ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಎಡಪಂಥೀಯ ಉಗ್ರವಾದ (ಎಲ್‌ ಡಬ್ಲ್ಯು ಇ) ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು 2026 ರ ವೇಳೆಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ

ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ನಕ್ಸಲಿಸಂ ದೊಡ್ಡ ಅಡಚಣೆಯಾಗಿದೆ ಮತ್ತು ಒಟ್ಟಾರೆಯಾಗಿ ಮನುಕುಲಕ್ಕೆ ಶತ್ರುವಾಗಿದೆ

ನಕ್ಸಲಿಸಂನಿಂದಾಗಿ, 8 ಕೋಟಿಗೂ ಹೆಚ್ಚು ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ, ಇದು ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆಯಾಗಿದೆ

ಜನವರಿ 2024 ರಿಂದ, ಛತ್ತೀಸಗಢದಲ್ಲಿ ಒಟ್ಟು 237 ನಕ್ಸಲೀಯರನ್ನು ಕೊಲ್ಲಲಾಗಿದೆ, 812 ಬಂಧಿಸಲಾಗಿದೆ ಮತ್ತು 723 ಮಂದಿ ಶರಣಾಗಿದ್ದಾರೆ

ಎಡಪಂಥೀಯ ಉಗ್ರವಾದಕ್ಕೆ ಶೂನ್ಯ-ಸಹಿಷ್ಣು ವಿಧಾನ ಮತ್ತು ಸರ್ಕಾರದ ಯೋಜನೆಗಳ ಸಂಪೂರ್ಣ ಅನುಷ್ಠಾನವು ನಕ್ಸಲ್ ಪೀಡಿತ ಪ್ರದೇಶಗಳನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ಪ್ರದೇಶಗಳಾಗಿ ಪರಿವರ್ತಿಸುತ್ತದೆ

ಮೋದಿ ಸರ್ಕಾರವು 3-ಸಿ ಅಂದರೆ ರಸ್ತೆ ಸಂಪರ್ಕ, ಮೊಬೈಲ್ ಸಂಪರ್ಕ ಮತ್ತು ಆರ್ಥಿಕ ಸಂಪರ್ಕವನ್ನು ಬಲಪಡಿಸುತ್ತಿದೆ

ಮೋದಿ ಸರ್ಕಾರದ ಅವಧಿಯಲ್ಲಿ, ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಭದ್ರತಾ ವೆಚ್ಚವು ಸುಮಾರು ಮೂರು ಪಟ್ಟು ಹೆಚ್ಚಾಗಿದ್ದು, 3,006 ಕೋಟಿ ರೂ.ಗೆ ತಲುಪಿದೆ

2004 ರಿಂದ 2014 ರವರೆಗೆ ಕೇವಲ 66 ಭದ್ರತಾ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿತ್ತು, ಆದರೆ ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಅಂತಹ 544 ಠಾಣೆಗಳನ್ನು ನಿರ್ಮಿಸಿದೆ

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹಿಂಸಾತ್ಮಕ ಘಟನೆಗಳು 2004 ಮತ್ತು 2014 ರ ನಡುವಿನ 16,463 ಪ್ರಕರಣಗಳಿಂದ ಕಳೆದ 10 ವರ್ಷಗಳಲ್ಲಿ 7,700 ಕ್ಕೆ ಇಳಿದಿವೆ, ಅಂದರೆ ಶೇ.53 ರಷ್ಟು ಕಡಿಮೆಯಾಗಿದೆ

ಎಲ್ಲಾ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳು ತಿಂಗಳಿಗೊಮ್ಮೆ ಮತ್ತು ಪೊಲೀಸ್ ಮಹಾನಿರ್ದೇಶಕರು ಕನಿಷ್ಠ 15 ದಿನಗಳಿಗೊಮ್ಮೆ ಅಭಿವೃದ್ಧಿ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಪರಿಶೀಲಿಸಬೇಕು

