ಜಲ ಶಕ್ತಿ ಸಚಿವಾಲಯ
ಜಲ ಜೀವನ್ ಮಿಷನ್ ನ ಪ್ರಭಾವಗಳು
15.04 ಕೋಟಿಗೂ ಹೆಚ್ಚು (77.87%) ಗ್ರಾಮೀಣ ಕುಟುಂಬಗಳು ನಲ್ಲಿ (ಟ್ಯಾಪ್) ನೀರು ಸರಬರಾಜನ್ನು ಹೊಂದಿರುವುದಾಗಿ ವರದಿಯಾಗಿದೆ
ಗ್ರಾಮ ಪಂಚಾಯತ್ಗಳ ಮಟ್ಟದಲ್ಲಿ ಸುಮಾರು 5.32 ಲಕ್ಷ ಪಾನಿ ಸಮಿತಿಗಳನ್ನು ಸ್ಥಾಪಿಸಲಾಗಿದ್ದು, ಇವುಗಳು ಗ್ರಾಮೀಣ ಪ್ರದೇಶಗಳಲ್ಲಿನ ನೀರು ಸರಬರಾಜು ವ್ಯವಸ್ಥೆಯ ಯೋಜನೆ, ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಚರಣೆಯ ಜವಾಬ್ದಾರಿಯನ್ನು ಹೊಂದಿವೆ
24.64 ಲಕ್ಷ ಮಹಿಳೆಯರಿಗೆ ಕ್ಷೇತ್ರ ಪರೀಕ್ಷಾ ಕಿಟ್ಗಳ ಮೂಲಕ ನೀರಿನ ಮಾದರಿಗಳನ್ನು ಪರೀಕ್ಷಿಸಲು ತರಬೇತಿ ನೀಡಲಾಗಿದೆ; 2024-25ರಲ್ಲಿ ಎಫ್ಟಿಕೆಗಳ ಮೂಲಕ 54.20 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ
Posted On:
08 AUG 2024 1:10PM by PIB Bengaluru
ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ (JJM) - ಹರ್ ಘರ್ ಜಲ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯು ಪ್ರತಿಯೊಂದು ಗ್ರಾಮೀಣ ಮನೆಗೆ ನಿರಂತರವಾಗಿ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ಗಳಷ್ಟು (BIS:10500) ಗುಣಮಟ್ಟದ ಸುರಕ್ಷಿತ ಕುಡಿಯುವ ನೀರನ್ನು ನಲ್ಲಿ ಮೂಲಕ ಪೂರೈಸುವ ಗುರಿಯನ್ನು ಹೊಂದಿದೆ.
ಜಲ ಜೀವನ್ ಮಿಷನ್ ಆರಂಭಿಕ ಹಂತದಲ್ಲಿ ಅಂದರೆ, ಆಗಸ್ಟ್ 2019ರಲ್ಲಿ, ಕೇವಲ 3.23 ಕೋಟಿ (16.8%) ಗ್ರಾಮೀಣ ಮನೆಗಳಿಗೆ ಮಾತ್ರ ನಲ್ಲಿ ನೀರು ಸಂಪರ್ಕ ಲಭ್ಯವಾಗಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 05.08.2024 ರ ವರೆಗೆ ವರದಿಯಾದಂತೆ, ಜೆಜೆಎಂ ಯೋಜನೆಯಡಿ ಹೆಚ್ಚುವರಿಯಾಗಿ 11.81 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಆದ್ದರಿಂದ, 05.08.2024 ರಂದು, ದೇಶದ 19.32 ಕೋಟಿ ಗ್ರಾಮೀಣ ಮನೆಗಳ ಪೈಕಿ 15.04 ಕೋಟಿ (77.87%) ಮನೆಗಳಿಗೆ ನಲ್ಲಿ ನೀರು ಸರಬರಾಜು ವ್ಯವಸ್ಥೆ ಇದೆ.
