ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈನಲ್ಲಿ ನಡೆದ ʼಗ್ಲೋಬಲ್ ಫಿನ್ಟೆಕ್ ಫೆಸ್ಟ್ʼನಲ್ಲಿ ಪ್ರಧಾನಮಂತ್ರಿಯವರ ಭಾಷಣ  

Posted On: 30 AUG 2024 2:27PM by PIB Bengaluru

ನಮಸ್ಕಾರ!

ಆರ್ ಬಿ ಐ ಗವರ್ನರ್ ಅವರಾದ ಶ್ರೀ ಶಕ್ತಿಕಾಂತ ದಾಸ್ ಜಿ, ಶ್ರೀ ಕ್ರಿಸ್ ಗೋಪಾಲಕೃಷ್ಣನ್, ನಿಯಂತ್ರಕ ಸಂಸ್ಥೆಗಳ ಗೌರವಾನ್ವಿತ ಸದಸ್ಯರೇ, ಹಣಕಾಸು ಉದ್ಯಮದ ಪ್ರತಿಷ್ಠಿತ ನಾಯಕರೇ, ಫಿನ್ ಟೆಕ್ ಮತ್ತು ನವೋದ್ಯಮ ವಲಯಗಳ ನನ್ನ ಸ್ನೇಹಿತರೇ  ಮತ್ತು ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಇದೀಗ ಜನ್ಮಾಷ್ಟಮಿಯನ್ನು ಆಚರಿಸಿರುವ ಭಾರತವು ಪ್ರಸ್ತುತ ಹಬ್ಬದ ಋತುವಿನಲ್ಲಿದೆ.  ನಮ್ಮ ಆರ್ಥಿಕತೆ ಮತ್ತು ನಮ್ಮ ಮಾರುಕಟ್ಟೆ ಎರಡರಲ್ಲೂ ಹಬ್ಬದ ಉತ್ಸಾಹವಿರುವುದರಿಂದ  ಸಂತೋಷವು ಎದ್ದು ಕಾಣುತ್ತಿದೆ.  ಈ ಸಂಭ್ರಮದ ವಾತಾವರಣದಲ್ಲಿಯೇ ನಾವು ಗ್ಲೋಬಲ್ ಫಿನ್ ಟೆಕ್ ಉತ್ಸವವನ್ನು ಆಯೋಜಿಸುತ್ತಿದ್ದೇವೆ ಮತ್ತು ಅಂತಹ ಕಾರ್ಯಕ್ರಮಕ್ಕೆ ಕನಸಿನ ನಗರ ಮುಂಬೈಗಿಂತ ಉತ್ತಮ ಸ್ಥಳ ಬೇರೆ ಯಾವುದಿದೆ? ದೇಶ ಮತ್ತು ಪ್ರಪಂಚದಾದ್ಯಂತ ಇಲ್ಲಿಗೆ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ನಾನು ನನ್ನ ಆತ್ಮೀಯ ಶುಭಾಶಯಗಳನ್ನು ಮತ್ತು ಸ್ವಾಗತವನ್ನು ಕೋರುತ್ತೇನೆ. ಇಲ್ಲಿಗೆ ಬರುವ ಮೊದಲು, ನಾನು ಹಲವಾರು ಪ್ರದರ್ಶನಗಳನ್ನು ಭೇಟಿ ಮಾಡಲು ಮತ್ತು ಹಲವಾರು ಸ್ನೇಹಿತರೊಂದಿಗೆ ಮಾತನಾಡಲು ಅವಕಾಶವನ್ನು ಹೊಂದಿದ್ದೆ. ಅಲ್ಲಿ, ಭವಿಷ್ಯದ ಸಾಧ್ಯತೆಗಳೊಂದಿಗೆ ತುಂಬಿರುವ ನಮ್ಮ ಯುವಕರ ನೇತೃತ್ವದ ನಾವೀನ್ಯತೆಯ ಸಂಪೂರ್ಣ ಹೊಸ ಜಗತ್ತಿಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮ ಕೆಲಸದೊಂದಿಗೆ ಸರಿದೂಗಲು, ನಾನು ಮಾತುಗಳನ್ನು ಮರುಹೊಂದಿಸುತ್ತೇನೆ: ಸಂಪೂರ್ಣ ಹೊಸ ಪ್ರಪಂಚವು ನಿಜವಾಗಿಯೂ ಹೊರಹೊಮ್ಮುತ್ತಿದೆ. ಈ ಉತ್ಸವದ ಆಯೋಜಕರು ಮತ್ತು ಭಾಗವಹಿಸಿದ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ನಮ್ಮ ನಡುವೆ ಗಮನಾರ್ಹ ಸಂಖ್ಯೆಯ ಅಂತಾರಾಷ್ಟ್ರೀಯ ಅತಿಥಿಗಳೂ ಇದ್ದಾರೆ. ಭಾರತಕ್ಕೆ ಭೇಟಿ ನೀಡುವವರು ನಮ್ಮ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯಿಂದ ಬೆರಗಾಗುತ್ತಿದ್ದ ಸಮಯವಿತ್ತು.  ಈಗ, ಜನರು ಭಾರತಕ್ಕೆ ಬಂದಾಗ, ಅವರು ನಮ್ಮ ಫಿನ್ ಟೆಕ್ ವೈವಿಧ್ಯತೆಯಿಂದ ಆಶ್ಚರ್ಯಚಕಿತರಾಗಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿದ ಕ್ಷಣದಿಂದ ಬೀದಿಬದಿಯ ಆಹಾರ ಮತ್ತು ಶಾಪಿಂಗ್ ನ ಅನುಭವದವರೆಗೆ, ಭಾರತದ ಫಿನ್ ಟೆಕ್ ಕ್ರಾಂತಿಯು ಎಲ್ಲೆಡೆ ಗೋಚರಿಸುತ್ತದೆ.

