ಸಹಕಾರ ಸಚಿವಾಲಯ
azadi ka amrit mahotsav

ಅಹಮದಾಬಾದ್ ಜಿಲ್ಲಾ ಸಹಕಾರಿ (ಎಡಿಸಿ) ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ  ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಸಹಕಾರ ಸಚಿವಾಲಯವು ಸಹಕಾರಿ ಸಂಘಗಳ ಕಾರ್ಯವೈಖರಿಯಲ್ಲಿನ ಅಡೆತಡೆಗಳನ್ನು ನಿವಾರಿಸುವ ಮೂಲಕ ಅವುಗಳನ್ನು ಮುನ್ನಡೆಸುತ್ತಿದೆ

ಎಡಿಸಿ ಬ್ಯಾಂಕ್ ನ ಶೂನ್ಯ ಎನ್ ಪಿ ಎ ಅದರ ಪಾರದರ್ಶಕತೆಗೆ ಪುರಾವೆಯಾಗಿದೆ

ಎಡಿಸಿ ಬ್ಯಾಂಕ್ ನಿಜವಾಗಿಯೂ 'ಸಣ್ಣ ಜನರಿಗೆ ದೊಡ್ಡ ಬ್ಯಾಂಕ್' ಎಂಬ ಮಂತ್ರಕ್ಕೆ ಬದ್ಧವಾಗಿದೆ

ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಭಾರತದಲ್ಲಿ ಅತಿ ಹೆಚ್ಚು ಲಾಭ ಗಳಿಸುವ ಜಿಲ್ಲಾ ಸಹಕಾರಿ ಬ್ಯಾಂಕ್ ಆಗಿದೆ

ಎಲ್ಲಾ ಸಹಕಾರಿ ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಸಹಕಾರಿ ಬ್ಯಾಂಕ್ ಗಳಲ್ಲಿ ತೆರೆಯಬೇಕು

ಸಹಕಾರವು ಪ್ರತಿಯೊಬ್ಬರ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ಆರ್ಥಿಕ ಮಾದರಿಯಾಗಿದೆ

ಸೀಮಿತ ಬಂಡವಾಳ ಹೊಂದಿರುವ ಅನೇಕ ವ್ಯಕ್ತಿಗಳನ್ನು ಒಟ್ಟುಗೂಡಿಸಿ ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ಸೃಷ್ಟಿಸುವುದು, ಅವರಿಗೆ ಕೆಲಸ ಮಾಡಲು ವೇದಿಕೆಯನ್ನು ಒದಗಿಸುವುದು, ಅವರ ಸಮೃದ್ಧಿಯನ್ನು ಖಾತ್ರಿಪಡಿಸುವುದು ಮತ್ತು ಗೌರವಯುತ ಜೀವನಕ್ಕಾಗಿ ವ್ಯವಸ್ಥೆ ಮಾಡುವುದು - ಅದು ಸಹಕಾರ

Posted On: 04 OCT 2024 6:41PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಅಹಮದಾಬಾದ್ ಜಿಲ್ಲಾ ಸಹಕಾರಿ (ಎಡಿಸಿ) ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ (ಸ್ವರ್ಣಿಮ್ ಶತಾಬ್ದಿ ಮಹೋತ್ಸವ) ಮುಖ್ಯ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು. ಈ ಸಂದರ್ಭದಲ್ಲಿ, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಸಹಕಾರ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಒಂದು ಸಂಸ್ಥೆಯು ಅನೇಕ ಏರಿಳಿತಗಳ ಹೊರತಾಗಿಯೂ ಪ್ರಾಮಾಣಿಕತೆಯಿಂದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಅದು ಕೇವಲ ಸಂಸ್ಥೆಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಸಂಸ್ಥೆಯು ಸಹಕಾರಿ ಸಂಸ್ಥೆಯಾದಾಗ, ಅದರ ಹಿತಾಸಕ್ತಿಗಾಗಿ ಮಾತ್ರವಲ್ಲದೆ, ಸಮಾಜದ ಸಣ್ಣ ವರ್ಗಗಳನ್ನು ಒಗ್ಗೂಡಿಸುವ ಮೂಲಕ ಸಾಮೂಹಿಕ ಪ್ರಗತಿಗಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿರುವಾಗ ಇದು ಇನ್ನಷ್ಟು ಮಹತ್ವದ್ದಾಗುತ್ತದೆ ಎಂದು ಅವರು ಹೇಳಿದರು.

