ಸಂಪುಟ
azadi ka amrit mahotsav

'ಕೃಷಿ ಮೂಲಸೌಕರ್ಯ ನಿಧಿ'ಯ ಕೇಂದ್ರ ವಲಯ ಯೋಜನೆಯ ಪ್ರಗತಿಪರ ವಿಸ್ತರಣೆಗೆ ಸಂಪುಟದ ಅನುಮೋದನೆ

Posted On: 28 AUG 2024 3:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 'ಕೃಷಿ ಮೂಲಸೌಕರ್ಯ ನಿಧಿ'ಯಡಿ ಹಣಕಾಸು ಸೌಲಭ್ಯದ ಕೇಂದ್ರ ವಲಯದ ಯೋಜನೆಯನ್ನು ಹೆಚ್ಚು ಆಕರ್ಷಕ, ಪರಿಣಾಮಕಾರಿ ಮತ್ತು ಅಂತರ್ಗತವಾಗಿಸುವ (ಎಲ್ಲರನ್ನು ಒಳಗೊಳ್ಳುವಂತೆ ಮಾಡುವ)  ನಿಟ್ಟಿನಲ್ಲಿ ಅದರ  ಪ್ರಗತಿಪರ ವಿಸ್ತರಣೆಗೆ ತನ್ನ ಅನುಮೋದನೆ ನೀಡಿದೆ.

ದೇಶದಲ್ಲಿ ಕೃಷಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಹಾಗು ಕೃಷಿ ಸಮುದಾಯವನ್ನು ಬೆಂಬಲಿಸುವ ಮಹತ್ವದ ಕ್ರಮದಲ್ಲಿ, ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಸರಣಿ ಕ್ರಮಗಳನ್ನು ಘೋಷಿಸಿದೆ. ಈ ಉಪಕ್ರಮಗಳು ಅರ್ಹ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ ಮತ್ತು ದೃಢವಾದ ಕೃಷಿ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ಬೆಳೆಸಲು ಹೆಚ್ಚುವರಿ ಬೆಂಬಲ ಕ್ರಮಗಳನ್ನು ಸಂಯೋಜಿಸುತ್ತವೆ.

ಕಾರ್ಯಸಾಧ್ಯವಾದ ಕೃಷಿ ಸ್ವತ್ತುಗಳು: 'ಸಮುದಾಯ ಕೃಷಿ ಸ್ವತ್ತುಗಳನ್ನು ನಿರ್ಮಿಸಲು ಕಾರ್ಯಸಾಧ್ಯವಾದ ಯೋಜನೆಗಳ' ಅಡಿಯಲ್ಲಿ ಬರುವ ಮೂಲಸೌಕರ್ಯಗಳನ್ನು ರಚಿಸುವ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅವಕಾಶ ನೀಡುವುದು. ಈ ಕ್ರಮವು ಸಮುದಾಯ ಕೃಷಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಕಾರ್ಯಸಾಧ್ಯವಾದ ಯೋಜನೆಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಆ ಮೂಲಕ ಈ ವಲಯದಲ್ಲಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಸುಧಾರಿಸುತ್ತದೆ.

ಸಮಗ್ರ ಸಂಸ್ಕರಣಾ ಯೋಜನೆಗಳು: ಸಮಗ್ರ ಪ್ರಾಥಮಿಕ ದ್ವಿತೀಯ ಸಂಸ್ಕರಣಾ ಯೋಜನೆಗಳನ್ನು ಎಐಎಫ್ ಅಡಿಯಲ್ಲಿ ಅರ್ಹ ಚಟುವಟಿಕೆಗಳ ಪಟ್ಟಿಯಲ್ಲಿ ಸೇರಿಸುವುದು. ಆದಾಗ್ಯೂ, ಸ್ವತಂತ್ರ ದ್ವಿತೀಯ ಯೋಜನೆಗಳು ಅರ್ಹವಾಗಿರುವುದಿಲ್ಲ ಮತ್ತು ಅವುಗಳು ಎಂಒಎಫ್ಪಿಐ ಯೋಜನೆಗಳ ಅಡಿಯಲ್ಲಿ ಬರುತ್ತವೆ.

