ಪ್ರಧಾನ ಮಂತ್ರಿಯವರ ಕಛೇರಿ
ಸಿಂಗಾಪುರದ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
Posted On:
05 SEP 2024 10:22AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಂಗಾಪುರದ ಗೌರವಾನ್ವಿತ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಮಂತ್ರಿ ವಾಂಗ್ ಅವರು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಿದರು.
ಉಭಯ ನಾಯಕರು ಮಾತುಕತೆ ವೇಳೆ ಭಾರತ-ಸಿಂಗಾಪುರ ದ್ವಿಪಕ್ಷೀಯ ಸಂಬಂಧಗಳ ಪ್ರಗತಿ ಬಗ್ಗೆ ಪರಾಮರ್ಶಿಸಿದರು. ದ್ವಿಪಕ್ಷೀಯ ಸಂಬಂಧಗಳ ಆಳ, ಅಗಲ ಮತ್ತು ಅಪಾರ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು ಉಭಯ ದೇಶಗಳ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಇದು ಭಾರತದ ಪೂರ್ವ ಕ್ರಿಯಾ ನೀತಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಆರ್ಥಿಕ ಸಂಬಂಧಗಳಲ್ಲಿನ ಉತ್ಕೃಷ್ಟ ಪ್ರಗತಿಯ ಸ್ಥಿತಿಗತಿಯ ಮಾಹಿತಿ ಪಡೆದ ಉಭಯ ನಾಯಕರು, ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ಇನ್ನಷ್ಟು ವಿಸ್ತರಿಸಲು ಕರೆ ನೀಡಿದರು.
ಭಾರತದ ಆರ್ಥಿಕತೆಯಲ್ಲಿ ಸುಮಾರು 160 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯೊಂದಿಗೆ ಸಿಂಗಾಪುರವು ಭಾರತದ ಪ್ರಮುಖ ಆರ್ಥಿಕ ಪಾಲುದಾರ ರಾಷ್ಟ್ರವಾಗಿದೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತದಲ್ಲಿ ತ್ವರಿತ ಮತ್ತು ಸುಸ್ಥಿರ ಪ್ರಗತಿಯು ಸಿಂಗಾಪುರದ ಸಂಸ್ಥೆಗಳಿಗೆ ಅಪಾರ ಹೂಡಿಕೆ ಅವಕಾಶಗಳನ್ನು ಮಾಡಿಕೊಟ್ಟಿದೆ ಎಂದು ಅವರು ಉಲ್ಲೇಖಿಸಿದರು. ರಕ್ಷಣೆ ಮತ್ತು ಭದ್ರತೆ, ಸಾಗರ ವಲಯ ಜಾಗೃತಿ, ಶಿಕ್ಷಣ, ಕೃತಕ ಬುದ್ದಿಮತ್ತೆ(ಎಐ), ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ), ಹೊಸ ತಂತ್ರಜ್ಞಾನ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜ್ಞಾನ ಪಾಲುದಾರಿಕೆ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಹಕಾರ ಸಂಬಂಧಗಳನ್ನು ಅವರು ಪರಿಶೀಲಿಸಿದರು. ಉಭಯ ನಾಯಕರು ಆರ್ಥಿಕ ಮತ್ತು ಜನರ ನಡುವಿನ ಸಂಬಂಧಗಳನ್ನು ವೃದ್ಧಿಸಲು ದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಕರೆ ನೀಡಿದರು. ಜತೆಗೆ ಹಸಿರು ಕಾರಿಡಾರ್ ಯೋಜನೆಗಳ ವೇಗವರ್ಧನೆಗೆ ಅವರು ಕರೆ ನೀಡಿದರು.
