ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಷ್ಟ್ರಪತಿಗಳಿಂದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ 


ಶ್ರೀ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು

ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ಬದಲಾವಣೆಗಳನ್ನು ತರಲು ಅತ್ಯಂತ ಶಕ್ತಿಶಾಲಿ ಮಾಧ್ಯಮಗಳಾಗಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 08 OCT 2024 7:53PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಅಕ್ಟೋಬರ್ 8, 2024) ನವದೆಹಲಿಯಲ್ಲಿ ವಿವಿಧ ವಿಭಾಗಗಳಲ್ಲಿ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಅವರು ಶ್ರೀ ಮಿಥುನ್ ಚಕ್ರವರ್ತಿ ಅವರಿಗೆ 2022 ರ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮಾತನಾಡಿ, ನಮ್ಮ ಚಲನಚಿತ್ರಗಳು ನಮ್ಮ ಸಮಾಜದ ಕಲಾತ್ಮಕ ಪ್ರಜ್ಞೆಯನ್ನು ಬಿಂಬಿಸುತ್ತವೆ. ಜೀವನ ಬದಲಾಗುತ್ತಿದೆ. ಕಲೆಯ ಮಾನದಂಡಗಳು ಬದಲಾಗುತ್ತಿವೆ. ಹೊಸ ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತಿವೆ. ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಹೊಸ ಅರಿವೂ ಮೂಡುತ್ತಿದೆ. ಈ ಎಲ್ಲಾ ಬದಲಾವಣೆಗಳ ನಡುವೆ, ಪ್ರೀತಿ, ಸಹಾನುಭೂತಿ ಮತ್ತು ಸೇವೆಯ ಬದಲಾಗದ ಮೌಲ್ಯಗಳು ನಮ್ಮ ವೈಯಕ್ತಿಕ ಮತ್ತು ಸಾಮೂಹಿಕ ಜೀವನವನ್ನು ಅರ್ಥಪೂರ್ಣಗೊಳಿಸುತ್ತಲೇ ಇವೆ. ಈ ಎಲ್ಲಾ ಮೌಲ್ಯಗಳನ್ನು ನಾವು ಇಂದು ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ಕಾಣಬಹುದು.

ಭಾರತೀಯ ಚಲನಚಿತ್ರವು ವಿಶ್ವದ ಅತಿದೊಡ್ಡ ಚಲನಚಿತ್ರ ಉದ್ಯಮವಾಗಿದೆ, ಹಲವಾರು ಭಾಷೆಗಳಲ್ಲಿ ಮತ್ತು ದೇಶದ ಎಲ್ಲಾ ಪ್ರದೇಶಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಇದು ಅತ್ಯಂತ ವೈವಿಧ್ಯಮಯ ಕಲಾ ಪ್ರಕಾರವೂ ಆಗಿದೆ. ಎಲ್ಲಾ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಅವರು,  ಚಿತ್ರರಂಗಕ್ಕೆ ಸಂಬಂಧಪಟ್ಟವರನ್ನು  ಶ್ಲಾಘಿಸಿದರು.

ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಶ್ರೀ ಮಿಥುನ್ ಚಕ್ರವರ್ತಿ ಅವರನ್ನು ರಾಷ್ಟ್ರಪತಿಗಳು ಅಭಿನಂದಿಸಿದರು. ಸುಮಾರು ಐದು ದಶಕಗಳ ತಮ್ಮ ಕಲಾ ಪಯಣದಲ್ಲಿ ಮಿಥುನ್ ಜಿ ಅವರು ತೆರೆಯ ಮೇಲೆ ಗಂಭೀರವಾದ ಪಾತ್ರಗಳನ್ನು  ಬಿಂಬಿಸಿರುವುದು ಮಾತ್ರವಲ್ಲದೆ ತಮ್ಮ ವಿಶಿಷ್ಟ ಚೈತನ್ಯದಿಂದ ಅನೇಕ ಸಾಮಾನ್ಯ ಕಥೆಗಳನ್ನು ಕೂಡ ಯಶಸ್ವಿಯಾಗಿ  ಬಿಂಬಿಸಿದ್ದಾರೆ ಎಂದು ಅವರು ಹೇಳಿದರು.
 
ಪ್ರಶಸ್ತಿ ವಿಜೇತ ಚಲನಚಿತ್ರಗಳು ವಿಭಿನ್ನ ಭಾಷೆ ಮತ್ತು ಹಿನ್ನೆಲೆಯನ್ನು ಹೊಂದಿದ್ದರೂ, ಅವೆಲ್ಲವೂ ಭಾರತವನ್ನು ಪ್ರತಿಬಿಂಬಿಸುತ್ತವೆ ಎಂದು ರಾಷ್ಟ್ರಪತಿಗಳು ಹೇಳಿದರು. ಈ ಚಿತ್ರಗಳು ಭಾರತೀಯ ಸಮಾಜದ ಅನುಭವಗಳ ನಿಧಿಯಾಗಿವೆ. ಭಾರತೀಯ ಸಂಪ್ರದಾಯಗಳು ಮತ್ತು ಅವುಗಳ ವೈವಿಧ್ಯತೆ ಈ ಚಿತ್ರಗಳಲ್ಲಿ ಜೀವಂತವಾಗಿದೆ ಎಂದು ಅವರು ಹೇಳಿದರು.

ಸಮಾಜದಲ್ಲಿ ಬದಲಾವಣೆ ತರಲು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅತ್ಯಂತ ಶಕ್ತಿಶಾಲಿ ಮಾಧ್ಯಮಗಳಾಗಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಮಾಧ್ಯಮಗಳು ಇತರ ಯಾವುದೇ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿ. ಇಂದು ವಿತರಿಸಲಾದ 85 ಕ್ಕೂ ಹೆಚ್ಚು ಪ್ರಶಸ್ತಿಗಳಲ್ಲಿ ಕೇವಲ 15 ಪ್ರಶಸ್ತಿಗಳು ಮಹಿಳಾ ಪುರಸ್ಕೃತರದಾಗಿವೆ ಎಂದು ಅವರು  ಹೇಳಿದರು. ಮಹಿಳಾ ನಾಯಕತ್ವದ ಅಭಿವೃದ್ಧಿಗೆ ಚಿತ್ರೋದ್ಯಮ ಹೆಚ್ಚಿನ ಪ್ರಯತ್ನಗಳನ್ನು ಮಾಡಬಹುದು ಎಂದು ಅವರು ಹೇಳಿದರು.

ಅರ್ಥಪೂರ್ಣ ಚಿತ್ರಗಳು ಸಾಮಾನ್ಯವಾಗಿ ಪ್ರೇಕ್ಷಕರನ್ನು ತಲುಪುವುದಿಲ್ಲ ಎಂದು ರಾಷ್ಟ್ರಪತಿಗಳು ಹೇಳಿದರು. ಅರ್ಥಪೂರ್ಣ ಸಿನಿಮಾ ಪ್ರೇಕ್ಷಕರಿಗೆ ತಲುಪುವಂತೆ ಮಾಡಲು ಪ್ರಜ್ಞಾವಂತ ನಾಗರಿಕರು, ಸಾಮಾಜಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಒಟ್ಟಾಗಿ ಪ್ರೇಕ್ಷಕರಿಗೆ ಅರ್ಥಪೂರ್ಣ ಸಿನಿಮಾ ತಲುಪಲು ಶ್ರಮಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಷ್ಟ್ರಪತಿಗಳ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

 

*****


(Release ID: 2063383) Visitor Counter : 44