ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ʻಸ್ಮಾರ್ಟ್ ಸಿಟಿ ಯೋಜನೆʼ ಅಡಿಯಲ್ಲಿ ಚಂಡೀಗಢದ ಮಣಿಮಜ್ರಾದಲ್ಲಿ 24×7 ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಸ್ಮಾರ್ಟ್ ಸಿಟಿ ಯೋಜನೆʼಯನ್ನು ಅನುಷ್ಠಾನಗೊಳಿಸುವ ಮೂಲಕ ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೆಲಸ ಮಾಡಿದ್ದಾರೆ

ಮೋದಿ ಅವರ ಮೂರನೇ ಅವಧಿ ಪೂರ್ಣಗೊಳ್ಳುವ ಮುನ್ನ, ದೇಶದ ಪ್ರತಿ ಮನೆಯಲ್ಲೂ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ

ಇಂದಿನಿಂದ, ಮಣಿಮಜ್ರಾದ(ಚಂಡೀಗಢ) ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ʻಜಲ ಜೀವನ್ ಮಿಷನ್ʼ ಅಡಿಯಲ್ಲಿ 24×7 ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ

 ದೇಶದ ಶೇ.74ರಷ್ಟು ಮನೆಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿದೆ

'ಜಲ ಜೀವನ್ ಮಿಷನ್'ನಿಂದಾಗಿ ದೇಶದಲ್ಲಿ ಅತಿಸಾರ ಸಂಬಂಧಿತ ಸಾವುಗಳ ಸಂಖ್ಯೆ 3 ಲಕ್ಷದಷ್ಟು ಕಡಿಮೆಯಾಗಿದೆ

ಈಗ ಮಣಿಮಜ್ರಾದ ಮಹಿಳೆಯರು ನೀರಿಗಾಗಿ ತಮ್ಮ ಮೊಬೈಲ್‌ನಲ್ಲಿ ಅಲಾರಂ ನಿಗದಿಮಾಡುವ ಅಗತ್ಯವಿಲ್ಲ, ಅವರಿಗೆ ನೀರು ಬೇಕಾದಾಗ, ಅದು ಅವರ ಮನೆಯ ನಲ್ಲಿಗಳಲ್ಲೇ ದೊರೆಯುತ್ತದೆ

ಕಳೆದ 10 ವರ್ಷಗಳಲ್ಲಿ ಚಂಡೀಗಢದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 30,000 ಕೋಟಿ ರೂ. ವ್ಯಯಿಸಿದ್ದು, ಅದರಲ್ಲಿ 29,000 ಕೋಟಿ ರೂ.ಗಳನ್ನು ಮೂಲಸೌಕರ್ಯಕ್ಕಾಗಿ ಖರ್ಚು ಮಾಡಲಾಗಿದೆ

ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಜನರು, ಹಾಲಿ ಸರ್ಕಾರವು ತನ್ನ 5 ವರ್ಷಗಳ ಪೂರ್ಣ ಅವಧಿಯನ್ನು ಮುಗಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು

Posted On: 04 AUG 2024 6:28PM by PIB Bengaluru

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ʻಸ್ಮಾರ್ಟ್ ಸಿಟಿ ಯೋಜನೆʼ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಮಣಿಮಜ್ರಾದಲ್ಲಿ ಸುಮಾರು 75 ಕೋಟಿ ರೂ.ಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾದ 24×7 ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿದರು. ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಗಢದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ, ರಾಜ್ಯಸಭಾ ಸಂಸದ ಶ್ರೀ ಸತ್ನಾಮ್ ಸಿಂಗ್ ಸಂಧು, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಗುಪ್ತಚರ ಬ್ಯೂರೋದ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು, ಈ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ ಮತ್ತು 855 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಪ್ರದೇಶವು ಈಗ ಒಟ್ಟು 22 ಕಿ.ಮೀ ಉದ್ದದ ಹೊಸ ಪೈಪ್ ಲೈನ್ ಮೂಲಕ ದಿನದ 24 ಗಂಟೆಯೂ ನೀರು ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು. ಎರಡು ಬೃಹತ್ ಜಲಾಶಯಗಳನ್ನು ನಿರ್ಮಿಸುವ ಮೂಲಕ 24 ಗಂಟೆಗಳ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯಿಂದಾಗಿ ನೀರು  ಸೋರಿಕೆಯ ವೆಚ್ಚವನ್ನು ಗ್ರಾಹಕರು ಇನ್ನು ಮುಂದೆ ಭರಿಸುವ ಅಗತ್ಯವಿಲ್ಲ. ಅಲ್ಲದೆ, ನೀರು ಸೋರಿಕೆ ಆಗುವಂತಹ ಮನೆಗಳನ್ನು ತಕ್ಷಣವೇ ಗುರುತಿಸಲಾಗುವುದು ಮತ್ತು ಉತ್ತಮ ನೀರಿನ ಒತ್ತಡವನ್ನು ಖಚಿತಪಡಿಸಿಕೊಳ್ಳಲು ʻವಿಎಫ್‌ಡಿʼ ಪಂಪ್ ಅನ್ನು ಸಹ ಅಳವಡಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು. 