1925 ರಲ್ಲಿ ಸ್ಥಾಪನೆಯಾದ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ 100 ವರ್ಷಗಳ ಪ್ರಯಾಣವು ಅಹಮದಾಬಾದ್ ಜಿಲ್ಲೆಯ ರೈತರ ಸಮೃದ್ಧಿಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ದಸ್ಕ್ರೋಯಿಯಲ್ಲಿ ಒಂದು ಸಣ್ಣ ಸಂಸ್ಥೆಯಾಗಿ ಪ್ರಾರಂಭವಾದ ಈ ಬ್ಯಾಂಕ್  ಇಂದು 100 ಕೋಟಿ ರೂಪಾಯಿ ಲಾಭದೊಂದಿಗೆ ದೇಶದ ಅತ್ಯಂತ ಬಲಿಷ್ಠ ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿ ಬೆಳೆದಿದೆ ಎಂದು ಅವರು ಹೇಳಿದರು. ಬಹುತೇಕ ಶೂನ್ಯ ಅನುತ್ಪಾದಕ ಆಸ್ತಿಗಳೊಂದಿಗೆ (NPA) 100 ಕೋಟಿ ರೂಪಾಯಿ ಲಾಭ ಮತ್ತು ಸುಮಾರು 6,500 ಕೋಟಿ ರೂಪಾಯಿ ಠೇವಣಿ ಇಟ್ಟಿದ್ದು, ಈ ಚಿಕ್ಕ ಬೀಜವು ಇಷ್ಟೊಂದು ಬೃಹತ್ ಮರವಾಗಿ ಬೆಳೆದು ಅನೇಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅದರ ಪ್ರಾರಂಭದಲ್ಲಿ ಯಾರೂ ಊಹಿಸಿರಲಿಲ್ಲ ಎಂದು ಶ್ರೀ ಷಾ ಹೇಳಿದರು

ಕಳೆದ ನೂರು ವರ್ಷಗಳಲ್ಲಿ ಎಡಿಸಿ ಬ್ಯಾಂಕ್ ಅನೇಕ ಸಮಾಜಗಳು, ರೈತರು ಮತ್ತು ಜಾನುವಾರು ಮಾಲೀಕರ ಜೀವನವನ್ನು ಬೆಳಗಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ವಿವಿಧ ರೀತಿಯ ಕೃಷಿ ನೆರವು ಸುಲಭವಾಗಿ ಲಭ್ಯವಿದ್ದರೂ, ಎಡಿಸಿ ಬ್ಯಾಂಕ್ ಸ್ಥಾಪನೆಯ ಸಮಯದಲ್ಲಿ ರೈತರಿಗೆ ಅಂತಹ ಯಾವುದೇ ಬೆಂಬಲ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದರು. ಆ ಸಮಯದಲ್ಲಿ ರೈತರಿಗೆ ಸಾಲಕ್ಕಾಗಿ ತಮ್ಮ ಭೂಮಿಯನ್ನು ಲೇವಾದೇವಿಗಾರರಿಗೆ ಅಡಮಾನವಿಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಬರಗಾಲ ಉಂಟಾದರೆ ಮತ್ತು ರೈತರು ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಅವರು  ತಮ್ಮ ಭೂಮಿಯನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗುತ್ತಿದ್ದರು. ಮಹಾತ್ಮ ಗಾಂಧಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗುಜರಾತಿನಲ್ಲಿ ಸಹಕಾರಿ ಚಳವಳಿಯನ್ನು ಪ್ರಾರಂಭಿಸುವ ಅಗತ್ಯವನ್ನು ಸೂಚಿಸಿದರು. ಅದರ ನಂತರ ತ್ರಿಭುವದಾಸ್ ಪಟೇಲ್ ಮತ್ತು ಸರ್ದಾರ್ ಪಟೇಲ್ ಅವರಂತಹ ಅನೇಕ ಪ್ರವರ್ತಕರು ಸಹಕಾರಿ ಚಳವಳಿಯನ್ನು ಪ್ರಾರಂಭಿಸಿದರು ಎಂದು ಶ್ರೀ ಶಾ ವಿವರಿಸಿದರು. ಭಾರತದಲ್ಲಿ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಸಹಕಾರಿ ವಲಯವು ಮುಂಬರುವ ಶತಮಾನದಲ್ಲಿ ಗಮನಾರ್ಹ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವದಾದ್ಯಂತ 20-30 ದಶಲಕ್ಷ ಜನಸಂಖ್ಯೆ ಹೊಂದಿರುವ ಚಿಕ್ಕ ದೇಶಗಳಲ್ಲಿ ಅನೇಕ ಯಶಸ್ವಿ ಆರ್ಥಿಕ ಮಾದರಿಗಳು ಅಸ್ತಿತ್ವದಲ್ಲಿದ್ದರೂ, 130 ಕೋಟಿ ಜನರಿರುವ ಭಾರತದಂತಹ ದೊಡ್ಡ ದೇಶಕ್ಕೆ ಈ ಮಾದರಿಗಳು ಸೂಕ್ತವಲ್ಲ. ಭಾರತದಂತಹ ದೇಶದಲ್ಲಿ ಕೇವಲ ಆರ್ಥಿಕ ಅಭಿವೃದ್ಧಿಯು ಪ್ರಗತಿಗೆ ಸಾಕಾಗುವುದಿಲ್ಲ ಎಂದು ಅವರು  ಹೇಳಿದರು. ಯಶಸ್ವಿ ಆರ್ಥಿಕ ಮಾದರಿಯು 130 ಕೋಟಿ ನಾಗರಿಕರ ಯೋಗಕ್ಷೇಮ, ಘನತೆ ಮತ್ತು ಸಂತೋಷವನ್ನೂ ಪರಿಗಣಿಸಬೇಕು, ಇದನ್ನು ಸಹಕಾರಿ ಚಳುವಳಿಯಲ್ಲಿ ಕಾಣಬಹುದು ಎಂದು ಅವರು ಹೇಳಿದರು.

120 ವರ್ಷಗಳ ಹಿಂದೆ ಭಾರತದಲ್ಲಿ ಸಹಕಾರಿ ಚಳವಳಿ ಆರಂಭವಾದಾಗ, ಅದರಲ್ಲಿ ಅಪಾರ ಸಾಮರ್ಥ್ಯವಿತ್ತು. ಇದು ಇಂದು ಇನ್ನಷ್ಟು ಪ್ರಸ್ತುತವಾಗಿದೆ. ಅವರು ಗುಜರಾತಿನ ಅಮೂಲ್ ಉದಾಹರಣೆಯನ್ನು ನೀಡಿದರು, ಇದು 35 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದೆ. ಅವರಲ್ಲಿ ಯಾರೂ 100 ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಿಲ್ಲ. ಆದರೂ ಇಂದು ಅಮೂಲ್ ನ ವಹಿವಾಟು 60,000 ಕೋಟಿ ರೂಪಾಯಿಗಳಾಗಿದೆ. ಬನಸ್ಕಾಂತದ ಒಬ್ಬ ಮಹಿಳೆಯ ಬಗ್ಗೆ ಅವರು ಒಂದು ಘಟನೆಯನ್ನು ಹಂಚಿಕೊಂಡರು, ಆಕೆ ತನ್ನ ಹೈನುಗಾರಿಕೆ ಸಂಬಂಧಿತ ಕೆಲಸಕ್ಕಾಗಿ 80 ಲಕ್ಷ ರೂಪಾಯಿಗಳ ಚೆಕ್ ಪಡೆದು ಸಂತೋಷಗೊಂಡಿದ್ದಳು, ಇದು ಸಹಕಾರಿ ಸಂಘಗಳು ತಂದಿರುವ ಸಬಲೀಕರಣವನ್ನು ತೋರಿಸುತ್ತದೆ ಎಂದು ಹೇಳಿದರು.

ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿ, ಶ್ರೀ ಶಾ ಅವರು ಹಳ್ಳಿಗಳಿಗೆ ಭೇಟಿ ನೀಡಿದ್ದಾಗ, ಜನರು ಎಡಿಸಿಯನ್ನು "ಸಣ್ಣ ಜನರಿಗೆ ದೊಡ್ಡ ಬ್ಯಾಂಕ್" ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಿದರು. ಸೀಮಿತ ಬಂಡವಾಳ ಹೊಂದಿರುವ ಜನರಿಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ಮತ್ತು ಅಭಿವೃದ್ಧಿ ಹೊಂದಲು ವೇದಿಕೆಯನ್ನು ಒದಗಿಸುವ ಮೂಲಕ ಎಡಿಸಿ ನಿಜವಾಗಿಯೂ ಈ ಧ್ಯೇಯವಾಕ್ಯಕ್ಕೆ ತಕ್ಕಂತೆ ನಡೆದುಕೊಂಡಿದೆ ಎಂದು ಅವರು ವಿವರಿಸಿದರು. ಸಹಕಾರವು ಸೀಮಿತ ಬಂಡವಾಳವನ್ನು ಹೊಂದಿರುವ ಅನೇಕ ವ್ಯಕ್ತಿಗಳನ್ನು ಒಗ್ಗೂಡಿಸಿ ದೊಡ್ಡ ಪ್ರಮಾಣದ ಸಂಪನ್ಮೂಲಗಳನ್ನು ಸೃಷ್ಟಿಸುತ್ತದೆ, ಅವರಿಗೆ ಕೆಲಸ ಮಾಡಲು ವೇದಿಕೆಯನ್ನು ಒದಗಿಸುತ್ತದೆ, ಅವರ ಸಮೃದ್ಧಿಯನ್ನು ಖಾತ್ರಿಪಡಿಸುತ್ತದೆ ಮತ್ತು ಗೌರವಯುತ ಜೀವನಕ್ಕಾಗಿ ವ್ಯವಸ್ಥೆ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು.

ಕಳೆದ 70 ವರ್ಷಗಳಿಂದ, ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಬೇಡಿಕೆ ಇತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಇದರ ಹೊರತಾಗಿಯೂ, ಬೃಹತ್ ಸಹಕಾರಿ ಚಳವಳಿಗೆ ಸಂಬಂಧಿಸಿದ ಸಹಕಾರಿ ಚಟುವಟಿಕೆಗಳನ್ನು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ನಿರ್ವಹಿಸುತ್ತಿದ್ದರು. ಆದಾಗ್ಯೂ, ಮೂರು ವರ್ಷಗಳ ಹಿಂದೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ವತಂತ್ರ ಸಹಕಾರ ಸಚಿವಾಲಯವನ್ನು ರಚಿಸಿದರು. ಇದು ಸಹಕಾರಿ ಆಂದೋಲನಕ್ಕೆ ಹೊಸ ಜೀವವನ್ನು ನೀಡಿತು. ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ತೆಗೆದುಕೊಂಡ ಅನೇಕ ಪ್ರಮುಖ ನಿರ್ಧಾರಗಳು 25-30 ವರ್ಷಗಳ ನಂತರ ಪಥದರ್ಶಕವೆಂದು ಗುರುತಿಸಲ್ಪಡುತ್ತವೆ ಮತ್ತು ಸಹಕಾರ ಸಚಿವಾಲಯದ ಸ್ಥಾಪನೆಯು ಅವುಗಳಲ್ಲಿ ಒಂದಾಗಿದೆ ಎಂದು ಶ್ರೀ ಶಾ ಹೇಳಿದರು.

ಶ್ರೀ ಶಾ ಅವರು ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕನ್ನು ಪ್ರಶಂಸಿಸಿದರು, ಇದು ಒಮ್ಮೆ ಅನೇಕ ಸವಾಲುಗಳನ್ನು ಎದುರಿಸಿತ್ತಾದರೂ ಈಗ ಭಾರತದಲ್ಲಿ ಯಾವುದೇ ಜಿಲ್ಲಾ ಸಹಕಾರಿ ಬ್ಯಾಂಕಿಗಿಂತ ಹೆಚ್ಚಿನ ಲಾಭವನ್ನು ದಾಖಲಿಸುತ್ತಿದೆ. ಬ್ಯಾಂಕಿನ ಯಶಸ್ಸಿಗೆ ಸೇವಾ ಸಹಕಾರಿ ಸಂಘಗಳ ಗಣನೀಯ ಕೊಡುಗೆಯನ್ನೂ ಅವರು ಶ್ಲಾಘಿಸಿದರು. ಒಂದು ಕಾಲದಲ್ಲಿ ಈ ಸಂಘಗಳ ಕಾರ್ಯಾಚರಣೆಗೆ ಆಡಳಿತಾತ್ಮಕ ಅಡೆತಡೆಗಳು ಅಡ್ಡಿಯಾಗಿದ್ದವು, ಆದರೆ ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿ ಈ ಅಡೆತಡೆಗಳನ್ನು ನಿವಾರಿಸಿದ್ದಾರೆ ಎಂದು ಅವರು ಹೇಳಿದರು. ಈ ಸಂಘಗಳಿಗೆ ಗೋದಾಮುಗಳ ಪ್ರವೇಶವಿರುವ, ಗಣಕೀಕರಣಗೊಂಡಿರುವ, ಬಡ್ಡಿ ರಹಿತ ಸಾಲ ಪಡೆಯುವ, ಮತ್ತು ಅನಿಲ ಏಜೆನ್ಸಿಗಳು, ಪೆಟ್ರೋಲ್ ಪಂಪ್ಗಳು ಮತ್ತು ನೀರಿನ ಸಮಿತಿಗಳನ್ನು ನಿರ್ವಹಿಸಬಹುದಾದ ವ್ಯವಸ್ಥೆಯನ್ನು ರಚಿಸಲಾಗಿದೆ. ಅಂತಹ ಸಂಘಗಳಿಗೆ ಮಾದರಿ ಉಪ-ಕಾನೂನುಗಳನ್ನು ರಚಿಸಲಾಗಿದೆ ಮತ್ತು ಅವುಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿವೆ ಎಂದು ಶ್ರೀ ಶಾ ತಿಳಿಸಿದೆರು. ಇಂದು, ದೇಶಾದ್ಯಂತದ ಎಲ್ಲಾ ಸೇವಾ ಸಹಕಾರಿ ಸಂಘಗಳು ಒಂದೇ ರೀತಿಯ ನಿಯಮಗಳು ಮತ್ತು ಲೆಕ್ಕಪತ್ರ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ಸೇವಾ ಸಹಕಾರಿ ಸಂಘಗಳು ಗ್ರಾಮೀಣ ಮಟ್ಟದಲ್ಲಿ ಚೈತನ್ಯಶೀಲ ಘಟಕಗಳಾಗಲಿವೆ ಎಂದು ಅವರು ಹೇಳಿದರು. ಈ ಸಂಘಗಳಲ್ಲಿ ಸಮುದಾಯ ಸೇವಾ ಕೇಂದ್ರಗಳನ್ನು ಸಹ ತೆರೆಯಲಾಗುತ್ತಿದೆ. ಸೇವಾ ಸಹಕಾರಿ ಸಂಘಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಸುಮಾರು 300 ಯೋಜನೆಗಳನ್ನು ಜನರು ಪಡೆಯುವ ಸ್ಥಳವಾಗಿ ಮಾರ್ಪಟ್ಟಿವೆ ಮತ್ತು ಇದು ಸಹಕಾರಿ ಚಳವಳಿಯನ್ನು ಬಲಪಡಿಸಿದೆ ಎಂದು ಹೇಳಿದರು.


ಗುಜರಾತ್ ಸೇರಿದಂತೆ ದೇಶಾದ್ಯಂತ 'ಸಹಕಾರಿಗಳ ನಡುವಿನ ಸಹಕಾರ' ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಪ್ರಯತ್ನಗಳನ್ನು ಮಾಡಬೇಕು ಎಂದು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಎಲ್ಲಾ ಸಹಕಾರಿ ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಸಹಕಾರಿ ಬ್ಯಾಂಕುಗಳಲ್ಲಿ ಹೊಂದಿರಬೇಕು ಎಂದು ಅವರು ಒತ್ತಿ ಹೇಳಿದರು. ಈ ಮಾದರಿಯು ಬನಸ್ಕಾಂತ ಮತ್ತು ಪಂಚಮಹಲ್ ನಲ್ಲಿ ಯಶಸ್ವಿಯಾಗಿದೆ.  ಈಗ ಇದನ್ನು ಗುಜರಾತ್‌ ನಾದ್ಯಂತ ಜಾರಿಗೆ ತರಬೇಕಾಗಿದೆ. ಕಳೆದ ಆರು ತಿಂಗಳಲ್ಲಿ, ಸಹಕಾರಿ ಚಳವಳಿಯ ಕಾರಣದಿಂದಾಗಿ, ರೂ. 6,000 ಕೋಟಿಗಳನ್ನು ಮಾಡಲಾಗಿದೆ, 2.4 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಮತ್ತು 8 ಮಿಲಿಯನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ. ಇಂದು, ಗುಜರಾತಿನ ಸಹಕಾರಿ ಬ್ಯಾಂಕುಗಳು ಹೆಚ್ಚುವರಿ ಮೊತ್ತವನ್ನು ಹೊಂದಿವೆ ಎಂದು ಅವರು ಹೇಳಿದರು. ಈ ಹಿಂದೆ, ಸಾಲಗಳನ್ನು ಪಡೆಯುವ ಬಗ್ಗೆ ಸಮಸ್ಯೆ ಇತ್ತು, ಆದರೆ ಈಗ ಠೇವಣಿಗಳು ಹೆಚ್ಚಾಗಿರುವುದರಿಂದ ಸಾಲ ನೀಡುವತ್ತ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು. 

