ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ವಾಡ್ ಕ್ಯಾನ್ಸರ್ ಮೂನ್‌ ಶಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

Posted On: 22 SEP 2024 8:23AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್‌ ನ ವಿಲ್ಮಿಂಗ್ಟನ್‌ ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರು ಆಯೋಜಿಸಿದ್ದ ಕ್ವಾಡ್ ಕ್ಯಾನ್ಸರ್ ಮೂನ್‌ ಶಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ, ಪತ್ತೆ ಹಚ್ಚುವ ಮತ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಅಧ್ಯಕ್ಷ ಶ್ರೀ ಬೈಡನ್ ಅವರು ಈ ಚಿಂತನಶೀಲ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ಇಂಡೋ-ಪೆಸಿಫಿಕ್ ದೇಶಗಳಲ್ಲಿನ ಜನರಿಗೆ ಕೈಗೆಟುಕುವ, ಸುಲಭವಾಗಿ ಅವಕಾಶ ಸಿಗಬಹುದಾದ ಮತ್ತು ಗುಣಮಟ್ಟದ ಆರೋಗ್ಯ-ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಬಹಳಷ್ಟು ದೂರ ಸಾಗಿ ಹೋಗಲಿದೆ" ಎಂದು ಹೇಳಿದರು.

ಭಾರತದ ಆರೋಗ್ಯ ಭದ್ರತಾ ಪ್ರಯತ್ನಗಳ ಕುರಿತು ಮಾತನಾಡುತ್ತಾ, "ಭಾರತದಲ್ಲಿ ಕೂಡ ಸಾಮೂಹಿಕ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಭಾರತ ಸರ್ಕಾರವೂ ಕೈಗೊಳ್ಳುತ್ತಿದೆ. ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ಭಾರತ ಅಭಿವೃದ್ಧಿಪಡಿಸಿದೆ ಮತ್ತು  ಕೃತಕ ಬುದ್ಧಿಮತ್ತೆ ಆಧಾರಿತ ಚಿಕಿತ್ಸಾ ಶಿಷ್ಟಾಚಾರದಲ್ಲಿ ರೋಗ ಶುಶ್ರೂಷಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ" ಎಂದು ಹೇಳಿದರು.

ಕ್ಯಾನ್ಸರ್ ಮೂನ್‌ ಶಾಟ್ ಉಪಕ್ರಮಕ್ಕೆ ಭಾರತದ ಕೊಡುಗೆಯಾಗಿ, "ಒಂದು ಪ್ರಪಂಚ, ಒಂದು ಆರೋಗ್ಯ" ಎಂಬ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕ್ಯಾನ್ಸರ್ ಪರೀಕ್ಷೆ, ತಪಾಸಣೆ ಮತ್ತು ರೋಗನಿರ್ಣಯಕ್ಕಾಗಿ 7.5 ದಶಲಕ್ಷ ಯು.ಎಸ್. ಡಾಲರ್ ಅನುದಾನವನ್ನು ಭಾರತವು ನೀಡುವುದಾಗಿ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಘೋಷಿಸಿದರು. "ಇಂಡೋ-ಪೆಸಿಫಿಕ್‌ನಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ರೇಡಿಯೊಥೆರಪಿ ಚಿಕಿತ್ಸೆ ಮತ್ತು ಸಾಮರ್ಥ್ಯ ವರ್ಧನೆಗೆ ಭಾರತವು ಬೆಂಬಲವನ್ನು ನೀಡುತ್ತದೆ" ಎಂದು ಪ್ರಧಾನಮಂತ್ರಿಯವರು ಘೋಷಿಸಿದರು.  "ಗವಿ ಮತ್ತು ಕ್ವಾಡ್  ಕಾರ್ಯಕ್ರಮಗಳ ಅಡಿಯಲ್ಲಿ ಭಾರತದಿಂದ 40 ದಶಲಕ್ಷ ಪ್ರಮಾಣದ ಲಸಿಕೆ ಪೂರೈಕೆಯಿಂದ ಇಂಡೋ-ಪೆಸಿಫಿಕ್ ದೇಶಗಳು ಪ್ರಯೋಜನ ಪಡೆಯುತ್ತಿವೆ" ಎಂದು ಪ್ರಧಾನಮಂತ್ರಿಯವರು ವಿವರಿಸಿದರು.  "ಕ್ವಾಡ್ ಕಾರ್ಯನಿರ್ವಹಿಸಿದಾಗ ಅದು ಕೇವಲ ರಾಷ್ಟ್ರಗಳಿಗೆ ಅಲ್ಲ, ಅದು ಜನರಿಗಾಗಿ ಅರ್ಪಿತವಾಗುತ್ತದೆ.  ಅದುವೇ , ಕ್ವಾಡ್ ನ ಮಾನವ-ಕೇಂದ್ರಿತ ವಿಧಿ-ವಿಧಾನಗಳ ನಿಜವಾದ ಸಾರವಾಗಿದೆ" ಎಂದು ಪ್ರಧಾನಮಂತ್ರಿಯವರು ಕ್ವಾಡ್ ಚಟುವಟಿಕೆಗಳನ್ನು ಉಲ್ಲೇಖಿಸಿ ಹೇಳಿದರು.

ಭಾರತವು ಇಂಡೋ-ಪೆಸಿಫಿಕ್ ಪ್ರದೇಶದ ಆಸಕ್ತ ದೇಶಗಳಿಗೆ ಡಿಪಿಐನಲ್ಲಿ ಕ್ಯಾನ್ಸರ್ ತಪಾಸಣೆ, ಆರೈಕೆ ಮತ್ತು ನಿರಂತರತೆಗಾಗಿ ತನ್ನ 10 ದಶಲಕ್ಷ ಯು.ಎಸ್. ಡಾಲರ್ ಕೊಡುಗೆಯ ಮೂಲಕ ವಿಶ್ವ ಆರೋಗ್ಯ ಸಂಸ್ಥೆ-ಗ್ಲೋಬಲ್ ಇನಿಶಿಯೇಟಿವ್ ಆನ್ ಡಿಜಿಟಲ್ ಹೆಲ್ತ್‌ ಗೆ ತಾಂತ್ರಿಕ ಸಹಾಯವನ್ನು ಕೂಡ ನೀಡುತ್ತಿದೆ.

ಕ್ಯಾನ್ಸರ್ ಮೂನ್‌ ಶಾಟ್ ಉಪಕ್ರಮದ ಮೂಲಕ, ಇಂಡೋ-ಪೆಸಿಫಿಕ್ ದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸಾ ಪರಿಸರ ವ್ಯವಸ್ಥೆಯಲ್ಲಿನ ಕುಂದುಕೊರತೆ - ಅಂತರವನ್ನು ಪರಿಹರಿಸಲು ಕ್ವಾಡ್ ದೇಶಗಳ ನಾಯಕರು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ.  ಈ ಸಂದರ್ಭದಲ್ಲಿ, ಜಂಟಿ ಕ್ಯಾನ್ಸರ್ ಮೂನ್‌ ಶಾಟ್ ಫ್ಯಾಕ್ಟ್ ಶೀಟ್ ಅನ್ನು ಕೂಡ ಬಿಡುಗಡೆ ಮಾಡಲಾಯಿತು.

 

 *****


(Release ID: 2057633) Visitor Counter : 30