ಕಳೆದ 10 ವರ್ಷಗಳಲ್ಲಿ, ಫಿನ್ ಟೆಕ್ ವಲಯದಲ್ಲಿ 31 ಶತಕೋಟಿ ಡಾಲರ್ಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ. ಅದೇ ಅವಧಿಯಲ್ಲಿ, ನಮ್ಮ ಫಿನ್ ಟೆಕ್ ನವೋದ್ಯಮಗಳು ಶೇಕಡಾ 500 ರಷ್ಟು ಹೆಚ್ಚಾಗಿದೆ. ಕೈಗೆಟುಕುವ ಮೊಬೈಲ್ ಫೋನ್ ಗಳು, ಕಡಿಮೆ ವೆಚ್ಚದ ಡೇಟಾ ಮತ್ತು ಶೂನ್ಯ ಬ್ಯಾಲೆನ್ಸ್ ಜನ್ ಧನ್ ಬ್ಯಾಂಕಿನ ಖಾತೆಗಳು ಭಾರತದಲ್ಲಿ ಅದ್ಭುತಗಳನ್ನು ಮಾಡಿದೆ. ನಿಮ್ಮಲ್ಲಿ ಕೆಲವರು ನೆನಪಿಸಿಕೊಳ್ಳಬಹುದು, ಬಹಳ ಹಿಂದೆಯೇ, ಭಾರತದಲ್ಲಿ ಫಿನ್ ಟೆಕ್ ಕ್ರಾಂತಿಯು ಹೇಗೆ ಸಂಭವಿಸಬಹುದು ಎಂದು ಪ್ರಶ್ನಿಸುವ ಸಂದೇಹವಾದಿಗಳು ಇದ್ದರು. ಅವರು ಸಂಸತ್ತಿನಲ್ಲಿಯೂ ಕೇಳಿದರು, ಮತ್ತು ಇವರು ತಮ್ಮನ್ನು ಹೆಚ್ಚು ಜ್ಞಾನವುಳ್ಳವರು ಎಂದು ಪರಿಗಣಿಸುವ ಜನರು. ಪ್ರತಿ ಹಳ್ಳಿಯಲ್ಲಿ ಸಾಕಷ್ಟು ಬ್ಯಾಂಕ್ ಗಳು ಅಥವಾ ಶಾಖೆಗಳು ಇಲ್ಲದಿರುವಾಗ, ಇಂಟರ್ನೆಟ್ ಲಭ್ಯತೆಯು ಸೀಮಿತವಾದಾಗ ಮತ್ತು ವಿದ್ಯುತ್ ಸರಬರಾಜು ವಿಶ್ವಾಸಾರ್ಹವಲ್ಲದಿರುವಾಗ ಈ ಕ್ರಾಂತಿ ಹೇಗೆ ಆಗಬಹುದು ಎಂದು ಅವರು ಪ್ರಶ್ನಿಸಿದರು. ಜನರು ತಮ್ಮ ಸಾಧನಗಳನ್ನು ಎಲ್ಲಿ ರೀಚಾರ್ಜ್ ಮಾಡುತ್ತಾರೆ ಮತ್ತು ಫಿನ್ ಟೆಕ್ ಕ್ರಾಂತಿಯು ಆಗುವುದೇ? ಈ ಪ್ರಶ್ನೆಗಳನ್ನು ನನ್ನೆಡೆಗೆ ಗುರಿಮಾಡಲಾಗಿತ್ತು. ಆದರೆ ಇಂದು ನಾವು ಎಲ್ಲಿದ್ದೇವೆ ನೋಡಿ. ಕೇವಲ ಒಂದು ದಶಕದಲ್ಲಿ, ಭಾರತದಲ್ಲಿ ಬ್ರಾಡ್ ಬ್ಯಾಂಡ್ ಬಳಕೆದಾರರು 60 ದಶಲಕ್ಷ  ಅಥವಾ 6 ಕೋಟಿಯಿಂದ 940 ದಶಲಕ್ಷ  ಅಥವಾ 94 ಕೋಟಿಗೆ ಏರಿದ್ದಾರೆ. ಇಂದು ಡಿಜಿಟಲ್ ಗುರುತು, ಆಧಾರ್ ಕಾರ್ಡ್ ಇಲ್ಲದ ಭಾರತೀಯ ವಯಸ್ಕರನ್ನು ಕಾಣುವುದು ಅಪರೂಪ.  ಇದಲ್ಲದೆ, 530 ದಶಲಕ್ಷ  ಜನರು ಈಗ ಜನ್ ಧನ್ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಇದರರ್ಥ, 10 ವರ್ಷಗಳ ಅವಧಿಯಲ್ಲಿ, ನಾವು ಇಡೀ ಯುರೋಪಿಯನ್ ಒಕ್ಕೂಟದ ಜನಸಂಖ್ಯೆಗೆ ಸಮನಾದ ಜನಸಂಖ್ಯೆಯನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಿದ್ದೇವೆ.