Posted On: 07 OCT 2024 6:24PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಎಡಪಂಥೀಯ ಉಗ್ರವಾದ (ಎಲ್‌ ಡಬ್ಲ್ಯು ಇ) ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಛತ್ತೀಸಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು, ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಆಂಧ್ರಪ್ರದೇಶದ ಗೃಹ ಸಚಿವರು ಭಾಗವಹಿಸಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ರಾಜ್ಯಗಳೊಂದಿಗೆ ಸಹಕರಿಸುತ್ತಿರುವ ವಿವಿಧ ಸಚಿವಾಲಯಗಳ ಕೇಂದ್ರ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತದಳದ ನಿರ್ದೇಶಕರು, ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ನಕ್ಸಲ್ ಪೀಡಿತ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಡಪಂಥೀಯ ಉಗ್ರವಾದದಿಂದ ಪೀಡಿತವಾಗಿರುವ ಎಲ್ಲಾ ರಾಜ್ಯಗಳು ಮಾರ್ಚ್ 2026 ರ ವೇಳೆಗೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕಲು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಬದ್ಧವಾಗಿವೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದು, ಇದರಲ್ಲಿ ನಮ್ಮ 8 ಕೋಟಿ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ನಿಜವಾದ ಅರ್ಥವೆಂದರೆ ಅಭಿವೃದ್ಧಿಯು ದೇಶದ 140 ಕೋಟಿ ಜನರನ್ನು ತಲುಪಬೇಕು, ಇದರಲ್ಲಿ ನಮ್ಮ 8 ಕೋಟಿ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಸೇರಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇಂದು ದೂರದ ಪ್ರದೇಶಗಳು ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ನಕ್ಸಲಿಸಂ ದೊಡ್ಡ ಅಡ್ಡಿಯಾಗಿದೆ ಎಂದು ಹೇಳಿದರು. ನಕ್ಸಲಿಸಂ ಶಿಕ್ಷಣ, ಆರೋಗ್ಯ, ಸಂಪರ್ಕ, ಬ್ಯಾಂಕಿಂಗ್ ಮತ್ತು ಅಂಚೆ ಸೇವೆಗಳು ಹಳ್ಳಿಗಳನ್ನು ತಲುಪದಂತೆ ತಡೆಯುತ್ತದೆ ಎಂದು ಅವರು ಹೇಳಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕಾದರೆ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂದು ಶ್ರೀ ಶಾ ಒತ್ತಿ ಹೇಳಿದರು.

2019 ರಿಂದ 2024 ರವರೆಗೆ ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಮಹತ್ತರವಾದ ಯಶಸ್ಸು ಸಾಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಪ್ರಯತ್ನದಿಂದ ಎಡಪಂಥೀಯ ಉಗ್ರವಾದ ಸೃಷ್ಟಿಸಿರುವ ಅಂಧಕಾರವನ್ನು ಸಾಂವಿಧಾನಿಕ ಹಕ್ಕುಗಳೊಂದಿಗೆ ಬದಲಾಯಿಸುವುದು ಮತ್ತು ಎಡಪಂಥೀಯ ಹಿಂಸಾತ್ಮಕ ಸಿದ್ಧಾಂತದ ಬದಲಿಗೆ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗಕ್ಕೆ ನಾಂದಿ ಹಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು. ಎಡಪಂಥೀಯ ಉಗ್ರವಾದದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿ ಮತ್ತು ಸರ್ಕಾರದ ಯೋಜನೆಗಳ 100 ಪ್ರತಿಶತ ಅನುಷ್ಠಾನದೊಂದಿಗೆ, ನಕ್ಸಲ್ ಪೀಡಿತ ಪ್ರದೇಶಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ ಎಂದು ಶ್ರೀ ಶಾ ಒತ್ತಿ ಹೇಳಿದರು.‌

ಎಡಪಂಥೀಯ ಉಗ್ರವಾದದ ವಿರುದ್ಧ ಹೋರಾಡಲು ಸರ್ಕಾರ ಎರಡು ನಿಯಮಗಳನ್ನು ರೂಪಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೊದಲನೆಯದಾಗಿ, ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿ ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸುವುದು ಮತ್ತು ಅಕ್ರಮ ಹಿಂಸಾತ್ಮಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಎರಡನೆಯದಾಗಿ, ದೀರ್ಘಕಾಲದವರೆಗೆ ನಕ್ಸಲಿಸಂನಿಂದಾಗಿ ಅಭಿವೃದ್ಧಿಯಿಂದ ವಂಚಿತವಾಗಿರುವ ಪ್ರದೇಶಗಳಲ್ಲಿನ ನಷ್ಟವನ್ನು ತ್ವರಿತವಾಗಿ ಸರಿದೂಗಿಸುವುದು ಎಂದು ಅವರು ಹೇಳಿದರು.

