ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪದ್ಮ ಪ್ರಶಸ್ತಿಗಳು-2025 ಕ್ಕೆ ನಾಮನಿರ್ದೇಶನ ಶಿಫಾರಸು ಮಾಡಲು 15ನೇ ಸೆಪ್ಟೆಂಬರ್, 2024 ರವರೆಗೆ ಅವಕಾಶ ತೆರೆದಿರುತ್ತವೆ

Posted On: 03 SEP 2024 2:48PM by PIB Bengaluru

2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿ2025 ಗಳಿಗೆ ಮೇ 01, 2024 ರಿಂದ ನಾಮನಿರ್ದೇಶನ / ಶಿಫಾರಸುಗಳ ಪ್ರಕ್ರಿಯೆ ಪ್ರಾರಂಭವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳ ಶಿಫಾರಸು ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 15, 2024. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ್ (https://awards.gov.in) ಜಾಲತಾಣದ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. 

ಪದ್ಮ ಪ್ರಶಸ್ತಿಗಳೆಂದರೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಸೇರಿದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಾಗಿವೆ. 1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಪ್ರಶಸ್ತಿಯು 'ವಿಶಿಷ್ಟಪೂರ್ಣ ಕೆಲಸ / ಸಾಧನೆಗಳನ್ನು' ಗುರುತಿಸಲು ಪ್ರಯತ್ನಿಸುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ / ಸಮಾಜ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ, ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ / ವರ್ಗಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು / ಸೇವೆಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ಕ್ಷೇತ್ರದ ಘಟಕಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಯಾವುದೇ ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.

ಪದ್ಮ ಪ್ರಶಸ್ತಿಗಳನ್ನು "ಜನರ ಪದ್ಮ" (ಶ್ರೀಸಾಮಾನ್ಯರ ಪದ್ಮ)ವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ಯಾವುದೇ ಸಾಧಕರನ್ನು ನಾಮನಿರ್ದೇಶನ / ಶಿಫಾರಸು ಮಾಡಲು ವಿನಂತಿಸಲಾಗಿದೆ. ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಪ.ಜಾ ಮತ್ತು ಪ.ಪಂ ಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬಹುದು.

ಜಾಲತಾಣ https://awards.gov.in ರಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ನಾಮನಿರ್ದೇಶನಗಳು/ ಶಿಫಾರಸುಗಳು  ಒಳಗೊಂಡಿರಬೇಕು. ವ್ಯಕ್ತಿಯ ವ್ಯಕ್ತಿತ್ವ / ವ್ಯಕ್ತಿ ಚಿತ್ರಣ ಕುರಿತಾದ ನಿರೂಪಣೆಯ ರೂಪದಲ್ಲಿ ಪೂರ್ಣ ಉಲ್ಲೇಖ-ಬರಹಗಳನ್ನು ಒಳಗೊಂಡಂತೆ (ಗರಿಷ್ಠ 800 ಪದಗಳು) ವಿವರಗಳನ್ನು ಹಾಗೂ ಆಕೆಯ/ಅವರ ಸಂಬಂಧಿತ ಕ್ಷೇತ್ರ / ವರ್ಗಗಳಲ್ಲಿ ಕಾರ್ಯಸಾಧನೆಗಳ ಪೂರ್ಣ ಮಾಹಿತಿಯನ್ನು ನೀಡಬೇಕು. ಶಿಫಾರಸು ಮಾಡಲಾದ ವ್ಯಕ್ತಿಯ ವಿಶಿಷ್ಟ, ಅನನ್ಯ ಮತ್ತು ಅಸಾಧಾರಣ ಸಾಧನೆಗಳು / ಸೇವಾಕಾರ್ಯಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.

ಈ ಪ್ರಶಸ್ತಿಗಳ ಕುರಿತಾದ ಸಂಪೂರ್ಣ ವಿವರಗಳು ಕೇಂದ್ರ ಗೃಹ ಸಚಿವಾಲಯದ  (https://mha.gov.in) ಮತ್ತು ಪದ್ಮ ಪ್ರಶಸ್ತಿಗಳ (https://padmaawards.gov.in) ಜಾಲತಾಣಗಳಲ್ಲಿ 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಾವಳಿಗಳು https://padmaawards.gov.in/AboutAwards.aspx ಜಾಲತಾಣ ಕೊಂಡಿಯಲ್ಲಿ ಲಭ್ಯವಿದೆ.

 

*****


(Release ID: 2051308) Visitor Counter : 46