ಸ್ನೇಹಿತರೇ,

ಜನ ಧನ್-ಆಧಾರ್ ಮತ್ತು ಮೊಬೈಲ್ ಎಂಬ ಈ ತ್ರಿಮೂರ್ತಿಗಳು ಮತ್ತೊಂದು ಪರಿವರ್ತನೆಗೆ ಚಾಲನೆ ನೀಡಿವೆ. ಕೆಲವೊಮ್ಮೆ ಜನರು ʼಕ್ಯಾಶ್ ಈಸ್ ಕಿಂಗ್ʼ ಎಂದು ಹೇಳುತ್ತಿದ್ದರು. ಇಂದು, ಪ್ರಪಂಚದ ಅರ್ಧದಷ್ಟು ನೈಜ ಸಮಯದ ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆಯುತ್ತವೆ. ಭಾರತದ ಯುಪಿಐ  ಪ್ರಪಂಚದಾದ್ಯಂತ ಫಿನ್ ಟೆಕ್ ಗೆ ಉತ್ತಮ ಉದಾಹರಣೆಯಾಗಿದೆ. ಇಂದು, ಹಳ್ಳಿ ಅಥವಾ ನಗರ, ಚಳಿಗಾಲ ಅಥವಾ ಬೇಸಿಗೆ, ಮಳೆ ಅಥವಾ ಹಿಮ, ಭಾರತದಲ್ಲಿ ಬ್ಯಾಂಕಿಂಗ್ ಸೇವೆಯು 24 ಗಂಟೆಗಳು, 7 ದಿನಗಳು, 12 ತಿಂಗಳುಗಳು ಮುಂದುವರಿಯುತ್ತದೆ. ಕೊರೊನದಂತಹ ದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಹ, ನಮ್ಮ ಬ್ಯಾಂಕಿಂಗ್ ಸೇವೆಗಳು ಯಾವುದೇ ಸಮಸ್ಯೆಯಿಲ್ಲದೆ ಮುಂದುವರಿದ ವಿಶ್ವದ ದೇಶಗಳಲ್ಲಿ ಭಾರತವೂ ಸೇರಿದೆ.

ಸ್ನೇಹಿತರೇ,
ಕೆಲವೇ ದಿನಗಳ ಹಿಂದೆ, ಜನ ಧನ್ ಯೋಜನೆ 10  ವಾರ್ಷಿಕೋತ್ಸವವನ್ನು ಆಚರಿಸಿತು. ಜನ ಧನ್ ಯೋಜನೆಯು ಮಹಿಳಾ ಸಬಲೀಕರಣದ ಪ್ರಮುಖ ಮಾಧ್ಯಮವಾಗಿದೆ. ಜನ್ ಧನ್ ಯೋಜನೆಯಿಂದಾಗಿ ಸುಮಾರು 290 ದಶಲಕ್ಷ ಅಂದರೆ 29 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳು ಮಹಿಳೆಯರಿಗೆ ಉಳಿತಾಯ ಮತ್ತು ಹೂಡಿಕೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ. ಜನ ಧನ್ ಖಾತೆಗಳ ತತ್ವದ ಮೇಲೆ, ನಾವು ಅತಿ ದೊಡ್ಡ ಕಿರುಬಂಡವಾಳ ಯೋಜನೆಯಾದ ಮುದ್ರಾವನ್ನು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, ಈ ಯೋಜನೆಯಡಿಯಲ್ಲಿ 27 ಟ್ರಿಲಿಯನ್ಗಿಂತ ಹೆಚ್ಚು ಮೌಲ್ಯದ ಸಾಲವನ್ನು ನೀಡಲಾಗಿದೆ. ಈ ಯೋಜನೆಯ ಶೇಕಡ 70ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ. ಜನ ಧನ್ ಖಾತೆಗಳು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಬ್ಯಾಂಕಿಂಗಿನೊಂದಿಗೆ ಜೋಡಿಸಿವೆ. ಇಂದು ದೇಶದ 10 ಕೋಟಿ ಗ್ರಾಮೀಣ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅಂದರೆ, ಜನ್ ಧನ್ ಕಾರ್ಯಕ್ರಮವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ.

ಸ್ನೇಹಿತರೇ,
ಸಮಾನಾಂತರ ಅಥವಾ ಬದಲೀ ಆರ್ಥಿಕತೆಯು ಇಡೀ ಜಗತ್ತಿಗೆ ಬಹಳ ಕಳವಳಕಾರಿ ವಿಷಯವಾಗಿದೆ. ಫಿನ್ ಟೆಕ್ ಸಮಾನಾಂತರ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ಈ ಸಾಧನೆಗಾಗಿ ನೀವು ಅಭಿನಂದನೆಗಳಿಗೆ ಅರ್ಹರು. ಡಿಜಿಟಲ್ ತಂತ್ರಜ್ಞಾನದ ಮೂಲಕ ನಾವು ಭಾರತದಲ್ಲಿ ಪಾರದರ್ಶಕತೆಯನ್ನು ಹೇಗೆ ತಂದಿದ್ದೇವೆ ಎನ್ನವುದನ್ನು ನಾವು ಕಂಡಿರುವೆವು. ಇಂದು, ನೂರಾರು ಸರ್ಕಾರಿ ಯೋಜನೆಗಳ ಅಡಿಯಲ್ಲಿ ನೇರ ಲಾಭ ವರ್ಗಾವಣೆಯನ್ನು ಮಾಡಲಾಗುತ್ತದೆ. ಇದು ವ್ಯವಸ್ಥೆಯಿಂದ ಸೋರಿಕೆಯನ್ನು ನಿಲ್ಲಿಸಿದೆ. ಇಂದು ಜನರು ಔಪಚಾರಿಕ ಆರ್ಥಿಕತೆಯನ್ನು ಸೇರುವಲ್ಲಿ ತಮ್ಮದೇ ಆದ ಪ್ರಯೋಜನಗಳನ್ನು ಕಂಡಿದ್ದಾರೆ.

ಸ್ನೇಹಿತರೇ,
ಫಿನ್ ಟೆಕ್ ನಿಂದಾಗಿ ಭಾರತದಲ್ಲಿ ಆಗಿರುವ ರೂಪಾಂತರವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಇದರ ಸಾಮಾಜಿಕ ಪ್ರಭಾವ ಬಹಳ ವಿಸ್ತಾರವಾಗಿದೆ. ಇದು ಹಳ್ಳಿ ಮತ್ತು ನಗರದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಬ್ಯಾಂಕಿನ ಸೇವೆಯನ್ನು ಪಡೆಯಲು ಇಡೀ ದಿನ ತೆಗೆದುಕೊಳ್ಳುತ್ತಿತ್ತು, ಇದು ರೈತ, ಮೀನುಗಾರ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿತ್ತು.  ಫಿನ್ ಟೆಕ್ ಈ ಸಮಸ್ಯೆಯನ್ನು ಪರಿಹರಿಸಿದೆ. ಬ್ಯಾಂಕುಗಳು ಕೇವಲ ಕಟ್ಟಡಗಳಿಗೆ ಸೀಮಿತವಾಗಿತ್ತು. ಇಂದು ಬ್ಯಾಂಕ್ ಗಳು ಪ್ರತಿಯೊಬ್ಬ ಭಾರತೀಯನ ಮೊಬೈಲ್ ಫೋನುಗಳಲ್ಲಿ ಸೇರಿಕೊಂಡಿವೆ.
ಸ್ನೇಹಿತರೇ,
ಹಣಕಾಸು ಸೇವೆಗಳನ್ನು ಸಾರ್ವಜನಿಕಗೊಳಿಸುವಲ್ಲಿ ಫಿನ್ ಟೆಕ್ ಮಹತ್ವದ ಪಾತ್ರವನ್ನು ವಹಿಸಿದೆ. ಸಾಲಗಳು, ಕ್ರೆಡಿಟ್ ಕಾರ್ಡ್ಗಳು, ಹೂಡಿಕೆಗಳು ಮತ್ತು ವಿಮೆಯಂತಹ ಉತ್ಪನ್ನಗಳು ಎಲ್ಲರಿಗೂ ಹೆಚ್ಚು ಲಭ್ಯವಾಗುತ್ತಿವೆ. ಫಿನ್ ಟೆಕ್ ಕ್ರೆಡಿಟ್ / ಸಾಲಕ್ಕೆ  ಲಭ್ಯತೆಯನ್ನು ಸುಲಭ ಮತ್ತು ಹೆಚ್ಚು ಒಳಗೊಳ್ಳುವಂತೆ ಮಾಡಿದೆ. ನಾನು ಒಂದು ಉದಾಹರಣೆ ನೀಡುತ್ತೇನೆ. ಭಾರತದಲ್ಲಿ, ಬೀದಿ ವ್ಯಾಪಾರಿಗಳ ದೀರ್ಘಕಾಲದ ಸಂಪ್ರದಾಯವಿದೆ, ಆದರೆ ಅದನ್ನು ಮೊದಲು ಔಪಚಾರಿಕ ಬ್ಯಾಂಕಿಂಗ್ ನಿಂದ ಹೊರಗಿಡಲಾಗಿತ್ತು. ಫಿನ್ಟೆಕ್ ಈ ಪರಿಸ್ಥಿತಿಯನ್ನು ಬದಲಾಯಿಸಿದೆ. ಇಂದು, ಈ ಮಾರಾಟಗಾರರು ಪಿಎಂ-ಸ್ವನಿಧಿ  ಯೋಜನೆ ಮೂಲಕ ಮೇಲಾಧಾರ-ಮುಕ್ತ ಸಾಲಗಳನ್ನು ಪಡೆಯಬಹುದು ಮತ್ತು ಅವರ ಡಿಜಿಟಲ್ ವಹಿವಾಟು ದಾಖಲೆಗಳ ಆಧಾರದ ಮೇಲೆ, ಅವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಹೆಚ್ಚುವರಿ ಸಾಲಗಳನ್ನು ಪಡೆಯಬಹುದು. ಹಿಂದೆ, ಷೇರುಗಳು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಪ್ರಾಥಮಿಕವಾಗಿ ಪ್ರಮುಖ ನಗರಗಳಿಗೆ ಸೀಮಿತವಾಗಿತ್ತು. ಈಗ, ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿರುವವರೂ ಸಹ ಈ ಹೂಡಿಕೆಯ ಅವಕಾಶಗಳನ್ನು ಹೆಚ್ಚಾಗಿ ಹುಡುಕುತ್ತಿದ್ದಾರೆ. ಇಂದು, ಡಿಮ್ಯಾಟ್ ಖಾತೆಗಳನ್ನು ಕೆಲವೇ ನಿಮಿಷಗಳಲ್ಲಿ ಮನೆಯಿಂದಲೇ ತೆರೆಯಬಹುದು ಮತ್ತು ಹೂಡಿಕೆ ವರದಿಗಳು ಆನ್ ಲೈನ್ನಲ್ಲಿ ಸುಲಭವಾಗಿ ಲಭ್ಯವಿವೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಈಗ ರಿಮೋಟ್ ಹೆಲ್ತ್ಕೇರ್ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ , ಆನ್ ಲೈನ್ನಲ್ಲಿ ಅಧ್ಯಯನ ಮಾಡುತ್ತಾರೆ ಮತ್ತು ಹೊಸ ಕೌಶಲ್ಯಗಳನ್ನು ಡಿಜಿಟಲ್ ನಲ್ಲಿ ಕಲಿಯುತ್ತಾರೆ.  ಇದರಲ್ಲಿ ಯಾವುದೂ ಫಿನ್ ಟೆಕ್ ಇಲ್ಲದೆ ಸಾಧ್ಯವಾಗುತ್ತಿರಲಿಲ್ಲ.  ಭಾರತದ ಫಿನ್ ಟೆಕ್ ಕ್ರಾಂತಿಯು ಜೀವನದ ಘನತೆ ಮತ್ತು ಜೀವನದ ಗುಣಮಟ್ಟ ಎರಡನ್ನೂ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.