ಉಭಯ ನಾಯಕರು 2024ರ ಆಗಸ್ಟ್‌ನಲ್ಲಿ ಸಿಂಗಾಪುರದಲ್ಲಿ ನಡೆದ 2ನೇ ಭಾರತ - ಸಿಂಗಾಪುರ ಸಚಿವರ ದುಂಡುಮೇಜಿನ ಫಲಿತಾಂಶಗಳ ಕುರಿತು ಚರ್ಚಿಸಿದರು. ಸಚಿವರ ದುಂಡುಮೇಜಿನ ಸಭೆ ಒಂದು ವಿಶಿಷ್ಟ ಕಾರ್ಯವಿಧಾನವಾಗಿದೆ ಎಂದು ಹೇಳಿದ ನಾಯಕರು, ದ್ವಿಪಕ್ಷೀಯ ಸಹಕಾರಕ್ಕಾಗಿ ಹೊಸ ಕಾರ್ಯಸೂಚಿಯನ್ನು ಚರ್ಚಿಸಿ ಗುರುತಿಸುವಲ್ಲಿ ಎರಡೂ ಕಡೆಯ ಹಿರಿಯ ಸಚಿವರು ಮಾಡಿದ ಕಾರ್ಯವನ್ನು ಉಭಯ ನಾಯಕರು ಶ್ಲಾಘಿಸಿದರು. ಸುಧಾರಿತ ಉತ್ಪಾದನೆ, ಸಂಪರ್ಕ, ಡಿಜಿಟಲೀಕರಣ, ಆರೋಗ್ಯ ಮತ್ತು ಔಷಧ, ಕೌಶಲ್ಯ ಅಭಿವೃದ್ಧಿ ಮತ್ತು ಸುಸ್ಥಿರತೆ ವಿಷಯಗಳು ಸಚಿವರ ದುಂಡುಮೇಜಿನ ಸಮಯದಲ್ಲಿ ಗುರುತಿಸಲಾದ ಸಹಕಾರದ ಆಧಾರ ಸ್ತಂಭಗಳಾಗಿದ್ದು, ಅವುಗಳಿಗೆ ವೇಗವರ್ಧಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಯಕರು ಕರೆ ನೀಡಿದರು. ಈ ಸ್ತಂಭಗಳಡಿಯಲ್ಲಿ, ವಿಶೇಷವಾಗಿ (ಸೆಮಿಕಂಡಕ್ಟರ್) ಅರೆವಾಹಕಗಳು ಮತ್ತು ನಿರ್ಣಾಯಕ ಮತ್ತು ಹೊಸ ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭಕ್ಕೆ ನಾದಿ ಹಾಡಲಿದೆ ಎಂದು ನಾಯಕರು ಬಲವಾಗಿ ಪ್ರತಿಪಾದಿಸಿದರು.
2025ರಲ್ಲಿ ದ್ವಿಪಕ್ಷೀಯ ಸಂಬಂಧಗಳ 60ನೇ ವಾರ್ಷಿಕೋತ್ಸವದ ಆಚರಣೆಯೂ ಸಹ ಅವರ ಚರ್ಚೆಗಳಲ್ಲಿ ಸೇರಿತ್ತು. ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಸಂಪರ್ಕವು ಈ ಬಾಂಧವ್ಯಗಳ ಪ್ರಮುಖ ಅಂಶವಾಗಿದೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ಸಿಂಗಾಪುರದಲ್ಲಿ ಭಾರತದ ಮೊದಲ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರವನ್ನು ತೆರೆಯಲಾಗುವುದು ಎಂದು ಪ್ರಧಾನಿ ಘೋಷಿಸಿದರು. ಭಾರತ - ಆಸಿಯಾನ್ ಸಂಬಂಧಗಳು ಮತ್ತು ಇಂಡೋ-ಪೆಸಿಫಿಕ್‌ಗಾಗಿ ಭಾರತದ ದೂರದೃಷ್ಟಿ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಸೆಮಿಕಂಡಕ್ಟರ್‌ಗಳು, ಡಿಜಿಟಲ್ ತಂತ್ರಜ್ಞಾನಗಳು, ಕೌಶಲ್ಯಾಭಿವೃದ್ಧಿ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಹಕಾರಕ್ಕಾಗಿ ಎಂಒಯುಗಳ (ಒಪ್ಪಂದ) ವಿನಿಮಯಕ್ಕೆ ಇಬ್ಬರೂ ನಾಯಕರು ಸಾಕ್ಷಿಯಾದರು. ಈವರೆಗೆ ನಡೆದ ಭಾರತ-ಸಿಂಗಾಪುರ ಸಚಿವರ ದುಂಡು ಮೇಜಿನ ಎರಡು ಸುತ್ತಿನ ಚರ್ಚೆಯ ಫಲಿತಾಂಶಗಳು ಇವಾಗಿದೆ. ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ವಾಂಗ್ ಅವರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಆಹ್ವಾನಿಸಿದರು, ಅದಕ್ಕೆ ವಾಂಗ್ ಅವರು ಸಮ್ಮತಿ ಸೂಚಿಸಿದರು.
*****
(Release ID: 2052215)
Visitor Counter : 43
Read this release in:
Telugu
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam