ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಡಾ. ಮನ್ಸುಖ್ ಮಾಂಡವಿಯಾ ಅವರು ನಿವೃತ್ತ ಕ್ರೀಡಾ ಪಟುಗಳ ಸಬಲೀಕರಣ ತರಬೇತಿ (RESET) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು


"ರೀಸೆಟ್ ಕಾರ್ಯಕ್ರಮವು ನಮ್ಮ ನಿವೃತ್ತ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ" - ಕೇಂದ್ರ ಸಚಿವರು

ನಿವೃತ್ತ ಕ್ರೀಡಾಪಟುಗಳನ್ನು ಸಂಪೂರ್ಣವಾಗಿ ಬೆಂಬಲಿಸಲು ಸರ್ಕಾರ ಬದ್ಧವಾಗಿದೆ

Posted On: 29 AUG 2024 6:30PM by PIB Bengaluru

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ಇಂದು ನವದೆಹಲಿಯಲ್ಲಿ "ನಿವೃತ್ತ ಕ್ರೀಡಾಪಟುಗಳ ಸಬಲೀಕರಣ ತರಬೇತಿ" (RESET) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರೀಸೆಟ್ ಕಾರ್ಯಕ್ರಮ ಕುರಿತು ಮಾತನಾಡಿದ ಡಾ. ಮಾಂಡವಿಯಾ, “ದೇಶಕ್ಕಾಗಿ ಆಡಿದ ಮತ್ತು ರಾಷ್ಟ್ರಕ್ಕೆ ಅಪಾರ ಪ್ರಶಸ್ತಿಗಳನ್ನು ತಂದ ನಮ್ಮ ನಿವೃತ್ತ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಕಾರ್ಯಕ್ರಮವು ನಿವೃತ್ತ ಕ್ರೀಡಾಪಟುಗಳಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವ ಮೂಲಕ ಮತ್ತು ಅವರನ್ನು ಹೆಚ್ಚು ಉದ್ಯೋಗಿಗಳನ್ನಾಗಿ ಮಾಡುವ ಮೂಲಕ ಅವರ ವೃತ್ತಿಜೀವನದ ಅಭಿವೃದ್ಧಿಯ ಪ್ರಯಾಣದಲ್ಲಿ ಬೆಂಬಲಿಸುತ್ತದೆ.” ಎಂದು ಹೇಳಿದರು.

 

ರೀಸೆಟ್ ಕಾರ್ಯಕ್ರಮವು ತಲೆಮಾರುಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು. ಹೊಸ ತಲೆಮಾರಿನ ಮಹತ್ವಾಕಾಂಕ್ಷಿ ಕ್ರೀಡಾಪಟುಗಳು ನಮ್ಮ ನಿವೃತ್ತ ಕ್ರೀಡಾಪಟುಗಳ ವಿಶಿಷ್ಟ ಕೌಶಲ್ಯದಿಂದ ಪ್ರಯೋಜನ ಪಡೆಯುತ್ತಾರೆ. ಅವರ ಶ್ರೀಮಂತ ಅನುಭವವು ಭವಿಷ್ಯದ ಚಾಂಪಿಯನ್‌ ಗಳನ್ನು ಪೋಷಿಸಲು, ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ರಾಷ್ಟ್ರ ನಿರ್ಮಾಣವನ್ನು ಉತ್ತೇಜಿಸಲು ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಎಲ್ಲಾ ನಿವೃತ್ತ ಕ್ರೀಡಾಪಟುಗಳು ಈ ಉಪಕ್ರಮಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ದೇಶದ ಕ್ರೀಡಾ ಪೂರಕ ವ್ಯವಸ್ಥೆಗೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು. ನಮ್ಮ ನಿವೃತ್ತ ಕ್ರೀಡಾಪಟುಗಳನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಬೆಂಬಲಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ನಮ್ಮ ನಿವೃತ್ತ ಕ್ರೀಡಾಪಟುಗಳ ಅಮೂಲ್ಯ ಅನುಭವ ಮತ್ತು ಪರಿಣತಿಯನ್ನು ಗುರುತಿಸುವ ಮತ್ತು ಬಳಸಿಕೊಳ್ಳುವ ನಿಟ್ಟಿನಲ್ಲಿ ರೀಸೆಟ್ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಸಕ್ರಿಯ ಕ್ರೀಡಾ ವೃತ್ತಿಯಿಂದ ನಿವೃತ್ತಿ ಹೊಂದಿದ ಮತ್ತು 20-50 ವರ್ಷ ವಯಸ್ಸಿನವರು ಮತ್ತು ಅಂತರರಾಷ್ಟ್ರೀಯ ಪದಕ ವಿಜೇತರು/ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು ಅಥವಾ ರಾಷ್ಟ್ರೀಯ ಪದಕ ವಿಜೇತರು/ರಾಜ್ಯ ಪದಕ ವಿಜೇತರು/ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಂದ ಗುರುತಿಸಲ್ಪಟ್ಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು /ಭಾರತೀಯ ಒಲಿಂಪಿಕ್ ಅಸೋಸಿಯೇಷನ್/ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯದಿಂದ ಗುರುತಿಸಲ್ಪಟ್ಟ ಸ್ಪರ್ಧೆಗಳಲ್ಲಿ ಭಾಗವಹಿಸಿದವರು  ರೀಸೆಟ್ ಕಾರ್ಯಕ್ರಮದ ಅಡಿಯಲ್ಲಿ ಕೋರ್ಸ್‌ ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದಕ್ಕೆ ಮೀಸಲಾದ ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.