ಸ್ನೇಹಿತರೇ,
ಭಾರತದ ಫಿನ್ ಟೆಕ್ ಕ್ರಾಂತಿಯ ಸಾಧನೆಯು ನಾವೀನ್ಯತೆಗಳ ಬಗ್ಗೆ ಮಾತ್ರವಲ್ಲ, ಅಳವಡಿಕೆಯ ಬಗ್ಗೆಯೂ ಇದೆ. ಭಾರತದ ಜನರು ಫಿನ್ ಟೆಕ್ ಅನ್ನು ಅಳವಡಿಸಿಕೊಂಡಿರುವ ವೇಗ ಮತ್ತು ಪ್ರಮಾಣವು ಬೇರೆಲ್ಲಿಯೂ ಕಂಡುಬರುವುದಿಲ್ಲ. ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ-ಡಿಪಿಐ  ಮತ್ತು ನಮ್ಮ ಫಿನ್ ಟೆಕ್ ಇದಕ್ಕಾಗಿ ಕಾರಣೀಭೂತವಾಗಿವೆ. ಈ ತಂತ್ರಜ್ಞಾನದ ಬಗ್ಗೆ ವಿಶ್ವಾಸ ಮೂಡಿಸಲು ದೇಶದಲ್ಲಿ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗಿದೆ. ಕ್ಯೂ ಆರ್ ಕೋಡ್ ಗಳ ಜೊತೆಗೆ ಧ್ವನಿ ಪೆಟ್ಟಿಗೆಗಳ ಬಳಕೆಯು ಅಂತಹ ಒಂದು ಆವಿಷ್ಕಾರವಾಗಿದೆ. ನಮ್ಮ ಫಿನ್ ಟೆಕ್ ವಲಯವು ಸರ್ಕಾರದ ʼಬ್ಯಾಂಕ್ ಸಖಿʼ ಕಾರ್ಯಕ್ರಮವನ್ನು ಸಹ ಅಧ್ಯಯನ ಮಾಡಬೇಕು. ಮತ್ತು ನಾನು ಎಲ್ಲಾ ಫಿನ್ ಟೆಕ್ ಯುವಕರಿಗೆ ಒಂದು ಘಟನೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ    ನಾನು ಜಲಗಾಂವ್ ಗೆ  ಭೇಟಿ ನೀಡಿದ ಸಂದರ್ಭದಲ್ಲಿ ನಾನು ಈ ಕೆಲವು ಬ್ಯಾಂಕ್ ಸಖಿಗಳನ್ನು ಭೇಟಿಯಾದೆ. ಒಬ್ಬಾಕೆ ಪ್ರತಿದಿನ ಒಂದೂವರೆ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾಳೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಎಂತಹ ಆತ್ಮವಿಶ್ವಾಸ, ಮತ್ತು ಅವರೊಬ್ಬರು ಹಳ್ಳಿಯ ಮಹಿಳೆ. ನಮ್ಮ ಹೆಣ್ಣುಮಕ್ಕಳು ಪ್ರತಿ ಹಳ್ಳಿಯಲ್ಲಿ ಬ್ಯಾಂಕಿಂಗ್ ಮತ್ತು ಡಿಜಿಟಲ್ ಜಾಗೃತಿಯನ್ನು ಹರಡಿದ ರೀತಿಯಿಂದಾಗಿ, ಫಿನ್ ಟೆಕ್ ಹೊಸ ಮಾರುಕಟ್ಟೆಯನ್ನು ಪಡೆದುಕೊಂಡಿದೆ.

