ಹಣಕಾಸು ಸಚಿವಾಲಯ
azadi ka amrit mahotsav g20-india-2023

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 4 ಅಕ್ಟೋಬರ್ 2024 ರಂದು ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ


ಆರ್ಥಿಕ ವ್ಯವಹಾರಗಳ ಇಲಾಖೆ ಸಹಯೋಗದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್ ಸಂಸ್ಥೆಯು ಕೌಟಿಲ್ಯ ಆರ್ಥಿಕ ಸಮಾವೇಶದ ಮೂರನೇ ಆವೃತ್ತಿಯನ್ನು 'ಭಾರತೀಯ ಯುಗ' ಎಂಬ ವಿಷಯದೊಂದಿಗೆ 2024 ರ ಅಕ್ಟೋಬರ್ 4 ರಿಂದ 6 ರವರೆಗೆ ನವದೆಹಲಿಯಲ್ಲಿ ಆಯೋಜಿಸಿದೆ

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ​​​​​​​ ಶ್ರೀಮತಿ ನಿರ್ಮಲಾ ಸೀತಾರಾಮನ್ ಉದ್ಘಾಟನಾ ಭಾಷಣ ಮಾಡಲಿದ್ದಾರೆ; ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಸಮಾರೋಪ ಭಾಷಣ ಮಾಡಲಿದ್ದು, ಭೂತಾನ್‌ ನ ಹಣಕಾಸು ಸಚಿವ ಶ್ರೀ ಲಿಯಾನ್ಪೊ ಲೆಕಿ ಡೋರ್ಜಿ ಅವರು ಸಮ್ಮೇಳನದಲ್ಲಿ ಭಾಷಣ ಮಾಡಲಿದ್ದಾರೆ

ಭಾರತದ ಆರ್ಥಿಕತೆ ಮತ್ತು ಜಾಗತಿಕ ದಕ್ಷಿಣದ ಆರ್ಥಿಕತೆಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಸುಮಾರು 150 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರು ಸಮಾವೇಶದಲ್ಲಿ ಸೇರಲಿದ್ದಾರೆ

Posted On: 03 OCT 2024 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 4ನೇ ಅಕ್ಟೋಬರ್ 2024 ರಂದು ಸಂಜೆ 6:30 ಗಂಟೆಗೆ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ ನಲ್ಲಿ ಮೂರನೇ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. (ಹೆಚ್ಚು ಓದಿ: https://pib.gov.in/PressReleasePage.aspx?PRID=2061357)

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಸಹಭಾಗಿತ್ವದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್ ಸಂಸ್ಥೆಯು ಕೌಟಿಲ್ಯ ಆರ್ಥಿಕ ಸಮಾವೇಶದ (ಕೆಇಸಿ) ಮೂರನೇ ಆವೃತ್ತಿಯನ್ನು ಅಕ್ಟೋಬರ್ 4-6, 2024 ರಿಂದ ನವದೆಹಲಿಯಲ್ಲಿ ಆಯೋಜಿಸಿದೆ.

ಈ ಸಮಾವೇಶವು ಭಾರತದ ಆರ್ಥಿಕತೆ ಮತ್ತು ಜಾಗತಿಕ ದಕ್ಷಿಣದ ಆರ್ಥಿಕತೆಗಳು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಸುಮಾರು 150 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರನ್ನು ಒಂದೆಡೆ ಸೇರಿಸುತ್ತದೆ.