ಪಿಎಂ ಕುಸುಮ್ ಘಟಕ-ಎ: ಪಿಎಂ-ಕುಸುಮ್ ನ ಘಟಕ-ಎ ಯನ್ನು ರೈತ / ರೈತರ ಗುಂಪು / ರೈತ ಉತ್ಪಾದಕ ಸಂಸ್ಥೆಗಳು / ಸಹಕಾರಿಗಳು / ಪಂಚಾಯತ್ ಗಳಿಗೆ ಎಐಎಫ್ ನೊಂದಿಗೆ ಸಂಯೋಜಿಸಲು ಅವಕಾಶ ನೀಡುವುದು. ಈ ಉಪಕ್ರಮಗಳ ಜೋಡಣೆಯು ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ಸುಸ್ಥಿರ ಶುದ್ಧ ಇಂಧನ ಪರಿಹಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಎನ್.ಎ.ಬಿ.ಸಂಸ್ಕರಣ್:  ಸಿಜಿಟಿಎಂಎಸ್ಇ ಜೊತೆಗೆ, ಎನ್ಎಬಿ ಸಂರಕ್ಷಣಾ ಟ್ರಸ್ಟಿ ಕಂಪನಿ ಪ್ರೈವೇಟ್ ಲಿಮಿಟೆಡ್ ಮೂಲಕವೂ ಎಫ್ಪಿಒಗಳ ಎಐಎಫ್ ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಸಾಲ ಖಾತರಿ ಆಯ್ಕೆಗಳ ಈ ವಿಸ್ತರಣೆಯು ಎಫ್ಪಿಒಗಳ ಆರ್ಥಿಕ ಭದ್ರತೆ ಮತ್ತು ಸಾಲ ಅರ್ಹತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ, ಆ ಮೂಲಕ ಕೃಷಿ ಮೂಲಸೌಕರ್ಯ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸುತ್ತದೆ.

2020ರಲ್ಲಿ ಪ್ರಧಾನ ಮಂತ್ರಿಯವರು ಕಾರ್ಯಾರಂಭಗೊಳಿಸಿದಾಗಿನಿಂದ, ಎಐಎಫ್ 6623 ಗೋದಾಮುಗಳು, 688 ಶೀತಲ ದಾಸ್ತಾನು ಕೋಠಿಗಳು (ಕೋಲ್ಡ್ ಸ್ಟೋರ್ಗಳು)  ಮತ್ತು 21 ಸಿಲೋಸ್ ಯೋಜನೆಗಳ ಸೃಷ್ಟಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಇದರ ಪರಿಣಾಮವಾಗಿ ದೇಶದಲ್ಲಿ ಸುಮಾರು 500 ಎಲ್ಎಂಟಿ ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯ ಸೃಷ್ಟಿಯಾಗಿದೆ. ಇದರಲ್ಲಿ 465 ಎಲ್ ಎಂಟಿ ಡ್ರೈ ಸ್ಟೋರೇಜ್ ಮತ್ತು 35 ಎಲ್ ಎಂಟಿ ಕೋಲ್ಡ್ ಸ್ಟೋರೇಜ್ ಸಾಮರ್ಥ್ಯ ಸೇರಿದೆ. ಈ ಹೆಚ್ಚುವರಿ ಸಂಗ್ರಹಣಾ ಸಾಮರ್ಥ್ಯದಿಂದ ವಾರ್ಷಿಕವಾಗಿ 18.6 ಎಲ್ ಎಂಟಿ ಆಹಾರ ಧಾನ್ಯಗಳು ಮತ್ತು 3.44 ಎಲ್ ಎಂಟಿ ತೋಟಗಾರಿಕೆ ಉತ್ಪನ್ನಗಳನ್ನು ಸಂರಕ್ಷಿಸಬಹುದು/ಉಳಿಸಬಹುದು. ಎಐಎಫ್ ಅಡಿಯಲ್ಲಿ ಈವರೆಗೆ 74,508 ಯೋಜನೆಗಳಿಗೆ 47,575 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ಮಂಜೂರಾದ ಯೋಜನೆಗಳು ಕೃಷಿ ಕ್ಷೇತ್ರದಲ್ಲಿ 78,596 ಕೋಟಿ ರೂ.ಗಳ ಹೂಡಿಕೆಯನ್ನು ಸಂಗ್ರಹಿಸಿದ್ದು, ಅದರಲ್ಲಿ 78,433 ಕೋಟಿ ರೂ.ಗಳಷ್ಟು ಖಾಸಗಿ ವಲಯದಿಂದ  ಬಂದಿದೆ. ಇದಲ್ಲದೆ, ಎಐಎಫ್ ಅಡಿಯಲ್ಲಿ ಮಂಜೂರಾದ ಮೂಲಸೌಕರ್ಯ ಯೋಜನೆಗಳು ಕೃಷಿ ಕ್ಷೇತ್ರದಲ್ಲಿ 8.19 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ.

ಎಐಎಫ್ ಯೋಜನೆಯ ವ್ಯಾಪ್ತಿಯ ವಿಸ್ತರಣೆಯು ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು, ಉತ್ಪಾದಕತೆಯನ್ನು ಸುಧಾರಿಸಲು, ಕೃಷಿ ಆದಾಯವನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಕೃಷಿಯ ಒಟ್ಟಾರೆ ಸುಸ್ಥಿರತೆಗೆ ಕೊಡುಗೆ ನೀಡಲು ಸಜ್ಜಾಗಿದೆ. ಈ ಕ್ರಮಗಳು ದೇಶದಲ್ಲಿ ಕೃಷಿ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಯ ಮೂಲಕ ಕೃಷಿ ಕ್ಷೇತ್ರವನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ.

 

*****



(Release ID: 2049566) Visitor Counter : 39