30 ವರ್ಷಗಳಲ್ಲಿ ಮೊದಲ ಬಾರಿಗೆ ಎಡಪಂಥೀಯ ಉಗ್ರವಾದದಿಂದ (ಎಲ್‌ ಡಬ್ಲ್ಯೂ ಇ) ಬಲಿಯಾದವರ ಸಂಖ್ಯೆ 2022 ರಲ್ಲಿ 100 ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು, ಇದು ಗಮನಾರ್ಹ ಸಾಧನೆಯಾಗಿದೆ. 2014ರಿಂದ 2024ರವರೆಗೆ ನಕ್ಸಲೀಯರ ಘಟನೆಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಿದರು. 14 ಉನ್ನತ ನಕ್ಸಲ್ ನಾಯಕರನ್ನು ಹತ್ಯೆ ಮಾಡಲಾಗಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಉತ್ತಮವಾಗಿ ಜಾರಿಗೊಳಿಸಲಾಗಿದೆ ಎಂದರು. ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟ ಅಂತಿಮ ಹಂತದಲ್ಲಿದ್ದು, ಮಾರ್ಚ್ 2026ರ ವೇಳೆಗೆ ಎಲ್ಲರ ಸಹಕಾರದೊಂದಿಗೆ ದೇಶವು ದಶಕಗಳ ಹಿಂದಿನ ಅನಿಷ್ಟದಿಂದ ಸಂಪೂರ್ಣ ಮುಕ್ತವಾಗಲಿದೆ ಎಂದು ಶ್ರೀ ಶಾ ಹೇಳಿದರು. ಬುಧಾ ಪಹಾಡ್ ಮತ್ತು ಚಕರಬಂಧದಂತಹ ಪ್ರದೇಶಗಳು ನಕ್ಸಲಿಸಂನ ಹಿಡಿತದಿಂದ ಸಂಪೂರ್ಣವಾಗಿ ಮುಕ್ತವಾಗಿವೆ ಎಂದು ಅವರು ಹೇಳಿದರು. ಛತ್ತೀಸಗಢದಲ್ಲಿ ಶೇಕಡಾ 85 ರಷ್ಟು ಎಡಪಂಥೀಯ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಲಾಗಿದ್ದು, ಈಗ ನಕ್ಸಲಿಸಂ ವಿರುದ್ಧ ಅಂತಿಮ ದಾಳಿಯ ಅಗತ್ಯವಿದೆ ಎಂದು ಅವರು ಹೇಳಿದರು.

2019 ರಿಂದ, ಮೋದಿ ಸರ್ಕಾರವು ಬಹುಮುಖ ಕಾರ್ಯತಂತ್ರವನ್ನು ಜಾರಿಗೆ ತಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಅದರ ಅಡಿಯಲ್ಲಿ ಸಿಎಪಿಎಫ್‌ ಗಳನ್ನು ನಿಯೋಜಿಸಲು ಭದ್ರತೆಯಿಲ್ಲದ ಸ್ಥಳಗಳನ್ನು ಗುರುತಿಸಲಾಗಿದೆ. ಪರಿಣಾಮವಾಗಿ, ಕೇವಲ ಒಂದು ವರ್ಷದಲ್ಲಿ 194 ಕ್ಕೂ ಹೆಚ್ಚು ಶಿಬಿರಗಳನ್ನು ಸ್ಥಾಪಿಸಲಾಯಿತು, ಇದು ಗಮನಾರ್ಹ ಯಶಸ್ಸಿಗೆ ಕಾರಣವಾಯಿತು. 45 ಪೊಲೀಸ್ ಠಾಣೆಗಳ ಮೂಲಕ ಭದ್ರತೆಯಿಲ್ಲದ ಸ್ಥಳಗಳನ್ನು ತುಂಬುವುದು, ರಾಜ್ಯ ಗುಪ್ತಚರ ಶಾಖೆಗಳನ್ನು ಬಲಪಡಿಸುವುದು ಮತ್ತು ರಾಜ್ಯ ವಿಶೇಷ ಪಡೆಗಳ ಅತ್ಯುತ್ತಮ ಕಾರ್ಯಕ್ಷಮತೆಯು ಕಾರ್ಯತಂತ್ರದ ಯಶಸ್ಸಿಗೆ ಕೊಡುಗೆ ನೀಡಿದೆ ಎಂದು ಶ್ರೀ ಶಾ ಹೇಳಿದರು. ಹೆಲಿಕಾಪ್ಟರ್‌ ಗಳನ್ನು ಒದಗಿಸುವುದರಿಂದ ನಮ್ಮ ಸೈನಿಕರಲ್ಲಿ ಸಾವುನೋವುಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಮೊದಲು ಎರಡು ಹೆಲಿಕಾಪ್ಟರ್‌ ಗಳನ್ನು ಪಡೆಗಳ ಸೇವೆಗೆ ನಿಯೋಜಿಸಲಾಗಿತ್ತು, ಆದರೆ ಇಂದು 12 ಹೆಲಿಕಾಪ್ಟರ್‌ ಗಳು, ಬಿ ಎಸ್‌ ಎಫ್‌ ನಿಂದ 6 ಮತ್ತು ವಾಯುಪಡೆಯಿಂದ 6 ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ನಕ್ಸಲಿಸಂ ಅನ್ನು ಎದುರಿಸುವಲ್ಲಿ ಛತ್ತೀಸಗಢ ಸರ್ಕಾರದ ಯಶಸ್ಸನ್ನು ಕೇಂದ್ರ ಗೃಹ ಸಚಿವರು ಶ್ಲಾಘಿಸಿದರು. 2024ರ ಜನವರಿಯಿಂದ ಛತ್ತೀಸಗಢದಲ್ಲಿ ಒಟ್ಟು 237 ನಕ್ಸಲೀಯರನ್ನು ಹತ್ಯೆ ಮಾಡಲಾಗಿದ್ದು, 812 ಮಂದಿಯನ್ನು ಬಂಧಿಸಲಾಗಿದೆ ಮತ್ತು 723 ಮಂದಿ ಶರಣಾಗಿದ್ದಾರೆ ಎಂದು ಅವರು ಹೇಳಿದರು. ನಕ್ಸಲಿಸಂನಲ್ಲಿ ತೊಡಗಿರುವ ಯುವಕರು ಹಿಂಸಾಚಾರದ ಹಾದಿ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಸೇರಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಗೃಹ ಸಚಿವರು ಮನವಿ ಮಾಡಿದರು. ಈಶಾನ್ಯ, ಕಾಶ್ಮೀರ ಮತ್ತು ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಿಂದ 13,000 ಕ್ಕೂ ಹೆಚ್ಚು ಜನರು ಹಿಂಸಾಚಾರದ ಹಾದಿಯನ್ನು ತೊರೆದು ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಅವರು ಹೇಳಿದರು. ನಕ್ಸಲಿಸಂನಲ್ಲಿ ತೊಡಗಿರುವ ಯುವಕರಿಗೆ ಎಲ್ಲಾ ರಾಜ್ಯಗಳು ಪ್ರಯೋಜನಕಾರಿ ಪುನರ್ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಿವೆ ಎಂದು ಶ್ರೀ ಶಾ ಕೇಳಿದರು. ನಕ್ಸಲಿಸಂನಿಂದ ಯಾರಿಗೂ ಲಾಭವಿಲ್ಲ ಎಂಬುದು ಈಗ ಸಂಪೂರ್ಣವಾಗಿ ಸಾಬೀತಾಗಿದೆ ಎಂದು ಅವರು ಒತ್ತಿ ಹೇಳಿದರು.