ಆರಂಭದಲ್ಲಿ, ಕಾರ್ಯಕ್ರಮಗಳು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಎರಡು ಹಂತಗಳಾಗಿರುತ್ತವೆ, ಅವುಗಳೆಂದರೆ 12 ನೇ ತರಗತಿ ಮತ್ತು ಇನ್ನೂ ಮೇಲಿನ ವಿದ್ಯಾರ್ಹತೆ ಮತ್ತು 11 ನೇ ತರಗತಿ ಮತ್ತು ಇನ್ನೂ ಕೆಳಗಿನ ವಿದ್ಯಾರ್ಹತೆ.

ರೀಸೆಟ್ ಕಾರ್ಯಕ್ರಮದ ಈ ಪ್ರಾಯೋಗಿಕ ಹಂತಕ್ಕಾಗಿ, ಲಕ್ಷ್ಮೀಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್ (ಎಲ್‌ ಎನ್‌ ಐ ಪಿ ಇ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರಮುಖ ಸಂಸ್ಥೆಯಾಗಿದೆ.

ಕಾರ್ಯಕ್ರಮವನ್ನು ಹೈಬ್ರಿಡ್ ಮೋಡ್‌ನಲ್ಲಿ ನಡೆಸಲಾಗುವುದು, ಇದು ಮೈದಾನದ ತರಬೇತಿ ಮತ್ತು ಇಂಟರ್ನ್‌ಶಿಪ್ ಜೊತೆಗೆ ಮೀಸಲಾದ ಪೋರ್ಟಲ್ ಮೂಲಕ ಸ್ವಯಂ ಗತಿಯ ಕಲಿಕೆಯನ್ನು ಒಳಗೊಂಡಿರುತ್ತದೆ.

ಕ್ರೀಡಾ ಸಂಸ್ಥೆಗಳು, ಕ್ರೀಡಾ ಸ್ಪರ್ಧೆಗಳು/ತರಬೇತಿ ಶಿಬಿರಗಳು ಮತ್ತು ಲೀಗ್‌ ಗಳಲ್ಲಿ ಇಂಟರ್ನ್‌ಶಿಪ್‌ಗಳನ್ನು ಒದಗಿಸಲಾಗುವುದು. ಇದಲ್ಲದೆ, ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಉದ್ಯೋಗದ ನೆರವು, ಉದ್ಯಮಶೀಲ ಉದ್ಯಮಗಳಿಗೆ ಮಾರ್ಗದರ್ಶನ ಇತ್ಯಾದಿಗಳನ್ನು ಒದಗಿಸಲಾಗುತ್ತದೆ.

https://lnipe.edu.in/resetprogram/ ಪೋರ್ಟಲ್‌ ನಲ್ಲಿ ನೋಂದಣಿ ಪ್ರಕ್ರಿಯೆಯು ಇಂದು ಪ್ರಾರಂಭವಾಗುತ್ತದೆ. ಸೂಕ್ತ ಮೌಲ್ಯಮಾಪನದ ನಂತರ ಕೋರ್ಸ್ ಪ್ರಾರಂಭವಾಗುತ್ತದೆ, ಇದನ್ನು ಭಾಗವಹಿಸುವವರಿಗೆ ತಿಳಿಸಲಾಗುತ್ತದೆ.

 

*****



(Release ID: 2049953) Visitor Counter : 11