ನೀರು ಜೀವಜಲವಾಗಿದೆ. ನೀರು ಕಲುಷಿತಗೊಂಡರೆ  ಅಥವಾ ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲದಿದ್ದರೆ ಜನರು ತೊಂದರೆಗೊಳಗಾಗುತ್ತಾರೆ. ಅಲ್ಲದೆ, ರೋಗಗಳಿಗೂ ತುತ್ತಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇಂದಿನಿಂದ ಈ ಪ್ರದೇಶದ ಜನರಿಗೆ ಅತ್ಯಂತ ಆಧುನಿಕ ಶುದ್ಧೀಕರಣ ಘಟಕದ ಮೂಲಕ ದಿನದ 24 ಗಂಟೆಗಳು, ವರ್ಷದ 365 ದಿನಗಳು ಫಿಲ್ಟರ್ ಮಾಡಲಾದ ನೀರನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಚಂಡೀಗಢದಲ್ಲಿ ಮೊದಲಿನಿಂದಲೂ ನೀರು ಮತ್ತು ಒಳಚರಂಡಿಯಂತಹ ಸೌಲಭ್ಯಗಳು ಲಭ್ಯವಿವೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಆದರೆ ಜನಸಂಖ್ಯೆಯ ಹೆಚ್ಚಳ ಮತ್ತು ಹಳೆಯ ಕೊಳವೆ ಮಾರ್ಗಗಳಿಂದಾಗಿ ನೀರಿನ ಗುಣಮಟ್ಟವು ಕಾಲಾನಂತರದಲ್ಲಿ ಕಡಿಮೆಯಾಗಿದೆ. ಶುದ್ಧೀಕರಣ ಘಟಕಗಳನ್ನು ಆಧುನೀಕರಿಸಬೇಕಾಗಿದೆ, ಹೊಸ ಕೊಳವೆ ಮಾರ್ಗಗಳನ್ನು ನಿರ್ಮಿಸಬೇಕಾಗಿದೆ ಮತ್ತು ನೀರಿನ ಲಭ್ಯತೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳಿದರು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮಣಿಮಜ್ರಾ ಪ್ರದೇಶದ ಜನರಿಗೆ ದಿನದ 24 ಗಂಟೆಯೂ ನೀರು ಒದಗಿಸುವ ಯೋಜನೆಯನ್ನು ಇಂದು ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಈಗ ಈ ಪ್ರದೇಶದ ಮಹಿಳೆಯರು ನೀರು ಹಿಡಿಯುವುದಕ್ಕಾಗಿ ಎದ್ದೇಳಲು ತಮ್ಮ ಮೊಬೈಲ್‌ಗಳಲ್ಲಿ ಅಲಾರಂ ನಿಗದಿಪಡಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು. ಇನ್ನು ಮುಂದೆ ಅವರಿಗೆ ಅಗತ್ಯವಿದ್ದಾಗ ಅವರ ನಲ್ಲಿಯಲ್ಲೇ ನೀರು ಲಭ್ಯವಿರುತ್ತದೆ ಎಂದು ಅವರು ಹೇಳಿದರು. ಇನ್ನು ಮುಂದೆ ಯಾವುದೇ ಟ್ಯಾಂಕರ್‌ಗಳು ಇರುವುದಿಲ್ಲ. ಅದು ಮೊದಲ ಮಹಡಿಯಾಗಿರಲಿ ಅಥವಾ ನಾಲ್ಕನೇ ಮಹಡಿಯಾಗಿರಲಿ, ಮಣಿಮಜ್ರಾ ಪ್ರದೇಶದ ಇಡೀ 1 ಲಕ್ಷ ಜನರು ಇಂದಿನಿಂದ ಸುಗಮವಾಗಿ ನೀರು ಪಡೆಯುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಮಂತ್ರಿಯಾದಾಗಿನಿಂದ, ʻಸ್ಮಾರ್ಟ್ ಸಿಟಿ ಯೋಜನೆʼಯನ್ನು ಜಾರಿಗೆ ತರುವ ಮೂಲಕ ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದಲ್ಲಿ ಘೋಷಿಸಲಾದ ಮೊದಲ ʻಸ್ಮಾರ್ಟ್ ಸಿಟಿʼಗಳಲ್ಲಿ ಚಂಡೀಗಢವೂ ಒಂದಾಗಿದೆ. ಚಂಡೀಗಢದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಭಾರತ ಸರ್ಕಾರ 1000 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ʻಜಲ ಜೀವನ್ ಮಿಷನ್ʼ ಅಡಿಯಲ್ಲಿ ದೇಶಾದ್ಯಂತ ಪ್ರತಿಯೊಬ್ಬ ನಾಗರಿಕರಿಗೆ ಶುದ್ಧ ನೀರು ಮತ್ತು ಪ್ರತಿ ಮನೆಗೆ ನಲ್ಲಿ ನೀರನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಏಳು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, 150 ದಶಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರನ್ನು ಒದಗಿಸಲಾಗಿದೆ, ಇದು ದೇಶದ ಶೇಕಡಾ 74 ರಷ್ಟು ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಹಾಯ ಮಾಡಿದೆ ಎಂದು ಅವರು ತಿಳಿಸಿದರು. 'ಜಲ ಜೀವನ್ ಮಿಷನ್' ಯೋಜನೆಯನ್ನು ಪ್ರಾರಂಭಿಸಿದ ನಂತರ, ದೇಶದಲ್ಲಿ ಅತಿಸಾರ ಸಂಬಂಧಿತ ಸಾವುಗಳ ಸಂಖ್ಯೆ 3 ಲಕ್ಷದಷ್ಟು ಕಡಿಮೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಅತಿಸಾರದಿಂದ ಸಾಯುವ ಜನರ ಸಂಖ್ಯೆ ಒಂದು ಕಾಲದಲ್ಲಿ ನಾಲ್ಕು ಲಕ್ಷದಷ್ಟಿತ್ತು. 'ಮನೆ ಮನೆಗೂ ನಲ್ಲಿ ನೀರುʼ ಯೋಜನೆ ಅಡಿಯಲ್ಲಿ 2023ರಲ್ಲಿ ಮೂರು ಕೋಟಿ ನಲ್ಲಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿಯಾಗಿ

ಶ್ರೀ ನರೇಂದ್ರ ಮೋದಿ ಅವರ ಮೂರನೇ ಅವಧಿ ಮುಗಿಯುವ ಮುನ್ನ ದೇಶದ ಪ್ರತಿ ಮನೆಗೂ ಶುದ್ಧ ನಲ್ಲಿ ನೀರು ಲಭ್ಯವಾಗಲಿದೆ ಎಂಬ ವಿಶ್ವಾಸವನ್ನು ಶ್ರೀ ಶಾ ವ್ಯಕ್ತಪಡಿಸಿದರು.

ಚಂಡೀಗಢವನ್ನು ʻಸ್ಮಾರ್ಟ್ ಸಿಟಿʼ ಪರಿಕಲ್ಪನೆಯಂತೆ ನಿರ್ಮಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರವು ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಚಂಡೀಗಢದಲ್ಲಿ ಐದು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ, 20 ಎಕರೆ ಭೂ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ, ʻಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರʼವನ್ನು ಸ್ಥಾಪಿಸುವ ಮೂಲಕ ಸಂಚಾರವನ್ನು ಕ್ರಮಬದ್ಧಗೊಳಿಸುವ ಕೆಲಸ ಮಾಡಲಾಗಿದೆ, ಇದು ಸಂಚಾರ ಉಲ್ಲಂಘನೆ ಪ್ರಕರಣಗಳನ್ನು 40% ಮತ್ತು ಮಾರಣಾಂತಿಕ ರಸ್ತೆ ಅಪಘಾತಗಳನ್ನು 31% ರಷ್ಟು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ
ಶ್ರೀ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಚಂಡೀಗಢದ ಅಭಿವೃದ್ಧಿಗಾಗಿ 30,000 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಇದರಲ್ಲಿ 29,000 ಕೋಟಿ ರೂ.ಗಳನ್ನು ಮೂಲಸೌಕರ್ಯಕ್ಕೆ ಮತ್ತು 500 ಕೋಟಿ ರೂ.ಗಳನ್ನು ರೈಲ್ವೆ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