2004 ರಿಂದ 2014 ರವರೆಗೆ ಭದ್ರತಾ ಸಂಬಂಧಿತ ವೆಚ್ಚ ಯೋಜನೆಯಡಿ 1,180 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಮೋದಿ ಸರ್ಕಾರವು 2014 ರಿಂದ 2024 ರ ನಡುವೆ ಸುಮಾರು ಮೂರು ಪಟ್ಟು ಹೆಚ್ಚಳದೊಂದಿಗೆ 3,006 ಕೋಟಿ ರೂ. ವೆಚ್ಚ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಎಡಪಂಥೀಯ ಉಗ್ರವಾದದ ನಿರ್ವಹಣೆಗಾಗಿ ಕೇಂದ್ರೀಯ ಸಂಸ್ಥೆಗಳಿಗೆ ನೆರವು ಯೋಜನೆಯಡಿ 1,055 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. ವಿಶೇಷ ಕೇಂದ್ರ ನೆರವು ಹೊಸ ಯೋಜನೆಯಲ್ಲಿ, ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ 3,590 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಶ್ರೀ ಶಾ ಹೇಳಿದರು. ಈವರೆಗೆ ಒಟ್ಟು 14,367 ಕೋಟಿ ರೂ. ಮಂಜೂರಾಗಿದ್ದು, 12 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದರು.

2004 ರಿಂದ 2014 ರ ನಡುವೆ 66 ಭದ್ರತಾ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿತ್ತು, 2014 ರಿಂದ 2024 ರ ನಡುವೆ 544 ಭದ್ರತಾ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2004 ರಿಂದ 2014 ರವರೆಗೆ 10 ವರ್ಷಗಳಲ್ಲಿ ಮೊಬೈಲ್ ಸಂಪರ್ಕಕ್ಕಾಗಿ ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ. ಆದರೆ 2014 ರಿಂದ 2024 ರ ಅವಧಿಯಲ್ಲಿ 6,000 ಟವರ್‌ ಗಳನ್ನು ಸ್ಥಾಪಿಸಲಾಗಿದೆ ಮತ್ತು 3,551 ಟವರ್‌ ಗಳನ್ನು 4G ಗೆ ಪರಿವರ್ತಿಸುವ ಕಾರ್ಯವೂ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. 2014 ಕ್ಕೂ ಮೊದಲು, ಕೇವಲ 38 ಏಕಲವ್ಯ ಮಾದರಿ ವಸತಿ ಶಾಲೆಗಳು ಅನುಮೋದಿಸಲ್ಪಟ್ಟವು, ಈಗ ಕಳೆದ 10 ವರ್ಷಗಳಲ್ಲಿ, 216 ಶಾಲೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ 165 ಏಕಲವ್ಯ ಮಾದರಿ ವಸತಿ ಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಎಲ್ಲಾ ಪ್ರಯತ್ನಗಳು ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಎಷ್ಟು ತೀವ್ರವಾಗಿ ಕೆಲಸ ಮಾಡಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಗೃಹ ಸಚಿವರು ಹೇಳಿದರು.

2004 ಮತ್ತು 2014ರ ನಡುವಿನ 10 ವರ್ಷಗಳಲ್ಲಿ 16,463 ಹಿಂಸಾಚಾರಗಳು ನಡೆದಿದ್ದು, ಈಗ ಅದು 7,700 ಕ್ಕೆ ಇಳಿದಿವೆ, ಸುಮಾರು ಶೇ.53 ರಷ್ಟು ಕಡಿಮೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಂತೆಯೇ, ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವುಗಳು ಶೇ.70 ರಷ್ಟು ಕಡಿಮೆಯಾಗಿದೆ, 96 ಜಿಲ್ಲೆಗಳಲ್ಲಿ ಹಿಂಸಾಚಾರವು ಈಗ 16 ಕ್ಕೆ ಇಳಿದಿದ್ದು, ಶೇ.57 ಕ್ಕೆ ಇಳಿಕೆಯಾಗಿದೆ. ಪೊಲೀಸ್ ಠಾಣೆಗಳ ಹಿಂಸಾಚಾರವನ್ನು ವರದಿ ಸಂಖ್ಯೆಯು 465 ರಿಂದ 171 ಕ್ಕೆ ಕಡಿಮೆಯಾಗಿದೆ. ಈ ಯಶಸ್ಸು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಜಂಟಿ ಪ್ರಯತ್ನದ ಫಲವಾಗಿದೆ. ಇನ್ನಷ್ಟು ದೃಢ ಸಂಕಲ್ಪ ಹಾಗೂ ಉತ್ಸಾಹದಿಂದ ಮುನ್ನಡೆಯಬೇಕು ಎಂದು ಅವರು ಹೇಳಿದರು.