ಸ್ನೇಹಿತರೇ,

21 ನೇ ಶತಮಾನದ ಪ್ರಪಂಚವು ಬಹಳ ವೇಗವಾಗಿ ಬದಲಾಗುತ್ತಿದೆ. ಕರೆನ್ಸಿಯಿಂದ ಕ್ಯೂ ಆರ್ ಕೋಡ್ಗಳವರೆಗಿನ ಪ್ರಯಾಣವು ಶತಮಾನಗಳನ್ನು ತೆಗೆದುಕೊಂಡಿತು, ಆದರೆ ಈಗ ನಾವು ಪ್ರತಿದಿನ ಹೊಸ ಆವಿಷ್ಕಾರಗಳನ್ನು ನೋಡುತ್ತಿದ್ದೇವೆ. ಡಿಜಿಟಲ್ ಓನ್ಲಿ ಬ್ಯಾಂಕ್ ಗಳು ಮತ್ತು ನಿಯೋ ಬ್ಯಾಂಕಿಂಗ್ನಂತಹ ಪರಿಕಲ್ಪನೆಗಳು ನಮ್ಮ ಮುಂದಿವೆ. ಡಿಜಿಟಲ್ ಟ್ವಿನ್ಸ್ ನಂತಹ ತಂತ್ರಜ್ಞಾನಗಳು ಡೇಟಾ ಆಧಾರಿತ ಬ್ಯಾಂಕಿಂಗ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿವೆ. ಇದು ಅಪಾಯ ನಿರ್ವಹಣೆ, ವಂಚನೆ ಪತ್ತೆ ಮತ್ತು ಗ್ರಾಹಕರ ಅನುಭವದಿಂದ ಎಲ್ಲವನ್ನೂ ಬದಲಾಯಿಸಲಿದೆ. ಭಾರತವೂ ನಿರಂತರವಾಗಿ ಹೊಸ ಫಿನ್ ಟೆಕ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಉತ್ಪನ್ನಗಳನ್ನು ಸ್ಥಳೀಯವಾಗಿ ರಚಿಸುತ್ತಿದ್ದೇವೆ, ಆದರೆ ಅವುಗಳ ಅಪ್ಲಿಕೇಶನ್ ಜಾಗತಿಕವಾಗಿದೆ. ಇಂದು ಒಎನ್ ಡಿಸಿ ಅಂದರೆ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್ ವರ್ಕ್ ಆನ್ಲೈನ್ ಶಾಪಿಂಗ್ ಅನ್ನು ಒಳಗೊಳ್ಳುವಂತೆ ಮಾಡುತ್ತಿದೆ. ಇದು   ಸಣ್ಣ ಉದ್ಯಮಗಳನ್ನು ದೊಡ್ಡ ಅವಕಾಶಗಳೊಂದಿಗೆ ಸಂಪರ್ಕಿಸುತ್ತದೆ. ಜನರು ಮತ್ತು ಕಂಪನಿಗಳಿಗೆ ಕೆಲಸವನ್ನು ಸುಲಭಗೊಳಿಸಲು ಖಾತೆ ಸಂಗ್ರಾಹಕರು ದತ್ತಾಂಶವನ್ನು ಬಳಸುತ್ತಿದ್ದಾರೆ. ಟ್ರೇಡ್ಸ್ ಪ್ಲಾಟ್ಫಾರ್ಮ್ ನ ಸಹಾಯದಿಂದ, ಸಣ್ಣ ಸಂಸ್ಥೆಗಳ ದ್ರವ್ಯತೆ ಮತ್ತು ನಗದು ಹರಿವು ಸುಧಾರಿಸುತ್ತಿದೆ. ಇ-ರುಪಿ ಡಿಜಿಟಲ್ ವೋಚರ್ ಆಗಿದ್ದು ಇದನ್ನು ಹಲವು ರೂಪಗಳಲ್ಲಿ ಬಳಸಲಾಗುತ್ತಿದೆ. ಭಾರತದ ಈ ಉತ್ಪನ್ನಗಳು ಜಗತ್ತಿನ ಇತರ ದೇಶಗಳಿಗೂ ಅಷ್ಟೇ ಉಪಯುಕ್ತವಾಗಿವೆ. ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಜಿ-20 ಅಧ್ಯಕ್ಷತೆಯ ಸಮಯದಲ್ಲಿ ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರವನ್ನು ರಚಿಸಲು ಪ್ರಸ್ತಾಪಿಸಿದ್ದೇವೆ, ಇದನ್ನು ಜಿ-20 ಸದಸ್ಯರು ಪೂರ್ಣ ಹೃದಯದಿಂದ ಸ್ವೀಕರಿಸಿದರು. ಕೃತಕ ಬುದ್ದಿಮತ್ತೆಯ  ದುರುಪಯೋಗದ ಬಗ್ಗೆ ನಿಮ್ಮ ಕಾಳಜಿಯನ್ನು ಸಹ ನಾನು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ, ಕೃತಕ ಬುದ್ದಿಮತ್ತೆಯ  ನೈತಿಕ ಬಳಕೆಗಾಗಿ ಜಾಗತಿಕ ಚೌಕಟ್ಟನ್ನು ರಚಿಸಲು ಭಾರತವು ಕರೆ ನೀಡಿದೆ.
 