ಜೀವನವನ್ನು ಬದಲಿಸುವ ಜಲ ಜೀವನ್ ಮಿಷನ್ ಅಡಿಯಲ್ಲಿ, ಗ್ರಾಮೀಣ ಜನರ ಜೀವನದಲ್ಲಿ ಸುಧಾರಣೆ ತರಲು ಮತ್ತು ಅವರ ಮನೆಗಳಿಗೆ ಸುರಕ್ಷಿತ ನಲ್ಲಿ ನೀರು ಪೂರೈಸಲು ಪ್ರಯತ್ನಗಳು ನಡೆಯುತ್ತಿವೆ. ದೇಶಾದ್ಯಂತ ಯೋಜನೆಯನ್ನು ಆದ್ಯತೆ ಮೇಲೆ ಜಾರಿಗೊಳಿಸುವುದರೊಂದಿಗೆ, ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು/ ವ್ಯಕ್ತಿಗಳು ಈ ಯೋಜನೆಯ ಸಕಾರಾತ್ಮಕ ಪರಿಣಾಮಗಳನ್ನು ನಿರ್ಣಯಿಸುತ್ತಿದ್ದಾರೆ. ಅವುಗಳಲ್ಲಿ ಕೆಲವು ಕೆಳಕಂಡಂತೆ ಇವೆ:
I. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಅಂದಾಜಿನ ಪ್ರಕಾರ, ಜಲ ಜೀವನ್ ಮಿಷನ್ನ ಸಂಪೂರ್ಣ ಅನುಷ್ಠಾನದಿಂದ ಪ್ರತಿದಿನ 5.5 ಕೋಟಿಗೂ ಹೆಚ್ಚು ಗಂಟೆಗಳ ಸಮಯ ಉಳಿತವಾಗಲಿದೆ. ಯಾಕೆಂದರೆ ಇದು ಮುಖ್ಯವಾಗಿ ಮಹಿಳೆಯರು ಮನೆಯ ಅಗತ್ಯಗಳಿಗೆ ನೀರು ತರುವಲ್ಲಿ ವ್ಯಯಿಸುತ್ತಿದ್ದ ಸಮಯವಾಗಿದೆ.
II. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ದೇಶದ ಎಲ್ಲಾ ಮನೆಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವುದರಿಂದ ಸುಮಾರು 400,000 ಮಂದಿ ಅತಿಸಾರದಿಂದ ಸಾವನ್ನಪ್ಪುವುದನ್ನು ತಡೆಯಬಹುದು ಎಂದು ಅಂದಾಜಿಸಿದೆ
III. ನೋಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮೈಕೆಲ್ ಕ್ರೆಮರ್ ಅವರು ಪ್ರಕಟಿಸಿದ ಸಂಶೋಧನಾ ವರದಿ ಪ್ರಕಾರ, ಎಲ್ಲಾ ಮನೆಗಳಿಗೆ ಸುರಕ್ಷಿತ ನೀರು ಲಭ್ಯವಾದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ ಸುಮಾರು 30% ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಪ್ರತಿ ವರ್ಷ 1,36,000 ಜೀವಗಳನ್ನು ಉಳಿಸಬಹುದು.
IV. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಬೆಂಗಳೂರು ಮತ್ತು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಸಹಯೋಗದೊಂದಿಗೆ ಜಲ ಜೀವನ್ ಮಿಷನ್ (JJM)ನ ಉದ್ಯೋಗ ಸಾಮರ್ಥ್ಯದ ಮೌಲ್ಯಮಾಪನವನ್ನು ನಡೆಸಿದೆ. ವರದಿಯ ಪ್ರಕಾರ, ಜೆಜೆಎಂನ ಅನುಷ್ಠಾನ ಹಂತವು ಸುಮಾರು 59.9 ಲಕ್ಷ ವ್ಯಕ್ತಿ-ವರ್ಷಗಳ ನೇರ ಉದ್ಯೋಗ ಮತ್ತು 2.2 ಕೋಟಿ ವ್ಯಕ್ತಿ-ವರ್ಷಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದಲ್ಲದೆ, ಮಿಷನ್ ನ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಯು 13.3 ಲಕ್ಷ ವ್ಯಕ್ತಿ-ವರ್ಷಗಳ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಅಭಿವೃದ್ಧಿಪಡಿಸಲಾದ ಮೂಲಸೌಕರ್ಯದ ದೀರ್ಘಕಾಲೀನ ಸಮರ್ಥನೀಯತೆಯನ್ನು