2014 ರಿಂದ 2024ರವರೆಗಿನ ವರ್ಷಗಳು ನಮ್ಮ ದೇಶದ ಅಭಿವೃದ್ಧಿಯ ಇತಿಹಾಸದಲ್ಲಿ ʻಸುವರ್ಣ ಯುಗʼವಾಗಿ ಗುರುತಿಸಲು ಅರ್ಹವಾಗಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಮೋದಿ ಅವರು ಬದಲಾವಣೆ ತರಲು ಪ್ರಯತ್ನಿಸದ ಕ್ಷೇತ್ರವೇ ಇಲ್ಲ. ಈ 10 ವರ್ಷಗಳಲ್ಲಿ ದೇಶವು ಅನೇಕ ಸಾಧನೆಗಳನ್ನು ಮಾಡಿದೆ. ಚಂದ್ರನ ಅಂಗಳಕ್ಕೆ ತ್ರಿವರ್ಣ ಧ್ವಜವನ್ನು ಕಳುಹಿಸುವುದು; ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿಗಳ ಮೂಲಕ ನಮ್ಮ ಶತ್ರುಗಳಿಗೆ ದಿಟ್ಟ ಉತ್ತರ ನೀಡುವುದು ಅಥವಾ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರವನ್ನು ಶಾಶ್ವತವಾಗಿ ಭಾರತದ ಭಾಗವನ್ನಾಗಿ ಮಾಡುವುದು ಅಥವಾ ರಾಮ ಮಂದಿರವನ್ನು ನಿರ್ಮಿಸುವುದು ಅಥವಾ ವಿಸ್ತೃತ ರಸ್ತೆಗಳ ಜಾಲ ನಿರ್ಮಾಣದ ಮೂಲಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹೀಗೆ ಈ ದೇಶದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಅನುಭವಿಸಿದ್ದಾರೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

ʻಸ್ಟಾರ್ಟ್ ಅಪ್ ಇಂಡಿಯಾʼ ಮತ್ತು ʻಡಿಜಿಟಲ್ ಇಂಡಿಯಾʼದಂತಹ ವಿವಿಧ ಉಪಕ್ರಮಗಳು ಭಾರತವನ್ನು ಇಂದು ವಿಶ್ವದ ಉತ್ಪಾದನಾ ಕೇಂದ್ರವನ್ನಾಗಿ ಮಾಡಿವೆ.  ಅದಕ್ಕಾಗಿಯೇ 60 ವರ್ಷಗಳ ನಂತರ ದೇಶದ ಜನರು ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ್ದಾರೆ ಮತ್ತು ಸಂಪೂರ್ಣ ಬಹುಮತದೊಂದಿಗೆ ಎನ್‌ಡಿಎ ಸರ್ಕಾರವನ್ನು ರಚಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1960ರ ದಶಕದ ನಂತರ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿ, ಒಂದು ಸಂಘಟನೆ ಮತ್ತು ಪಕ್ಷಗಳ ಮೈತ್ರಿಕೂಟವು ಸಂಪೂರ್ಣ ಬಹುಮತದೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ ಎಂದು ಅವರು ಹೇಳಿದರು. ಇದು ಒಂದು ರೀತಿಯಲ್ಲಿ ಮೋದಿ ಮತ್ತು ಅವರ ಅಭಿವೃದ್ಧಿ ಕಾರ್ಯಗಳಿಗೆ ಜನರು ನೀಡಿದ ಅನುಮೋದನೆಯ ಮುದ್ರೆಯಂತಿದೆ ಎಂದರು.