ಸಮಾವೇಶದಲ್ಲಿ ಮಾತನಾಡುವವರಲ್ಲಿ ಭಾರತದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ (ಉದ್ಘಾಟನಾ ಅಧಿವೇಶನ); ಭಾರತದ ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ, ಡಾ. ಎಸ್. ಜೈಶಂಕರ್ (ಸಮಾರೋಪ ಅಧಿವೇಶನ); ಭೂತಾನ್‌ ನ ಹಣಕಾಸು ಸಚಿವ ಶ್ರೀ ಲಿಯಾನ್ಪೊ ಲೆಕಿ ಡೋರ್ಜಿ; ಭಾರತದ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ ಕೆ ಮಿಶ್ರಾ; ಶ್ರೀ ಮಸೂದ್ ಅಹ್ಮದ್, ಅಧ್ಯಕ್ಷ ಎಮೆರಿಟಸ್, ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್, ಅಮೆರಿಕಾ; ಶ್ರೀಮತಿ ವೆರಾ ಸಾಂಗ್ವೆ, ಅಧ್ಯಕ್ಷರು, ಲಿಕ್ವಿಡಿಟಿ ಮತ್ತು ಸಸ್ಟೈನಬಿಲಿಟಿ ಫೆಸಿಲಿಟಿ: ಹವಾಮಾನ ಕ್ರಿಯೆಗಾಗಿ ಹಣಕಾಸು ಉನ್ನತ ಮಟ್ಟದ ಪ್ಯಾನೆಲ್ ಸಹ-ಅಧ್ಯಕ್ಷರು, ಅಮೆರಿಕಾ; ಸರ್ ಸುಮಾ ಚಕ್ರಬರ್ತಿ, ಬೋರ್ಡ್ ಆಫ್ ಟ್ರಸ್ಟಿಗಳ ಅಧ್ಯಕ್ಷರು, ಒಡಿಐ ಗ್ಲೋಬಲ್, ಯುಕೆ; ಡಾ ಜೈದಿ ಸತ್ತಾರ್, ಸ್ಥಾಪಕ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ, ನೀತಿ ಸಂಶೋಧನಾ ಸಂಸ್ಥೆ (ಪಿ ಆರ್‌ ಐ), ಬಾಂಗ್ಲಾದೇಶ; OECDಯ ಫ್ರೆಂಚ್ ಖಾಯಂ ಪ್ರತಿನಿಧಿ ಮತ್ತು ಮಾಜಿ ಫ್ರೆಂಚ್ ಸಚಿವರು, ಫ್ರಾನ್ಸ್; ಶ್ರೀ ಜಸ್ಟಿನ್ ಯಿಫು ಲಿನ್, ಡೀನ್, ಇನ್ಸ್ಟಿಟ್ಯೂಟ್ ಆಫ್ ನ್ಯೂ ಸ್ಟ್ರಕ್ಚರಲ್ ಎಕನಾಮಿಕ್ಸ್, ಪೀಕಿಂಗ್ ವಿಶ್ವವಿದ್ಯಾಲಯ, ಚೀನಾ; ಶ್ರೀ ಎರಿಕ್ ಬರ್ಗ್ಲೋಫ್, ಮುಖ್ಯ ಅರ್ಥಶಾಸ್ತ್ರಜ್ಞ, ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ), ಚೀನಾ; ಪ್ರೊಫೆಸರ್ ಹೈಜೊ ಟಕೆನಾಕಾ, ಆರ್ಥಿಕ ಮತ್ತು ಹಣಕಾಸಿನ ನೀತಿಯ ಮಾಜಿ ಸಚಿವ; ಪ್ರೊಫೆಸರ್ ಎಮೆರಿಟಸ್, ಕೀಯೊ ವಿಶ್ವವಿದ್ಯಾಲಯ, ಜಪಾನ್; ಶ್ರೀ ಎಡ್ವರ್ಡೊ ಪೆಡ್ರೊಸಾ, ಪ್ರಧಾನ ಕಾರ್ಯದರ್ಶಿ, ಪೆಸಿಫಿಕ್ ಆರ್ಥಿಕ ಸಹಕಾರ ಮಂಡಳಿ, ಸಿಂಗಾಪುರ; ಶ್ರೀ ಸುಮನ್ ಬೆರಿ, ಉಪಾಧ್ಯಕ್ಷರು, ನೀತಿ ಆಯೋಗ, ಭಾರತ; ಡಾ ಅರವಿಂದ್ ಪನಗಾರಿಯಾ, ಅಧ್ಯಕ್ಷರು, ಭಾರತದ 16 ನೇ ಹಣಕಾಸು ಆಯೋಗ; ಶ್ರೀ ಗೀತಾ ವಿರ್ಜವಾನ್, ಅಂಕೋರಾ ಗ್ರೂಪ್‌ ಅಧ್ಯಕ್ಷರು; ಮಾಜಿ ವಾಣಿಜ್ಯ ಸಚಿವರು, ಇಂಡೋನೇಷ್ಯಾ; ಪ್ರೊಫೆಸರ್ ರಾಬರ್ಟ್ ಲಾರೆನ್ಸ್, ಇಂಟರ್ನ್ಯಾಷನಲ್ ಟ್ರೇಡ್ ಮತ್ತು ಇನ್ವೆಸ್ಟ್ಮೆಂಟ್, ಹಾರ್ವರ್ಡ್ ಕೆನಡಿ ಸ್ಕೂಲ್, ಅಮೆರಿಕಾ; ಶ್ರೀ ಮಾರ್ಟಿನ್ ರೈಸರ್, ದಕ್ಷಿಣ ಏಷ್ಯಾದ ಪ್ರಾದೇಶಿಕ ಉಪಾಧ್ಯಕ್ಷ, ವಿಶ್ವ ಬ್ಯಾಂಕ್, ಅಮೆರಿಕಾ; ಪ್ರೊಫೆಸರ್ ಜೀನ್ ಪಿಯರ್ ಲ್ಯಾಂಡೌ, ಅಸೋಸಿಯೇಟೆಡ್ ಪ್ರೊಫೆಸರ್ ಮತ್ತು ಸಂಶೋಧಕರು, ಅರ್ಥಶಾಸ್ತ್ರ ವಿಭಾಗ, ವಿಜ್ಞಾನ ಪೊ (ಪ್ಯಾರಿಸ್) ಮತ್ತು ಫ್ರಾನ್ಸ್‌ನ ಹಾರ್ವರ್ಡ್ ಕೆನಡಿ ಸ್ಕೂಲ್‌ನಲ್ಲಿ ಸಂಶೋಧನಾ ಫೆಲೋ; ಭಾರತ ಸರ್ಕಾರದ ಕಾರ್ಯದರ್ಶಿಗಳು; ಮತ್ತು ಇನ್ನೂ ಅನೇಕರು ಸೇರಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ವಿಶ್ವ ಆರ್ಥಿಕತೆಯು ಅಸಾಧಾರಣ ಆಘಾತಗಳಿಗೆ ಒಳಗಾಗಿದೆ. ಶತಮಾನ ಕಂಡರಿಯದ ಸಾಂಕ್ರಾಮಿಕ ರೋಗವನ್ನು ಅನುಭವಿಸಿದ ನಂತರ, ನಿರಂತರ ಮಿಲಿಟರಿ ಘರ್ಷಣೆಗಳು ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸಿ ಇಂಧನ ಮತ್ತು ಆಹಾರದ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿವೆ. ಕಾರ್ಯತಂತ್ರದ ನಿರ್ಬಂಧಗಳು ಹೊರಹೊಮ್ಮಲು ಪ್ರಾರಂಭಿಸಿವೆ ಮತ್ತು ತಮ್ಮನ್ನು ತಾವು ಮರು-ರೂಪಿಸಿಕೊಳ್ಳುತ್ತಿವೆ. ಅತಿ ಜಾಗತೀಕರಣದಿಂದ, ಪ್ರಪಂಚವು "ನಿಧಾನ-ಸಮತೋಲನ”ದತ್ತ ಜಾರುವಂತೆ ಮಾಡಿದೆ. ರಾಜಕೀಯ ಮತ್ತು ಹಣಕಾಸಿನ ಮರು-ಜೋಡಣೆಗಳು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಬಂಡವಾಳ ಹರಿವಿನ ಮೇಲೆ ಪ್ರಭಾವ ಬೀರಿವೆ. ಜಾಗತಿಕ ಸವಾಲುಗಳ ಹೊರತಾಗಿಯೂ, ಉದಯೋನ್ಮುಖ ಮಾರುಕಟ್ಟೆಗಳು ಬಫರ್‌ ಗಳನ್ನು ನಿರ್ಮಿಸಿವೆ, ಸುಧಾರಿತ ನೀತಿ ಚೌಕಟ್ಟುಗಳು ಮತ್ತು ಬಫರ್‌ ಗಳನ್ನು ವಿವೇಚನೆಯಿಂದ ಬಳಸಿಕೊಂಡಿವೆ. 2021 ರಿಂದ, ಭಾರತವು ಸ್ಥಿರವಾದ ಸ್ಥೂಲ ಆರ್ಥಿಕ ವಾತಾವರಣದೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ಭಾರತದ ಸರಾರಿ ಶೇಕಡಾ 7 ರಷ್ಟು ಬೆಳವಣಿಗೆಯು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಅಧಿಕವಾಗಿದೆ.

ಈ ವರ್ಷದ ಸಮಾವೇಶವು ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ, ಅವುಗಳಲ್ಲಿ ಕೆಲವು ಹೀಗಿವೆ:

  • ಅಂತರರಾಷ್ಟ್ರೀಯ ಹಣಕಾಸು ರಚನೆಯ ಸುಧಾರಣೆ
  • ಹಸಿರು ಪರಿವರ್ತನೆಗೆ ಹಣಕಾಸು
  • ಭೌಗೋಳಿಕ-ಆರ್ಥಿಕ ವಿಘಟನೆ ಮತ್ತು ಅಭಿವೃದ್ಧಿಗೆ ಪರಿಣಾಮಗಳು
  • ಭಾರತ ಮತ್ತು ಮಧ್ಯಮ ಆದಾಯ
  • ಉದ್ಯೋಗಗಳು ಮತ್ತು ಕೌಶಲ್ಯಗಳು
  • ಕೃತಕ ಬುದ್ಧಿಮತ್ತೆ ಮತ್ತು ಸಾರ್ವಜನಿಕ ನೀತಿ ವಿನ್ಯಾಸ
  • ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳಲು ನೀತಿ ತತ್ವಗಳು

ಈ ಅಧಿವೇಶನಗಳಲ್ಲಿ ಭಾರತೀಯ ಆರ್ಥಿಕತೆಯು ಹೇಗೆ ಹೆಚ್ಚು ನಿಯಮಿತ ಉದ್ಯೋಗಗಳನ್ನು ಸೃಷ್ಟಿಸಬಹುದು; ಭೌಗೋಳಿಕ-ಆರ್ಥಿಕ ವಿಘಟನೆಯನ್ನು ತಡೆಗಟ್ಟಲು ನಿಯಮ-ಆಧಾರಿತ ಬಹುಪಕ್ಷೀಯ ವ್ಯವಸ್ಥೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಮತ್ತು ಬಹುಪಕ್ಷೀಯ ಒಮ್ಮತದ ಮೂಲಕ ಹೇಗೆ ಪ್ರಗತಿಯನ್ನು ಸಾಧಿಸಬಹುದು; ಉದ್ಯೋಗ ಸೃಷ್ಟಿಗಾಗಿ AI, ML ಮತ್ತು ಫಿನ್‌ಟೆಕ್‌ ನಲ್ಲಿ ಭಾರತದ ತುಲನಾತ್ಮಕ ಪ್ರಯೋಜನವನ್ನು ಬಳಸಿಕೊಳ್ಳುವುದು; ಭಾರತದ ಪ್ರಸ್ತುತ ಅಭಿವೃದ್ಧಿಯನ್ನು ನಿರ್ಣಯಿಸಲು ಮತ್ತು ಬೆಳವಣಿಗೆಯನ್ನು ಗರಿಷ್ಠಗೊಳಿಸುವ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಉತ್ಪಾದಕತೆಯ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಮಾರ್ಗಗಳನ್ನು ಪರಿಗಣಿಸುವುದು; ಹಣಕಾಸು ವ್ಯವಸ್ಥೆಯನ್ನು ಹೆಚ್ಚು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಅಗತ್ಯವಿರುವ ಸುಧಾರಣೆಗಳನ್ನು ಅಧ್ಯಯನ ಮಾಡುವುದು; ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ದೀರ್ಘಾವಧಿಯ ಸುಧಾರಣೆಗಳನ್ನು ಗುರುತಿಸುವುದು; ಮತ್ತು ಹವಾಮಾನ ಬದಲಾವಣೆಯನ್ನು ನಿರ್ವಹಿಸುವ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಇಂಧನ ಪರಿವರ್ತನೆಯನ್ನು ಸಾಧಿಸುವ ಸವಾಲನ್ನು ಚರ್ಚಿಸುವುದು ಸೇರಿವೆ.

ಜಾಗತಿಕ ದಕ್ಷಿಣದ ದೇಶಗಳ ನಡುವೆ ಸೇತುವೆಯಾಗಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಸಮ್ಮೇಳನವು ಪ್ರದರ್ಶಿಸುತ್ತದೆ. ಅಂತರ್ಗತ ಬೆಳವಣಿಗೆ, ಜವಾಬ್ದಾರಿಯುತ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಮತ್ತು ಜಾಗತಿಕ ದಕ್ಷಿಣದ ಧ್ವನಿಗಳನ್ನು ವರ್ಧಿಸುವ ಭಾರತದ ಬದ್ಧತೆಯು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂಬ ಅದರ ಆಕಾಂಕ್ಷೆಯನ್ನು ಒತ್ತಿಹೇಳುತ್ತದೆ, ಇದನ್ನು ಅನೇಕರು 'ಭಾರತೀಯ ಯುಗ' ಎಂದು ಕರೆಯುತ್ತಾರೆ. ಸಮ್ಮೇಳನದ ಚರ್ಚೆಗಳು ಮುಂಬರುವ ಐಎಂಎಫ್‌ ಮತ್ತು ವಿಶ್ವ ಬ್ಯಾಂಕ್ ವಾರ್ಷಿಕ ಸಭೆಗಳು, ಸಿಒಪಿ 29 ಮತ್ತು ಬ್ರೆಜಿಲ್‌ ನ ಜಿ-20 ನಾಯಕರ ಘೋಷಣೆಗೆ ಮುನ್ನುಡಿಯಾಗಿ ಕಾರ್ಯನಿರ್ವಹಿಸುತ್ತವೆ.

 

*****

 



(Release ID: 2061721) Visitor Counter : 6