ಖಚಿತಪಡಿಸಿಕೊಳ್ಳಲು, ಕಟ್ಟುನಿಟ್ಟಿನ ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಪಾವತಿ ಮಾಡುವ ಮೊದಲು ಮೂರನೇ ವ್ಯಕ್ತಿಯಿಂದ ವಸ್ತುಗಳು ಮತ್ತು ನಿರ್ಮಾಣದ ಪರಿಶೀಲನೆ ಸೇರಿದೆ. ಹೆಚ್ಚುವರಿಯಾಗಿ, ಗ್ರಾಮಗಳಲ್ಲಿನ ನೀರಿನ ಸರಬರಾಜಿನ ನಿರಂತರ ಮೇಲ್ವಿಚಾರಣೆಗಾಗಿ ಸಂವೇದಕ ಆಧಾರಿತ IoT ಪರಿಹಾರಗಳಂತಹ ಸುಧಾರಿತ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಜೆಜೆಎಂ ಅಳವಡಿಸಿಕೊಂಡಿದೆ. ಕಾನೂನು ನಿಬಂಧನೆಗಳ ಅಡಿಯಲ್ಲಿ ಮನೆಯ ಮುಖ್ಯಸ್ಥರ ಆಧಾರ್ ಲಿಂಕ್ ಮಾಡುವುದು ಮತ್ತು ಸ್ವತ್ತುಗಳ ಜಿಯೋ-ಟ್ಯಾಗಿಂಗ್ ಇತ್ಯಾದಿಗಳನ್ನು ಸಹ JJM ಅಡಿಯಲ್ಲಿ ಅನ್ನು ಜಾರಿಗೊಳಿಸಲಾಗಿದೆ.
ಇದಲ್ಲದೆ, ಪಾರದರ್ಶಕತೆ ಹೆಚ್ಚಿಸಲು ಮತ್ತು ಪರಿಣಾಮಕಾರಿ ಮೇಲ್ವಿಚಾರಣೆಗೆ ಅನುವು ಮಾಡಿಕೊಡಲು, ಆನ್ ಲೈನ್ ʼಜೆಜೆಎಂ ಡ್ಯಾಶ್ ಬೋರ್ಡ್ ಮೊಬೈಲ್ ಅಪ್ಲಿಕೇಶನ್ʼ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ವೇದಿಕೆಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶ, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ಸಮಗ್ರ ಪ್ರಗತಿ ವರದಿಗಳು ಮತ್ತು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸರಬರಾಜಿನ ಸ್ಥಿತಿಯನ್ನು ಒದಗಿಸುತ್ತವೆ.
ಹೆಚ್ಚುವರಿಯಾಗಿ, ಗ್ರಾಮೀಣ ಸಮುದಾಯಗಳು ಮತ್ತು ಪಂಚಾಯತ್ ಮಟ್ಟದಲ್ಲಿ ಮಾಲೀಕತ್ವದ ಪ್ರಜ್ಞೆಯನ್ನು ಬೆಳೆಸಲು, ನೀರು ಸರಬರಾಜು ವ್ಯವಸ್ಥೆಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳಲ್ಲಿ ಗ್ರಾಮ ಮಟ್ಟದ ಯೋಜನೆ ಮತ್ತು ಸಮುದಾಯ ಭಾಗವಹಿಸುವಿಕೆಯ ಅಂಶಗಳನ್ನು ಜೆಜೆಎಂನ ವಿನ್ಯಾಸದಲ್ಲಿ ಸೇರಿಸಲಾಗಿದೆ. ಗ್ರಾಮೀಣ ಸಮುದಾಯದ ಭಾಗವಹಿಸುವಿಕೆಗಾಗಿ ಮಿಷನ್ ಅಡಿಯಲ್ಲಿ ಕೈಗೊಂಡ ಕೆಲವು ಪ್ರಮುಖ ಕ್ರಮಗಳು ಕೆಳಕಂಡಂತೆ ಇವೆ:
• ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಮಾರು 5.32 ಲಕ್ಷ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳು (VWSCs) ಅಥವಾ ಪಾನಿ ಸಮಿತಿಗಳನ್ನು ಸ್ಥಾಪಿಸಲಾಗಿದೆ. ಕನಿಷ್ಠ 50% ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರತಿನಿಧಿತ್ವವನ್ನು ಒಳಗೊಂಡಿರುವ ಈ ಸಮಿತಿಗಳು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯನ್ನು ಯೋಜಿಸಲು, ಜಾರಿಗೊಳಿಸಲು, ನಿರ್ವಹಿಸಲು ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿವೆ.
