ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

8ನೇ ಭಾರತ ಜಲ ಸಪ್ತಾಹಕ್ಕೆ ರಾಷ್ಟ್ರಪತಿ ಚಾಲನೆ

Posted On: 17 SEP 2024 3:21PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 17, 2024) ಹೊಸದಿಲ್ಲಿಯಲ್ಲಿ 8 ನೇ ಭಾರತ ಜಲ ಸಪ್ತಾಹವನ್ನು ಉದ್ಘಾಟಿಸಿದರು.

ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ನೀರಿನ ಕೊರತೆಯಿಂದ ಬಳಲುತ್ತಿರುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿ ಇಡೀ ಮಾನವಕುಲಕ್ಕೆ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಅಡಿಯಲ್ಲಿ, ನೀರು ಮತ್ತು ನೈರ್ಮಲ್ಯ ನಿರ್ವಹಣೆಯನ್ನು ಸುಧಾರಿಸಲು ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಯನ್ನು ಬೆಂಬಲಿಸಲು ಮತ್ತು ಬಲಪಡಿಸಲು ಒತ್ತು ನೀಡಲಾಗಿದೆ ಎಂದರು.

ಎಲ್ಲರಿಗೂ ನೀರು ಒದಗಿಸುವ ವ್ಯವಸ್ಥೆ ಪ್ರಾಚೀನ ಕಾಲದಿಂದಲೂ ನಮ್ಮ ದೇಶದ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು. ಲಡಾಖ್ ನಿಂದ ಕೇರಳದವರೆಗೆ, ನಮ್ಮ ದೇಶದಲ್ಲಿ ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ಪರಿಣಾಮಕಾರಿ ವ್ಯವಸ್ಥೆಗಳು ಅಸ್ತಿತ್ವದಲ್ಲಿದ್ದವು. ಬ್ರಿಟಿಷ್ ಆಳ್ವಿಕೆಯಲ್ಲಿ ಇಂತಹ ವ್ಯವಸ್ಥೆಗಳು ಕ್ರಮೇಣ ಕಣ್ಮರೆಯಾದವು. ನಮ್ಮ ವ್ಯವಸ್ಥೆಗಳು ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಆಧರಿಸಿವೆ. ಪ್ರಕೃತಿಯನ್ನು ನಿಯಂತ್ರಿಸುವ ಕಲ್ಪನೆಯ ಆಧಾರದ ಮೇಲೆ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳನ್ನು ಈಗ ಪ್ರಪಂಚದಾದ್ಯಂತ ಮರುಪರಿಶೀಲಿಸಲಾಗುತ್ತಿದೆ. ವಿವಿಧ ರೀತಿಯ ಜಲ ಸಂಪನ್ಮೂಲ ನಿರ್ವಹಣೆಯ ಅನೇಕ ಪ್ರಾಚೀನ ಉದಾಹರಣೆಗಳು ದೇಶಾದ್ಯಂತ ಲಭ್ಯವಿವೆ, ಅವು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಪ್ರಾಚೀನ ನೀರಿನ ನಿರ್ವಹಣಾ ವ್ಯವಸ್ಥೆಗಳನ್ನು ಆಧುನಿಕ ಸನ್ನಿವೇಶದಲ್ಲಿ ಸಂಶೋಧಿಸಬೇಕು ಮತ್ತು ಪ್ರಾಯೋಗಿಕವಾಗಿ ಬಳಸಬೇಕು ಎಂದರು.

ಬಾವಿಗಳಂತಹ ಜಲಮೂಲಗಳು; ಕೊಳಗಳು ಶತಮಾನಗಳಿಂದ ನಮ್ಮ ಸಮಾಜಕ್ಕೆ ನೀರಿನ ಬ್ಯಾಂಕುಗಳಾಗಿವೆ. ನಾವು ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತೇವೆ, ಅದರ ನಂತರವೇ ನಾವು ಬ್ಯಾಂಕಿನಿಂದ ಹಣವನ್ನು ಹಿಂಪಡೆಯಬಹುದು ಮತ್ತು ಅದನ್ನು ಬಳಸಬಹುದು. ನೀರಿನ ವಿಷಯದಲ್ಲೂ ಇದು ಅನ್ವಯಿಸುತ್ತದೆ. ಜನರು ಮೊದಲು ನೀರನ್ನು ಸಂಗ್ರಹಿಸುವಂತಾಗಬೇಕು; ಆಗ ಮಾತ್ರ ಅವರಿಗೆ ನೀರನ್ನು ಬಳಸಲು ಸಾಧ್ಯವಾಗುತ್ತದೆ. ಹಣವನ್ನು ದುರುಪಯೋಗಪಡಿಸಿಕೊಳ್ಳುವ/ ಯಥೇಚ್ಛ ಖರ್ಚು ಮಾಡುವ  ಜನರು ಸಮೃದ್ಧಿಯಿಂದ ಬಡತನದತ್ತ ಹೋಗುತ್ತಾರೆ. ಇದರಿಂದಾಗಿಯೇ  ಮಳೆ ಸಮೃದ್ಧ ಪ್ರದೇಶಗಳಲ್ಲಿಯೂ ನೀರಿನ ಕೊರತೆ ಕಂಡುಬರುತ್ತದೆ. ಸೀಮಿತ ಆದಾಯವನ್ನು ಬುದ್ಧಿವಂತಿಕೆಯಿಂದ ಬಳಸುವ ಜನರು ತಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿರುತ್ತಾರೆ. ಅದೇ ರೀತಿ , ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೀರನ್ನು ಸಂಗ್ರಹಿಸುವ ಗ್ರಾಮಗಳು ನೀರಿನ ಬಿಕ್ಕಟ್ಟಿನಿಂದ ಸುರಕ್ಷಿತವಾಗಿರುತ್ತವೆ. ರಾಜಸ್ಥಾನ ಮತ್ತು ಗುಜರಾತಿನ ಅನೇಕ ಪ್ರದೇಶಗಳಲ್ಲಿ, ಗ್ರಾಮಸ್ಥರು ತಮ್ಮ ಪ್ರಯತ್ನಗಳ ಮೂಲಕ ಮತ್ತು ನೀರಿನ ಸಂಗ್ರಹಣೆಯ ಪರಿಣಾಮಕಾರಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಕೊರತೆಯನ್ನು ತೊಡೆದುಹಾಕಿದ್ದಾರೆ ಎಂದೂ ರಾಷ್ಟ್ರಪತಿ ನುಡಿದರು.