ನಕ್ಸಲಿಸಂ ವಿರುದ್ಧ ಛತ್ತೀಸಗಢದಲ್ಲಿ ಸಾಧಿಸಿದ ಯಶಸ್ಸು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದದಿಂದ ಪೀಡಿತವಾಗಿರುವ ಎಲ್ಲಾ ಜಿಲ್ಲೆಗಳಲ್ಲಿ ಛತ್ತೀಸಗಢ ಸರ್ಕಾರವು ಅಭಿವೃದ್ಧಿಯ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ವೈಯಕ್ತಿಕ ಮತ್ತು ಕುಟುಂಬ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು 300 ಯೋಜನೆಗಳಿಗೆ ಶೇ.100 ರಷ್ಟು ಸಂಪೂರ್ಣತೆಯ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಗಳಿಂದಾಗಿ ಕಡಿಮೆ ದರದಲ್ಲಿ ಧಾನ್ಯಗಳು ಮತ್ತು ಔಷಧಗಳು, ಶಾಲೆಗಳು, ಸಾರ್ವಜನಿಕ ಆರೋಗ್ಯ ಕೇಂದ್ರಗಳು ಇತ್ಯಾದಿಗಳು ಈಗ ಹಳ್ಳಿಗಳನ್ನು ತಲುಪಿವೆ ಎಂದು ಅವರು ಹೇಳಿದರು.

ಭದ್ರತಾ ನಿರ್ವಾತವನ್ನು ತುಂಬಲು 2019 ರಿಂದ 280 ಹೊಸ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 15 ಹೊಸ ಜಂಟಿ ಕಾರ್ಯಪಡೆಗಳನ್ನು ರಚಿಸಲಾಗಿದೆ ಮತ್ತು ವಿವಿಧ ರಾಜ್ಯಗಳಲ್ಲಿ ರಾಜ್ಯ ಪೊಲೀಸರಿಗೆ ಸಹಾಯ ಮಾಡಲು ಆರು ಸಿ ಆರ್‌ ಪಿ ಎಫ್ ಬೆಟಾಲಿಯನ್‌ ಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ನಕ್ಸಲೀಯರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಯಲು ಎನ್‌ ಐ ಎ ಯನ್ನು ಸಕ್ರಿಯಗೊಳಿಸುವ ಮೂಲಕ ಆಕ್ರಮಣಕಾರಿ ತಂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ನಕ್ಸಲೀಯರನ್ನು ಸುತ್ತುವರೆದಿರುವುದನ್ನು ಖಚಿತಪಡಿಸಿಕೊಳ್ಳಲು, ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲದಂತೆ ಅನೇಕ ದೀರ್ಘಾವಧಿಯ ಕಾರ್ಯಾಚರಣೆಗಳನ್ನು ನಡೆಸಲಾಯಿತು ಎಂದು ಗೃಹ ಸಚಿವರು ಹೇಳಿದರು.

ಪ್ರಮುಖ ಯೋಜನೆಗಳ ಹೊರತಾಗಿ, ಮೋದಿ ಸರ್ಕಾರವು ರಸ್ತೆ ಸಂಪರ್ಕ, ದೂರಸಂಪರ್ಕ ಸುಧಾರಣೆ, ಹಣಕಾಸು ಸೇರ್ಪಡೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶದಂತಹ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಿಗೆ ಗಮನಾರ್ಹ ಒತ್ತು ನೀಡಿದ್ದು, ಇದು ಧನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನೆಲದಿಂದ ‘ಧರ್ತಿ ಆಬ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ’ವನ್ನು ಪ್ರಾರಂಭಿಸಿದರು ಎಂದು ಅವರು ಉಲ್ಲೇಖಿಸಿದರು. ಈ ಅಭಿಯಾನವು 15,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈಯಕ್ತಿಕ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣತೆಯನ್ನು ಸಾಧಿಸಲು ಒಂದು ಮೈಲಿಗಲ್ಲು‌. ಇದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುಮಾರು 1.5 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು 3-ಸಿ ಅಂದರೆ ರಸ್ತೆ ಸಂಪರ್ಕ, ಮೊಬೈಲ್ ಸಂಪರ್ಕ ಮತ್ತು ಆರ್ಥಿಕ ಸಂಪರ್ಕವನ್ನು ಬಲಪಡಿಸುತ್ತಿದೆ ಎಂದು ಶ್ರೀ ಶಾ ಒತ್ತಿ ಹೇಳಿದರು.