• ಪ್ರತಿಯೊಂದು ಗ್ರಾಮದಿಂದ ಐದು ಮಹಿಳೆಯರನ್ನು ಗುರುತಿಸಿ, ಕ್ಷೇತ್ರ ಪರೀಕ್ಷಾ ಕಿಟ್ (ಫೀಲ್ಡ್ ಟೆಸ್ಟ್ ಕಿಟ್ - FTKs) ಗಳ ಮೂಲಕ ನೀರಿನ ಮಾದರಿಗಳನ್ನು ಪರೀಕ್ಷಿಸಲು ತರಬೇತಿ ನೀಡಲಾಗಿದೆ. ಇದುವರೆಗೆ 24.64 ಲಕ್ಷ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಮತ್ತು 2024-25ರಲ್ಲಿ ಇದುವರೆಗೆ 54.20 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು FTKs ಮೂಲಕ ಪರೀಕ್ಷಿಸಲಾಗಿದೆ.
• 14,000 ಕ್ಕೂ ಹೆಚ್ಚು ಎನ್ ಜಿಒಳು/ವಿಒಗಳು/ಮಹಿಳಾ ಎಸ್ ಎಚ್ ಜಿಗಳು/ಸಿಬಿಒಗಳು/ಟ್ರಸ್ಟ್ ಗಳು /ಫೌಂಡೇಶನ್ ಗಳು ಐಎಸ್ಎ ಎಂದು ಉಲ್ಲೇಖಿಸಲಾಗಿದ್ದು, ಎಲ್ಲಾ ಹಂತದ ಯೋಜನೆ, ಅನುಷ್ಠಾನ, ನಿರ್ವಹಣೆ, ಕಾರ್ಯಾಚರಣೆ ಮತ್ತು ಗ್ರಾಮದಲ್ಲಿನ ನೀರು ಸರಬರಾಜು ವ್ಯವಸ್ಥೆಗಳ ನಿರ್ವಹಣೆ ಮತ್ತು ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ದೇಶಾದ್ಯಂತ ತೊಡಗಿಸಿಕೊಂಡಿವೆ.
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯು ಸ್ಥಳೀಯ ಕುಡಿಯುವ ನೀರಿನ ಮೂಲಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ಸಂಪನ್ಮೂಲಗಳ ಒಗ್ಗೂಡಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MGNREGS), 15ನೇ ಹಣಕಾಸು ಆಯೋಗದ ಅನುದಾನ, ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ, ರಾಜ್ಯ ಮಟ್ಟದ ಯೋಜನೆಗಳು, ಸಂಸದರು/ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿ, ಜಿಲ್ಲಾ ಖನಿಜ ನಿಧಿ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕೊಡುಗೆಗಳು ಮತ್ತು ಸಮುದಾಯ ಆಧಾರಿತ ಪ್ರಯತ್ನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಂದ ಹಣ ಮತ್ತು ತಜ್ಞತೆಯನ್ನು ತಂತ್ರೋಪಾಯದಿಂದ ಸಂಯೋಜಿಸುವುದು ಒಳಗೊಂಡಿದೆ.
