ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ
ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
Posted On:
28 JUL 2024 6:05PM by PIB Bengaluru
ಪ್ಯಾರಿಸ್ 2024ರ ಒಲಿಂಪಿಕ್ಸ್ ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ 2024 ರ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಅಲ್ಲದೆ 2012ರ ಲಂಡನ್ ಒಲಿಂಪಿಕ್ಸ್ ಬಳಿಕ ಶೂಟಿಂಗ್ ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಒಲಿಂಪಿಕ್ ಪದಕ ಇದಾಗಿದೆ.
ಈ ಸಾಧನೆಯೊಂದಿಗೆ ಮನು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ. ಜೊತೆಗೆ ಕಳೆದ 20 ವರ್ಷಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮನು ಭಾಕರ್ ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಐದನೇ ಭಾರತೀಯ ಶೂಟರ್ ಎನಿಸಿಕೊಂಡರು. ಇವರಿಗಿಂತ ಮೊದಲು ರಾಜ್ಯವರ್ಧನ್ ಸಿಂಗ್ ರಾಥೋಡ್ (2004 ಅಥೆನ್ಸ್), ಅಭಿನವ್ ಬಿಂದ್ರಾ (2008 ಬೀಜಿಂಗ್), ವಿಜಯ್ ಕುಮಾರ್ (2012 ಲಂಡನ್) ಮತ್ತು ಗಗನ್ ನಾರಂಗ್ (2012 ಲಂಡನ್) ಪದಕ ಗೆದ್ದಿದ್ದರು.
ಅರ್ಹತಾ ಸುತ್ತಿನ ಮುಖ್ಯಾಂಶಗಳು:
• ಮನು ಭಾಕರ್ ಅರ್ಹತಾ ಸುತ್ತುಗಳಲ್ಲಿ 580 ಅಂಕಗಳೊಂದಿಗೆ 3 ನೇ ಸ್ಥಾನ ಪಡೆದರು ಮತ್ತು ಅತ್ಯಧಿಕ ಸಂಖ್ಯೆಯ ಪರಿಪೂರ್ಣ ಸ್ಕೋರ್ ಗಳನ್ನು (27) ಶೂಟ್ ಮಾಡಿದರು.
• ಅವರು ಕಳೆದ 20 ವರ್ಷಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಒಲಿಂಪಿಕ್ ಫೈನಲ್ ತಲುಪಿದ 1 ನೇ ಭಾರತೀಯ ಮಹಿಳಾ ಶೂಟರ್ ಆಗಿದ್ದಾರೆ! 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸುಮಾ ಶಿರೂರ್ ಕೊನೆಯ ಬಾರಿ ಫೈನಲ್ ತಲುಪಿದ್ದರು.
• ಒಲಿಂಪಿಕ್ಸ್ ನಲ್ಲಿ 10M ಏರ್ ಪಿಸ್ತೂಲ್ ಮಹಿಳೆಯರ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪ್ರಮುಖ ಸರ್ಕಾರಿ ಸಹಾಯಗಳು:
• ಗುಂಡು ಮತ್ತು ಶಸ್ತ್ರಾಸ್ತ್ರ ನಿರ್ವಹಣೆ, ಗುಂಡಿನ ಪರೀಕ್ಷೆ ಮತ್ತು ಬ್ಯಾರೆಲ್ ಆಯ್ಕೆಗೆ ಸಹಾಯ.
• ಒಲಿಂಪಿಕ್ ತಯಾರಿಗಾಗಿ ಲುಕ್ಸೆಂಬರ್ಗ್‌ನಲ್ಲಿ ವೈಯಕ್ತಿಕ ತರಬೇತುದಾರ ಶ್ರೀ ಜಸ್ಪಾಲ್ ರಾಣಾ ಅವರೊಂದಿಗೆ ತರಬೇತಿಗೆ ನೆರವು
• ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಅಡಿಯಲ್ಲಿ ಹಣಕಾಸಿನ ನೆರವು: ರೂ. 28,78,634/-
• ತರಬೇತಿ ಮತ್ತು ಸ್ಪರ್ಧೆಗಾಗಿ ವಾರ್ಷಿಕ ಕ್ಯಾಲೆಂಡರ್ (ಎಸಿಟಿಸಿ) ಅಡಿಯಲ್ಲಿ ಹಣಕಾಸಿನ ನೆರವು: ರೂ. 1,35,36,155/-
ಸಾಧನೆಗಳು:
• ಏಷ್ಯನ್ ಕ್ರೀಡಾಕೂಟದಲ್ಲಿ 25 ಮೀ ಪಿಸ್ತೂಲ್ ತಂಡದಲ್ಲಿ ಚಿನ್ನದ ಪದಕ (2022)
• ಬಾಕು ವಿಶ್ವ ಚಾಂಪಿಯನ್ ಶಿಪ್ ನಲ್ಲಿ 25 ಮೀ ಪಿಸ್ತೂಲ್ ತಂಡದಲ್ಲಿ ಚಿನ್ನದ ಪದಕ (2023)
• ಚಾಂಗ್ವಾನ್ ನಲ್ಲಿ 2023 ರ ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ ನಿಂದ , 2024 ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ
• ಭೋಪಾಲ್ ನಲ್ಲಿ 2023 ರ ಶೂಟಿಂಗ್ ವಿಶ್ವಕಪ್ ನಲ್ಲಿ 25 ಮೀ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ
• ಕೈರೋದಲ್ಲಿ 2022 ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 25 ಮೀ ಪಿಸ್ತೂಲ್ ನಲ್ಲಿ ಬೆಳ್ಳಿ ಪದಕ
• 2021 ರಲ್ಲಿ ಚೆಂಗ್ಡುವಿನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ , ವೈಯಕ್ತಿಕ ಮತ್ತು ಮಹಿಳಾ ತಂಡದಲ್ಲಿ ಎರಡು ಚಿನ್ನದ ಪದಕಗಳು
ಹಿನ್ನೆಲೆ:
ಮನು ಭಾಕರ್ ಶೂಟಿಂಗ್ ನಲ್ಲಿ ಭಾಗವಹಿಸುವ ಭಾರತೀಯ ಒಲಿಂಪಿಯನ್. ಬಾಕ್ಸರ್ ಗಳು ಮತ್ತು ಕುಸ್ತಿಪಟುಗಳಿಗೆ ಹೆಸರುವಾಸಿಯಾದ ಹರಿಯಾಣ ರಾಜ್ಯದ ಝಜ್ಜರ್ ನಲ್ಲಿ ಜನಿಸಿದರು. ಶಾಲೆಯಲ್ಲಿ ಟೆನ್ನಿಸ್, ಸ್ಕೇಟಿಂಗ್ ಮತ್ತು ಬಾಕ್ಸಿಂಗ್ ನಂತಹ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ‘ತಂಗ್ ತಾ’ ಎಂಬ ಮಾರ್ಷಲ್ ಆರ್ಟ್ ನಲ್ಲೂ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿದ್ದಾರೆ.