ನಕ್ಸಲಿಸಂ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ದೊಡ್ಡ ಅಡಚಣೆ ಮಾತ್ರವಲ್ಲ, ಮಾನವೀಯತೆಯ ಶತ್ರು ಮತ್ತು ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 8 ಕೋಟಿ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ಮಾನವ ಹಕ್ಕುಗಳ ದೊಡ್ಡ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು. ನಕ್ಸಲೀಯರು ಹಾಕಿದ ನೆಲಬಾಂಬ್‌ ಗಳಿಂದ ಸಾವಿರಾರು ಮುಗ್ಧ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಕೊಲ್ಲಲ್ಪಟ್ಟಿದ್ದಾರೆ ಮತ್ತು ನಕ್ಸಲಿಸಂನಿಂದಾಗಿ ಈ ಪ್ರದೇಶಗಳಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಶ್ರೀ ಶಾ ತಿಳಿಸಿದರು.

ನಕ್ಸಲಿಸಂ ಅನ್ನು ಸಂಪೂರ್ಣವಾಗಿ ಕೊನೆಗೊಳಿಸಲು, ಈ ಪಿಡುಗನ್ನು ಶಾಶ್ವತವಾಗಿ ಕೊನೆಗೊಳಿಸಲು ಅಂತಿಮ ಪ್ರಯತ್ನ ಮಾಡುವುದು ಅವಶ್ಯಕ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಲ್ಲಾ ಸಂತ್ರಸ್ತ ರಾಜ್ಯಗಳ ಮುಖ್ಯಮಂತ್ರಿಗಳು ತಿಂಗಳಿಗೊಮ್ಮೆಯಾದರೂ ಅಭಿವೃದ್ಧಿ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು ಮತ್ತು ಪೊಲೀಸ್ ಮಹಾನಿರ್ದೇಶಕರು ಕನಿಷ್ಠ 15 ದಿನಗಳಿಗೊಮ್ಮೆ ಅಂತಹ ಪರಿಶೀಲನೆಯನ್ನು ನಡೆಸುವಂತೆ ವಿನಂತಿಸಿದರು.

ನಕ್ಸಲಿಸಂ ಸಂಪೂರ್ಣ ನಿರ್ಮೂಲನೆಗೆ ನಾವು ಶ್ರಮಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಏಪ್ರಿಲ್ 2026 ರ ವೇಳೆಗೆ, ಜನರ ಸಾಮೂಹಿಕ ಶಕ್ತಿಯ ಮೂಲಕ, ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡುವ ಮೂಲಕ ನಕ್ಸಲ್ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ ಎಂದು ಘೋಷಿಸಲು ಸಾಧ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಒಮ್ಮೆ ಇದನ್ನು ಸಾಧಿಸಿದರೆ ಅಭಿವೃದ್ಧಿಗೆ ಯಾವುದೇ ಅಡ್ಡಿಯಾಗುವುದಿಲ್ಲ, ಮಾನವ ಹಕ್ಕು ಉಲ್ಲಂಘನೆಯಾಗುವುದಿಲ್ಲ ಮತ್ತು ಸಿದ್ಧಾಂತದ ಹೆಸರಿನಲ್ಲಿ ಹಿಂಸಾಚಾರ ನಡೆಯುವುದಿಲ್ಲ ಎಂದು ಅವರು ಹೇಳಿದರು.

 

*****


(Release ID: 2063009) Visitor Counter : 29