ಜೆಜೆಎಂ ಯೋಜನೆಯಡಿ, ನೀರು ಸರಬರಾಜು ವ್ಯವಸ್ಥೆಗಳ ನಿರ್ವಹಣೆ ಮತ್ತು ಕಾರ್ಯಚರಣೆಯ ಸಮಸ್ಯೆಯನ್ನು ಸುಧಾರಿಸಲು, ಯೋಜನೆ ಪೂರ್ಣಗೊಂಡ ನಂತರ ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಯ ಒಟ್ಟು ಬಂಡವಾಳ ವೆಚ್ಚದ ಶೇಕಡಾ 10 ರಷ್ಟು ಹಣವನ್ನು ಹಂತಹಂತವಾಗಿ ಗ್ರಾಮ ಸಮುದಾಯಕ್ಕೆ ಪ್ರೋತ್ಸಾಹಧನವಾಗಿ ನೀಡುವ ವ್ಯವಸ್ಥೆ ಇದೆ. ಈ ಹಣವನ್ನು ಬಳಕೆದಾರರ ಶುಲ್ಕ ಸಂಗ್ರಹಣೆಯೊಂದಿಗೆ ಸಂಯೋಜಿಸಿ, ನಿರ್ವಹಣಾ ವೆಚ್ಚಗಳಿಗೆ ಬಳಸಲು ಉದ್ದೇಶಿಸಲಾಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಲು ಮತ್ತು ಅಗತ್ಯವಿದ್ದಲ್ಲಿ, ಮನೆಗಳಿಗೆ ಸರಬರಾಜು ಮಾಡುವ ನೀರು ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀರಿನ ಗುಣಮಟ್ಟ ಪರೀಕ್ಷೆಯನ್ನು ಪ್ರೋತ್ಸಾಹಿಸುತ್ತಿವೆ. ಸಾರ್ವಜನಿಕರು ತಮ್ಮ ನೀರಿನ ಮಾದರಿಗಳನ್ನು ಪರೀಕ್ಷಿಸಲು ಸುಲಭವಾಗುವಂತೆ, ಅತ್ಯಲ್ಪ ದರದಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಾದರಿಗಳ ಸಂಗ್ರಹಣೆ, ಪರೀಕ್ಷೆ, ವರದಿ ಮತ್ತು ಕುಡಿಯುವ ನೀರಿನ ಮೂಲಗಳ ನಿಗಾವಹಿಸುವಿಕೆಗಾಗಿ, ಜೆಜೆಎಂ - ನೀರಿನ ಗುಣಮಟ್ಟ ನಿರ್ವಹಣಾ ಮಾಹಿತಿ ವ್ಯವಸ್ಥೆ (WQMIS) ಆನ್ ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಂದ ಹೊರಬರುವ ಬೂದು ನೀರು/ತ್ಯಾಜ್ಯ ನೀರನ್ನು ಸಂಸ್ಕರಿಸುವ ಉದ್ದೇಶದಿಂದ, ಜೆಜೆಎಂ ನಿಧಿಯನ್ನು ಬಳಸಿಕೊಂಡು ಸೋಕ್ ಪಿಟ್ ಗಳ ನಿರ್ಮಾಣವನ್ನು ಪ್ರೋತ್ಸಾಹಿಸಲಾಗುತ್ತಿದೆ.
ರಾಜ್ಯಗಳು ವರದಿ ಮಾಡಿದಂತೆ, ಯೋಜನೆಯ ಅನುಷ್ಠಾನದಲ್ಲಿ ಹಲವು ಸವಾಲುಗಳಿವೆ. ಇವುಗಳಲ್ಲಿ ನೀರಿನ ಒತ್ತಡ, ಬರಪೀಡಿತ ಮತ್ತು ಮರುಭೂಮಿ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಕುಡಿಯುವ ನೀರಿನ ಮೂಲಗಳ ಕೊರತೆ, ಅಂತರ್ಜಲದಲ್ಲಿ ಭೌಗೋಳಿಕ ಮಾಲಿನ್ಯದ ಉಪಸ್ಥಿತಿ, ಅಸಮಾನ ಭೌಗೋಳಿಕ ಭೂಪ್ರದೇಶ, ಚದುರಿದ ಗ್ರಾಮೀಣ ವಸತಿಗಳು, ಕೆಲವು ರಾಜ್ಯಗಳಲ್ಲಿ ಹೊಂದಾಣಿಕೆಯ ರಾಜ್ಯದ ಪಾಲು ಬಿಡುಗಡೆಯಲ್ಲಿ ವಿಳಂಬವಾಗಿದೆ ಎಂದು ರಾಜ್ಯಗಳು ತಿಳಿಸಿವೆ. ಜಾರಿಗೊಳಿಸುವ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಯೋಜನೆ, ನಿರ್ವಹಣೆ, ಕಾರ್ಯಾಚರಣೆ ಮತ್ತು ನೀರು ಸರಬರಾಜು ಯೋಜನೆಗಳ ನಿರ್ವಹಣೆಯಲ್ಲಿ ತಾಂತ್ರಿಕ ಸಾಮರ್ಥ್ಯದ ಕೊರತೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾನೂನು ಮತ್ತು ಇತರ ಅನುಮತಿಗಳನ್ನು ಪಡೆಯುವಲ್ಲಿ ವಿಳಂಬ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿವೆ.