ಪ್ರತಿಪಕ್ಷಗಳು ಏನು ಮಾಡಬೇಕೋ ಅದನ್ನು ಮಾಡಲಿ, ಆದರೆ 2029ರಲ್ಲಿ, ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸರ್ಕಾರ ಉಳಿಯುವುದಿಲ್ಲ ಎಂದು ಹೇಳುವ ಮೂಲಕ ಅಸ್ಥಿರತೆಯ ಭಾವನೆಯನ್ನು ಹರಡಲು ಪದೇ ಪದೇ ಪ್ರಯತ್ನಿಸುತ್ತಿರುವ ಜನರಿಗೆ, ಈ ಸರ್ಕಾರವು ತನ್ನ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂಬ ಭರವಸೆ ನೀಡಲು ಬಯಸುತ್ತೇನೆ ಎಂದು ಶ್ರೀ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ದೂರದೃಷ್ಟಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತ ಸ್ವಾತಂತ್ರ್ಯದ 25 ಮತ್ತು 50 ವರ್ಷಗಳು ಪೂರ್ಣಗೊಂಡಾಗ ನಡೆದ ಕಾರ್ಯಕ್ರಮಗಳು ಕೇವಲ ಔಪಚಾರಿಕತೆಗಳಂತೆ ಕಂಡುಬಂದವು. ಆದರೆ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ʻಸ್ವಾತಂತ್ರ್ಯದ ಅಮೃತ ಮಹೋತ್ಸವʼವನ್ನು ಆಚರಿಸಿದಾಗ, ಮೋದಿ  ಅವರು ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲು ಮಾತ್ರವಲ್ಲದೆ, ದೇಶದ 130 ಕೋಟಿ ಜನರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ಕೆಲಸ ಮಾಡಿದರು. ಇಂದು, ಇಡೀ ದೇಶ ಮತ್ತು ದೇಶದ 130 ಕೋಟಿ ಜನರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಮತ್ತು ಭಾರತವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವದ ನಂಬರ್ ಒನ್ ಮಾಡಲು ಮೋದಿ ಅವರ ನಾಯಕತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಮಿತ್‌ ಶಾ ಹೇಳಿದರು.

ದೇಶದ ನಾಗರಿಕರ ಸಂಕಲ್ಪವು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಿಟ್ಟಿನಲ್ಲಿ ಮುಂದೆ ಕೊಂಡೊಯ್ಯುತ್ತದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ತನ್ನ ತಟ್ಟೆಯಲ್ಲಿ ಆಹಾರವನ್ನು ವ್ಯರ್ಥ ಮಾಡದಿರುವ ಮಗುವಿನ ಸಂಕಲ್ಪ, ಅಥವಾ ಪ್ರತಿದಿನ ತನ್ನ ಹೆತ್ತವರ ಪಾದಗಳನ್ನು ಮುಟ್ಟುವ ಸಂಕಲ್ಪ, ಅಥವಾ ತೆರಿಗೆ ತಪ್ಪಿಸದಿರುವ ಉದ್ಯಮಿಯ ಸಂಕಲ್ಪ ಅಥವಾ ಸಂಚಾರ ನಿಯಮಗಳನ್ನು ಪಾಲಿಸುವ ಜನರ ಸಂಕಲ್ಪವು ದೇಶವನ್ನು ಬಲಪಡಿಸುತ್ತದೆ ಮತ್ತು ಮುಂದೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. 130 ಕೋಟಿ ಜನರು ಮುಂದಿಟ್ಟ ಒಂದು ಹೆಜ್ಜೆಯು ದೇಶವು ಮುಂದಿಟ್ಟ 130 ಕೋಟಿ ಹೆಜ್ಜೆಗಳಿಗೆ ಸಮನಾಗಿದೆ. ಇದು ಮೋದಿ ಅವರು ಸೃಷ್ಟಿಸಿದ ಪವಾಡ ಎಂದು ಅಮಿತ್‌ ಶಾ ಅವರು ಹೇಳಿದರು. ಭಾರತವನ್ನು ʻಅಭಿವೃದ್ಧಿ ಹೊಂದಿದ ಭಾರತʼವನ್ನಾಗಿ ಮಾಡಲು 130 ಕೋಟಿ ಸಂಕಲ್ಪಿತ ಜನರು ಬದ್ಧರಾಗಿದ್ದಾರೆ. ಇಂದು ಚಂಡೀಗಢದಲ್ಲಿ ನಾವು ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು.

 

*****


(Release ID: 2041353) Visitor Counter : 51