ಗಾಂಧಿನಗರ ಮತ್ತು ಅಹಮದಾಬಾದ್ ಅಭಿವೃದ್ಧಿಗೆ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಶ್ಲಾಘನೀಯ ಕೆಲಸ ಮಾಡಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಇಂದಿನ ಕಾರ್ಯಕ್ರಮದಲ್ಲಿ, ಶತಮಾನೋತ್ಸವದ ಸ್ಮರಣಾರ್ಥ ಪುಸ್ತಕ ಮತ್ತು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಗಿದ್ದು, ಕೆಲವು ದಿವ್ಯಾಂಗ ನಾಗರಿಕರಿಗೆ  ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.  ಈ ಉದಾತ್ತ ಪ್ರಯತ್ನಗಳು ನಿಲ್ಲಬಾರದು. ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್, ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಮತ್ತು ಸೇವಾ ಸಹಕಾರಿ ಸಂಘಗಳು ಇಂತಹ ಉಪಕ್ರಮಗಳನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.

ಆರೋಗ್ಯ, ಶಿಕ್ಷಣ ಮತ್ತು ಪೋಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲೆಯಾದ್ಯಂತದ ಎಲ್ಲಾ ಸಹಕಾರಿ ಸಂಸ್ಥೆಗಳನ್ನು ಒಗ್ಗೂಡಿಸುವುದು ಮತ್ತು ಪ್ರತಿ ಹಳ್ಳಿಯಲ್ಲಿ ಅವುಗಳನ್ನು ಕಾರ್ಯಗತಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಜವಾಬ್ದಾರಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಅನ್ನು ಗಣಕೀಕರಿಸಲಾಗಿದೆ ಮತ್ತು ಬ್ಯಾಂಕ್ ಅಭಿವೃದ್ಧಿಪಡಿಸಿದ ಹಲವಾರು ಲೆಕ್ಕಪತ್ರ ತಂತ್ರಾಂಶಗಳನ್ನು ಭಾರತ ಸರ್ಕಾರವು ನಬಾರ್ಡ್ ಮೂಲಕ ಅಂಗೀಕರಿಸಿದ್ದು, ಅವುಗಳನ್ನು ದೇಶದ ಎಲ್ಲಾ ಬ್ಯಾಂಕುಗಳಿಗೆ ಒದಗಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು. ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಎರಡನ್ನೂ ನಿರಂತರವಾಗಿ ಎತ್ತಿಹಿಡಿದಿದೆ ಎಂದು ಅವರು ಹೇಳಿದರು. ಇಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಐದು ಪ್ರತಿಶತದವರೆಗಿನ NPA ಯನ್ನು ಅನುಮೋದಿಸಲಾಗಿದೆ, ಆದರೆ ಈ ಬ್ಯಾಂಕಿನ NPA ಬಹುತೇಕ ಶೂನ್ಯವಾಗಿದೆ. ಈ ಬ್ಯಾಂಕ್ ಎಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಬಹುತೇಕ ಶೂನ್ಯ NPA ಪುರಾವೆಯಾಗಿದೆ ಎಂದು ಅವರು ಹೇಳಿದರು.

ಅಂತಿಮವಾಗಿ , ಶ್ರೀ ಅಮಿತ್ ಶಾ ಅವರು ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ಜಿ ಕೃಷ್ಣ ವರ್ಮಾ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು ಮತ್ತು ವಿದೇಶದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಮಹಾನ್ ದೇಶಭಕ್ತ ಮತ್ತು ಸಂಸ್ಕೃತದ ವಿದ್ವಾಂಸ ಎಂದು ಅವರನ್ನು ಗೌರವಿಸಿದರು.

 

*****


(Release ID: 2062314) Visitor Counter : 46