ಈ ಸವಾಲುಗಳನ್ನು ಸಮಗ್ರವಾಗಿ ನಿಭಾಯಿಸಲು ಮತ್ತು ಜಯಿಸಲು, ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ, ಹಣಕಾಸು ಸಚಿವಾಲಯದ ಮೂಲಕ ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕೆ ವಿಶೇಷ ನೆರವು ಯೋಜನೆಯ ಅಡಿಯಲ್ಲಿ 50 ವರ್ಷಗಳ ಬಡ್ಡಿರಹಿತ ಸಾಲದ ರೂಪದಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವುದು, ಕಾನೂನು ಮತ್ತು ಇತರ ಅನುಮತಿಗಳನ್ನು ಪಡೆಯುವಲ್ಲಿ ರಾಜ್ಯಗಳಿಗೆ ಸಹಕರಿಸಲು ಕೇಂದ್ರದ ನೋಡಲ್ ಸಚಿವಾಲಯಗಳು/ ಇಲಾಖೆಗಳು/ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ಇಲಾಖೆಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸುವುದು, ರಾಜ್ಯ ಮತ್ತು ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ತಾಂತ್ರಿಕ ಕೌಶಲ್ಯಗಳ ಲಭ್ಯತೆ ಮತ್ತು ಕಾರ್ಯಕ್ರಮ ನಿರ್ವಹಣೆಗೆ ಮಾನವ ಸಂಪನ್ಮೂಲದ ಕೊರತೆಯನ್ನು ನಿವಾರಿಸಲು ಗ್ರಾಮೀಣ ಮಟ್ಟದಲ್ಲಿ ಕೌಶಲ್ಯಯುತ ಸ್ಥಳೀಯ ವ್ಯಕ್ತಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 'ನಲ್ ಜಲ್ ಮಿತ್ರ ಕಾರ್ಯಕ್ರಮ'ವನ್ನು ಜಾರಿಗೊಳಿಸುವುದು ಇತ್ಯಾದಿ ಸೇರಿವೆ.
ಇದಲ್ಲದೆ , ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ (JSA : CTR ) ಅಭಿಯಾನವನ್ನು 2019 ರಲ್ಲಿ ಪ್ರಾರಂಭಿಸಲಾಯಿತು, ಇದು ದೇಶದ 256 ನೀರಿನ ಒತ್ತಡದ ಜಿಲ್ಲೆಗಳಲ್ಲಿ ಜನರ ಭಾಗವಹಿಸುವಿಕೆಯೊಂದಿಗೆ ತಳಮಟ್ಟದಲ್ಲಿ ನೀರಿನ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದಲ್ಲದೆ , ಸುಸ್ಥಿರ ನೀರಿನ ನಿರ್ವಹಣೆಯ ಪ್ರಾಮುಖ್ಯತೆಯನ್ನು ಗುರುತಿಸಿ, ವಿಶೇಷವಾಗಿ ಕುಡಿಯುವ ನೀರಿನ ಲಭ್ಯತೆಗಾಗಿ , JSA : CTR ಅನ್ನು 2023 ರಲ್ಲಿ ' ಕುಡಿಯುವ ನೀರಿನ ಮೂಲ ಸಮರ್ಥನೀಯತೆ ' ಎಂಬ ವಿಷಯದೊಂದಿಗೆ ಕಾರ್ಯಗತಗೊಳಿಸಲಾಯಿತು . ಅದೇ ರೀತಿ 2024 ರಲ್ಲಿ 09.03.2024 ರಿಂದ 30.11.2024 ರವರೆಗೆ ' ನಾರಿ ಶಕ್ತಿಯಿಂದ ಜಲ ಶಕ್ತಿಗೆ ' ಎಂಬ ವಿಷಯದೊಂದಿಗೆ JSA ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಮಹಿಳೆಯರು ವಹಿಸುವ ಪ್ರಮುಖ ಪಾತ್ರವನ್ನು ಹೇಳುತ್ತದೆ .
ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಜಲಶಕ್ತಿಯ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಈ ಮಾಹಿತಿಯನ್ನು ತಿಳಿಸಿದರು.
*****
(Release ID: 2043234)
Visitor Counter : 72