ಕೇವಲ 14 ವರ್ಷದವಳಿದ್ದಾಗ ಅಂದರೆ 2016 ರ ರಿಯೊ ಒಲಿಂಪಿಕ್ಸ್ ಮುಗಿದ ನಂತರ ಮನು ಇದ್ದಕ್ಕಿದ್ದಂತೆ ಶೂಟಿಂಗ್ ಮಾಡಲು ನಿರ್ಧರಿಸಿದರು ಮತ್ತು ಅದರಲ್ಲೇ ಮುಂದುವರಿದರು.
2017 ರ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ, ಮನು ಭಾಕರ್ ಒಲಿಂಪಿಯನ್ ಮತ್ತು ಮಾಜಿ ವಿಶ್ವ ನಂಬರ್ ಒನ್ ಹೀನಾ ಸಿಧು ಅವರನ್ನು ಬೆರಗುಗೊಳಿಸಿದರು, ಅಲ್ಲಿ ಅವರು 9 ಚಿನ್ನದ ಪದಕಗಳನ್ನು ಗೆದ್ದರು. 10 ಮೀಟರ್ ಏರ್ ಪಿಸ್ತೂಲ್ ಫೈನಲ್ ನಲ್ಲಿ ಮನು 242.3 ಸ್ಕೋರ್ ಗಳಿಸಿ ಸಿಧು ದಾಖಲೆಯನ್ನು ಮುರಿದರು. 2018 ಶೂಟರ್ ಆಗಿ ಭಾಕರ್ ಗೆ ಅದ್ಭುತ ವರ್ಷವಾಗಿತ್ತು, ಏಕೆಂದರೆ ಅವರು ಕೇವಲ 16 ನೇ ವಯಸ್ಸಿನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸಂಚಲನ ಸೃಷ್ಟಿಸಿದರು.
2018 ರಲ್ಲಿ, ಮೆಕ್ಸಿಕೋದ ಗ್ವಾಡಲಜಾರಾದಲ್ಲಿ ನಡೆದ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ವಿಶ್ವಕಪ್ ನಲ್ಲಿ, ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಎರಡು ಬಾರಿ ವಿಜೇತ ಮೆಕ್ಸಿಕೊದ ಅಲೆಜಾಂಡ್ರಾ ಜವಾಲಾ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.
ಮನು ಭಾಕರ್ ಅವರು 2019 ರ ಮ್ಯೂನಿಚ್ ISSF ವಿಶ್ವಕಪ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ ಕೋಟಾ ಸ್ಥಾನವನ್ನು ಪಡೆದರು. ಆದಾಗ್ಯೂ, ಕ್ರೀಡೆಯಲ್ಲಿ ಅವರ ಚೊಚ್ಚಲ ಪ್ರವೇಶವು ಯೋಜಿಸಿದಂತೆ ನಡೆಯಲಿಲ್ಲ. ಟೋಕಿಯೊ 2020 ರ ನಂತರ, ಮನು ಭಾಕರ್ ಲಿಮಾದಲ್ಲಿ ಮಹಿಳೆಯರ 10 ಮೀ ಏರ್ ಪಿಸ್ತೂಲ್ ನಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆದರು ಮತ್ತು 2022 ರ ಕೈರೋ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ನಲ್ಲಿ ಬೆಳ್ಳಿ ಮತ್ತು 2023 ರ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಅದೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.
ತರಬೇತಿ ಸ್ಥಳ : DR. ಕರ್ಣಿ ಸಿಂಗ್ ಶೂಟಿಂಗ್ ರೇಂಜ್, ನವದೆಹಲಿ
ಜನ್ಮಸ್ಥಳ: ಝಜ್ಜರ್, ಹರಿಯಾಣ
*****
(Release ID: 2038291)
Visitor Counter : 100
Read this release in:
Punjabi
,
Malayalam
,
Bengali
,
English
,
Urdu
,
Marathi
,
Hindi
,
Hindi_MP
,
Gujarati
,
Tamil
,
Telugu