಯ ನಾಯಕರು ಗಮನಿಸಿದರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ದೇಶಗಳ ನಡುವಿನ ನಿಕಟ ಸಹಕಾರದ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪಾತ್ರವನ್ನು ಪ್ರಧಾನಮಂತ್ರಿ ಸಿಫಾಂಡನ್ ಪುನರುಚ್ಚರಿಸಿದರು. 2024ಕ್ಕೆ ಆಸಿಯಾನ್ ಅಧ್ಯಕ್ಷತೆಗೆ ಲಾವೋ ಪಿಡಿಆರ್ ಅವರನ್ನು ಭಾರತ ಬಲವಾಗಿ ಬೆಂಬಲಿಸಿದೆ.

ಮಾತುಕತೆಯ ನಂತರ, ರಕ್ಷಣಾ, ಪ್ರಸಾರ, ಕಸ್ಟಮ್ಸ್ ಸಹಕಾರ ಕ್ಷೇತ್ರಗಳು ಮತ್ತು ಮೆಕಾಂಗ್-ಗಂಗಾ ಸಹಕಾರದ ಅಡಿಯಲ್ಲಿ ಮೂರು ತ್ವರಿತ ಪರಿಣಾಮ ಯೋಜನೆಗಳಿಗೆ  (ಕ್ಯೂಐಪಿ) ತಿಳುವಳಿಕಾ ಒಡಂಬಡಿಕೆಗಳು / ಒಪ್ಪಂದಗಳನ್ನು ಉಭಯ ನಾಯಕರ ಸಮ್ಮುಖದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಈ ಕ್ಯೂ.ಐ.ಪಿ.ಗಳು ಲಾವೋ ರಾಮಾಯಣದ ಪರಂಪರೆಯ ಸಂರಕ್ಷಣೆ, ರಾಮಾಯಣಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳೊಂದಿಗೆ ವಾಟ್ ಪಕೇಯಾ ಬೌದ್ಧ ದೇವಾಲಯದ ಪುನಃಸ್ಥಾಪನೆ ಮತ್ತು ಚಂಪಾಸಕ್ ಪ್ರಾಂತ್ಯದಲ್ಲಿ ರಾಮಾಯಣದ ನೆರಳು ಬೊಂಬೆಯಾಟ ರಂಗಭೂಮಿಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದವುಗಳಾಗಿವೆ. ಎಲ್ಲಾ ಮೂರು ಕ್ಯೂಐಪಿಗಳು ತಲಾ 50,000 ಯು ಎಸ್ ಡಿ  ಭಾರತ ಸರ್ಕಾರದ ಅನುದಾನವನ್ನು ಹೊಂದಿವೆ. ಲಾವೋ ಪಿಡಿಆರ್ನಲ್ಲಿ ಪೌಷ್ಠಿಕಾಂಶದ ಭದ್ರತೆಯನ್ನು ಸುಧಾರಿಸಲು ಭಾರತವು ಸುಮಾರು 1 ಮಿಲಿಯನ್ ಡಾಲರ್ ಅನುದಾನ ಸಹಾಯವನ್ನು ನೀಡಲಿದೆ. ಭಾರತ ವಿಶ್ವಸಂಸ್ಥೆಯ ಅಭಿವೃದ್ಧಿ ಪಾಲುದಾರಿಕೆ ನಿಧಿಯ ಮೂಲಕ ಈ ನೆರವು ಲಭಿಸಲಿದ್ದು, ಆಗ್ನೇಯ ಏಷ್ಯಾದಲ್ಲಿ ನಿಧಿಯ ಮೊದಲ ಯೋಜನೆ ಇದಾಗಿದೆ. ತಿಳಿವಳಿಕೆ ಒಡಂಬಡಿಕೆಗಳು, ಒಪ್ಪಂದಗಳು ಮತ್ತು ಪ್ರಕಟಣೆಗಳ ವಿವರಗಳನ್ನು ಇಲ್ಲಿ ನೋಡಬಹುದು.

 

*****


(Release ID: 2064281) Visitor Counter : 36