ಸ್ನೇಹಿತರೇ,

ಫಿನ್ ಟೆಕ್ ವಲಯಕ್ಕೆ ಸಹಾಯ ಮಾಡಲು, ಸರ್ಕಾರವು ನೀತಿ ಮಟ್ಟದಲ್ಲಿ ಎಲ್ಲಾ ಅಗತ್ಯ ಬದಲಾವಣೆಗಳನ್ನು ಮಾಡುತ್ತಿದೆ. ಇತ್ತೀಚೆಗೆ ನಾವು ಏಂಜೆಲ್ ತೆರಿಗೆಯನ್ನು ತೆಗೆದುಹಾಕಿದ್ದೇವೆ.  ಅದು ಸರಿಯಾದ ನಿರ್ಧಾರವಲ್ಲವೇ?  ದೇಶದಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ನಾವು 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ರಚಿಸುವುದಾಗಿ ಘೋಷಿಸಿದ್ದೇವೆ. ನಾವು ದತ್ತಾಂಶ  ರಕ್ಷಣೆ ಕಾನೂನನ್ನು ಜಾರಿಗೊಳಿಸಿದ್ದೇವೆ. ನಮ್ಮ ನಿಯಂತ್ರಕರಿಂದ ನನಗೂ ಕೆಲವು ನಿರೀಕ್ಷೆಗಳಿವೆ. ಸೈಬರ್ ವಂಚನೆಯನ್ನು ತಡೆಯಲು ಮತ್ತು ಡಿಜಿಟಲ್ ಸಾಕ್ಷರತೆಗಾಗಿ ನಾವು ದೊ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸೈಬರ್ ವಂಚನೆಯು ನವೋದ್ಯಮಗಳು ಮತ್ತು ಫಿನ್-ಟೆಕ್ ಗಳ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.

 ಸ್ನೇಹಿತರೇ,

ಹಿಂದಿನ ಕಾಲದಲ್ಲಿ, ಬ್ಯಾಂಕ್ ಕುಸಿಯಲಿದೆ ಅಥವಾ ಬ್ಯಾಂಕ್ ವಿಫಲವಾಗಿದೆ ಅಥವಾ ಮುಳುಗುತ್ತದೆ ಎಂಬ ಸುದ್ದಿ ಹರಡಲು 5-7 ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಇಂದು ಯಾವುದಾದರೂ ವ್ಯವಸ್ಥೆಯಲ್ಲಿ ಸೈಬರ್ ವಂಚನೆ ಇರುವುದು ಕಂಡು ಬಂದರೆ ನಿಮಿಷಗಳೊಳಗೆ ಆ ಕಂಪನಿಯನ್ನು ಮುಗಿಸಬಹುದು.  ಇದು ಫಿನ್ ಟೆಕ್ ಗೆ ವಿಶೇಷವಾಗಿ ನಿರ್ಣಾಯಕವಾಗಿದೆ. ಇದಲ್ಲದೆ, ಸೈಬರ್ ಪರಿಹಾರಗಳು ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತವೆ. ಸೈಬರ್ ಪರಿಹಾರವು ಎಷ್ಟೇ ಮುಂದುವರಿದಿದ್ದರೂ,  ಅಪರಾದಿಗಳು ಅದನ್ನು ಉಲ್ಲಂಘಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಇದರಿಂದಾಗಿ ಪರಿಹಾರದ ಬಳಕೆಯು ಅತ್ಯಲ್ಪವಾಗಿರುತ್ತದೆ. ಆದ್ದರಿಂದ, ನಿರಂತರವಾಗಿ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ. 

ಸ್ನೇಹಿತರೇ,

ಇಂದು ಸುಸ್ಥಿರ ಆರ್ಥಿಕ ಬೆಳವಣಿಗೆಯು ಭಾರತದ ಆದ್ಯತೆಯಾಗಿದೆ. ನಾವು ಬಲವಾದ, ಪಾರದರ್ಶಕ ಮತ್ತು ಪರಿಣಾಮಕಾರಿ ವ್ಯವಸ್ಥೆಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಸುಧಾರಿತ ತಂತ್ರಜ್ಞಾನಗಳು ಮತ್ತು ನಿಯಂತ್ರಕ ಚೌಕಟ್ಟುಗಳೊಂದಿಗೆ ಹಣಕಾಸು ಮಾರುಕಟ್ಟೆಗಳನ್ನು ಬಲಪಡಿಸುತ್ತಿದ್ದೇವೆ. ನಾವು ಗ್ರೀನ್ ಫೈನಾನ್ಸ್ ನೊಂದಿಗೆ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುತ್ತಿದ್ದೇವೆ. ನಾವು ಆರ್ಥಿಕ ಸೇರ್ಪಡೆ, ಆ ಸೇರ್ಪಡೆಯ ಶುದ್ಧತ್ವಕ್ಕೆ ಒತ್ತು ನೀಡುತ್ತಿದ್ದೇವೆ. ಭಾರತದ ಜನರಿಗೆ ಗುಣಮಟ್ಟದ ಜೀವನಶೈಲಿಯನ್ನು ಒದಗಿಸುವ ಉದ್ದೇಶದಲ್ಲಿ ಭಾರತದ ಫಿನ್ಟೆಕ್ ಪರಿಸರ ವ್ಯವಸ್ಥೆಯು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಭಾರತದ ಫಿನ್ಟೆಕ್ ಪರಿಸರ ವ್ಯವಸ್ಥೆಯು ಇಡೀ ಪ್ರಪಂಚದ ಜನಜೀವನವನ್ನು ಸುಲಭಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಮತ್ತು ನನ್ನ ದೇಶದ ಯುವಕರ ಪ್ರತಿಭೆಯಲ್ಲಿ ನನಗೆ ತುಂಬಾ ನಂಬಿಕೆ ಇದೆ  ಮತ್ತು ನಾನು ಇದನ್ನು ಅತ್ಯಂತ ಆತ್ಮವಿಶ್ವಾಸದಿಂದ ಹೇಳುತ್ತೇನೆ - Our Best Is Yet To Come. ನಮ್ಮ ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ.