ಭೂಮಿಯ ಮೇಲೆ ಲಭ್ಯವಿರುವ ಒಟ್ಟು ನೀರಿನಲ್ಲಿ ಕೇವಲ 2.5 ಪ್ರತಿಶತದಷ್ಟು ಮಾತ್ರ ಸಿಹಿನೀರು ಎಂದು ರಾಷ್ಟ್ರಪತಿ ಹೇಳಿದರು. ಅದರಲ್ಲಿಯೂ  ಸಹ ಮಾನವ ಬಳಕೆಗೆ ಕೇವಲ ಒಂದು ಪ್ರತಿಶತ ಮಾತ್ರ ಲಭ್ಯವಿದೆ. ವಿಶ್ವದ ಜಲಸಂಪನ್ಮೂಲದಲ್ಲಿ ಭಾರತದ ಪಾಲು ಶೇ.4ರಷ್ಟಿದೆ. ನಮ್ಮ ದೇಶದಲ್ಲಿ ಲಭ್ಯವಿರುವ ಸುಮಾರು 80 ಪ್ರತಿಶತದಷ್ಟು ನೀರನ್ನು ಕೃಷಿ ಕ್ಷೇತ್ರಕ್ಕೆ ಬಳಸಲಾಗುತ್ತದೆ. ಕೃಷಿಯ ಹೊರತಾಗಿ, ವಿದ್ಯುತ್ ಉತ್ಪಾದನೆ, ಕೈಗಾರಿಕೆ ಮತ್ತು ಗೃಹಬಳಕೆಯ ಅಗತ್ಯಗಳಿಗೆ ನೀರಿನ ಲಭ್ಯತೆ ಅತ್ಯಗತ್ಯ. ಜಲ ಸಂಪನ್ಮೂಲಗಳು ಸೀಮಿತವಾಗಿವೆ. ನೀರಿನ ದಕ್ಷ ಬಳಕೆಯಿಂದ ಮಾತ್ರ ಎಲ್ಲರಿಗೂ ನೀರು ಸರಬರಾಜು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

2021 ರಲ್ಲಿ, ಸರ್ಕಾರವು 'ಮಳೆ ಬಿದ್ದಾಗ ಎಲ್ಲಿ ಬೀಳುತ್ತದೋ –ಅಲ್ಲಿ ಅದನ್ನು ಹಿಡಿಯಿರಿ”  ಎಂಬ ಸಂದೇಶದೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು ಎಂದು ರಾಷ್ಟ್ರಪತಿ ಹೇಳಿದರು. ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು ಮತ್ತು ನೀರಿನ ನಿರ್ವಹಣೆಯ ಇತರ ಪ್ರಮುಖ ಗುರಿಗಳನ್ನು ಸಾಧಿಸುವುದು ಅಭಿಯಾನದ ಉದ್ದೇಶವಾಗಿದೆ. ಅರಣ್ಯ ಸಂಪತ್ತನ್ನು ಹೆಚ್ಚಿಸುವುದರಿಂದ ನೀರಿನ ನಿರ್ವಹಣೆಗೆ ಸಹಾಯವಾಗುತ್ತದೆ.  ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ತಮ್ಮ ಕುಟುಂಬ ಮತ್ತು ನೆರೆಹೊರೆಯವರಿಗೆ ಅರಿವು ಮೂಡಿಸಬಹುದು ಮತ್ತು ಸ್ವತಃ ನೀರನ್ನು ಸರಿಯಾಗಿ ಬಳಸಬಹುದು. ಜಲಶಕ್ತಿ ಪ್ರಯತ್ನಗಳನ್ನು ಜನಾಂದೋಲನವಾಗಿ ಪರಿವರ್ತಿಸಬೇಕು. ಎಲ್ಲಾ ನಾಗರಿಕರು ಜಲ ಯೋಧರ ಪಾತ್ರವನ್ನು ವಹಿಸಬೇಕಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.

'ಇಂಡಿಯಾ ವಾಟರ್ ವೀಕ್-2024'ರ ಗುರಿ ಸಮಗ್ರ ಜಲ ಅಭಿವೃದ್ಧಿ ಮತ್ತು ನಿರ್ವಹಣೆಯಾಗಿದೆ ಎಂದೂ ರಾಷ್ಟ್ರಪತಿ ಹೇಳಿದರು. ಈ ಗುರಿಯನ್ನು ಸಾಧಿಸಲು ಸರಿಯಾದ ಮಾಧ್ಯಮವನ್ನು ಆಯ್ಕೆ ಮಾಡಿದ್ದಕ್ಕಾಗಿ ಅವರು ಜಲಶಕ್ತಿ ಸಚಿವಾಲಯವನ್ನು ಶ್ಲಾಘಿಸಿದರು - ಆ ಮಾಧ್ಯಮವೆಂದರೆ - ಪಾಲುದಾರಿಕೆ ಮತ್ತು ಸಹಕಾರ.

Please click here to see the President's Speech

 

*****


(Release ID: 2055997) Visitor Counter : 63