ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹೂಡಿಕೆ ಕುರಿತಾದ ಉನ್ನತ ಮಟ್ಟದ ಕಾರ್ಯಪಡೆಯ ಚೊಚ್ಚಲ ಸಭೆ ನಡೆಸಿದ ಭಾರತ-ಸೌದಿ ಅರೇಬಿಯಾ


ಸೆಪ್ಟೆಂಬರ್ 2023ರಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತು ಸೌದಿ ರಾಜಕುಮಾರ, ಅಲ್ಲಿನ ಪ್ರಧಾನ ಮಂತ್ರಿ ಕೈಗೊಂಡ ನಿರ್ಧಾರದಂತೆ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಯಿತು

100 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಸೌದಿ ಹೂಡಿಕೆಗಳಿಗೆ ಸಕ್ರಿಯ ಬೆಂಬಲ ನೀಡುವ ಭಾರತ ಸರ್ಕಾರದ ದೃಢ ಉದ್ದೇಶವನ್ನು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪುನರುಚ್ಚರಿಸಿದರು

ಪೆಟ್ರೋಲಿಯಂ, ನವೀಕರಿಸಬಹುದಾದ ಇಂಧನ, ಟೆಲಿಕಾಂ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆ ಅವಕಾಶಗಳ ಬಗ್ಗೆ ರಚನಾತ್ಮಕ ಚರ್ಚೆಗಳು ನಡೆದವು

Posted On: 28 JUL 2024 11:37PM by PIB Bengaluru

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಡಾ.ಪಿ.ಕೆ. ಮಿಶ್ರಾ ಮತ್ತು ಸೌದಿ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರ ಸಹ ಅಧ್ಯಕ್ಷತೆಯಲ್ಲಿ ಹೂಡಿಕೆಗಳ ಕುರಿತ ಭಾರತ-ಸೌದಿ ಅರೇಬಿಯಾ ಉನ್ನತ ಮಟ್ಟದ ಕಾರ್ಯಪಡೆಯ ಮೊದಲ ಸಭೆಯು ಇಂದು ವರ್ಚುವಲ್ ಮಾದರಿಯಲ್ಲಿ ನಡೆಯಿತು.

ಕಾರ್ಯಪಡೆಯ ತಾಂತ್ರಿಕ ತಂಡಗಳ ನಡುವೆ ನಡೆದ ಚರ್ಚೆಗಳನ್ನು ಎರಡೂ ಕಡೆಯವರು ಪರಿಶೀಲಿಸಿದರು.
.
ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಸ್ಥಾವರಗಳು, ಹೊಸ ಮತ್ತು ನವೀಕರಿಸಬಹುದಾದ ಇಂಧನ, ವಿದ್ಯುತ್, ಟೆಲಿಕಾಂ, ನಾವೀನ್ಯತೆ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಹೂಡಿಕೆಗೆ ವಿವಿಧ ಅವಕಾಶಗಳ ಬಗ್ಗೆ ರಚನಾತ್ಮಕ ಚರ್ಚೆಗಳು ನಡೆದವು.

ಪರಸ್ಪರ ಲಾಭದಾಯಕ ರೀತಿಯಲ್ಲಿ ದ್ವಿಮುಖ ಹೂಡಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕ್ರಮಗಳ ಕುರಿತು ಎರಡೂ ಕಡೆಯವರು ವಿವರವಾದ ಪರಿಶೀಲನೆ ನಡೆಸಿದರು.

ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಮಂತ್ರಿಯವರ ಭೇಟಿಯ ಸಂದರ್ಭದಲ್ಲಿ ಬದ್ಧತೆ ವ್ಯಕ್ತಪಡಿಸಲಾದ 100 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಸೌದಿ ಹೂಡಿಕೆಗಳಿಗೆ ಸಕ್ರಿಯ ಬೆಂಬಲ ನೀಡುವ ಭಾರತ ಸರ್ಕಾರದ ದೃಢ ಉದ್ದೇಶವನ್ನು ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಪುನರುಚ್ಚರಿಸಿದರು.

ಚರ್ಚೆಗಳನ್ನು ಮುಂದುವರಿಸಲು ಮತ್ತು ನಿರ್ದಿಷ್ಟ ಹೂಡಿಕೆಗಳ ಬಗ್ಗೆ ಒಪ್ಪಂದಕ್ಕೆ ಬರುವ ನಿಟ್ಟಿನಲ್ಲಿ ಎರಡೂ ಕಡೆಯ ತಾಂತ್ರಿಕ ತಂಡಗಳ ನಡುವೆ ನಿಯಮಿತ ಸಮಾಲೋಚನೆಗಳಿಗೆ ಎರಡೂ ಕಡೆಯವರು ಸಹಮತ ತೋರಿದರು. ಪೆಟ್ರೋಲಿಯಂ ಕಾರ್ಯದರ್ಶಿ ನೇತೃತ್ವದ ಸಶಕ್ತ ನಿಯೋಗವು ತೈಲ ಮತ್ತು ಅನಿಲ ವಲಯದಲ್ಲಿ ಪರಸ್ಪರ ಲಾಭದಾಯಕ ಹೂಡಿಕೆಯ ಬಗ್ಗೆ ಚರ್ಚೆ ಮುಂದುವರಿಸಲು ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದೆ. ಭಾರತದಲ್ಲಿ ʻಸಾರ್ವಭೌಮ ಸಂಪತ್ತು ನಿಧಿ-ಪಿಐಎಫ್ʼ ಕಚೇರಿಯನ್ನು ಸ್ಥಾಪಿಸಲು ಸೌದಿ ಕಡೆಯವರನ್ನು ಆಹ್ವಾನಿಸಲಾಯಿತು.

ಉನ್ನತ ಮಟ್ಟದ ಕಾರ್ಯಪಡೆಯ ಮುಂದಿನ ಸುತ್ತಿನ ಸಭೆಗಾಗಿ ಸೌದಿ ಅರೇಬಿಯಾದ ಇಂಧನ ಸಚಿವರನ್ನು ಪ್ರಧಾನ ಕಾರ್ಯದರ್ಶಿಗಳು ಭಾರತಕ್ಕೆ ಆಹ್ವಾನಿಸಿದರು.

ʻಉನ್ನತ ಮಟ್ಟದ ಕಾರ್ಯಪಡೆʼಯು ಒಂದು ವಿಶೇಷ ಸಂಸ್ಥೆಯಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಸೌದಿಯ ಪ್ರಧಾನಮಂತ್ರಿಯೂ ಆಗಿರುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಚರ್ಚೆಯ ವೇಳೆ ಕೈಗೊಂಡ ನಿರ್ಧಾರದಂತೆ ದ್ವಿಪಕ್ಷೀಯ ಹೂಡಿಕೆಗೆ ಅನುಕೂಲವಾಗುವಂತೆ ಈ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆಯಲ್ಲಿ ನೀತಿ ಆಯೋಗದ ಸಿಇಒ, ಆರ್ಥಿಕ ವ್ಯವಹಾರಗಳು, ವಾಣಿಜ್ಯ, ಎಂಇಎ, ಡಿಪಿಐಐಟಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಭಾರತದ ವಿದ್ಯುತ್ ಕಾರ್ಯದರ್ಶಿಗಳು ಸೇರಿದಂತೆ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಇದ್ದಾರೆ.
 

*****


(Release ID: 2038739) Visitor Counter : 51