ಇದು ನಿಮ್ಮ ಐದನೇ ಕಾರ್ಯಕ್ರಮ, ಅಲ್ಲವೇ?   ಹಾಗಾಗಿ ಹತ್ತನೆಯದಕ್ಕೂ ಹಾಜರಾಗಲು ಎದುರು ನೋಡುತ್ತಿದ್ದೇನೆ. ನೀವು ಆ ಎತ್ತರವನ್ನು ತಲುಪುವ ಕಲ್ಪನೆಯನ್ನು ಹೊಂದಿರದಿರಬಹುದು, ಆದರೆ ನೀವು ತಲುಪುತ್ತೀರಿ ತಲುಪಿರುತ್ತೀರಿ ಗೆಳೆಯರೇ.  ಇಂದು ನಾನು ನಿಮ್ಮ ಕೆಲವು ನವೋದ್ಯಮದ ಘಟಕದ ಜನರನ್ನು ಭೇಟಿ ಮಾಡಿದ್ದೇನೆ, ನಾನು ಎಲ್ಲರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಆದರೆ ನಾನು ಕೆಲವು ಜನರನ್ನು ಭೇಟಿ ಮಾಡಿದ್ದೇನೆ. ಆದರೆ ನಾನು ಎಲ್ಲರಿಗೂ  10  ಕೆಲಸವನ್ನು ನೀಡಿ ಹಿಂತಿರುಗಿದ್ದೇನೆ, ಏಕೆಂದರೆ ಇದು ಒಂದು ದೊಡ್ಡ ಬದಲಾವಣೆಯನ್ನು ತರಬಲ್ಲ ಕ್ಷೇತ್ರವಾಗಿದೆ ಎಂದು ನಾನು ಅರ್ಥಮಾಡಿಕೊಳ್ಳುತ್ತೇನೆ  ಸ್ನೇಹಿತರೇ. ಒಂದು ದೊಡ್ಡ ಕ್ರಾಂತಿ ನಡೆಯುತ್ತಿದೆ ಮತ್ತು ಅದರ ಬಲವಾದ ಅಡಿಪಾಯವನ್ನು ನಾವು ಇಲ್ಲಿ ನೋಡಬಹುದು. ಈ ವಿಶ್ವಾಸದಿಂದ, ನಾನು ನಿಮಗೆ ಶುಭ ಹಾರೈಸುತ್ತೇನೆ! ತುಂಬಾ ಧನ್ಯವಾದಗಳು!
ಶ್ರೀ ಕೃಷ್ಣ ಗೋಪಾಲ್ ಅವರ ಕೋರಿಕೆಯ ಮೇರೆಗೆ ನಾವು ಈ ಫೋಟೋವನ್ನು ತೆಗೆದುಕೊಂಡಿದ್ದೇವೆ ಮತ್ತು ಇದರ ಮಹತ್ವದ ಬಗ್ಗೆ ನೀವು ಆಶ್ಚರ್ಯ ಪಡಬಹುದು. ನಾನು ನಿಮಗೆ ಪ್ರಯೋಜನವನ್ನು ವಿವರಿಸುತ್ತೇನೆ - ನಾನು ಕೃತಕಬುದ್ದಿಮತ್ತೆಯ  ಪ್ರಪಂಚಕ್ಕೆ ಸಂಬಂಧ ಹೊಂದಿರುವ ವ್ಯಕ್ತಿ. ನೀವು ನಮೋ ಅಪ್ಲಿಕೇಶನ್ ಗೆ ಹೋದರೆ, ಫೋಟೋ ವಿಭಾಗಕ್ಕೆ ಹೋಗಿ ಮತ್ತು ಅಲ್ಲಿ ನಿಮ್ಮ ಸೆಲ್ಫಿಯನ್ನು ಇಟ್ಟರೆ, ನೀವು ಇಂದು ನನ್ನೊಂದಿಗೆ ಎಲ್ಲಿ ಕಾಣಿಸಿಕೊಂಡರೂ ಆ ಫೋಟೋವನ್ನು ನಿಮಗೆ ಕಾಣಲು ಸಾಧ್ಯವಾಗುತ್ತದೆ.

ಧನ್ಯವಾದಗಳು!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

 

*****


(Release ID: 2051266) Visitor Counter : 43